Karnataka Land Conversion : ಎಸ್‌ಸಿ, ಎಸ್ಟಿ ಜಮೀನು ಪರಿವರ್ತನೆ ಇಲ್ಲ: ಅಶೋಕ್‌

By Kannadaprabha News  |  First Published Dec 16, 2021, 10:01 AM IST
  •  ಎಸ್‌ಸಿ, ಎಸ್ಟಿಜಮೀನು ಪರಿವರ್ತನೆ ಇಲ್ಲ: ಅಶೋಕ್‌
  •  ಪರಿವರ್ತನೆ ಮಾಡಿದರೆ ಭೂಮಿ ಬಲಾಢ್ಯರ ಪಾಲು
  •  ಹೈಕೋರ್ಟ್‌ ಕೂಡ ಪರಿವರ್ತನೆ ಮಾಡದಂತೆ ಹೇಳಿದೆ
     

ವಿಧಾನಸಭೆ (ಡಿ.16):   ಸರ್ಕಾರದಿಂದ ಎಸ್‌ಸಿ,ಎಸ್‌ಟಿ  (SC ST ) ಸಮುದಾಯದವರಿಗೆ ಮಂಜೂರು ಮಾಡಿರುವ ಭೂಮಿಯನ್ನು ವಸತಿ ಅಥವಾ ವಾಣಿಜ್ಯ ಬಳಕೆಗೆ ಭೂ ಪರಿವರ್ತನೆ (Land  Conversion) ಮಾಡಲು ಅವಕಾಶ ನೀಡುವುದಿಲ್ಲ ಎಂದು ಕಂದಾಯ ಸಚಿವ ಆರ್‌. ಅಶೋಕ್‌ (R Ashok) ಸ್ಪಷ್ಟಪಡಿಸಿದ್ದಾರೆ. ಗಮನ ಸೆಳೆಯುವ ಸೂಚನೆಯಡಿ ವಿಷಯ ಪ್ರಸ್ತಾಪಿಸಿದ ಬಿಜೆಪಿ (BJP) ಸದಸ್ಯ ರಘುಪತಿ ಭಟ್‌, ಪಿಟಿಸಿಎಲ್‌ (ಪರಿಶಿಷ್ಟಜಾತಿ ಮತ್ತು ಪಂಗಡದವರ ಭೂ ಪರಬಾರೆ ನಿಷೇಧ ಕಾಯ್ದೆ) ಅನ್ವಯ ಭೂಮಿ ಮಾರಾಟ ಮಾಡಲು ಅವಕಾಶವಿಲ್ಲ. ಆದರೆ ಸಂಬಂಧಪಟ್ಟವರು ಮಾರಾಟ ಮಾಡದೆ ತಮ್ಮ ಸ್ವಂತ ಬಳಕೆಗೆ ವಸತಿ ಅಥವಾ ವಾಣಿಜ್ಯ ಪರಿವರ್ತನೆ ಮಾಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ಇಲ್ಲದಂತೆ ಮಾಡಲಾಗಿದೆ. ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿದರೆ ಸರ್ಕಾರದ ಅನುಮತಿ ಬೇಕು ಎಂದು ಹೇಳುತ್ತಾರೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಆರ್‌. ಅಶೋಕ್‌, ಎಸ್‌ಸಿ ಹಾಗೂ ಎಸ್‌ಟಿ ಸಮುದಾಯಕ್ಕೆ ಕೃಷಿ (Agriculture) ಬಳಕೆ ಉದ್ದೇಶಕ್ಕಾಗಿ ಸರ್ಕಾರ ಭೂಮಿ ಮಂಜೂರು ಮಾಡಿರುತ್ತದೆ. ಅದನ್ನು ಬೇರೆ ಉದ್ದೇಶಗಳ ಬಳಕೆಗೆ ಪರಿವರ್ತನೆ ಮಾಡಿದರೆ ಅದು ಬಲಾಢ್ಯರ ಪಾಲಾಗುತ್ತದೆ. ಸುಲಭವಾಗಿ ವಿಕ್ರಯವಾಗುತ್ತದೆ. ಹೀಗಾಗಿ ಹೈಕೋರ್ಟ್‌ ಸಹ ಸ್ಪಷ್ಟಆದೇಶ ನೀಡಿದ್ದು, ಭೂ ಪರಿವರ್ತನೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

Tap to resize

Latest Videos

undefined

ಸಚಿವ ಗೋವಿಂದ ಕಾರಜೋಳ, ಈ ನಿಯಮವನ್ನು ಸಡಿಲಗೊಳಿಸಿದರೆ ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದ ಬಳಿ ಇಂಚು ಜಾಗವೂ ಉಳಿಯುವುದಿಲ್ಲ. ಈ ಕಾನೂನು (Law) ಸಡಿಲಗೊಳಿಸುವುದು ಸಾಧ್ಯವಿಲ್ಲ ಎಂದು ಹೇಳಿದರು.

ಕನಿಷ್ಟ ಕೃಷಿ ಭೂಮಿ ಮಿತಿ ನಿಗದಿ :  ಕೃಷಿ ಭೂಮಿಯನ್ನು (Agriculture Land) ತುಂಡುಗಳನ್ನಾಗಿ ಮಾಡಿ ಕೃಷಿ ಉದ್ದೇಶಕ್ಕೆ ಬಳಸದೆ ನಿವೇಶನಗಳನ್ನಾಗಿ ಮಾಡುವುದನ್ನು ತಡೆಯಲು ಆಯ್ದ ಜಿಲ್ಲೆಗಳಲ್ಲಿ ಕನಿಷ್ಠ ಕೃಷಿ ಭೂಮಿಯ ವಿಸ್ತೀರ್ಣವನ್ನು ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ (J C MadhuSwamy) ಸ್ಪಷ್ಟಪಡಿಸಿದರು.ಜೆಡಿಎಸ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರ ಗಮನ ಸೆಳೆಯುವ ಸೂಚನೆಗೆ ಕಂದಾಯ ಸಚಿವ ಆರ್‌.ಅಶೋಕ್‌ ಪರವಾಗಿ ಸಚಿವರು ಉತ್ತರಿಸಿದರು.ರಾಜ್ಯದ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ 3 ಗುಂಟೆ ಹಾಗೂ ಉಳಿದ ಜಿಲ್ಲೆಗಳಲ್ಲಿ 5 ಗುಂಟೆಗೆ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಕೃಷಿ ಭೂಮಿಯನ್ನು ತುಂಡು ತುಂಡು ಮಾಡಿ ನಿವೇಶನ ಮಾಡುವುದರಿಂದ ಅಲ್ಲಿಗೆ ನಾಗರಿಕ ಸೌಲಭ್ಯ ಕೊಡಲು ಆಗುವುದಿಲ್ಲ. ಹೀಗಾಗಿ ಈ ಆದೇಶ ಹೊರಡಿಸಲಾಗಿದೆ. 

ಆನುವಂಶಿಕತೆಯಿಂದ ಬರುವ ಜಮೀನನ್ನು ವಿಭಜಿಸಲು ನಿರ್ಬಂಧನೆ ಇಲ್ಲ

ಈಗಾಗಲೇ ಅಸ್ತಿತ್ವದಲ್ಲಿ ಇರುವ ಸರ್ವೆ ನಂಬರ್‌ ಹಾಗೂ ಪಹಣಿಗಳಲ್ಲಿ ಕನಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ಇದ್ದಲ್ಲಿ ಅವುಗಳನ್ನು ಹಾಗೆಯೇ ಮುಂದುವರಿಸಲು ಹಾಗೂ ಈ ನಿರ್ಬಂಧಗಳನ್ನು ಭವಿಷ್ಯದಲ್ಲಿ ಜಾರಿಗೆ ತರುವಂತೆ ಆದೇಶಿಸಲಾಗಿದೆ. ಅಲ್ಲದೇ ಈ ಆದೇಶ ಈಗಾಗಲೇ ಅಸ್ತಿತ್ವದಲ್ಲಿ ಇರುವ ಸರ್ವೆ ನಂಬರ್‌ಗಳು ಹೊಸ ಆದೇಶದಲ್ಲಿ ಸೂಚಿಸಲಾದ ಕನಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ಇದ್ದರೂ ಸಹ ಅನ್ವಯವಾಗುವುದಿಲ್ಲ ಎಂದು ವಿವರಿಸಿದರು.

ಈ ಆದೇಶ ಆನುವಂಶಿಕತೆಯಿಂದ ಬರುವ ಜಮೀನನ್ನು ವಿಭಜಿಸಲು ನಿರ್ಬಂಧನೆ ಮಾಡುವುದಿಲ್ಲ, ಪ್ರಸ್ತುತ ಜಂಟಿ ಹಕ್ಕಿನ ಅಥವಾ ಬಹುಮಾಲಿಕತ್ವ ಹೊಂದಿರುವ ಜಮೀನಿನ ಪಹಣಿಗಳನ್ನು ಅಸಿತ್ವದಲ್ಲಿ ಇರುವ ಹಕ್ಕಿನ ಅನುಸಾರ ವಿಭಜಿಸಬಹುದಾಗಿದೆ ಎಂದು ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ಹಾಡಿ, ತಾಂಡಾ, ಗೊಲ್ಲರ ಹಟ್ಟಿಗೂ ರೇಶನ್‌ ಅಂಗಡಿ: ಸಚಿವ ಕತ್ತಿ

ರಾಜ್ಯದಲ್ಲಿರುವ ಎಲ್ಲ ಹಾಡಿಗಳು, ತಾಂಡಾಗಳು, ಗೊಲ್ಲರ ಹಟ್ಟಿ, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದ ಕಾಲೋನಿ ಪ್ರದೇಶಗಳಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಲು ಸಾರ್ವಜನಿಕರ ವಿತರಣಾ ಪದ್ಧತಿ ನಿಯಂತ್ರಣ ಆದೇಶಕ್ಕೆ ತಿದ್ದುಪಡಿ ಆದೇಶ ಹೊರಡಿಸಲಾಗಿದೆ ಎಂದು ಅರಣ್ಯ ಮತ್ತು ಆಹಾರ, ನಾಗರಿಕರ ಸರಬರಾಜು ಖಾತೆ ಸಚಿವ ಉಮೇಶ ಕತ್ತಿ ಹೇಳಿದ್ದಾರೆ. 

ವಿಧಾನ ಪರಿಷತ್ತಿನಲ್ಲಿ ಸೋಮವಾರ ಕಾಂಗ್ರೆಸ್ಸಿನ ಪ್ರಕಾಶ್‌ ರಾಠೋಡ್‌ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ಈ ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣ ಆದೇಶಕ್ಕೆ ಕಳೆದ ಸೆಪ್ಟೆಂಬರ್‌ 22ರಂದು ತಿದ್ದುಪಡಿ ಆದೇಶ ಮಾಡಲಾಗಿದೆ. ಕನಿಷ್ಠ 100 ಪಡಿತರ ಚೀಟಿಗಳಿಗೆ ಸೀಮಿತಗೊಳಿಸಿ ರಾಜ್ಯದ ತಾಂಡಾ ಪ್ರದೇಶಗಳಲ್ಲಿ 376 ನ್ಯಾಯಬೆಲೆ ಅಂಗಡಿಗಳಿಗೆ ಮಂಜೂರಾತಿ ನೀಡಲಾಗಿದೆ ಎಂದರು. ಆಯಾ ಜಿಲ್ಲಾಧಿಕಾರಿಗೆ ನ್ಯಾಯಬೆಲೆ ಅಂಗಡಿ ಸ್ಥಾಪನೆಗೆ ಕೋರಿ ಅರ್ಜಿ ಸಲ್ಲಿಸಿದರೆ ಮಂಜೂರಾತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕತ್ತಿ ಭರವಸೆ ನೀಡಿದರು.

click me!