ಕೊರೋನಾ ಸಂಕಷ್ಟದಿಂದ ಜೀವನ ನಿರ್ವಹಣೆಗೂ ಪರದಾಡುತ್ತಿರುವ ಸಂದರ್ಭದಲ್ಲಿ ಬೆಸ್ಕಾಂ ಭಾರಿ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಸಾರ್ವಜನಿಕರ ಹಗಲು ದರೋಡೆಗೆ ಇಳಿದಿದೆ ಎಂಬ ಆರೋಪ ಕೇಳಿಬರುತ್ತಿದೆ.ಈ ಕುರಿತಾದ ವಿಶೇಷ ವರದಿ ಇಲ್ಲಿದೆ ನೋಡಿ.
ಶ್ರೀಕಾಂತ ಎನ್.ಗೌಡಸಂದ್ರ, ಕನ್ನಡಪ್ರಭ
ಬೆಂಗಳೂರು(ಜು.07): ಬೆಸ್ಕಾಂ ವ್ಯಾಪ್ತಿಯಲ್ಲಿ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಕಂದಾಯ ಅಥವಾ ಅನಧಿಕೃತ ಬಡಾವಣೆಗಳಲ್ಲಿ ನಿವೇಶನ ಖರೀದಿಸಿ ಮನೆಗೆ ವಿದ್ಯುತ್ ಸಂಪರ್ಕಕ್ಕಾಗಿ ಕಾಯುತ್ತಿದ್ದೀರಾ? ಹಾಗಾದರೆ, ಬೆಸ್ಕಾಂಗೆ ಲಕ್ಷಾಂತರ ರು. ಅಭಿವೃದ್ಧಿ ಶುಲ್ಕ ಪಾವತಿಸಲು ಸಜ್ಜಾಗಿ.
ಹೌದು, ಕೊರೋನಾ ಸಂಕಷ್ಟದಿಂದ ಜೀವನ ನಿರ್ವಹಣೆಗೂ ಪರದಾಡುತ್ತಿರುವ ಸಂದರ್ಭದಲ್ಲಿ ಬೆಸ್ಕಾಂ ಭಾರಿ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಸಾರ್ವಜನಿಕರ ಹಗಲು ದರೋಡೆಗೆ ಇಳಿದಿದೆ ಎಂಬ ಆರೋಪ ಕೇಳಿಬರುತ್ತಿದೆ. ಅವೈಜ್ಞಾನಿಕ ಅಭಿವೃದ್ಧಿ ದರ ನಿಗದಿಯಿಂದಾಗಿ ಜೀವನ ಪರ್ಯಂತ ದುಡಿದ ಹಣದಿಂದ ಒಂದು ನಿವೇಶನ ಖರೀದಿಸಿ ಮನೆ ಕಟ್ಟಿದರೆ ನಿವೇಶನ ಖರೀದಿಗೆ ಆದ ವೆಚ್ಚಕ್ಕಿಂತಲೂ ಹೆಚ್ಚು ಮೊತ್ತ ಬೆಸ್ಕಾಂ ವಿದ್ಯುತ್ ಸಂಪರ್ಕ ಪಡೆಯಲು ಆಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಬೆಸ್ಕಾಂ ವಿದ್ಯುತ್ ಸಂಪರ್ಕ ಪಡೆಯಲು ಬಿಡಿಎ ನಿವೇಶನ ಅಥವಾ ಅಧಿಕೃತ ಬಡಾವಣೆಗಳಲ್ಲಿ ಬಡಾವಣೆ ಅಭಿವೃದ್ಧಿದಾರರೇ ವಿದ್ಯುತ್ ಕಂಬ ಎಳೆದು ಸಂಪರ್ಕ ನೀಡಿರುತ್ತಾರೆ. ಇಂತಹ ವ್ಯವಸ್ಥೆ ಇಲ್ಲದ ಅನಧಿಕೃತ ಬಡಾವಣೆ, ಕಂದಾಯ ನಿವೇಶನಗಳಲ್ಲಿ ಸಾರ್ವಜನಿಕರು ಸಂಪರ್ಕ ಪಡೆಯಬೇಕಾದರೆ ಸಾಮಾನ್ಯ ವಿದ್ಯುತ್ ಲೇನ್‌ನಿಂದ ಪ್ರತಿ ಕಿ.ವ್ಯಾಟಿಗೆ ನಗರ ಪ್ರದೇಶದಲ್ಲಿ 4 ಸಾವಿರ ರು.ಗಳಿದ್ದ ಅಭಿವೃದ್ಧಿ ಶುಲ್ಕವನ್ನು 6,500 ರು.ಗೆ, ಗ್ರಾಮಾಂತರ ಪ್ರದೇಶದಲ್ಲಿ 3 ಸಾವಿರ ರು. ಇದ್ದ ಶುಲ್ಕವನ್ನು ಪ್ರತಿ ಕೆ.ವಿಗೆ 5,750 ರು.ಗೆ ಹೆಚ್ಚಳ ಮಾಡಿ ಫೆಬ್ರುವರಿಯಲ್ಲಿ ಕೆಇಆರ್‌ಸಿ ಆದೇಶ ಮಾಡಿದೆ.
‘ಕೊರೋನಾ ವಾರಿಯರ್ಸ್’ಗೆ ರಿಸ್ಕ್ ಭತ್ಯೆ: ಸುಧಾಕರ್
ಇದೇ ವೇಳೆ ನೆಲದಡಿ ಮಾರ್ಗ (ಯು.ಜಿ. ಕೇಬಲ್) ಹಾಗೂ ಎಬಿಸಿ ಕೇಬಲ್ ಸಂಪರ್ಕಕ್ಕೆ 4 ಸಾವಿರ ರು.ಗಳಿಂದ ಬರೋಬ್ಬರಿ 16,750 ರು.ಗಳಿಗೆ ಹೆಚ್ಚಳ ಮಾಡಿದೆ. ಗ್ರಾಮಾಂತರ ಪ್ರದೇಶದ ಸಂಪರ್ಕಗಳಿಗೂ ಇಷ್ಟೇ ದುಬಾರಿ ಮೊತ್ತ ಪ್ರತಿ ಕೆ.ವಿಗೆ ಪಾವತಿಸಿ ಸಂಪರ್ಕ ಪಡೆಯಬೇಕು. ಸಾರ್ವಜನಿಕರು ವಿದ್ಯುತ್ ಸಂಪರ್ಕ ಪಡೆಯಬೇಕಾದರೆ ಕನಿಷ್ಠ 3 ಕಿ.ವ್ಯಾಟಿಗೆ ಸಂಪರ್ಕ ಪಡೆಯಬೇಕು. ಈ ಲೆಕ್ಕದಲ್ಲೆ 50,250 ರು. ಮತ್ತು ಶೇ.18ರಷ್ಟುಟಿಡಿಎಸ್ ಪಾವತಿಸಬೇಕು. ಇದರಿಂದಲೇ ನೊಂದು ಕುಸಿದು ಹೋಗಿದ್ದ ಸಾರ್ವಜನಿಕರಿಗೆ ಇದೀಗ 3 ಕೆ.ವಿಗಿಂತ ಹೆಚ್ಚುವರಿ ಪಡೆಯುವ ವಿದ್ಯುತ್‌ಗೂ ಪ್ರತಿ ಕೆ.ವಿ.ಗೆ ಇದೇ ಮೊತ್ತ ವಿಧಿಸಿ ಬೆಸ್ಕಾಂ ನೋಟಿಸ್ ಜಾರಿ ಮಾಡಿದೆ. ಇದಕ್ಕಾಗಿ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಪ್ರತಿ ಕೆ.ವಿಗೆ 16,750 ರುಪಾಯಿ:
ಈ ಹಿಂದೆ ನಗರ ಪ್ರದೇಶದಲ್ಲಿ 3 ಕೆ.ವಿ. ದಾಟಿದರೆ ಪ್ರತಿ ಕೆ.ವಿಗೆ 1650 ರು. ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 3 ಕೆ.ವಿ.ದಾಟಿದರೆ ಹೆಚ್ಚುವರಿ ಪ್ರತಿ ಕೆ.ವಿ.ಗೆ 650 ರು. ಮಾತ್ರ ವಿಧಿಸಲಾಗುತ್ತಿತ್ತು. ಆದರೆ, ಪ್ರಸ್ತುತ ಬೆಸ್ಕಾಂ 3 ಕೆ.ವಿ.ಗೆ ಹೆಚ್ಚುವರಿಯಾಗಿ ಪಡೆಯುವ ಪ್ರತಿ ಕೆ.ವಿ.ಗೆ ಸಾಮಾನ್ಯ ಸಂಪರ್ಕಕ್ಕೆ 6,500 ರು. ಹಾಗೂ ನೆಲದಡಿ,ಎಬಿಸಿ ಕೇಬಲ್ ಸಂಪರ್ಕಕ್ಕೆ 16,750 ರು. ವಿಧಿಸುತ್ತಿದೆ. ಇದಕ್ಕೆ ಶೇ.18ರಷ್ಟುಟಿಡಿಎಸ್ ಸೇರಿ ಭಾರಿ ಮೊತ್ತದ ಹಣ ಸಾರ್ವಜನಿಕರು ತೆರುವಂತಾಗಿದೆ.
3 ಕೆ.ವಿ. ಮೇಲೆ ಇಷ್ಟು ದುಬಾರಿ ಮೊತ್ತವನ್ನು ಯಾವ ಎಸ್ಕಾಂಗಳೂ ಸಂಗ್ರಹಿಸುತ್ತಿಲ್ಲ. ಬೆಸ್ಕಾಂನಲ್ಲಿ ಮಾತ್ರವೇ ಇಷ್ಟುಶುಲ್ಕ ವಿಧಿಸಲಾಗುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಬೆಸ್ಕಾಂ ಗ್ರಾಹಕರ ವೇದಿಕೆ, ವಿದ್ಯುತ್ ಗುತ್ತಿಗೆದಾರರ ಸಂಘ, ಹಲವಾರು ಗ್ರಾಹಕರು ಬೆಸ್ಕಾಂಗೆ ದೂರು ನೀಡಿ ಅವೈಜ್ಞಾನಿಕ ದರ ನಿಗದಿಯನ್ನು ಹಿಂಪಡೆಯುವಂತೆ ಒತ್ತಾಯಿಸಿದರೂ ಸ್ಪಂದಿಸುತ್ತಿಲ್ಲ. ಕೆಇಆರ್‌ಸಿಗೆ ದೂರು ನೀಡಿದರೆ ವಕೀಲರ ಮೂಲಕ ಬಂದ ವಾದ ಮಂಡಿಸುವಂತೆ ಹೇಳುತ್ತಾರೆ ಎಂದು ನೊಂದ ಗ್ರಾಹಕ ಕೃಷ್ಣಪ್ಪ ಆರೋಪಿಸಿದ್ದಾರೆ.
ನಿವೇಶನವೇ ಖರೀದಿಸಬಹುದು:
ಜೀವನ ಪರ್ಯಂತ ಕೆಲಸ ಮಾಡಿ ನಿವೃತ್ತಿ ಜೀವನದಲ್ಲಿ ಬೆಂಗಳೂರು ಹೊರವಲಯದಲ್ಲಿ ಒಂದು ನಿವೇಶನ ಖರೀದಿಸಿ ಮನೆ ಕಟ್ಟಿದ್ದೇವೆ. ನಾನು ನಿವೇಶನ ಖರೀದಿಸಿದ ಮೊತ್ತ 4 ಲಕ್ಷ. ಇದೀಗ 9 ಕೆ.ವಿ. ಸಾಮರ್ಥ್ಯದ ವಿದ್ಯುತ್ ಸಂಪರ್ಕ ಪಡೆಯಲು ಹೆಚ್ಚು ಕಡಿಮೆ ನಾನು ನಿವೇಶನಕ್ಕೆ ವೆಚ್ಚ ಮಾಡಿದಷ್ಟೇ ಹಣ ಪಾವತಿಸುವಂತೆ ಬೆಸ್ಕಾಂ ಅಧಿಕಾರಿಗಳು ಪೀಡಿಸುತ್ತಿದ್ದಾರೆ. ಈ ಬಗ್ಗೆ ಬೆಸ್ಕಾಂಗೆ ದೂರು ನೀಡಿದರೂ ಕೆಇಆರ್‌ಸಿ ನಿಗದಿ ಮಾಡಿರುವ ದರ ಎಂದು ಜಾರಿಕೊಳ್ಳುತ್ತಿದ್ದಾರೆ ಎಂದು ಕೃಷ್ಣಪ್ಪ ದೂರಿದ್ದಾರೆ.
ಕೆಇಆರ್‌ಸಿ ಸೂಚನೆಗೂ ಕಿಮ್ಮತ್ತಿಲ್ಲ
ಹೆಚ್ಚುವರಿ ಕೆ.ವಿ.ಗೂ ಪ್ರತಿ ಕೆ.ವಿ.ಗೆ 6,500 ಹಾಗೂ 16,750 ರು. ವಿಧಿಸುತ್ತಿರುವ ಬಗ್ಗೆ ಹಲವರು ಕೆಇಆರ್‌ಸಿಗೆ ಲಿಖಿತ ದೂರು ನೀಡಿದ್ದರು. ಬೇರೆ ಎಸ್ಕಾಂಗಳು ಈ ರೀತಿ ದರ ವಿಧಿಸದಿದ್ದರೂ ನೀವು ಮಾತ್ರ ಏಕೆ ವಿಧಿಸುತ್ತಿದ್ದೀರಿ ಎಂಬುದಕ್ಕೆ ಸ್ಪಷ್ಟನೆ ಕೋರಿ ಬೆಸ್ಕಾಂಗೆ ಕೆಇಆರ್‌ಸಿ ಪತ್ರ ಬರೆದಿತ್ತು. ಆದರೆ, ಬೆಸ್ಕಾಂ ಕೆಇಆರ್‌ಸಿ ಸೂಚನೆಗೆ ಕಿಮ್ಮತ್ತು ನೀಡಿಲ್ಲ.
ಸಾರ್ವಜನಿಕರು ವಿದ್ಯುತ್ ಸಂಪರ್ಕ ತೆಗೆದುಕೊಳ್ಳಲೂ ಲಕ್ಷಾಂತರ ರು. ವೆಚ್ಚ ಮಾಡುವಂತಾಗಿದೆ. ಈ ಬಗ್ಗೆ ಬೆಸ್ಕಾಂಗೆ ದೂರುಗಳು ಸಾರ್ವಜನಿಕರು ದೂರು ನೀಡಿದ್ದರೂ ಯಾರೂ ಸ್ಪಂದಿಸುತ್ತಿಲ್ಲ. ಯಾವ ಎಸ್ಕಾಂಗಳಲ್ಲೂ ಇರದ ಅಭಿವೃದ್ಧಿ ಶುಲ್ಕವನ್ನು ಬೆಸ್ಕಾಂನಲ್ಲಿ ವಿಧಿಸಿ ಜನರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ. - ಸುರೇಶ್, ಬೆಂಗಳೂರು ನಗರಾಧ್ಯಕ್ಷ, ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ