ರಾಜ್ಯದಲ್ಲಿ ಅಭಿವೃದ್ಧಿಯ ನವ ಸಂಕ್ರಮಣ: ಸಿ.ಸಿ ಪಾಟೀಲ್‌

Published : Jul 28, 2022, 07:35 AM IST
ರಾಜ್ಯದಲ್ಲಿ ಅಭಿವೃದ್ಧಿಯ ನವ ಸಂಕ್ರಮಣ: ಸಿ.ಸಿ ಪಾಟೀಲ್‌

ಸಾರಾಂಶ

ಬಿಜೆಪಿಯ ದಕ್ಷಿಣ ಭಾರತದ ವಿಜಯಯಾತ್ರೆಗೆ ದಿಕ್ಸೂಚಿ ಕರ್ನಾಟಕ ಸರ್ಕಾರ

ಬೆಂಗಳೂರು(ಜು.28): ಬಿಜೆಪಿಯಿಂದ ರೈತಬಂಧು ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ 2 ವರ್ಷಗಳ ಕಾಲ ಸಮರ್ಥ ಆಡಳಿತ ನೀಡಿ, ಕೋವಿಡ್‌ ಕಾರ್ಗಾಲದಲ್ಲಿಯೂ ಸಹ ಜನರು ಹಸಿವಿನಿಂದ ನರಳದಂತೆ ನೋಡಿಕೊಂಡರು. ತದನಂತರ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಜನತೆಯ ನಿರೀಕ್ಷೆಗೆ ತಕ್ಕಂತೆ ಆಡಳಿತ ನೀಡುತ್ತಾ ಒಂದು ವರ್ಷ ಪೂರೈಸಿದ್ದಾರೆ. ನಮ್ಮ ಸುದೈವವೆಂದರೆ, ಬೊಮ್ಮಾಯಿ ಅಧಿಕಾರದ ಗಾದಿಯನ್ನು ಅಲಂಕರಿಸಿದ ಕ್ಷಣದಿಂದಲೂ ಒಂದರ ಹಿಂದೊಂದರಂತೆ ವಿನೂತನ ಮತ್ತು ವೈಶಿಷ್ಟ್ಯಪೂರ್ಣ ಯೋಜನೆಗಳನ್ನು ಘೋಷಿಸುತ್ತಾ ಕರ್ನಾಟಕದ ಜನಸಮುದಾಯಗಳ ಪ್ರೀತಿ-ವಿಶ್ವಾಸಗಳಿಗೆ ಪಾತ್ರರಾಗಿದ್ದಾರೆ.

ಬೊಮ್ಮಾಯಿ ಸರ್ಕಾರಕ್ಕೆ ವರ್ಷ

ಕರ್ನಾಟಕದಲ್ಲಿ ಅನನ್ಯವಾದ ರೀತಿಯಲ್ಲಿ ರಚನಾತ್ಮಕ ಆಡಳಿತ ನಡೆಸುತ್ತಿರುವ ಬಸವರಾಜ ಬೊಮ್ಮಾಯಿಯವರ ಸರಕಾರಕ್ಕೆ ಇಂದಿಗೆ ಒಂದು ವರ್ಷ ತುಂಬುತ್ತಿದೆ. ಪ್ರತಿಪಕ್ಷಗಳು ತಮ್ಮ ಹೊಣೆಗಾರಿಕೆ ಮರೆತು ಅರಾಜಕ ಸ್ಥಿತಿಗೆ ತಲುಪಿರುವ ಈ ಹೊತ್ತಿನಲ್ಲಿ ಬೊಮ್ಮಾಯಿಯವರ ಸುಭದ್ರ ಆಡಳಿತವು ಕರ್ನಾಟಕದ ಜನರಿಗೆ ನೆಮ್ಮದಿ ಮತ್ತು ನಿರೀಕ್ಷೆಗಳಿಗೆ ಆಶಾಕಿರಣವಾಗಿ ಕಾಣುತ್ತಿದೆ ಎಂಬುದು ಸಾರ್ವತ್ರಿಕ ಅಭಿಪ್ರಾಯ. ಸಾಕಷ್ಟುಅನುಭವ ಶ್ರೀಮಂತಿಕೆಯೊಂದಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವ ಬೊಮ್ಮಾಯಿಯವರು, ಬಿಜೆಪಿಯ ದಕ್ಷಿಣ ಭಾರತದ ವಿಜಯಯಾತ್ರೆಗೆ ದಿಕ್ಸೂಚಿಯಾಗಿದ್ದಾರೆ. ಚಿಂತನಶೀಲ ರಾಜಕಾರಣವನ್ನು ಪ್ರತಿನಿಧಿಸುತ್ತಿರುವ ಅಪರೂಪದ ಮುಖಂಡರಾಗಿದ್ದಾರೆ.

ಪುತ್ರನಿಗೆ ಬಿಎಸ್‌ವೈ ಕ್ಷೇತ್ರ ತ್ಯಾಗ: ಇದು ಬಿಜೆಪಿ ನಿರ್ಧಾರ ಅಲ್ಲ, ಅಚ್ಚರಿ ಹೇಳಿಕೆ ನೀಡಿದ ಸಚಿವ

ಆಶ್ವಾಸನೆಗಳ ಮೇಲೆ ಆಡಳಿತ ಅಸಾಧ್ಯ

ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕ ರಾಜಕಾರಣದ ಚಹರೆ ಸಾಕಷ್ಟುಬದಲಾಗಿದೆ. ಈಗ ಹಿಂದಿನಂತೆ ಬರೀ ಆಶ್ವಾಸನೆಗಳ ಮೇಲೆ ಆಡಳಿತ ನಡೆಸಲು ಸಾಧ್ಯವಿಲ್ಲ. ಈಗಿನ ಯುವ ತಲೆಮಾರುಗಳ ಜನರು ಎಚ್ಚೆತ್ತುಕೊಂಡಿದ್ದಾರೆ. ಅಂದರೆ, ನಮ್ಮ ಸರ್ಕಾರಗಳು ಜನರಿಗೆ ಹೆಚ್ಚುಹೆಚ್ಚು ಉತ್ತರದಾಯಿಗಳಾಗುವುದು ಮತ್ತು ಮಾಡುವ ಕೆಲಸಗಳನ್ನು ಪ್ರಾಮಾಣಿಕವಾಗಿಯೂ, ಪಾರದರ್ಶಕವಾಗಿಯೂ ಮಾಡುವುದು ಈಗ ಅತ್ಯಂತ ಅಗತ್ಯವಾಗಿದೆ. ಇಲ್ಲದೆ ಹೋದರೆ ಜನರು ಅಂಥ ಸರ್ಕಾರವನ್ನು ಒಪ್ಪುವುದಿಲ್ಲ. ಆಡಳಿತ ನಡೆಸುತ್ತಿರುವವರು ದಿನವೂ ಎದುರಿಸಬೇಕಾದ ಅಗ್ನಿಪರೀಕ್ಷೆ ಇದು! ಇದನ್ನು ದಿನವೂ ಗೆದ್ದು ಪುಟಕ್ಕಿಟ್ಟಚಿನ್ನದಂತೆ ಹೊರಬರುವ ಸಾಹಸದಲ್ಲಿ ಬೊಮ್ಮಾಯಿ ಎತ್ತಿದ ಕೈ. ಹಿಂದೆ ಯಡಿಯೂರಪ್ಪನವರು ಪಕ್ಷವನ್ನು ಅತ್ಯುತ್ತಮವಾಗಿ ಕಟ್ಟಿದ್ದರಿಂದ ಮತ್ತು ಅವರ ಗರಡಿಯಲ್ಲಿ ಬೆಳೆದಿದ್ದರಿಂದ ಬೊಮ್ಮಾಯಿಯವರಿಗೆ ಆಡಳಿತದ ಕಡೆ ಗಮನ ಹರಿಸುವುದು ಸ್ವಲ್ಪ ಮಟ್ಟಿಗೆ ಸುಗಮವೂ ಆಗಿ ಪರಿಣಮಿಸಿತು. ಹೀಗಾಗಿ, ಅವರ ಪರಿಶ್ರಮವನ್ನೂ ನಾವಿಲ್ಲಿ ನೆನೆಯಬೇಕು.

ಮುಂದಿನ ಹಲವು ದಶಕ ಬಿಜೆಪಿಯೇ ಕೇಂದ್ರಶಕ್ತಿ

ಕರ್ನಾಟಕವೂ ಸೇರಿದಂತೆ ಇಡೀ ಭಾರತದಲ್ಲಿ ಬಿಜೆಪಿಯನ್ನು ಕಟ್ಟಿಬೆಳೆಸಿದ ಅಗ್ರಗಣ್ಯರಾದ ವಾಜಪೇಯಿ ಮತ್ತು ಆಡ್ವಾಣಿ ಅವರ ಅರ್ಧ ಶತಮಾನದ ಬಾಂಧವ್ಯವನ್ನು ಕುರಿತು ಬರೆದ ರಾಜಕೀಯ ವಿಶ್ಲೇಷಣೆಯ ಪ್ರಕಾರ, ಮುಂದಿನ ಹಲವು ದಶಕಗಳ ಕಾಲ ಬಿಜೆಪಿ ನಮ್ಮ ರಾಜಕಾರಣದ ಕೇಂದ್ರಶಕ್ತಿಯಾಗಿಯೇ ಮುಂದುವರಿಯಲಿದೆ. ಹಿಂದೆ ವಾಜಪೇಯಿ- ಆಡ್ವಾಣಿ ಜೋಡಿ ಇದ್ದಂತೆ, ಈಗ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ಬಿಜೆಪಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ಈ ಇಬ್ಬರು ನಾಯಕರ ಮಾರ್ಗದರ್ಶನದೊಂದಿಗೆ ಕರ್ನಾಟಕದ ಬಿಜೆಪಿ ಸರ್ಕಾರವು ವಿಕಾಸದ ಹೊಸ ಸಂಕ್ರಮಣವನ್ನೇ ಸೃಷ್ಟಿಸಿದೆ.

ಬಿಜೆಪಿ ಮೊದಲಿನಿಂದಲೂ ವಿಕೇಂದ್ರೀಕರಣ, ಆಂತರಿಕ ಪ್ರಜಾಪ್ರಭುತ್ವ, ಒಕ್ಕೂಟ ತತ್ವ, ರಾಜ್ಯಗಳ ಹಕ್ಕು, ವೈವಿಧ್ಯಮಯ ನಾಯಕತ್ವ, ಪ್ರತಿಯೊಂದು ಜನ ಸಮುದಾಯಗಳಿಗೂ ಮನ್ನಣೆ, ದಮನಿತರ ಸಬಲೀಕರಣ, ದನಿ ಇಲ್ಲದ ಜಾತಿಗಳಿಗೆ ಪುರಸ್ಕಾರ- ಇವೆಲ್ಲವನ್ನೂ ಪ್ರತಿಪಾದಿಸುತ್ತಲೇ ಬಂದಿದೆ. ಹಾಗೆಯೇ, ಕುಟುಂಬ ಕೇಂದ್ರಿತ ರಾಜಕಾರಣವನ್ನು ಸಾಕಷ್ಟುಪ್ರತಿರೋಧಿಸಿಕೊಂಡು ಬಂದಿದೆ.

ಬೊಮ್ಮಾಯಿಯವರ ಎರಡು ಅಪೂರ್ವ ಗುಣ

ಸದಾ ಜನಸಮೂಹಗಳೊಂದಿಗೇ ಇದ್ದುಕೊಂಡು ನಾಯಕರಾಗಿ ಬೆಳೆಯುವ ರಾಜಕಾರಣಿಗಳು ಕೆಲವರು, ಹಾಗೆಯೇ, ತಮ್ಮ ಪ್ರಖರ ಚಿಂತನೆಗಳ ಮೂಲಕ ಜನರಲ್ಲಿ ಒಂದು ರಾಜಕೀಯ ವಿಚಾರಧಾರೆಯನ್ನು ಬೆಳೆಸುವವರು ಕೆಲವರು. ಈ ಪೈಕಿ ಬೊಮ್ಮಾಯಿಯವರು ಇವೆರಡೂ ಅಪೂರ್ವ ಗುಣಗಳನ್ನು ಬೆಳೆಸಿಕೊಂಡವರು. ಅಂತಹ ಸೂಕ್ಷ್ಮತೆ ಮತ್ತು ಸಂವೇದನಾಶೀಲತೆ ಅವರಲ್ಲಿದೆ ಎನ್ನುವುದರಲ್ಲಿ ಕಿಂಚಿತ್ತೂ ಅನುಮಾನವಿಲ್ಲ. ರೈತರ ಕಲ್ಯಾಣ, ನೀರಾವರಿ ಸೌಲಭ್ಯ, ಉದ್ಯಮಶೀಲತೆ, ಶಿಕ್ಷಣ, ಮಹಿಳಾ ಸಬಲೀಕರಣ, ಸಮಾಜ ಕಲ್ಯಾಣ, ಯುವಜನರ ಹಿತಾಸಕ್ತಿ, ರಸ್ತೆ, ಹೆದ್ದಾರಿಗಳಂಥ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ, ಅತ್ಯಾಧುನಿಕ ಉದ್ಯಮ ವಲಯಗಳಿಗೆ ಬೇಕಾದ ನೀತಿಗಳು, ಕರ್ನಾಟಕವನ್ನು ಅಖಂಡವಾಗಿ ಪರಿಭಾವಿಸಿಕೊಳ್ಳುವ ಶಕ್ತಿ- ಇವೆಲ್ಲವೂ ಬೊಮ್ಮಾಯಿಯವರಲ್ಲಿವೆ.

ಅಭಿವೃದ್ಧಿ ಕೇಂದ್ರಿತ ರಾಜಕಾರಣ

ಬೊಮ್ಮಾಯಿಯವರದು ವಿಶಿಷ್ಟಎರಕದಲ್ಲಿ ಪಾಕಗೊಂಡಿರುವ ವ್ಯಕ್ತಿತ್ವ. ಏಕೆಂದರೆ, ಎಲ್ಲರಿಗೂ ಗೊತ್ತಿರುವಂತೆ ಇವರ ತಂದೆಯವರಾದ ದಿ.ಎಸ್‌.ಆರ್‌.ಬೊಮ್ಮಾಯಿ ಅವರು ಎಂ.ಎನ್‌.ರಾಯ… ಅವರ ಅನುಯಾಯಿಯಾಗಿದ್ದರು. ಬೊಮ್ಮಾಯಿಯವರು, ಸದ್ಯದ ಜಾಗತಿಕ ರಾಜಕಾರಣ, ಅಭಿವೃದ್ಧಿ ಮತ್ತು ಆರ್ಥಿಕತೆಗಳ ದಿಕ್ಕುದೆಸೆಗಳ ನಾಡಿಮಿಡಿತವನ್ನು ಚೆನ್ನಾಗಿ ಅರಿತಿದ್ದಾರೆ. ‘ದೀನದಯಾಳ್‌ ಅವರ ಅಂತ್ಯೋದಯ, ಅಂಬೇಡ್ಕರ್‌ರವರ ದಲಿತೋದ್ಧಾರ ಮತ್ತು ವಾಜಪೇಯಿಯವರ ಸ್ವಾವಲಂಬನೆಯ ಪರಿಕಲ್ಪನೆ ಆಧರಿಸಿದ ರಾಜಕಾರಣ’ ಈ ಮೂರನ್ನೂ ಕಸಿ ಮಾಡಿಕೊಂಡಿರುವ ಕ್ರಿಯಾಶೀಲ ವ್ಯಕ್ತಿ ಇವರಾಗಿದ್ದಾರೆ.

ವಿಜಯೇಂದ್ರಗೆ ಬಿಎಸ್‌ವೈ ಶಿಕಾರಿಪುರ ತ್ಯಾಗ, ಈ ಬಗ್ಗೆ ಕುಮಾರಸ್ವಾಮಿ ಹೇಳಿದ್ದು ಹೀಗೆ

ಆಡಳಿತವೆನ್ನುವುದು ಎಂದಿಗೂ ಹೂವಿನ ಹಾಸಿಗೆಯಲ್ಲ. ಯಾರೇ ಅಧಿಕಾರಕ್ಕೆ ಬಂದರೂ ಆಯಾ ಕಾಲದ ಸವಾಲುಗಳು, ಪ್ರತಿಕೂಲ ಸನ್ನಿವೇಶಗಳು ಇದ್ದೇ ಇರುತ್ತವೆ. ಆರೋಪಗಳೂ ಅಪ್ಪಳಿಸುತ್ತಲೇ ಇರುತ್ತವೆ. ಆದರೆ, ಇವಕ್ಕೆಲ್ಲಾ ಎದಿರೇಟು ಕೊಡುವಂಥ ಪ್ರತಿಕ್ರಿಯಾತ್ಮಕ ರಾಜಕಾರಣದಲ್ಲೇ ಮುಳುಗಿದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇದನ್ನು ಬಲ್ಲವರಾದ ಬೊಮ್ಮಾಯಿಯವರು, ಇಡೀ ಕರ್ನಾಟಕವನ್ನು ಅಭಿವೃದ್ಧಿ ಕೇಂದ್ರಿತ ರಾಜಕಾರಣದ ತಾಣವನ್ನಾಗಿ ಮಾಡಿದ್ದಾರೆ.

ಸರ್ಕಾರದ ಸಾಲು ಸಾಲು ಯೋಜನೆ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌.ಇ.ಪಿ) ಅನುಷ್ಠಾನ, ಉದ್ಯೋಗ ನೀತಿ, ನಿರುದ್ಯೋಗ ನಿವಾರಣೆ, ಪ್ರವಾಹ ನಿರ್ವಹಣೆ, ಪರಿಹಾರ ವಿತರಣೆ, ಆರೋಗ್ಯ ಸೇವೆಗಳ ವಿಸ್ತರಣೆ, ಉದ್ಯಮಗಳಿಗೆ ಕೊಡುತ್ತಿರುವ ನಿರಂತರ ಪ್ರೋತ್ಸಾಹ, ಕೇಂದ್ರ ಸರ್ಕಾರದ ಯೋಜನೆಗಳ ಜತೆಗೆ ರಾಜ್ಯದ ಯೋಜನೆಗಳ ವಿಸ್ತರಣೆ, ಅಧಿಕಾರಶಾಹಿಗಳ ನಿಯಂತ್ರಣ, ಮನೆ ಬಾಗಿಲಿಗೇ ಸರ್ಕಾರವನ್ನು ತೆಗೆದುಕೊಂಡು ಹೋಗುವಂತಹ ಗ್ರಾಮ ಒನ್‌ ತರಹದ ಉಪಕ್ರಮಗಳು, ರಾಜ್ಯದ ಉದ್ದಗಲಕ್ಕೂ ಹಂತಹಂತವಾಗಿ ಸರ್ಕಾರಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳ ಸ್ಥಾಪನೆ, ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಹಲವು ಹೆದ್ದಾರಿ ಮತ್ತು ರೈಲ್ವೆ ಕಾಮಗಾರಿಗಳಿಗೆ ಚಾಲನೆ, ಕೇಂದ್ರ ಸರ್ಕಾರದೊಂದಿಗೆ ಸೂಕ್ತ ಸಂಯೋಜನೆ, ಇವೆಲ್ಲವುಗಳಲ್ಲೂ ಬೊಮ್ಮಾಯಿ ಇಡುತ್ತಿರುವ ಹೆಜ್ಜೆಗಳು ಜನರಲ್ಲಿ ವಿಶ್ವಾಸ ಮೂಡಿಸಿವೆ.

ಲೋಕೋಪಯೋಗಿ, ಜನೋಪಯೋಗಿ

ನಾಡಿನ ಜನತೆಯ ನಿರೀಕ್ಷೆಗೆ ತಕ್ಕಂತೆ ಮತ್ತು ಮುಖ್ಯಮಂತ್ರಿಗಳ ಮಾರ್ಗದರ್ಶನದಂತೆ ಕಳೆದ ಒಂದು ವರ್ಷದಲ್ಲಿ ನಮ್ಮ ಲೋಕೋಪಯೋಗಿ ಇಲಾಖೆಯಿಂದಲೂ ಅನೇಕ ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಅನುದಾನ ಬಳಕೆಯಲ್ಲಿ ಶೇ.99ಕ್ಕಿಂತಲೂ ಹೆಚ್ಚು ಆರ್ಥಿಕ ಪ್ರಗತಿ ಸಾಧಿಸಿದೆ. ಒಟ್ಟು 4047 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ಮತ್ತು 2338 ಕಿ.ಮೀ. ಉದ್ದದ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿಗೊಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆ ಕೈಗೊಂಡಿರುವುದು, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ .3500 ಕೋಟಿ ಮೊತ್ತದಲ್ಲಿ 2225 ಕಿ.ಮೀ. ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯವ್ಯಾಪಿ ವಿವಿಧ ಇಲಾಖೆಗಳ ಎಂಜಿನಿಯರಿಂಗ್‌ ವಿಭಾಗಗಳಲ್ಲಿ ಏಕರೂಪದ ದರಪಟ್ಟಿಯನ್ನು ಜಾರಿಗೊಳಿಸಿರುವುದೂ ಸೇರಿದಂತೆ ಹಲವಾರು ಗಮನಾರ್ಹ ಸಾಧನೆಗಳನ್ನು ನಮ್ಮ ಇಲಾಖೆಯಿಂದ ಕೈಗೊಳ್ಳಲಾಗಿದೆಯೆಂದು ತಿಳಿಸಲು ಹೆಮ್ಮೆಯೆನಿಸುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಜೆಪಿಯವರೇನು ಸೂಟ್‌ಕೇಸ್‌ ಕೊಟ್ಟು ಕಳುಹಿಸುತ್ತಿದ್ರಾ?: ಸಚಿವ ಸಂತೋಷ್‌ ಲಾಡ್‌ ತಿರುಗೇಟು
ನನ್ನ ಕೆಲಸ ಸಹಿಸದೆ ಭೂಕಬಳಿಕೆ ಆರೋಪ, ಯಾವುದೇ ತನಿಖೆಗೂ ಸಿದ್ಧ: ಸಚಿವ ಕೃಷ್ಣ ಬೈರೇಗೌಡ