ಖಾಸಗೀಕರಣ ಯತ್ನ: ಕೆಪಿಟಿಸಿಎಲ್‌ನಲ್ಲಿ ಎಸ್ಕಾಂಗಳ ವಿಲೀನ ಇಲ್ಲ

By Kannadaprabha NewsFirst Published Jun 20, 2021, 7:37 AM IST
Highlights

* ಎಸ್ಕಾಂ ಖಾಸಗೀಕರಣ ಯತ್ನ ಬಗ್ಗೆ ವರದಿ ಮಾಡಿದ್ದ ‘ಕನ್ನಡಪ್ರಭ’
* ಪ್ರಸ್ತಾಪ ಕೈಬಿಟ್ಟ ರಾಜ್ಯ ಸರ್ಕಾರ
* ಎಲ್ಲ ಎಸ್ಕಾಂ ಸೇರಿಸಿ ಒಂದೇ ಕಂಪನಿ ಸ್ಥಾಪಿಸುವ ಚಿಂತನೆ ಜೀವಂತ
 

ಬೆಂಗಳೂರು(ಜೂ.20):  ರಾಜ್ಯದ ಐದು ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳನ್ನು () ಕೆಪಿಟಿಸಿಎಲ್‌ ಜತೆ ವಿಲೀನ ಮಾಡುವ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಆದರೆ, ಎಸ್ಕಾಂಗಳನ್ನು ಒಗ್ಗೂಡಿಸಿ ಪ್ರತ್ಯೇಕ ಹೋಲ್ಡಿಂಗ್‌ ಕಂಪನಿ ಸ್ಥಾಪಿಸುವ ಬಗ್ಗೆ ಚರ್ಚೆಯನ್ನು ಇನ್ನೂ ಮುಕ್ತವಾಗಿಟ್ಟಿದೆ.

ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ. ಕುಮಾರನಾಯಕ್‌ ಅವರ ಅಧ್ಯಕ್ಷತೆಯಲ್ಲಿ ರಾಜ್ಯದ ಎಲ್ಲ ಎಸ್ಕಾಂಗಳನ್ನು ಒಗ್ಗೂಡಿಸಿ ಪ್ರತ್ಯೇಕ ಹೋಲ್ಡಿಂಗ್‌ ಕಂಪನಿ ಮಾಡುವ ಬಗ್ಗೆ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರ ಅಭಿಪ್ರಾಯ ಪಡೆಯಲು ಕರೆಯಲಾಗಿದ್ದ ಸಭೆಯ ಒಟ್ಟಾರೆ ಫಲಿತಾಂಶವಿದು ಎಂದು ಮೂಲಗಳು ತಿಳಿಸಿವೆ.

ಸಭೆಯ ಆರಂಭದಲ್ಲೇ ಕುಮಾರನಾಯಕ್‌ ಅವರು ಎಸ್ಕಾಂಗಳನ್ನು ಕೆಪಿಟಿಸಿಎಲ್‌ ಜತೆ ವಿಲೀನಗೊಳಿಸುವ ಯಾವುದೇ ಚಿಂತನೆಯಿಲ್ಲ. ಕೆಪಿಟಿಸಿಎಲ್‌ ಪ್ರಸರಣ ನಿಗಮ. ವಿದ್ಯುತ್‌ ಪ್ರಸರಣ ನಿಗಮದ ಜತೆ ವಿದ್ಯುತ್‌ ಸರಬರಾಜು ನಿಗಮಗಳನ್ನು ವಿಲೀನ ಮಾಡಲು ಸಾಧ್ಯವಿಲ್ಲ. ಇಲಾಖೆಯು ಎಸ್ಕಾಂಗಳನ್ನು ಅಸ್ತಿತ್ವದಲ್ಲಿ ಉಳಿಸಿಕೊಂಡು ಮೇಲ್ವಿಚಾರಣೆಗೆ ಹೋಲ್ಡಿಂಗ್‌ ಕಂಪನಿ ಸ್ಥಾಪಿಸಲು ಚಿಂತನೆ ಹೊಂದಿದೆ. ಈ ಬಗ್ಗೆ ಅಭಿಪ್ರಾಯ ನೀಡಿ ಎಂದು ಕೋರಿದರು ಎನ್ನಲಾಗಿದೆ.

ಕೇಂದ್ರದ ಒತ್ತಡ, ಎಸ್ಕಾಂಗಳ ಖಾಸಗೀಕರಣಕ್ಕೆ ರಾಜ್ಯ ಸರ್ಕಾರದ ಮೊದಲ ಹೆಜ್ಜೆ?

ಆದರೆ, ಸಭೆಯಲ್ಲಿ ಹಾಜರಿರಬೇಕಿದ್ದ ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ), ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಮೆಸ್ಕಾಂ), ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿ- ಮೈಸೂರು (ಚೆಸ್ಕಾಂ), ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ (ಹೆಸ್ಕಾಂ), ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿ (ಜೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕರ ಪೈಕಿ ಮೂರ್ನಾಲ್ಕು ಮಂದಿ ಮಾತ್ರ ಹಾಜರಿದ್ದರು.ಹೀಗಾಗಿ ವಿವರವಾಗಿ ಚರ್ಚೆ ನಡೆದಿಲ್ಲ ಎಂದು ಮೂಲಗಳು ಹೇಳಿವೆ.

ಇದೇ ವೇಳೆ ಮಹಾರಾಷ್ಟ್ರ, ತಮಿಳುನಾಡು ಹಾಗೂ ಗುಜರಾತ್‌ನಲ್ಲಿರುವ ವ್ಯವಸ್ಥೆಯನ್ನು ಅಧ್ಯಯನ ಮಾಡಿಕೊಂಡು ಬಂದಿದ್ದ ಅಧಿಕಾರಿಗಳ ವರದಿಯನ್ನು ಕುಮಾರ ನಾಯಕ್‌ ಪರಿಶೀಲಿಸಿದರು. ಗುಜರಾತ್‌ ಸರ್ಕಾರವು ವಿದ್ಯುತ್‌ ಸರಬರಾಜು ಕಂಪನಿಗಳ ನಿರ್ವಹಣೆಗೆ ಗುಜರಾತ್‌ ಊರ್ಜಾ ವಿಕಾಸ್‌ ನಿಗಮ್‌ ಲಿಮಿಟೆಡ್‌ ಹೆಸರಿನಲ್ಲಿ ಹೋಲ್ಡಿಂಗ್‌ ಕಂಪನಿ ಸ್ಥಾಪಿಸಿದೆ. ದ ಪ್ರಸ್ತಾವನೆ ಕೇಳಿ ಬರುತ್ತಿರುವ ಈ ಹೊತ್ತಿನಲ್ಲಿ ಇಂತಹ ನಿರ್ಧಾರ ಮಾಡಿದರೆ ತಪ್ಪು ಸಂದೇಶ ರವಾನೆಯಾಗಲಿದೆ ಎಂದು ಹೇಳಿ ಪ್ರಸ್ತಾವನೆ ಸಾಧಕ-ಬಾಧಕಗಳನ್ನು ಚರ್ಚಿಸಿ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಸಭೆ ಮುಂದೂಡಿದರು ಎಂದು ಮೂಲಗಳು ತಿಳಿಸಿವೆ.

ಸೂಚನಾ ಪತ್ರದ ಬಗ್ಗೆ ಅಸಮಾಧಾನ:

ಈ ಸಭೆಯ ಬಗ್ಗೆ ಎಲ್ಲಾ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಕಳುಹಿಸಲಾಗಿದ್ದ ಸೂಚನಾ ಪತ್ರದಲ್ಲಿ ವಿದ್ಯುತ್‌ ಪ್ರಸರಣ ನಿಗಮದ (ಕೆಪಿಟಿಸಿಎಲ್‌) ಜತೆ ವಿದ್ಯುತ್‌ ಸರಬರಾಜು ನಿಗಮಗಳನ್ನು ವಿಲೀನಗೊಳಿಸುವ ಬಗ್ಗೆ ಚರ್ಚಿಸಲು ಸಿದ್ಧರಾಗಿ ಬರುವಂತೆ ನಿರ್ದೇಶಿಸಿದ್ದರ ಬಗ್ಗೆ ಕುಮಾರನಾಯಕ್‌ ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ಯಾವುದೇ ಚಿಂತನೆಯಿರದಿದ್ದರೂ ಸೂಚನಾ ಪತ್ರದಲ್ಲಿ ಈ ಅಂಶ ಸೇರಿದ್ದು ಹೇಗೆ ಎಂದು ಪ್ರಶ್ನಿಸಿದರು ಎನ್ನಲಾಗಿದೆ.
 

click me!