ಕಿಡ್ನಿ ಸಣ್ಣದಿದ್ದರೆ ಸೇನಾ ಉದ್ಯೋಗವಿಲ್ಲ: ಅಭ್ಯರ್ಥಿಗೆ ಮರುಪರೀಕ್ಷೆ ನಿರಾಕರಿಸಿ ಕೋರ್ಟ್ ಮಹತ್ವದ ತೀರ್ಪು! ಏನಿದು ಪ್ರಕರಣ?

Kannadaprabha News   | Kannada Prabha
Published : Nov 13, 2026, 07:19 AM IST
karnataka HC

ಸಾರಾಂಶ

Army recruitment medical standards ಮೂತ್ರಪಿಂಡದ ಸಣ್ಣ ಗಾತ್ರದ ಕಾರಣ ಸೇನಾ ನೇಮಕಾತಿಯಿಂದ ಅನರ್ಹಗೊಂಡಿದ್ದ ಅಭ್ಯರ್ಥಿಯೊಬ್ಬರಿಗೆ ಮರು ಪರೀಕ್ಷೆ ಅವಕಾಶವನ್ನು ಹೈಕೋರ್ಟ್ ನಿರಾಕರಿಸಿದೆ. ವೈದ್ಯಕೀಯ ಮಾನದಂಡಗಳ ಪ್ರಕಾರ ಈ ಅನರ್ಹತೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಬೆಂಗಳೂರು (ನ.13): ಭಾರತೀಯ ಸೇನಾ ನೇಮಕಾತಿಯ ಮೆರಿಟ್‌ ಪಟ್ಟಿಯಲ್ಲಿ 51ನೇ ಸ್ಥಾನ ಪಡೆದಿದ್ದರೂ ಎಡ ಮೂತ್ರಪಿಂಡದ ಗಾತ್ರ ನಿಗದಿತ ವೈದ್ಯಕೀಯ ಮಾನದಂಡಕ್ಕಿಂತ ಚಿಕ್ಕದಿರುವ ಕಾರಣ ನೇಮಕಾತಿಯಿಂದ ಅನರ್ಹಗೊಂಡಿದ್ದ 25 ವರ್ಷದ ಅಭ್ಯರ್ಥಿಗೆ ಮರು ಪರೀಕ್ಷೆಯ ಅವಕಾಶ ಕಲ್ಪಿಸಲು ಹೈಕೋರ್ಟ್‌ ನಿರಾಕರಿಸಿದೆ.

ಅಭ್ಯರ್ಥಿಯ ಮರುಪರೀಕ್ಷೆಗೆ ನಿರಾಕರಿಸಿದ ಕೋರ್ಟ್

ಮರುಪರಿಶೀಲನಾ ವೈದ್ಯಕೀಯ ಮಂಡಳಿ (ಆರ್‌ಎಂಬಿ) ರಚಿಸಿ ಮತ್ತೊಮ್ಮೆ ಪರೀಕ್ಷೆ ನಡೆಸಲು ನಿರ್ದೇಶಿಸುವಂತೆ ಕೋರಿದ್ದ ಅರ್ಜಿ ತಿರಸ್ಕರಿಸಿದ್ದ ಹೈಕೋರ್ಟ್‌ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮೈಸೂರಿನ ಮೋನಿಶ್‌ ಎನ್‌. ಆರಾಧ್ಯ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿದೆ.

ಸಶಸ್ತ್ರ ಪಡೆಗಳ ಪ್ರವೇಶ ವೈದ್ಯಕೀಯ ಮಾನದಂಡಗಳಲ್ಲಿ, ಒಂದು ಅಥವಾ ಎರಡೂ ಮೂತ್ರಪಿಂಡಗಳು ಅಪೂರ್ಣ ಬೆಳವಣಿಗೆಯಿಂದ ಅಥವಾ ಕುಗ್ಗುವಿಕೆಯಿಂದ 8 ಸೆಂ.ಮೀ.ಗಿಂತ ಚಿಕ್ಕದಿದ್ದರೆ ನೇಮಕಾತಿಯಿಂದ ಅನರ್ಹತೆಗೆ ಕಾರಣವಾಗುತ್ತದೆ. 2008ರ ಜೂ.3ರ ಮಾರ್ಗಸೂಚಿಗಳೂ ಅದನ್ನೇ ಹೇಳುತ್ತವೆ. ಬೇರೆ ವೈದ್ಯಕೀಯ ವರದಿ ಸಲ್ಲಿಸಿದ ಪ್ರತಿಯೊಂದು ಪ್ರಕರಣವನ್ನೂ ಮರುಪರಿಶೀಲನಾ ಮಂಡಳಿಗೆ ಕಳುಹಿಸಬೇಕೆಂಬ ನಿಯಮವಿಲ್ಲ. ಮರುಪರಿಶೀಲನಾ ವೈದ್ಯಕೀಯ ಮಂಡಳಿಯ ಪರೀಕ್ಷೆ ಅಭ್ಯರ್ಥಿಯ ಹಕ್ಕಲ್ಲ. ಪ್ರಕರಣದ ಅರ್ಹತೆ ಆಧರಿಸಿದ ವಿವೇಚನಾತ್ಮಕ ನಿರ್ಧಾರ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಸೇನಾ ನೇಮಕಾತಿ: ಏನಿದು ಪ್ರಕರಣ?

ಆರಾಧ್ಯ ಅವರು ಸೇನಾ ನೇಮಕಾತಿಯ ಮೆರಿಟ್‌ ಪಟ್ಟಿಯಲ್ಲಿ 51ನೇ ಸ್ಥಾನ ಪಡೆದಿದ್ದರು. ವಿಶೇಷ ವೈದ್ಯಕೀಯ ಮಂಡಳಿಯು ಎಡ ಮೂತ್ರಪಿಂಡದ ಸಣ್ಣ ಗಾತ್ರ, ಪ್ಲೇಟ್‌ಲೆಟ್‌ಗಳ ಕೊರತೆ ಹಾಗೂ ಎಡಭಾಗದ ಕುತ್ತಿಗೆಯಲ್ಲಿ ಹೆಚ್ಚುವರಿ ಪಕ್ಕೆಲುಬು ಇರುವಿಕೆ ಎಂಬ ಮೂರು ಕಾರಣಗಳಿಂದ ಅವರನ್ನು ನೇಮಕಾತಿಯಿಂದ ಅನರ್ಹರೆಂದು ಘೋಷಿಸಿತ್ತು. ಇದರಿಂದ ಆರಾಧ್ಯ ಮರುಪರಿಶೀಲನಾ ಮಂಡಳಿಗೆ ತಮ್ಮ ಪ್ರಕರಣ ಒಪ್ಪಿಸುವಂತೆ ಕೋರಿದ್ದರು. ಆ ಮನವಿಯನ್ನು ಸಕ್ಷಮ ಪ್ರಾಧಿಕಾರ ತಿರಸ್ಕರಿಸಿದ್ದರಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ಏಕಸದಸ್ಯ ಪೀಠವು ಆ ಅರ್ಜಿಯನ್ನು ವಜಾಗೊಳಿಸಿ ಸೆ.17ರಂದು ಆದೇಶಿಸಿತ್ತು.

ಇದರಿಂದ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದ ಆರಾಧ್ಯ, ಮಣಿಪಾಲ್‌ ಆಸ್ಪತ್ರೆಯ ಅಲ್ಟ್ರಾಸೌಂಡ್‌ ವರದಿಯಲ್ಲಿ ನನ್ನ ಎಡ ಮೂತ್ರಪಿಂಡದ ಗಾತ್ರ 7.7ರಿಂದ 8 ಸೆಂ.ಮೀ. ಎಂದು ಹೇಳಿದೆ. ಈ ವರದಿ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ನೀಡಲು ಮರುಪರಿಶೀಲನಾ ಮಂಡಳಿಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.

ಆದರೆ, ಮೇಲ್ಮನವಿ ವೈದ್ಯಕೀಯ ಮಂಡಳಿ ನಡೆಸಿದ್ದ ಟ್ರಿಪಲ್‌ ಫೇಸ್‌ ಸಿಇಸಿಟಿ ಸ್ಕ್ಯಾನ್‌ನಲ್ಲಿ ಎಡ ಮೂತ್ರಪಿಂಡದ ಗಾತ್ರ 7 ಸೆಂ.ಮೀ. ಎಂದು ಕಂಡು ಬಂದಿತ್ತು. ಅಲ್ಟ್ರಾಸೌಂಡ್‌ಗಿಂತ ಈ ಪರೀಕ್ಷೆ ಹೆಚ್ಚು ನಿಖರವಾಗಿದೆ ಎಂದು ವಿಭಾಗೀಯ ಪೀಠ ತಿಳಿಸಿ, ಆರಾಧ್ಯ ಮೇಲ್ಮನವಿಯನ್ನು ವಜಾಗೊಳಿಸಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿಗರಿಗೆ ಗುಡ್‌ನ್ಯೂಸ್! ಚಲ್ಲಘಟ್ಟ ಮೆಟ್ರೋ ಡಿಪೋ ಬಳಿ ಹೊಸ ಅಂಡರ್‌ಪಾಸ್, ಮೈಸೂರು ರಸ್ತೆ ಇನ್ನು ಸಿಗ್ನಲ್ ಫ್ರೀ!
ಮೋದಿ ಕಾರ್ಯಕ್ರಮದಲ್ಲಿ ಕೃಷ್ಣ ಬೈರೇಗೌಡರ ಭಾಷಣ ಕ್ಯಾನ್ಸಲ್! ರಾಜ್ಯಕ್ಕೆ ನ್ಯಾಯ ಕೇಳಿದ್ದಕ್ಕೆ ಈ ಶಿಕ್ಷೆ, ಸಚಿವ ಅಸಮಾಧಾನ