ಇಂದಿನಿಂದ ದೆಹಲಿಯಲ್ಲಿ 3 ದಿನ ವರಿಷ್ಠರ ಸಭೆ; 4 ದಿನದಲ್ಲಿ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ?

By Kannadaprabha News  |  First Published Jun 27, 2023, 1:46 AM IST

ಪ್ರಮುಖ ಪ್ರತಿಪಕ್ಷ ಬಿಜೆಪಿಯ ಎರಡು ಪ್ರಮುಖ ಹುದ್ದೆಗಳಿಗೆ ಬರುವ ನಾಲ್ಕೈದು ದಿನಗಳಲ್ಲಿ ಹೊಸಬರ ಆಯ್ಕೆ ಅಂತಿಮಗೊಳ್ಳುವ ಸಾಧ್ಯತೆಯಿದೆ.


ಬೆಂಗಳೂರು (ಜೂ.27) ಪ್ರಮುಖ ಪ್ರತಿಪಕ್ಷ ಬಿಜೆಪಿಯ ಎರಡು ಪ್ರಮುಖ ಹುದ್ದೆಗಳಿಗೆ ಬರುವ ನಾಲ್ಕೈದು ದಿನಗಳಲ್ಲಿ ಹೊಸಬರ ಆಯ್ಕೆ ಅಂತಿಮಗೊಳ್ಳುವ ಸಾಧ್ಯತೆಯಿದೆ.

ಮಂಗಳವಾರದಿಂದ ಮೂರು ದಿನಗಳ ಕಾಲ ದೆಹಲಿಯಲ್ಲಿ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ರಾಷ್ಟ್ರೀಯ ನಾಯಕರ ಸಭೆಗಳು ನಡೆಯಲಿದ್ದು, ಈ ವೇಳೆ ಕರ್ನಾಟಕದ ಮುಂದಿನ ರಾಜ್ಯಾಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆಯೂ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Tap to resize

Latest Videos

ಲೋಕಸಭಾ ಚುನಾವಣೆಗೆ ಕಾರ್ಯಕರ್ತರು ಸಜ್ಜಾಗಿ: ನಳಿನ್‌ ಕುಮಾರ್‌ ಕಟೀಲ್‌

ಹಾಲಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರ ಅವಧಿ ಈಗಾಗಲೇ ಪೂರ್ಣಗೊಂಡಿದ್ದು, ಹೊಸಬರ ನೇಮಕ ನಡೆಯಬೇಕಿತ್ತು. ಇದೇ ವೇಳೆ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷವನ್ನು ಸಮರ್ಥವಾಗಿ ಎದುರಿಸಲು ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯೂ ಮುಗಿಯಬೇಕಿತ್ತು. ಆದರೆ, ಜಾತಿ ಸಮೀಕರಣದ ಹಿನ್ನೆಲೆಯಲ್ಲಿ ವಿಳಂಬವಾಗಿದೆ.

ಇದೀಗ ಬರುವ ಜು.3ರಿಂದ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗುವುದರಿಂದ ಅಷ್ಟರೊಳಗಾಗಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲೇಬೇಕಾಗಿದೆ. ಹೀಗಾಗಿ, ಶಾಸಕಾಂಗ ಪಕ್ಷದ ನಾಯಕ, ನೂತನ ರಾಜ್ಯಾಧ್ಯಕ್ಷ ಹುದ್ದೆಗೆ ಹೆಚ್ಚೂ ಕಡಮೆ ಏಕಕಾಲದಲ್ಲೇ ನೇಮಕಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಎರಡೂ ಹುದ್ದೆಗಳಿಗೆ ಲಿಂಗಾಯತ, ಒಕ್ಕಲಿಗ ಅಥವಾ ಇತರ ಹಿಂದುಳಿದ ವರ್ಗ(ಒಬಿಸಿ)ಕ್ಕೆ ಅವಕಾಶ ಸಿಗುವ ನಿರೀಕ್ಷೆಯಿದೆ. ಅಂದರೆ, ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಲಿಂಗಾಯತರನ್ನು ಪರಿಗಣಿಸಿದಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಒಕ್ಕಲಿಗ ಅಥವಾ ಒಬಿಸಿಗೆ ಸಿಗಬಹುದು. ಒಂದು ವೇಳೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಒಕ್ಕಲಿಗರನ್ನು ಆಯ್ಕೆ ಮಾಡಿದಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ಅಥವಾ ಒಬಿಸಿಗೆ ಸೇರಿದವರನ್ನು ಪರಿಗಣಿಸಬಹುದು. ಇನ್ನು ಒಬಿಸಿ ವರ್ಗಕ್ಕೆ ಸೇರಿದವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಮಾಡಿದಲ್ಲಿ ರಾಜ್ಯಾಧ್ಯಕ್ಷ ಸ್ಥಾನವು ಲಿಂಗಾಯತ ಅಥವಾ ಒಕ್ಕಲಿಗರ ಪಾಲಾಗಬಹುದು ಎಂಬ ಜಾತಿ ಸಮೀಕರಣದ ಲೆಕ್ಕಾಚಾರ ನಡೆಯುತ್ತಿದೆ.

ಒಂದಂತೂ ಸತ್ಯ. ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಬಳಿಕ ಎಚ್ಚೆತ್ತುಕೊಂಡಿರುವ ಬಿಜೆಪಿ ನಾಯಕರು ಈ ಹೊಸ ನೇಮಕ ಪ್ರಕ್ರಿಯೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಸಂಪೂರ್ಣ ವಿಶ್ವಾಸಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

 

ಲೋಕಸಭಾ ಚುನಾವಣೆಗೆ ಕಾರ್ಯಕರ್ತರು ಸಜ್ಜಾಗಿ: ನಳಿನ್‌ ಕುಮಾರ್‌ ಕಟೀಲ್‌

ರಾಷ್ಟ್ರ ಮಟ್ಟದಲ್ಲೂ ಕೆಲ ಬದಲಾವಣೆ?- ನಡ್ಡಾ ಮುಂದುವರಿಕೆ?

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಘಟಕದಲ್ಲೂ ಒಂದಿಷ್ಟುಬದಲಾವಣೆಗಳು ನಡೆಯುವ ನಿರೀಕ್ಷೆಯಿದೆ.

ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ.ನಡ್ಡಾ ಅವರೇ ಮುಂದುವರೆಯಲಿದ್ದು, ಅವರ ತಂಡದಲ್ಲಿ ಕೆಲವು ಬದಲಾವಣೆಗಳು ನಡೆಯಬಹುದು. ಕೆಲವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆದಿದೆ. ಈ ಬಗ್ಗೆ ಮೂರು ದಿನಗಳ ಕಾಲ ನಡೆಯುವ ರಾಷ್ಟ್ರೀಯ ನಾಯಕರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬಹುದು ಎಂಬ ಮಾತು ಕೇಳಿಬಂದಿದೆ.

click me!