ತರಕಾರಿ ತಿಪ್ಪೆಗೆ ಎಸೆದು, ರಸ್ತೆಗೆ ಚೆಲ್ಲಿ ರೈತ ಆಕ್ರೋಶ

By Kannadaprabha NewsFirst Published May 2, 2021, 7:01 AM IST
Highlights

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಬ್ಬರ ಹೆಚ್ಚಾಗುತ್ತಲೇ ಇದ್ದು ಇದರಿಂದ ರೈತ ಸಮುದಾಯ ಹೆಚ್ಚು ಆತಂಕಕ್ಕೆ ಈಡಾಗಿದೆ. ಕೊರೋನಾದಿಂದಾಗಿ ವ್ಯಾಪಾರ ವ್ಯವಹರಾಗಳಿಲ್ಲದೆ ಕಂಗಾಲಾಗಿದ್ದಾರೆ. 

 ಬೆಂಗಳೂರು (ಏ.02): ಕೊರೋನಾ ಸೋಂಕಿನ ಎರಡನೇ ಅಲೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಜನತಾ ಕರ್ಫ್ಯೂ ಘೋಷಣೆ ಮಾಡಿದೆ. ಆದರೆ, ಇದರಿಂದ ತರಕಾರಿ ಬೆಲೆ ಕುಸಿತ, ವ್ಯಾಪಾರವೂ ಇಲ್ಲದೇ ರೈತರು ಕಂಗಾಲಾಗಿದ್ದು, ವ್ಯಾಪಾರಕ್ಕೆ ತಂದ ತರಕಾರಿಯನ್ನು ಹಾಗೇ ಮಾರುಕಟ್ಟೆಯಲ್ಲಿ ಬಿಟ್ಟು ಹೋಗಿರುವುದು, ಹೆದ್ದಾರಿಗೆ ಸುರಿದಿರುವುದು, ತಿಪ್ಪೆಗೆ ಎಸೆದಿರುವುದು ಶನಿವಾರ ರಾಜ್ಯದ ವಿವಿಧೆಡೆ ಕಂಡುಬಂದಿದೆ.

ಕಲಬುರಗಿ ಜಿಲ್ಲೆ ಅಫಜಲ್ಪುರ ತಾಲೂಕಿನ ಬಳೂರ್ಗಿ ಗ್ರಾಮದ ರೈತ ಮಲ್ಲಿಕಾರ್ಜುನ ಸೋಮಜಾಳ ಬದನೆಕಾಯಿ ಹೆದ್ದಾರಿಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಈತ ಅಫಜಲ್ಪುರ ಪಟ್ಟಣದ ಡೆಲಿ ಬಜಾರನಲ್ಲಿ ಬದನೆಕಾಯಿ ಮಾರಲು ತಂದಿದ್ದ. ಆದರೆ, ಯಾರೂ ಖರೀದಿ ಮಾಡುವವರಿಲ್ಲದ್ದರಿಂದ ರಾಜ್ಯ ಹೆದ್ದಾರಿ ಮೇಲೆ ಬದನೆಕಾಯಿ ಚೆಲ್ಲಿ ಮುನಿಸು ವ್ಯಕ್ತಪಡಿಸಿದ್ದಾನೆ.

ಕೋಲಾರ ತಾಲೂಕಿನ ಕೋಟಿಗಾನಹಳ್ಳಿ ರೈತ ಚಲಪತಿ 1 ಎಕರೆ ಪ್ರದೇಶದಲ್ಲಿ ಪಾಲಿಹೌಸ್‌ನಲ್ಲಿ ಬೆಳೆದಿರುವ ಕ್ಯಾಪ್ಸಿಕಾಂ(ದಪ್ಪಮೆಣಸಿಕಾಯಿ) ಅನ್ನು ಕೊಯ್ದು ಮಾರಾಟ ಮಾಡಲಾಗದೇ, ಬೆಳೆಯನ್ನು ಕಿತ್ತು ತಿಪ್ಪೆಗೆಸೆದಿದ್ದಾನೆ.

ಕೋವಿಡ್ ಸಂಕಷ್ಟದಿಂದ ಹೊರಬರಲು ರಾಜ್ಯದಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ ...

ಮೈಸೂರಿನ ಕೃಷಿ ಮಾರುಕಟ್ಟೆಗೆ ತರಕಾರಿ ಮಾರಲು ಬಂದ ಅನೇಕ ರೈತರು ಮಾರುಕಟ್ಟೆಯಲ್ಲಿಯೇ ಬಿಟ್ಟು ಹೋಗಿದ್ದಾರೆ. ಟೊಮೆಟೋವನ್ನು ಕೇಳುವವರೇ ಇಲ್ಲವಾಗಿತ್ತು. ಇದೇ ಪರಿಸ್ಥಿತಿ ಬೂದುಕುಂಬಳ, ಮಂಗಳೂರು ಸೌತೆಕಾಯಿ ಮತ್ತು ಕೋಸಿಗೂ ಎದುರಾಯಿತು. ಈವರೆಗೆ ಬೆಲೆ ಹೆಚ್ಚಿರುತ್ತಿದ್ದ ಬೂದುಕುಂಬಳವನ್ನು ಕೇಳುವವರೇ ಇರಲಿಲ್ಲ. ಲೋಡ್‌ಗಟ್ಟಲೆ ಬಂದ ಕುಂಬಳವನ್ನು ಕಡಿಮೆ ಬೆಲೆ ನೀಡಿ ಕೊಂಡೊಯ್ಯಿರಿ ಎಂದರೂ ಯಾರೊಬ್ಬರೂ ಖರೀದಿಸಲಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿಯೇ ಗುಡ್ಡೆಹಾಕಿ ಬಿಟ್ಟುಹೋಗಿದ್ದರು. ಆ ನಂತರ ನಗರ ಪಾಲಿಕೆ ವಾಹನದಲ್ಲಿ ಕೊಂಡೊಯ್ಯಲಾಯಿತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!