ಸೋಂಕು ದೃಢಪಟ್ಟ7 ದಿನದಲ್ಲೇ ಬಿಡುಗಡೆ!| ನಿನ್ನೆ ಒಂದೇ ದಿನ 19 ಸೋಂಕಿತರು ಡಿಸ್ಚಾರ್ಜ್| ಹಾಸನ, ಉಡುಪಿಯಲ್ಲಿ ಈ ವಿದ್ಯಮಾನ| ಕ್ವಾರಂಟೈನ್, ಬಿಡುಗಡೆ ನಿಯಮವಾವಳಿ ಸಡಿಲ?
ಬೆಂಗಳೂರು(ಮೇ.30): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಶಂಕಿತರ ಕ್ವಾರಂಟೈನ್ ಹಾಗೂ ಸೋಂಕಿತರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ನಿಯಮಾವಳಿ ಸಡಿಲಗೊಳ್ಳುತ್ತಿದೆ. ಇದರ ಪರಿಣಾಮ ಶುಕ್ರವಾರ 19 ಮಂದಿ ಸೋಂಕಿತರು ಸೋಂಕು ದೃಢಪಟ್ಟ7 ದಿನದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇವರಲ್ಲಿ ಹಾಸನದ 17 ಹಾಗೂ ಉಡುಪಿಯ ಇಬ್ಬರು ಸೋಂಕಿತರಿದ್ದಾರೆ.
ಇದೇ ವೇಳೆ ಹಾಸನ ಹಾಗೂ ಉಡುಪಿ ತಲಾ ಒಬ್ಬರನ್ನು ಸೋಂಕು ದೃಢಪಟ್ಟ6 ದಿನದಲ್ಲೇ ಬಿಡುಗಡೆ ಮಾಡಲಾಗಿದೆ. ಉಡುಪಿಯಲ್ಲಿ ಮತ್ತೊಬ್ಬ 22 ವರ್ಷದ ಮಹಿಳೆಯನ್ನು ಸೋಂಕು ದೃಢಪಟ್ಟ5ನೇ ದಿನಕ್ಕೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.
ಮೇ 29 ರಂದು ಶುಕ್ರವಾರ 60 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಲ್ಲಿ ಮೇ 24 ರಂದು ಸೋಂಕು ದೃಢಪಟ್ಟಿದ್ದ ಹಾಸನದ 18 ವರ್ಷದ ಪಿ-2028ನೇ ಯುವಕನೂ ಸೇರಿದ್ದಾನೆ. ಈತನಿಗೆ ಮೇ 24 ರಂದು ಸೋಂಕು ದೃಢಪಟ್ಟಿದ್ದು, ಸೋಂಕು ದೃಢಪಟ್ಟ6 ದಿನದಲ್ಲೇ ಬಿಡುಗಡೆಯಾಗಿದ್ದಾರೆ.
ಶಾಲಾ ಮಕ್ಕಳಿಗೆ ‘ಲರ್ನ್ ಫ್ರಂ ಹೋಮ್’?: ಕೇಂದ್ರದ ಚಿಂತನೆ, ಶೀಘ್ರ ಮಾರ್ಗಸೂಚಿ
ಇನ್ನು ಉಡುಪಿಯಲ್ಲಿ ಮೇ 24 ರಂದು ಸೋಂಕು ದೃಢಪಟ್ಟಿದ್ದ 22 ವರ್ಷದ 2045ನೇ ಸೋಂಕಿತೆಯನ್ನು ಸಹ 6 ದಿನದಲ್ಲೇ ಬಿಡುಗಡೆ ಮಾಡಲಾಗಿದೆ. ಜತೆಗೆ ಉಡುಪಿಯ ಐಎಲ್‌ಐ (ಶೀತಜ್ವರ ಮಾದರಿ ಲಕ್ಷಣ) ಹಿನ್ನೆಲೆಯ 30 ವರ್ಷದ ವ್ಯಕ್ತಿಗೆ ಮೇ 25 ರಂದು ಸೋಂಕು ದೃಢಪಟ್ಟಿತ್ತು. ಇವರನ್ನು ಮೇ 29 ರಂದು 5 ದಿನಕ್ಕೇ ಬಿಡುಗಡೆ ಮಾಡಲಾಗಿದೆ. ಇದು ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಇದಲ್ಲದೆ ಮೇ 21 ರಂದು ಸೋಂಕು ದೃಢಪಟ್ಟಿದ್ದ ಮಹಾರಾಷ್ಟ್ರದಿಂದ ನಾಲ್ಕು ಮಂದಿ ಹಾಗೂ ಮೇ 22 ರಂದು ಸೋಂಕು ದೃಢಪಟ್ಟಿದ್ದ 7 ವರ್ಷದ 1789ನೇ ಸೋಂಕಿತ ಬಾಲಕ ಸೇರಿ 10 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಹಾಸನ ಹಾಗೂ ಉಡುಪಿ ಜಿಲ್ಲಾ ತಜ್ಞರ ತಂಡವು ಸೋಂಕು ದೃಢಪಟ್ಟದಿನಾಂಕದ ಬದಲಿಗೆ ಗಂಟಲು ದ್ರವ ಸಂಗ್ರಹಿಸಿದ ದಿನಾಂಕದಿಂದ 7 ದಿನಕ್ಕೆ ಬಿಡುಗಡೆ ಮಾಡಲು ಶಿಫಾರಸು ಮಾಡಿದೆ. ಇದರಿಂದ ಗೊಂದಲ ಉಂಟಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಪರಿಷ್ಕೃತ ನಿಯಮವಿದು:
ರಾಜ್ಯ ಸರ್ಕಾರವು ಮೇ 26 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ನಿಯಮ ಸಡಿಲಗೊಳಿಸಿ, ‘ಸತತ 3 ದಿನಗಳ ಕಾಲ ಸೋಂಕಿನ ಲಕ್ಷಣ ಕಾಣದಿದ್ದರೆ ಸೋಂಕು ದೃಢಪಟ್ಟ10 ದಿನಕ್ಕೆ ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು. ಅಲ್ಲದೆ, ಸೋಂಕು ದೃಢಪಟ್ಟಾಗ ಸೋಂಕು ಲಕ್ಷಣಗಳು ಹೊಂದಿರದ ವ್ಯಕ್ತಿಗಳಿಗೆ ಏಳು ದಿನಗಳಿಗೆ ಮತ್ತೊಮ್ಮೆ ಪರೀಕ್ಷೆ ನಡೆಸಿ ವರದಿ ನೆಗೆಟಿವ್ ಬಂದರೆ ಬಿಡುಗಡೆ ಮಾಡಬಹುದು’ ಎಂದು ಹೇಳಿದೆ.
ಪಾದರಾಯನಪುರ ಪಾಲಿಕೆ ಸದಸ್ಯ ಪಾಷಾಗೆ ಕೊರೋನಾ ಸೋಂಕು!
ಸೋಂಕಿನ ಲಕ್ಷಣ ಇಲ್ಲದ್ದರಿಂದ ಡಿಸ್ಚಾರ್ಜ್: ಸ್ಪಷ್ಟನೆ
ಈ ಬಗ್ಗೆ ಹಾಸನ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಅವರನ್ನು ಸಂಪರ್ಕಿಸಿದರೆ, ಮೇ 24 ರಂದು ಸೋಂಕು ದೃಢಪಟ್ಟವ್ಯಕ್ತಿಯಿಂದ ಮೇ 18 ರಂದು ಸ್ವಾ್ಯಬ್ ಮಾದರಿ ಸಂಗ್ರಹಿಸಲಾಗಿತ್ತು. ವರದಿ ಬರುವುದು ಆರು ದಿನ ತಡವಾಗಿತ್ತು. ಬಳಿಕ ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದಿದ್ದರಿಂದ ಬಿಡುಗಡೆ ಮಾಡಿದ್ದೇವೆ. ಹಾಸನದಲ್ಲಿ ಯಾವೊಬ್ಬ ಸೋಂಕಿತರಿಗೂ ಕೊರೋನಾ ಲಕ್ಷಣಗಳು ಇಲ್ಲ. ಹೀಗಾಗಿ ತಜ್ಞರ ಸಮಿತಿ ಶಿಫಾರಸಿನಂತೆ ನಾವು ಬಿಡುಗಡೆ ಮಾಡುತ್ತಿದ್ದೇವೆ. ಆಸ್ಪತ್ರೆಗೆ ದಾಖಲಾದ 7 ರಿಂದ 10 ದಿನಗಳ ಬಳಿಕವೇ ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿದರು.