ಬೆಲ್ಲದ್‌ ಫೋನ್‌ ಕದ್ದಾಲಿಕೆಗೆ ಸಾಕ್ಷ್ಯವೇ ಇಲ್ಲ..!

By Kannadaprabha NewsFirst Published Aug 28, 2021, 7:37 AM IST
Highlights

*  ಎಷ್ಟು ಹುಡುಕಿದರೂ ಪೊಲೀಸರಿಗೆ ಸಿಗುತ್ತಿಲ್ಲ ಕದ್ದಾಲಿಕೆ ಸಾಕ್ಷ್ಯ
*  ಪ್ರಕರಣ ಮುಕ್ತಾಯಗೊಳಿಸಿ ಶೀಘ್ರ ಸರ್ಕಾರಕ್ಕೆ ವರದಿ ಸಲ್ಲಿಕೆ
*  ಶಾಸಕರು ನೀಡಿದ ಮಾಹಿತಿ ಆಧರಿಸಿ ವಿಚಾರಣೆ 
 

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಆ.28):  ಅದೆಷ್ಟೇ ಶೋಧಿಸಿದರೂ ಕೊನೆಗೂ ಪುರಾವೆ ಸಿಗದ ಹಿನ್ನಲೆಯಲ್ಲಿ ಧಾರವಾಡ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ್‌ ಬೆಲ್ಲದ್‌ ಅವರ ಫೋನ್‌ ಕದ್ದಾಲಿಕೆ ಪ್ರಕರಣದ ವಿಚಾರಣೆಗೆ ಪೊಲೀಸರು ‘ಶುಭಂ’ ಹೇಳಿದ್ದು, ಈ ಬಗ್ಗೆ ಒಂದೆರಡು ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ಅಧಿಕೃತವಾಗಿ ವರದಿ ಸಲ್ಲಿಸಲು ಸಹ ಅಧಿಕಾರಿಗಳು ನಿರ್ಧರಿಸಿದ್ದಾರೆ.

"

ರಾಜ್ಯದಲ್ಲಿ ಸರ್ಕಾರದ ನಾಯಕತ್ವ ಬದಲಾವಣೆಯು ಈಗ ಪೋನ್‌ ಕದ್ದಾಲಿಕೆ ಪ್ರಕರಣದ ಮೇಲೂ ಪರಿಣಾಮ ಬೀರಲಿದ್ದು, ಸರ್ಕಾರ ತೆಗೆದುಕೊಳ್ಳುವ ತೀರ್ಮಾನ ಆಧರಿಸಿ ಪೊಲೀಸರ ನಡೆ ಕೂಡಾ ನಿರ್ಧಾರವಾಗಲಿದೆ. ಹೀಗಾಗಿ ವಿಚಾರಣೆ ಮುಗಿದಿದ್ದರೂ ಸರ್ಕಾರದ ಹಸಿರು ನಿಶಾನೆಗೆ ಅಧಿಕಾರಿಗಳು ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪೋನ್‌ ಕದ್ದಾಲಿಕೆ ಹಾಗೂ ಜೈಲಿನಿಂದ ವಂಚಕ ಪ್ರಕರಣದ ಆರೋಪಿ ಅಲಿಯಾಸ್‌ ಸ್ವಾಮಿ ಪೋನ್‌ ಕರೆಗಳ ಬಗ್ಗೆ ಸಾಕ್ಷ್ಯ ಒದಗಿಸುವಂತೆ ಶಾಸಕ ಅರವಿಂದ್‌ ಬೆಲ್ಲದ್‌ ಅವರಿಗೆ ವಿಚಾರಣಾಧಿಕಾರಿಯೂ ಆಗಿರುವ ಶೇಷಾದ್ರಿಪುರಂ ಉಪ ವಿಭಾಗದ ಎಸಿಪಿ ಪೃಥ್ವಿ ಸೂಚಿಸಿದ್ದರು. ಆದರೆ ಆರೋಪ ಮಾಡಿದ ಆರಂಭದಲ್ಲಿ ಅತ್ಯುತ್ಸಾಹ ತೋರಿಸಿದ ಶಾಸಕರು, ಆನಂತರ ಪ್ರಕರಣದಲ್ಲಿ ಅವರ ಸ್ನೇಹಿತರ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಮೆತ್ತಾಗದರು. ಕೊನೆಗೆ ವಿಚಾರಣೆಗೆ ನಿರಾಸಕ್ತಿ ತಾಳಿದರು ಎಂದು ಮೂಲಗಳು ಹೇಳಿವೆ.

ಬಿಜೆಪಿ ಶಾಸಕ ಬೆಲ್ಲದ್‌ ಫೋನ್‌ ಕದ್ದಾಲಿಕೆ: ತನಿಖಾಧಿಕಾರಿ ಬದಲು

ಶಾಸಕರು ನೀಡಿದ ಮಾಹಿತಿ ಆಧರಿಸಿ ವಿಚಾರಣೆ ನಡೆಸಿದಾಗ ಆರೋಪಿ ಯುವರಾಜ್‌ ಅಲಿಯಾಸ್‌ ಸ್ವಾಮಿ ಕರೆ ಮಾಡಿರುವುದಕ್ಕೆ ಪುರಾವೆ ಸಿಗಲಿಲ್ಲ. ಜೈಲಿನಲ್ಲಿರುವ ಆತನಿಗೆ ಮೊಬೈಲ್‌ ಸೌಲಭ್ಯ ಸಿಕ್ಕ ಆರೋಪ ಬಗ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಯಿತು. ಜೈಲಿನಲ್ಲಿದ್ದ ಆತನ ಸೆಲ್‌ ಹಾಗೂ ಅನಾರೋಗ್ಯದಿಂದ ಆಸ್ಪತ್ರೆಗೆ ಚಿಕಿತ್ಸೆ ಪಡೆದಿರುವ ಆಸ್ಪತ್ರೆ ವಾರ್ಡ್‌ನಲ್ಲಿ ಕೂಡಾ ತಪಾಸಣೆ ನಡೆಸಲಾಯಿತು. ಹಾಗೆಯೇ ಯುವರಾಜ್‌ನ ಭದ್ರತೆ ನಿಯೋಜಿತರಾಗಿದ್ದ ಪೊಲೀಸರನ್ನು ಕೂಡಾ ಪ್ರತ್ಯೇಕವಾಗಿ ಪ್ರಶ್ನಿಸಿದರೂ ಶಾಸಕರಿಗೆ ಆತ ಕರೆ ಮಾಡಿರುವುದು ಖಚಿತವಾಗಲಿಲ್ಲ ಎಂದು ವಿಶ್ವಸನೀಯ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ಹಂಚಿಕೊಂಡಿವೆ. ಅಲ್ಲದೆ, ಶಾಸಕರ ಫೋನ್‌ಗೆ ಕಳ್ಳಗಿವಿ ಇಟ್ಟ ಬಗ್ಗೆ ಸಹ ರುಜುವಾತಾಗಲಿಲ್ಲ. ಈ ಸಂಬಂಧ ತಾಂತ್ರಿಕವಾಗಿ ಕೂಡಾ ಪರಿಶೀಲನೆ ನಡೆಸಲಾಗಿದೆ. ಎಲ್ಲ ಆಯಾಮದಿಂದಲೂ ವಿಚಾರಣೆ ನಡೆಸಿದ ಬಳಿಕ ಅಂತಿಮವಾಗಿ ಆರೋಪ ಸಾಬೀತಿಗೆ ಸಾಕ್ಷ್ಯಗಳ ಕೊರತೆ ಕಂಡು ಬಂದಿದೆ. ಹೀಗಾಗಿ ವಿಚಾರಣೆ ಮುಗಿದಿದ್ದು, ಶೀಘ್ರವೇ ಸರ್ಕಾರಕ್ಕೆ ವರದಿ ಸಲ್ಲಿಸಲು ಸಲ್ಲಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶಾಸಕರ ಸ್ನೇಹಿತ ನಂಬರ್‌

ತಮ್ಮ ಮೊಬೈಲ್‌ಗೆ ಕರೆ ಬಂದಿತ್ತು ಎಂದು ಶಾಸಕರು ಕೊಟ್ಟಿದ್ದ ಮೊಬೈಲ್‌ ಸಂಖ್ಯೆಯೂ ಅವರ ಹೈದರಾಬಾದ್‌ ಮೂಲದ ಸ್ನೇಹಿತನ ಮೊಬೈಲ್‌ ಸಂಖ್ಯೆ ಆಗಿತ್ತು. ಈ ಬಗ್ಗೆ ಹೈದರಾಬಾದ್‌ಗೆ ತೆರಳಿ ಶಾಸಕರ ಗೆಳೆಯನನ್ನು ವಿಚಾರಣೆ ಕೂಡ ನಡೆಸಲಾಯಿತು ಎಂದು ಮೂಲಗಳು ಹೇಳಿವೆ.
 

click me!