Latest Videos

ದರ್ಶನ್ ಕೇಸಿನ ಎಸ್‌ಪಿಪಿ ಬದಲಾವಣೆ, ಸಚಿವರ ಒತ್ತಡಕ್ಕೆ ಮಣಿದ್ರಾ ಸಿಎಂ?: ಸಿದ್ದು ಹೇಳಿದ್ದಿಷ್ಟು

By Kannadaprabha NewsFirst Published Jun 20, 2024, 12:42 PM IST
Highlights

ಎಸ್‌ಪಿಸಿ ಬದಲಾವಣೆ ಮಾಡಲಾಗುವುದು ಎಂದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವುದು ಸುಳ್ಳು ಹಾಗೂ ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು(ಜೂ.20):  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಸ್‌ಪಿಪಿ (ಸರ್ಕಾರಿ ವಿಶೇಷ ಅಭಿಯೋ ಜಕ) ಅವರನ್ನು ಬದಲಾವಣೆ ಮಾಡಲು ಯಾವ ಸಚಿವರು, ಶಾಸಕರೂ ಒತ್ತಡ ಹಾಕಿಲ್ಲ. ಒತ್ತಡ ಹಾಕಿದರೆ ಕೇಳುವುದೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. 

'ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ವಿಶೇಷ ಅಭಿಯೋಜಕರನ್ನು ಬದಲಾಯಿಸಲು ಸಚಿವರು ಒತ್ತಡ ಹಾಕುತ್ತಿದ್ದಾರೆಯೇ' ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಇದಕ್ಕೆ ಉತ್ತರಿಸಿದ ಅವರು, 'ಎಸ್‌ಪಿಸಿ ಬದಲಾಯಿಸಲು ಯಾವ ಸಚಿವರು, ಶಾಸಕರೂ ಒತ್ತಡ ಹಾಕಿಲ್ಲ. ಒತ್ತಡ ಹಾಕಿದರೆ ಕೇಳೋದು ಇಲ್ಲ' ಎಂದರು. ಎಸ್‌ಪಿಸಿ ಬದಲಾವಣೆ ಮಾಡಲಾಗುವುದು ಎಂದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವುದು ಸುಳ್ಳು ಹಾಗೂ ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಹೇಳಿದರು.

ದರ್ಶನ್ ಕೇಸ್ ದಾರಿ ತಪ್ಪಿಸಲು ನಡೆದಿದ್ಯಾ ಷಡ್ಯಂತ್ರ, ಖಡಕ್ ಎಸ್‌ಪಿಪಿ ಬದಲಾವಣೆಗೆ ಸಿಎಂ ಮೇಲೆ ಹೆಚ್ಚಿದ ಒತ್ತಡ!

ಏನಿದು ವಿವಾದ?

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸರ್ಕಾರಿ ವಿಶೇಷ ಅಭಿಯೋಜಕ (ಎಸ್‌ಪಿಪಿ) ರಾಗಿರುವ ಪಿ.ಪ್ರಸನ್ನಕುಮಾರ್ ಸಮರ್ಥವಾಗಿ ವಾದ ಮಂಡಿಸುತ್ತಿದ್ದು, ಇದರಿಂದ ಆತಂಕಕ್ಕೆ ಒಳಗಾದ ನಟ ದರ್ಶನ್‌ಗೆ ಆಪ್ತರಾದ ಕೆಲ ಸಚಿವರು ಎಸ್‌ಪಿಸಿ ಬದಲಾಯಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

ಎಸ್‌ಪಿಪಿ ಪ್ರಸನ್ನಕುಮಾರ್ ಅವರು ಹಿರಿಯ ವಕೀಲರಾಗಿದ್ದು ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದ್ದಾರೆ. ಆರೋಪಿಗಳಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳುತ್ತಾರೆ ಎಂಬ ವರದಿ ಗಳ ಹಿನ್ನೆಲೆಯಲ್ಲಿ ದರ್ಶನ್‌ಗೆ ಆಪ್ತರಾಗಿರುವ ಕೆಲ ಸಚಿವರು ಆತಂಕಗೊಂಡಿದ್ದಾರೆ. ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿ ಎಸ್‌ಪಿಪಿ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿತ್ತು.

click me!