ಬುಡಕಟ್ಟು ಜನರ ಎಚ್ಚರಿಕೆ: ಸಿದ್ದಿಗಳ 2 ಗ್ರಾಮಗಳಿಗೆ ಕೊರೋನಾ ಬಂದೇ ಇಲ್ಲ!

By Kannadaprabha NewsFirst Published May 15, 2021, 8:09 AM IST
Highlights

* ಸಿದ್ದಿಗಳ ಈ 2 ಗ್ರಾಮಗಳಿಗೆ ಕೊರೋನಾ ಬಂದೇ ಇಲ್ಲ!

* ಧಾರವಾಡದ ಕಾಡಿನಲ್ಲಿರುವ ದಿಂಬುವಳ್ಳಿ, ಬೈಚವಾಡ

* ಬುಡಕಟ್ಟು ಜನರ ಎಚ್ಚರಿಕೆ: ಸೋಂಕು ಕಾಲಿಡಲು ಬಿಟ್ಟಿಲ್ಲ

ಶಿವಾನಂದ ಗೊಂಬಿ

ಹುಬ್ಬಳ್ಳಿ(ಮೇ.15): ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೋನಾ ಸೋಂಕು ದೇಶದ ಪ್ರತಿ ಗ್ರಾಮ ಗ್ರಾಮಕ್ಕೂ ಹಬ್ಬಿ ಹಳ್ಳಿಗರನ್ನೂ ಹೈರಾಣು ಮಾಡುತ್ತಿದೆ. ಆದರೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಅರಣ್ಯ ಪ್ರದೇಶದೊಳಗಿರುವ ದಿಂಬುವಳ್ಳಿ ಮತ್ತು ಬೈಚವಾಡ ಎಂಬೆರಡು ಗ್ರಾಮಗಳಿಗೆ ಮಾತ್ರ ಕೊರೋನಾ ಇದುವರೆಗೂ ಕಾಲಿಡದ್ದು ವಿಶೇಷ. ಸಿದ್ದಿ ಬುಡಕಟ್ಟು ಜನಾಂಗದವರೇ ಹೆಚ್ಚಿರುವ ಇಲ್ಲಿ ಯಾರಲ್ಲೂ ಈವರೆಗೂ ಕೊರೋನಾ ಲಕ್ಷಣವೂ ಕಂಡು ಬಂದಿಲ್ಲ. ಇದಕ್ಕೆ ಕಾರಣ ಅಲ್ಲಿನ ಜನತೆಯ ಕಟ್ಟುನಿಟ್ಟಿನ ನಿಯಮಪಾಲನೆ.

ಸೂಳಿಕಟ್ಟಿಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಈ ಅಕ್ಕಪಕ್ಕದ ಗ್ರಾಮಗಳಲ್ಲಿ ಸುಮಾರು 250ಕ್ಕೂ ಹೆಚ್ಚು ಜನರು ವಾಸಿಸುತ್ತಾರೆ. ದಿಂಬುವಳ್ಳಿಯಲ್ಲಿ 90, ಬೈಚವಾಡದಲ್ಲಿ 36 ಮನೆಗಳಿವೆ. ತಾಲೂಕು ಕೇಂದ್ರ ಕಳಗಟಗಿಯಿಂದ 15 ಕಿ.ಮೀ. ಅಂತರದಲ್ಲಿವೆ. ಇಲ್ಲಿರುವ ಬಹುತೇಕರು ಅನಕ್ಷರಸ್ಥರು. ಯಾರೂ ಶ್ರೀಮಂತರಲ್ಲ. ಒಂದೋ ಎರಡೋ ಎಕರೆ ಜಮೀನು ಹೊಂದಿದ ಸಣ್ಣ ಹಿಡುವಳಿದಾರರು. ಬಹುತೇಕರದು ಕೂಲಿ ಕೆಲಸದಿಂದಲೇ ಹೊಟ್ಟೆಹೊರಬೇಕಾದ ಪರಿಸ್ಥಿತಿ.

ಸೋಂಕು ಬಂದಿಲ್ಲ:

ಕೊರೋನಾ ಒಂದನೆಯ ಅಲೆಯಾಗಲಿ, ಎರಡನೆಯ ಅಲೆಯಾಗಲಿ ಇಲ್ಲಿಗೆ ಕಾಲಿಟ್ಟಿಲ್ಲ. ಅದರ ಲಕ್ಷಣಗಳಾದ ಜ್ವರ, ನೆಗಡಿ, ಮೈ ಕೈ ನೋವುಗಳೂ ಕಂಡು ಬಂದಿಲ್ಲ. ಈವರೆಗೂ ಯಾರೊಬ್ಬರು ಕೆಮ್ಮು ಅಂತ ದವಾಖಾನೆಗೆ ಹೋಗಿಲ್ಲ.

ಕಳೆದ ವರ್ಷದವರೆಗೂ ಇಲ್ಲಿನ ಜನತೆಯೂ ದುಡಿಯಲು ಮಹಾರಾಷ್ಟ್ರದ ಕೊಲ್ಲಾಪುರ, ಗೋವಾಗಳಿಗೆ ಗುಳೆ ಹೋಗುತ್ತಿದ್ದರು. ಆದರೆ ಕಳೆದ ವರ್ಷ ಕೊರೋನಾ ಹಾವಳಿ ಆರಂಭವಾದ ಮೇಲೆ ವಾಪಸ್‌ ಬಂದವರು ಮತ್ತೆ ಅತ್ತ ತಲೆಹಾಕಿಲ್ಲ. ಸಮೀಪದ ಕಲಘಟಗಿ, ಹುಬ್ಬಳ್ಳಿ-ಧಾರವಾಡಕ್ಕೆ ಕೂಲಿ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಇದೀಗ ಕೊರೋನಾ 2ನೇ ಅಲೆ ಪ್ರಾರಂಭವಾದ ಮೇಲೆ ಗ್ರಾಮ ಬಿಟ್ಟು ಯಾರೊಬ್ಬರೂ ಹೊರಗೆ ಕಾಲಿಟ್ಟಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲವರು ಕೆಲಸಕ್ಕೆ ಹೋಗುತ್ತಾರಷ್ಟೆ. ಕಲಘಟಗಿಯಿಂದ ಆಟೋ, ಟಂಟಂಗಳಲ್ಲಿ ಆಗಾಗ ತರಕಾರಿ, ಕಿರಾಣಿ ಮಾರಾಟಗಾರರು ಗ್ರಾಮಕ್ಕೆ ಬರುತ್ತಾರೆ. ಇಲ್ಲಿನ ನಿವಾಸಿಗಳು ಸಾಮಾಜಿಕ ಅಂತರ ಪಾಲಿಸಿ ಅವುಗಳನ್ನು ಖರೀದಿಸುತ್ತಾರೆಯೇ ಹೊರತು ಸಂತೆಗಾಗಿ ಸಮೀಪದ ಪಟ್ಟಣಕ್ಕೂ ಹೋಗುವುದಿಲ್ಲ.

"

ಜಾಗೃತಿಗೆ ಸ್ಪಂದನೆ:

ಕೊರೋನಾ ಬಗ್ಗೆ ಕಳೆದ ವರ್ಷ ಹಾಗೂ ಈಗ ಪಂಚಾಯಿತಿಯಿಂದ ಡಂಗೂರ ಸಾರಿ ಜಾಗೃತಿ ಮೂಡಿಸಲಾಗಿತ್ತು. ಗ್ರಾ.ಪಂ., ತಾ.ಪಂ. ಅಧಿಕಾರಿ ವರ್ಗ ಯಾವ ರೀತಿ ಇರಬೇಕು ಎಂಬುದನ್ನು ತಿಳಿಸಿ ಹೋಗಿದೆ. ಅದರಂತೆ ಕಟ್ಟುನಿಟ್ಟಿನಿಂದ ನಿಯಮಪಾಲಿಸುತ್ತಾ ಕೊರೋನಾವನ್ನು ಹತ್ತಿರಕ್ಕೆ ಬಿಟ್ಟುಕೊಂಡಿಲ್ಲ ಈ ಗ್ರಾಮಗಳು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!