'ಗಾಂಜಾ ಔಷಧ ಗುಣ ಸಾಬೀತು ಆಗಿಲ್ಲ, ಕಾನೂನುಬದ್ಧ ಬೇಡ'

Kannadaprabha News   | Asianet News
Published : Sep 03, 2020, 09:13 AM IST
'ಗಾಂಜಾ ಔಷಧ ಗುಣ ಸಾಬೀತು ಆಗಿಲ್ಲ, ಕಾನೂನುಬದ್ಧ ಬೇಡ'

ಸಾರಾಂಶ

ಗಾಂಜಾ ಕಾನೂನುಬದ್ಧ ಬೇಡ: ಡಾ. ಗಂಗಾಧರ್‌| ಗಾಂಜಾದಲ್ಲಿ ಔಷಧೀಯ ಗುಣ ಸಾಬೀತಾಗಿಲ್ಲ, ಇದರಿಂದ ಮಾನಸಿಕ, ದೈಹಿಕ ದುಷ್ಪರಿಣಾಮ| ಸಾಬೀತಾದ ಬಳಿಕವೂ ಔಷಧ ರೂಪದಲ್ಲೇ ಬಳಕೆಯಾಗಲಿ| ಸದ್ಯಕ್ಕೆ ಗಾಂಜಾ ನಿಷೇಧವೇ ಸರಿ|

ಬೆಂಗಳೂರು(ಸೆ.03): ದೇಶದಲ್ಲಿ ಸದ್ಯಕ್ಕೆ ಗಾಂಜಾ ಕಾನೂನು ಬದ್ಧ ಮಾಡಬೇಕು ಎಂಬ ವಾದ ತಪ್ಪು. ಗಾಂಜಾದಲ್ಲಿ ಔಷಧೀಯ ಗುಣಗಳಿರುವುದು ಇನ್ನೂ ಸಂಶೋಧನೆಯಲ್ಲಿ ಸಾಬೀತಾಗಿಲ್ಲ. ಜತೆಗೆ ಮನುಷ್ಯನ ಆರೋಗ್ಯ ಹಾಗೂ ಮಾನಸಿಕ ಸ್ಥಿತಿಯ ಮೇಲೆ ದುಷ್ಪರಿಣಾಮ ಉಂಟಾಗುವುದರಿಂದ ಕಾನೂನು ಬದ್ಧ ಮಾಡಬಾರದು ಎಂದು ನಿಮ್ಹಾನ್ಸ್‌ ಆಸ್ಪತ್ರೆ ನಿರ್ದೇಶಕ ಪ್ರೊ.ಬಿ.ಎನ್‌. ಗಂಗಾಧರ್‌ ಅಭಿಪ್ರಾಯಪಟ್ಟಿದ್ದಾರೆ.

ಗಾಂಜಾದಲ್ಲಿ ಔಷಧೀಯ ಗುಣಗಳಿವೆ ಎಂಬ ಕೂಗು ಮೊದಲಿನಿಂದಲೂ ಇದೆ. ಆದರೆ ಔಷಧೀಯ ಗುಣಗಳಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಇನ್ನೂ ಸಂಶೋಧನೆಗಳು ನಡೆಯುತ್ತಿವೆ. ಸಂಶೋಧನೆಗಳಿಂದ ಔಷಧೀಯ ಗುಣಗಳು ಸಾಬೀತಾಗಿಲ್ಲ. ಈವರೆಗೆ ಯಾವುದೇ ಔಷಧಿಯಲ್ಲೂ ಬಳಕೆ ಮಾಡುತ್ತಿಲ್ಲ. ಒಂದು ವೇಳೆ ಸಂಶೋಧನೆಗಳಲ್ಲಿ ಔಷಧ ಗುಣಗಳಿರುವುದು ಸಾಬೀತಾದರೂ ಸಹ ಔಷಧ ರೂಪದಲ್ಲಿ ಗಾಂಜಾ ಬಳಕೆ ಕಾನೂನು ಬದ್ಧ ಮಾಡಬಹುದು. ಆದರೆ, ನೇರವಾಗಿ ಗಾಂಜಾ ಸೇವನೆಗೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.

ಡ್ರಗ್ಸ್‌ ಮಾಫಿಯಾ: ಕಾಂಗ್ರೆಸ್‌ ಮುಖಂಡನ ಪುತ್ರನ ಹೆಸರು!

ಏಕೆಂದರೆ, ಗಾಂಜಾ ಮನುಷ್ಯನ ಮನಸ್ಸಿನ ಮೇಲೆ ಹಲವು ದುಷ್ಪರಿಣಾಮ ಬೀರುತ್ತದೆ. ಮರಿಜುವಾನಾ ಎಂದು ಕರೆಯಲ್ಪಡುವ ಗಾಂಜಾಗೆ ವ್ಯಸನಿಯಾಗಿಸುವುದರ ಜತೆಗೆ ಉನ್ಮಾದ ಅಥವಾ ಉತ್ತೇಜಿಸುವ ಗುಣ ಇದೆ. ವಾಸ್ತವದೊಂದಿಗೆ ಸಂಪೂರ್ಣ ಸಂಪರ್ಕ ಕಡಿದುಕೊಂಡರೆ ಅನಾಹುತಗಳು ಸಂಭವಿಸಬಹುದು. ಉನ್ಮಾದದಿಂದ ಹಲವು ಅಪಾಯಗಳು ಸಂಭವಿಸಬಹುದು. ಕೆಲವರು ತಮಗೆ ಉನ್ಮಾದ ಆಗುವುದಿಲ್ಲ, ಹೀಗಾಗಿ ಅವಕಾಶ ಕೊಡಿ ಎನ್ನಬಹುದು. ಆದರೆ, ಎಲ್ಲರ ಮೇಲೆಯೂ ಗಾಂಜಾ ಒಂದೇ ರೀತಿ ಪರಿಣಾಮ ಬೀರುವುದಿಲ್ಲ. ಗಾಂಜಾ ಸೇವನೆಯ ಬಳಿಕದ ಪರಿಣಾಮಗಳೂ ಎಲ್ಲಾ ಸಮಯದಲ್ಲೂ ಒಂದೇ ರೀತಿ ಇರುವುದಿಲ್ಲ ಎಂದಿದ್ದಾರೆ.

ಗಾಂಜಾ ಸೇವನೆ ಕಾನೂನು ಬದ್ಧಗೊಳಿಸಿದರೆ ಗಾಂಜಾ ವ್ಯಸನಿಯಾದವರು ಮುಂದಿನ ಡ್ರಗ್ಸ್‌ ಬಳಕೆಗೆ ಯೋಚಿಸಬಹುದು. ಅವರನ್ನು ನಿಯಂತ್ರಿಸುವುದು ಕಷ್ಟವಾಗಬಹುದು. ತಮ್ಮ ಯೋಚನೆಯ ಮೇಲೆ ಅವರು ಹಿಡಿತ ಕಳೆದುಕೊಳ್ಳಬಹುದು. ಉನ್ಮಾದದ ದಾಸನಾಗಿಸುವ ಗಾಂಜಾಗೆ ಅವಕಾಶ ನೀಡಬಾರದು. ಔಷಧೀಯ ಗುಣಗಳಿದ್ದರೆ ಸಂಶೋಧನೆಗಳಲ್ಲಿ ಸಾಬೀತಾಗಲಿ. ಸಾಬೀತಾದ ಬಳಿಕವೂ ಔಷಧ ರೂಪದಲ್ಲೇ ಬಳಕೆಯಾಗಲಿ. ಸದ್ಯಕ್ಕೆ ಗಾಂಜಾ ನಿಷೇಧವೇ ಸರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!