
ವಿಧಾನ ಪರಿಷತ್(ಜು.13): ರಾಜ್ಯದಿಂದ ನೆರೆಯ ಕೇರಳ ರಾಜ್ಯಕ್ಕೆ ಸರಬರಾಜಾಗುವ ನಂದಿನಿ ಹಾಲಿನ ಗುಣಮಟ್ಟಕಳಪೆಯಾಗಿರುವ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಎಂದಿನಂತೆ ನಿತ್ಯ ಎರಡು ಲಕ್ಷ ಲೀಟರ್ ಹಾಲಿನ ಖರೀದಿ ಮುಂದುವರೆದಿದೆ ಎಂದು ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.
ಬುಧವಾರ ಪ್ರಶ್ನೋತ್ತರದ ವೇಳೆ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ಹಾಲು ಮಹಾಮಂಡಲವು ಕಳೆದ 10-12 ವರ್ಷಗಳಿಂದ ಕೇರಳದ ಸಹಕಾರ ಸಂಸ್ಥೆ ‘ಮಿಲ್ಮಾ’ಗೆ ಸರಾಸರಿ ಪ್ರತಿನಿತ್ಯ ಎರಡು ಲಕ್ಷ ಲೀಟರ್ ಹಾಲು ಸರಬರಾಜು ಮಾಡುತ್ತಿದೆ. ಇತ್ತೀಚೆಗೆ ಕೆಎಂಎಫ್ ಕೇರಳದಲ್ಲಿ ಮೊದಲ ಬಾರಿಗೆ ನಂದಿನಿ ಉತ್ನನ್ನಗಳ ಮಾರಾಟ ಆರಂಭಿಸಿದ್ದರಿಂದ ಕೇರಳ ಸರ್ಕಾರದ ಪಶುಸಂಗೋಪನೆ ಸಚಿವರು, ಕೆಎಂಎಫ್ ಹಾಲಿನ ಗುಣಮಟ್ಟದ ಬಗ್ಗೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು. ಆದರೆ, ಹಾಲಿನ ಗುಣಮಟ್ಟ ಕಳಪೆಯಾಗಿ ತಿರಸ್ಕೃತಗೊಂಡಿರುವ ಬಗ್ಗೆ ವರದಿಯಾಗಿಲ್ಲ. ಈ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ ಎಂದರು.
ಗೋ ಹತ್ಯೆ ನಿಷೇಧ ಕಾನೂನು ರದ್ದು ಪಡಿಸುವ ಪ್ರಸ್ತಾಪವೇ ಸರ್ಕಾರದ ಮುಂದೆ ಇಲ್ಲ: ಕೆ. ವೆಂಕಟೇಶ್
ಕೇರಳ ಸಹಕಾರ ಹಾಲು ಒಕ್ಕೂಟವು ನಮ್ಮ ರಾಜ್ಯದ ನಂದಿನಿ ಹಾಲಿನ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಮಾಧ್ಯಮಗಳ ವರದಿಯಿಂದ ತಿಳಿದು ಬಂದಿದೆ. ಈ ಬಗ್ಗೆ ಕೇರಳ ಸಹಕಾರಿ ಹಾಲು ಮಾರಾಟ ಮಹಾಮಂಡಳಿಯಿಂದ ನೇರವಾಗಿ ಯಾವುದೇ ನಿಲುವುಗಳು ಲಿಖಿತ ಅಥವಾ ಮೌಖಿಕವಾಗಿ ಬಂದಿಲ್ಲ ಎಂದು ಹೇಳಿದರು.
ಬಮೂಲ್ ರೈತರಿಂದ ಖರೀದಿಸುವ ಹಾಲಿನ ದರ ಕಡಿಮೆ ಮಾಡಿದಿಯೇ ಎಂದು ರವಿಕುಮಾರ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಬೇಸಿಗೆ ಸಮಯದಲ್ಲಿ ಬಮೂಲ್ ರೈತರಿಗೆ ಅನುಕೂಲವಾಗಲಿ ಎಂದು ಲೀಟರ್ ಹಾಲಿನ ಖರೀದಿ ದರವನ್ನು ಮೂರು ರು. ಹೆಚ್ಚಳ ಮಾಡಿತ್ತು. ಬೇಸಿಗೆ ಮುಗಿದ ಹಿನ್ನೆಲೆಯಲ್ಲಿ ಲೀಟರ್ ಹಾಲಿಗೆ ಒಂದೂವರೆ ರು. ಕಡಿಮೆ ಮಾಡಿದೆ ಎಂದು ಸ್ಪಷ್ಟನೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ