ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಸಮೀಪಿಸಿದ್ದರಿಂದ ಸಾಮೂಹಿಕ ಪ್ರಾರ್ಥನೆ ವಿಚಾರವಾಗಿ ವಕ್ಫ್ ಬೋರ್ಡ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ಬೆಂಗಳೂರು, (ಮೇ.20): ರಾಜ್ಯದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಮೇ 31 ರ ವರೆಗೆ ಲಾಕ್ ಡೌನ್ ಮುಂದುವರೆದಿರುವುದರಿಂದ ಮುಸ್ಲಿಂ ಸಮುದಾಯವರು ಮಸೀದಿಗಳಲ್ಲಿ ರಮ್ಜಾನ್ ಸಾಮೂಹಿಕ ಪ್ರಾರ್ಥನೆ ನಡೆಸದಂತೆ ವಕ್ಫ್ ಬೋರ್ಡ್ ಎಲ್ಲ ಮಸೀದಿ ಹಾಗೂ ದರ್ಗಾಗಳ ಆಡಳಿತ ಮಂಡಳಿಗಳಿಗೆ ನಿರ್ದೇಶನ ನೀಡಿದೆ.
ರಂಜಾನ್ ಹಬ್ಬ ಹಿನ್ನೆಲೆಯಲ್ಲಿ ಇಂದು (ಬುಧವಾರ) ವಕ್ಫ್ ಮಂಡಳಿ ಈ ನಿರ್ಧಾರ ಪ್ರಕಟಿಸಿದೆ. ರಾಜ್ಯದಲ್ಲಿ 4ನೇ ಹಂತದ ಲಾಕ್ ಡೌನ್ ಮೇ 31 ರ ವರೆಗೆ ಜಾರಿಯಲ್ಲಿರುವುದರಿಂದ ಮಸೀದಿ, ದರ್ಗಾ, ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುವಂತಿಲ್ಲ.
ಮಸೀದಿ ಬೇಡ, ಪವಿತ್ರ ರಂಜಾನ್ ಪ್ರಾರ್ಥನೆ ಮನೆಯಲ್ಲೇ ನೆರವೇರಿಸಿ: ಫತ್ವಾದಲ್ಲಿ ಉಲ್ಲೇಖ
ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವುದರಿಂದ ಒಬ್ಬರಿಗೊಬ್ಬರು ಅಪ್ಪಿಕೊಳ್ಳುವುದು, ಹಸ್ತ ಲಾಘವ ಮಾಡುವುದು, ಸ್ನೇಹಿತರು ಹಾಗೂ ಸಂಬಂಧಿಕರನ್ನು ಭೇಟಿ ಮಾಡುವಂತಿಲ್ಲ. ಅಲ್ಲದೇ ಹೊರ ರಾಜ್ಯ ಹಾಗೂ ವಿದೇಶಗಳಿಂದ ಬಂದವರಿಂದ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.
ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಹಾಗೂ ಶಾಸಕ ಹ್ಯಾರೀಸ್ ಅವರು ರಂಜಾನ್ ವೇಳೆ ನಮಾಜ್‌ಗೆ ಅವಕಾಶ ಕಲ್ಪಿಸಬೇಕೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.