ಬೆಂಗಳೂರಿಗರಿಗೆ ಗುಡ್‌ನ್ಯೂಸ್! ಚಲ್ಲಘಟ್ಟ ಮೆಟ್ರೋ ಡಿಪೋ ಬಳಿ ಹೊಸ ಅಂಡರ್‌ಪಾಸ್, ಮೈಸೂರು ರಸ್ತೆ ಇನ್ನು ಸಿಗ್ನಲ್ ಫ್ರೀ!

Kannadaprabha News   | Kannada Prabha
Published : Nov 13, 2026, 06:41 AM IST
Underpass Near Challaghatta Metro Depot

ಸಾರಾಂಶ

ಮೈಸೂರು ರಸ್ತೆ ಮತ್ತು ಎಸ್.ಎಂ. ಕೃಷ್ಣ ರಸ್ತೆ ಕೂಡುವ ಚಲ್ಲಘಟ್ಟ ಮೆಟ್ರೋ ಡಿಪೋ ಬಳಿ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಎನ್‌ಎಚ್‌ಎಐ ಹೊಸ ಅಂಡರ್‌ಪಾಸ್ ನಿರ್ಮಿಸುತ್ತಿದೆ. 800 ಮೀಟರ್ ಉದ್ದದ ಈ ಕಾಮಗಾರಿ ಪೂರ್ಣಗೊಂಡರೆ ವಾಹನಗಳು ಸಿಗ್ನಲ್ ಮುಕ್ತವಾಗಿ ಸಂಚರಿಸಬಹುದು.

ಬೆಂಗಳೂರು (ನ.13): ಮೈಸೂರು ರಸ್ತೆ(Mysuru road) ಹಾಗೂ ಬಿಡಿಎ ನಿರ್ಮಿತ ಎಸ್.ಎಂ. ಕೃಷ್ಣ ರಸ್ತೆ(SM Krishna road) ಕೂಡುವ ಚಲ್ಲಘಟ್ಟ ಮೆಟ್ರೋ ಡಿಪೋ(Challaghatta Metro Depot) ಬಳಿ ಟ್ರಾಫಿಕ್ ಜಾಮ್ ತಪ್ಪಿಸಿ ಸಿಗ್ನಲ್ ಮುಕ್ತವಾಗಿ ವಾಹನ ಸಂಚರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ (ಎನ್‌ಎಚ್‌ಎಐ) ಕೈಗೆತ್ತಿಕೊಂಡಿರುನ ನೂತನ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ.

800 ಮೀಟರ್ ಅಂಡರ್ ಪಾಸ್ ನಿರ್ಮಾಣ

ಸುಮಾರು 800 ಮೀಟರ್ ವಿಸ್ತೀರ್ಣದ ಜಾಗದಲ್ಲಿ ಅಂಡರ್‌ಪಾಸ್ ನಿರ್ಮಾಣವಾಗುತ್ತಿದೆ. ಸಿಗ್ನಲ್‌ನಲ್ಲಿ ಸುಮಾರು 50 ಮೀಟರ್ ವಿಸ್ತೀರ್ಣದ ಬಾಕ್ಸ್ ಅಳವಡಿಸಲಾಗುತ್ತಿದೆ. ಯೋಜನೆ ಪೂರ್ಣಗೊಂಡ ಬಳಿಕ ಈ ಜಾಗದಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ ಬಹುಮಟ್ಟಿಗೆ ಕಡಿಮೆಯಾಗಲಿದೆ ಎಂದು ಎನ್‌ಎಚ್‌ಎಐ ಅಧಿಕಾರಿಗಳು ಹೇಳಿದ್ದಾರೆ.

ಎಸ್.ಎಂ. ಕೃಷ್ಣ ರಸ್ತೆ ಉದ್ಘಾಟನೆಯಾದ ಬಳಿಕ ಚಲ್ಲಘಟ್ಟ ಡಿಪೋ ಬಳಿ ಸಿಗ್ನಲ್ ದೀಪಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಮೈಸೂರು ಕಡೆಯಿಂದ ನಗರದ ಕಡೆ ಬರುವ ವಾಹನಗಳು ಸಿಗ್ನಲ್‌ನಲ್ಲಿ ಸಿಲುಕಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಎಸ್.ಎಂ.ಕೃಷ್ಣ ರಸ್ತೆಯಲ್ಲೂ ವಾಹನ ದಟ್ಟಣೆ ಹೆಚ್ಚಾದರೆ ಸಿಗ್ನಲ್‌ನಲ್ಲಿ ಮತ್ತಷ್ಟು ಟ್ರಾಫಿಕ್ ಜಾಮ್ ಆಗುವುದನ್ನು ತಪ್ಪಿಸಲು ಅಂಡರ್‌ಪಾಸ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಯೋಜನೆ ಪೂರ್ಣಗೊಂಡ ಬಳಿಕ ಮೈಸೂರು ಕಡೆಯಿಂದ ನಗರದ ಕಡೆ ಬರುವ ವಾಹನಗಳು ಸಿಗ್ನಲ್‌ನಲ್ಲಿ ನಿಲ್ಲದೇ, ನೇರವಾಗಿ ಸಾಗಬಹುದಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಅಂಡರ್‌ಪಾಸ್ ಪಕ್ಕದಲ್ಲಿ ಸರ್ವೀಸ್ ರಸ್ತೆಯನ್ನು ನಿರ್ಮಿಸಲಾಗುತ್ತದೆ. ರಸ್ತೆಗಾಗಿ ಬಿಎಂಆರ್‌ಸಿಎಲ್‌ನಿಂದ ಹೆದ್ದಾರಿ ಪ್ರಾಧಿಕಾರಕ್ಕೆ ಜಾಗವನ್ನು ನೀಡಲಾಗಿದೆ. ಎಸ್.ಎಂ. ಕೃಷ್ಣ ರಸ್ತೆಯಿಂದ ನಗರದ ಕಡೆ ತೆರಳುವ ವಾಹನಗಳು ಎಡ ತಿರುವು ತೆಗೆದುಕೊಂಡು ಮುಂದಕ್ಕೆ ಸಾಗಬಹುದು. ಇನ್ನು ಮೈಸೂರು ಕಡೆ ತೆರಳಲು ಅಂಡರ್‌ಪಾಸ್ ಮೇಲ್ಭಾಗದಿಂದ ಸಂಚರಿಸಬಹುದಾಗಿದೆ.

ಇನ್ನು ನಗರದ ಕಡೆಯಿಂದ ಬಂದು ಎಸ್.ಎಂ.ಕೃಷ್ಣ ರಸ್ತೆಗೆ ತೆರಳುವ ವಾಹನಗಳು ಅಂಡರ್‌ಪಾಸ್ ಮೇಲಿನಿಂದ ಸಾಗಬಹುದು. ಹಾಲಿ ರಾಜರಾಜೇಶ್ವರಿ ವೈದ್ಯಕೀಯ ಆಸ್ಪತ್ರೆ ಎದುರು ಇರುವ ‘ಯು ಟರ್ನ್’ ಅನ್ನು ಬಂದ್ ಮಾಡಿ ವಿಭಜಕಗಳನ್ನು ಅಳವಡಿಸಲಾಗುತ್ತದೆ ಎಂದು ಎನ್‌ಎಚ್‌ಎಐ ಅಧಿಕಾರಿ ತಿಳಿಸಿದರು.

ಚಲ್ಲಘಟ್ಟ ಮೆಟ್ರೋ ಬಳಿ ತಪ್ಪದ ಟ್ರಾಫಿಕ್ ಜಾಮ್

ನೂತನ ಅಂಡರ್‌ಪಾಸ್ ನಿರ್ಮಾಣವಾದರೂ ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಬಳಿ ರಸ್ತೆಯು ಕೇವಲ 2 ಲೈನ್ ಮಾತ್ರವಿದೆ. ಐದು ಲೈನ್‌ನಲ್ಲಿ ಬರುವ ವಾಹನಗಳು ಮೆಟ್ರೋ ನಿಲ್ದಾಣದ ಬಳಿ 2 ಲೈನ್‌ ರಸ್ತೆಯ ಬಳಿ ಬಾಟಲ್‌ನೆಕ್‌ನಿಂದ ಸಿಲುಕಿಕೊಳ್ಳುವುದು ನಿಶ್ಚಿತವಾಗಿದೆ. ಇನ್ನು ಈ ಎರಡು ಲೈನ್‌ಗಳ ರಸ್ತೆಯಲ್ಲೇ ಬಸ್ ನಿಲ್ದಾಣವೂ ಇರುವುದರಿಂದ ವಾಹನಗಳ ದಟ್ಟಣೆ ತಪ್ಪಿಸುವುದು ಕಷ್ಟಸಾಧ್ಯ ಎನ್ನುವಂತಾಗಿದೆ. ರಸ್ತೆ ಅಗಲೀಕರಣ ಮಾಡಬೇಕೆಂದರೆ ಒಂದು ಕಡೆ ಎಕ್ಸ್‌ಪ್ರೆಸ್‌ವೇ ಡೌನ್‌ ರ್‍ಯಾಂಪ್ ಇದೆ ಮತ್ತೊಂದು ಬದಿಯಲ್ಲಿ ಮೆಟ್ರೋ ನಿಲ್ದಾಣ, ಮೆಟ್ರೋ ಡಿಪೋ ಮತ್ತು ಮೆಟ್ರೋ ಪಿಲ್ಲರ್‌ಗಳು ಇವೆ. ಹೀಗಾಗಿ, ರಸ್ತೆ ವಿಸ್ತರಣೆಗೆ ಅವಕಾಶಗಳು ಇಲ್ಲ ಎಂದು ಎನ್‌ಎಚ್‌ಎಐ ಅಧಿಕಾರಿ ತಿಳಿಸಿದರು.

ಸಿಗ್ನಲ್‌ನಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು ಅಂಡರ್‌ಪಾಸ್ ನಿರ್ಮಾಣ ಮಾಡಲಾಗುತ್ತಿದೆ. ಯೋಜನೆ ಪೂರ್ಣಗೊಂಡ ಬಳಿಕ ಮೈಸೂರು ಕಡೆಯಿಂದ ನಗರದ ಕಡೆಗೆ ಬರುವ ವಾಹನಗಳು ಚಲ್ಲಘಟ್ಟ ಡಿಪೋ ಬಳಿ ಸಿಗ್ನಲ್‌ರಹಿತವಾಗಿ ಸಾಗಬಹುದು.

-ವಿಲಾಸ್ ಪಿ. ಬ್ರಹ್ಮಂಕರ್, ಪ್ರಾದೇಶಿಕ ಅಧಿಕಾರಿ, ಎನ್‌ಎಚ್‌ಎಐ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಕಾರ್ಯಕ್ರಮದಲ್ಲಿ ಕೃಷ್ಣ ಬೈರೇಗೌಡರ ಭಾಷಣ ಕ್ಯಾನ್ಸಲ್! ರಾಜ್ಯಕ್ಕೆ ನ್ಯಾಯ ಕೇಳಿದ್ದಕ್ಕೆ ಈ ಶಿಕ್ಷೆ, ಸಚಿವ ಅಸಮಾಧಾನ
ಕರ್ನಾಟಕದ ಹೊಸ ಯೋಜನೆ, ಜಲಾಶಯಗಳಲ್ಲಿ 1500 ಮೆ.ವ್ಯಾಟ್‌ ಸಾಮರ್ಥ್ಯದ ತೇಲುವ ಸೌರ ವಿದ್ಯುತ್!