* ಕೆಪಿಸಿಸಿಯಿಂದ 10 ಕೋಟಿ, ಶಾಸಕರು, ಸಂಸದರ ನಿಧಿಯಿಂದ 90 ಕೋಟಿ ಬಳಕೆ: ಸಿದ್ದು, ಡಿಕೆಶಿ
* ಉತ್ಪಾದಕರಿಂದ ಲಸಿಕೆ ಖರೀದಿಸಿ ಜನರಿಗೆ ವಿತರಿಸಲು ಸರ್ಕಾರದ ಅನುಮತಿ ಕೇಳಿದ ಕಾಂಗ್ರೆಸ್
* ಕಾಂಗ್ರೆಸ್ ಶಾಸಕರ 100 ಕೋಟಿ ರೂ ನಿಧಿ ಲಸಿಕೆಗೆ
ಬೆಂಗಳೂರು(ಮೇ.15): ರಾಜ್ಯ ಕಾಂಗ್ರೆಸ್ ಪಕ್ಷವು ಕೊರೋನಾ ಸುಳಿಯಿಂದ ಜನರ ಜೀವ ರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಸ್ಥಳೀಯ ಅಭಿವೃದ್ಧಿಗಾಗಿ ಕಾಂಗ್ರೆಸ್ ಶಾಸಕರು, ಸಂದರಿಗೆ ನೀಡುವ ಅನುದಾನ ಹಾಗೂ ಕೆಪಿಸಿಸಿ ನಿಧಿಯಿಂದ ಬರೋಬ್ಬರಿ 100 ಕೋಟಿ ರು. ಹಣವನ್ನು ರಾಜ್ಯದ ಜನರಿಗೆ ಲಸಿಕೆ ಹಾಕಿಸಲು ವೆಚ್ಚ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಜಂಟಿಯಾಗಿ ಘೋಷಿಸಿದ್ದಾರೆ.
ರಾಜ್ಯದ ಜನರಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಲಸಿಕೆ ಅಭಿಯಾನ ಹಮ್ಮಿಕೊಳ್ಳಲು ಸರ್ಕಾರಗಳು ಅನುಮತಿ ನೀಡಬೇಕು. ಈ ವಿಚಾರದಲ್ಲಿ ರಾಜಕೀಯ ಮಾಡದೆ ಕಾಂಗ್ರೆಸ್ ಪಕ್ಷವು ನೇರವಾಗಿ ಲಸಿಕೆ ಖರೀದಿಸಿ ಜನರಿಗೆ ನೀಡಲು ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಶುಕ್ರವಾರ ಸಿದ್ದರಾಮಯ್ಯ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿವಕುಮಾರ್, ಕಾಂಗ್ರೆಸ್ ಪಕ್ಷ ಲಸಿಕೆ ಅಭಿಯಾನವನ್ನು ಪಾರದರ್ಶಕವಾಗಿ ನಿಭಾಯಿಸಲಿದೆ. ಯೋಜನೆಯ ಅನುಷ್ಠಾನದ ನೀಲ ನಕ್ಷೆಯನ್ನೂ ನೀಡುತ್ತೇವೆ. ಆತ್ಮನಿರ್ಭರ ಭಾರತ್ ಮನೋಭಾವನೆ ಹೊಂದಿರುವ ಉತ್ಪಾದಕರಿಂದಲೇ ಲಸಿಕೆ ಖರೀದಿಸುತ್ತೇವೆ. ರಾಜ್ಯದಲ್ಲಿ ಲಸಿಕೆ ಅಭಿಯಾನ ಆರಂಭಿಸಲು ಕಾಂಗ್ರೆಸ್ 100 ಕೋಟಿ ರು. ಯೋಜನೆ ರೂಪಿಸಿದೆ. ಇದರಲ್ಲಿ 10 ಕೋಟಿ ರು.ಗಳನ್ನು ಕೆಪಿಸಿಸಿ ವತಿಯಿಂದ ಹಾಗೂ 90 ಕೋಟಿ ರು. ಹಣವನ್ನು ಶಾಸಕರು, ಸಂಸದರು ಕ್ಷೇತ್ರಾಭಿವೃದ್ಧಿ ನಿಧಿಯಿಂದ ಬಳಸಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಎರಡೂ ಲಸಿಕೆ ವಿಚಾರವಾಗಿ ಕೇಂದ್ರ-ರಾಜ್ಯ ಸರ್ಕಾರಗಳಿಗೆ ಛೀಮಾರಿ ಹಾಕಿವೆ. ಗುರುವಾರವೂ ಕರ್ನಾಟಕ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಛೀಮಾರಿ ಹಾಕಿದೆ. ನಾನು ನನ್ನ ಇಡೀ ರಾಜಕೀಯ ಜೀವನದಲ್ಲಿ ಇಷ್ಟುಬೇಜವಾಬ್ದಾರಿ ಸರ್ಕಾರಗಳನ್ನು ನೋಡಿರಲಿಲ್ಲ. ಕೊರೋನಾ ಬಂದು ಒಂದು ವರ್ಷಕ್ಕೂ ಹೆಚ್ಚಿನ ಸಮಯವಾಗಿದೆ. ಮೊದಲ ಅಲೆಯ ಅನುಭವ ಇದ್ದರೂ, ಎರಡನೇ ಅಲೆ ಜನವರಿಯಲ್ಲಿ ಬರುವುದಾಗಿ ಮಾಹಿತಿ ಇದ್ದರೂ ಈ ಸರಕಾರಗಳು ಎಚ್ಚೆತ್ತುಕೊಳ್ಳಲಿಲ್ಲ ಎಂದು ಹರಿಹಾಯ್ದರು.
ಹೀಗಾಗಿ ನಮ್ಮ ಪಕ್ಷದ ಶಾಸಕರಿಂದ ಅವರ ಕ್ಷೇತ್ರದ ಅಭಿವೃದ್ಧಿಗೆ ಬರುವ ಅನುದಾನವನ್ನು ಲಸಿಕೆ ಖರೀದಿಗೆ ಸಂಗ್ರಹಿಸಲಿದ್ದೇವೆ. ಒಟ್ಟು 100 ಕೋಟಿ ರು. ಯೋಜನೆ ರೂಪಿಸಿದ್ದೇವೆ. ನಾವು ಕೊಡುವುದರಿಂದ ಎಲ್ಲವೂ ಆಗುತ್ತದೆ ಎಂದು ಹೇಳುವುದಿಲ್ಲ. ಆದರೆ ಈ ಪರಿಸ್ಥಿತಿಯಲ್ಲಿ ನಮ್ಮ ಕೈಲಾದ ನೆರವನ್ನು ನಾವು ನೀಡುತ್ತಿದ್ದೇವೆ ಎಂದು ಹೇಳಿದರು.
ದೇಶದ ಪ್ರತಿಯೊಬ್ಬರಿಗೂ ಕೊರೋನಾ ವ್ಯಾಕ್ಸಿನ್ ನೀಡುವುದೇ ಸೋಂಕು ತಡೆಗಟ್ಟಲು ಇರುವ ಪರಿಣಾಮಕಾರಿ ಮಾರ್ಗವೆಂದು ತಜ್ಞರು ಹೇಳಿದ್ದಾರೆ. ಈ ವೇಳೆಗೆ ಅರ್ಧದಷ್ಟುಮಂದಿಗೆ ಲಸಿಕೆ ನೀಡಿದ್ದರೆ ಕೊರೋನಾ ವಿರುದ್ಧ ಹೋರಾಡಲು ಬಲ ಬರುತ್ತಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೇಜವಾಬ್ದಾರಿತನದಿಂದ ಜನ ಲಸಿಕೆಗಾಗಿ ಅಲೆಯುವ ಸ್ಥಿತಿ ಬಂದಿದೆ. ಕರ್ನಾಟಕ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಲಸಿಕೆ ನೀಡಿಕೆ ಸಂಬಂದ ಎರಡೂ ಸರ್ಕಾರಗಳಿಗೆ ಛೀಮಾರಿ ಹಾಕಿವೆ. ಇಷ್ಟಾದರೂ ಬಿಜೆಪಿ ನಾಯಕರಿಗೆ ಬುದ್ದಿ ಬಂದಂತೆ ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಕ್ಕೆ ವ್ಯಾಕ್ಸಿನ್ ಬರಲು ಇನ್ನು ಹಲವು ತಿಂಗಳುಗಳಾಗಬಹುದು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಕೊರೋನಾ ಮೂರನೇಅಲೆ ಬರಲಿದ್ದು, ಅದರ ಬಗೆಗಿನ ತಜ್ಞರ ಅಭಿಪ್ರಾಯವನ್ನು ಗಮನಿಸಿದರೆ ಮುಂದಿನ ದಿನಗಳ ಬಗ್ಗೆ ಆತಂಕವಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಆತ್ಮನಿರ್ಭರ ಲಸಿಕೆ
ಕಾಂಗ್ರೆಸ್ ಪಕ್ಷದಿಂದ ಲಸಿಕೆ ವಿತರಣೆಗೆ ನೀಲನಕ್ಷೆ ರೂಪಿಸುತ್ತೇವೆ. ಆತ್ಮನಿರ್ಭರ ಭಾರತ್ ಮನೋಭಾವ ಹೊಂದಿರುವ ಉತ್ಪಾದಕರಿಂದಲೇ ಲಸಿಕೆ ಖರೀದಿಸುತ್ತೇವೆ. ಇದಕ್ಕೆ 10 ಕೋಟಿ ರು.ಗಳನ್ನು ಕೆಪಿಸಿಸಿ ವತಿಯಿಂದ ಹಾಗೂ 90 ಕೋಟಿ ರು. ಹಣವನ್ನು ಶಾಸಕರು, ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಬಳಸಿಕೊಳ್ಳುತ್ತೇವೆ.
- ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ನಮ್ಮ ಕೈಲಾದ ನೆರವು
ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಎರಡೂ ಲಸಿಕೆ ವಿಚಾರವಾಗಿ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಛೀಮಾರಿ ಹಾಕಿವೆ. ಹೀಗಾಗಿ ನಮ್ಮ ಪಕ್ಷದ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನ ಬಳಸಿ ಲಸಿಕೆ ಖರೀದಿಸುತ್ತೇವೆ. ಇದರಿಂದ ಎಲ್ಲ ಸಮಸ್ಯೆಯೂ ಬಗೆಹರಿಯದು. ಆದರೆ, ನಮ್ಮ ಕೈಲಾದ ನೆರವು ನೀಡುತ್ತೇವೆ.
- ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕ
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona