ಅನಧಿಕೃತ ಪ್ರತಿಮೆಗಳ ರಕ್ಷಣೆಗೆ ಹೊಸ ಕಾನೂನು?

By Kannadaprabha NewsFirst Published Oct 10, 2021, 9:22 AM IST
Highlights
  •  ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಪ್ರತಿಷ್ಠಾಪನೆಯಾಗಿರುವ ಗಣ್ಯ ವ್ಯಕ್ತಿಗಳ ಪ್ರತಿಮೆ, ಪುತ್ಥಳಿ, ಧ್ವಜಕಂಬಗಳ ಸಂರಕ್ಷಣೆಗೂ ರಾಜ್ಯ ಸರ್ಕಾರ ಅಗತ್ಯ ಕಾನೂನು 
  • ಈಗಾಗಲೇ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಕೈಹಾಕಿ ಸುಟ್ಟುಕೊಂಡಿದ್ದ ರಾಜ್ಯ ಸರ್ಕಾರ

ವರದಿ : ಸಂಪತ್‌ ತರೀಕೆರೆ

 ಬೆಂಗಳೂರು (ಅ.10):  ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಉಳಿಸಲು ಕಾಯ್ದೆಗೆ ಬದಲಾವಣೆ ತಂದಂತೆ ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಪ್ರತಿಷ್ಠಾಪನೆ ಯಾಗಿರುವ ಗಣ್ಯ ವ್ಯಕ್ತಿಗಳ ಪ್ರತಿಮೆ, ಪುತ್ಥಳಿ, ಧ್ವಜಕಂಬಗಳ ಸಂರಕ್ಷಣೆಗೂ ರಾಜ್ಯ ಸರ್ಕಾರ ಅಗತ್ಯ ಕಾನೂನು ತರುವ ಸಾಧ್ಯತೆ ದಟ್ಟವಾಗಿದೆ.

ಈಗಾಗಲೇ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಕೈಹಾಕಿ ಸುಟ್ಟುಕೊಂಡಿದ್ದ ರಾಜ್ಯ ಸರ್ಕಾರ, ಧಾರ್ಮಿಕ ಕೇಂದ್ರಗಳ ಉಳಿವಿಗೆ ಪ್ರತ್ಯೇಕ ಕಾಯ್ದೆ ತಂದು ಕಳೆದುಕೊಂಡ ವರ್ಚಸ್ಸನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿತ್ತು. ಈಗ ಪ್ರತಿಮೆಗಳನ್ನು ತೆರವುಗೊಳಿಸಿದರೆ ಸ್ಥಳೀಯವಾಗಿ ತಮಗೆ ಕೆಟ್ಟಹೆಸರು ಬರುತ್ತದೆಂಬ ಜನಪ್ರತಿನಿಧಿಗಳ ಒತ್ತಡದಿಂದ ಅನಧಿಕೃತ ಪ್ರತಿಮೆ, ಪುತ್ಥಳಿ ಉಳಿಸಲು ಮುಂದಾಗುವ ಸಾಧ್ಯತೆಯಿದೆ.

ಪುರಾತನ ಹಿಂದೂ ದೇವಾಲಯ ರಕ್ಷಣೆಗೆ ಕೋರ್ಟ್ ಮೊರೆ ಹೋದ ಮುಸ್ಲಿಂ ಕುಟುಂಬಗಳು

ಮೈಸೂರು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅನಧಿಕೃತ ಪ್ರತಿಮೆ, ಪುತ್ಥಳಿ ಮತ್ತು ಧ್ವಜಕಂಬಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗಿದೆ. ಇಂದಲ್ಲ, ನಾಳೆ ಅನಧಿಕೃತ ಪ್ರತಿಮೆ, ಪುತ್ಥಳಿಗಳನ್ನು ತೆರವುಗೊಳಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಅದಕ್ಕೂ ಮುನ್ನವೇ ಧಾರ್ಮಿಕ ಕಟ್ಟಡಗಳನ್ನು ಸಂರಕ್ಷಣೆ ಮಾಡುವ ಕಾಯ್ದೆ ತಂದಂತೆ, ಅನಧಿಕೃತ ಪ್ರತಿಮೆಗಳನ್ನು ಉಳಿಸುವ ಕಾಯ್ದೆಯನ್ನು ತರುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಚಿಂತನೆ ಸರ್ಕಾರದ್ದು ಎಂದು ಮೂಲಗಳು ತಿಳಿಸಿವೆ.

ಪೂರ್ಣಗೊಳ್ಳದ ಸರ್ವೆ:  ಬೆಂಗಳೂರು ನಗರದ ಎಂಟು ವಲಯಗಳಲ್ಲಿ ಅನಧಿಕೃತವಾಗಿ ನಾಡಪ್ರಭು ಕೆಂಪೇಗೌಡ, ಬಸವಣ್ಣ, ಡಾ.ರಾಜ್‌ಕುಮಾರ್‌, ವಿಷ್ಣುವರ್ಧನ್‌, ಶಂಕರ್‌ನಾಗ್‌, ಕುವೆಂಪು, ಅಂಬರೀಶ್‌ ಸೇರಿದಂತೆ ಮಾಜಿ ಪ್ರಧಾನಮಂತ್ರಿಗಳು ಮತ್ತು ಕೆಲ ರಾಜಕಾರಣಿಗಳ ಪ್ರತಿಮೆ, ಪುತ್ಥಳಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಅನಧಿಕೃತ ಪ್ರತಿಮೆಗಳ ಸರ್ವೆ ಜವಾಬ್ದಾರಿಯನ್ನು ಎಂಟು ವಲಯಗಳ ಜಂಟಿ ಆಯುಕ್ತರಿಗೆ ವಹಿಸಿ ಒಂದೂವರೆ ತಿಂಗಳು ಕಳೆದರೂ ಪ್ರತಿಮೆಗಳ ಸರ್ವೇ ಕಾರ್ಯ ಪೂರ್ಣಗೊಂಡಿಲ್ಲ. ಅನಧಿಕೃತ ಪ್ರತಿಮೆಗಳ ಸರ್ವೆಗೆ ತೆರಳುವ ಪಾಲಿಕೆ ಅಧಿಕಾರಿಗಳಿಗೆ ಸ್ಥಳೀಯ ಶಾಸಕರು, ಮುಖಂಡರು ಮತ್ತು ಮಹಾನ್‌ ವ್ಯಕ್ತಿಗಳ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿರುವ ಘಟನೆಗಳು ನಡೆಯುತ್ತಿವೆ.

'ನಮ್ಮ ಕೋರಿಕೆ ಈಡೇರಿದೆ, ನಮಗೆ ಒಳ್ಳೆಯ ಮುಖ್ಯಮಂತ್ರಿಗಳು ಸಿಕ್ಕಿದ್ದಾರೆ'

ಅ.27ರೊಳಗೆ ನಿರ್ಧಾರ?:  ಅ.27ಕ್ಕೆ ಹೈಕೋರ್ಟ್‌ನಲ್ಲಿ ಅನಧಿಕೃತಿ ಪ್ರತಿಮೆಗಳ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮತ್ತೊಮ್ಮೆ ವಿಚಾರಣೆಗೆ ಬರಲಿದೆ. ಅಷ್ಟರೊಳಗೆ ಬಿಬಿಎಂಪಿ ಕೂಡ ತನ್ನ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಅನಧಿಕೃತ ಪ್ರತಿಮೆಗಳ ಸರ್ವೇ ಪೂರ್ಣಗೊಳಿಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿದೆ. ಅದಕ್ಕೂ ಮುನ್ನ ಅನಧಿಕೃತ ಪ್ರತಿಮೆಗಳ ಸಂರಕ್ಷಣೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರಲು ಸಿದ್ಧತೆ ನಡೆಸಲಾಗುತ್ತಿದೆ ಎನ್ನಲಾಗಿದೆ.

ಪುತ್ಥಳಿಗಳ ಸರ್ವೆಗೆ ಶಾಸಕರ ಆಕ್ಷೇಪ

ಅನಧಿಕೃತ ಪ್ರತಿಮೆಗಳ ಸರ್ವೆಗೆ ತೆರಳಿದ ಅಧಿಕಾರಿಗಳಿಗೆ ಕೆಲ ಶಾಸಕರು, ಪಾಲಿಕೆ ಮಾಜಿ ಸದಸ್ಯರು ಸೇರಿದಂತೆ ಇತರರು, ಮೊದಲೆಲ್ಲಾ ರಸ್ತೆ, ಪುಟ್‌ಪಾತ್‌, ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಪ್ರತಿಮೆ ಪುತ್ತಳಿ ಪ್ರತಿಷ್ಠಾಪಿಸಲು ಬಿಟ್ಟು ನಮ್ಮ ಅವಧಿಯಲ್ಲಿ ತೆರವುಗೊಳಿದರೆ ನಮಗೆ ಮತ್ತು ನಮ್ಮ ಸರ್ಕಾರಕ್ಕೆ ಕೆಟ್ಟಹೆಸರು ಬರುತ್ತದೆ. ಈ ಕುರಿತು ಸಚಿವರು, ಮುಖ್ಯಮಂತ್ರಿಗಳು ಮತ್ತು ಅಡ್ವೋಕೆಟ್‌ ಜನರಲ್‌ ಅವರೊಂದಿಗೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳುವವರೆಗೂ ಯಾವುದೇ ಕ್ರಮ ಕೈಗೊಳ್ಳದಂತೆ ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ಬೆಂಗಳೂರಲ್ಲೇ 400ಕ್ಕೂ ಅಧಿಕ ಅನಧಿಕೃತ ಪ್ರತಿಮೆ

ಬೆಂಗಳೂರು ಪಾಲಿಕೆಯ ಎಂಟು ವಲಯಗಳಲ್ಲಿ ಸುಮಾರು 400ಕ್ಕೂ ಹೆಚ್ಚು ಅನಧಿಕೃತ ಪ್ರತಿಮೆ, ಪುತ್ಥಳಿಗಳು ಇವೆ ಎಂದು ಅಂದಾಜಿಸಲಾಗಿದೆ. ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕಾವೇರಿನಗರ ಪಾರ್ಕ್, ಪಟ್ಟೇಗಾರ್‌ಪಾಳ್ಯ, ಶಿವನಹಳ್ಳಿ ಮುಖ್ಯರಸ್ತೆ, ಚೋಳರಪಾಳ್ಯ, ಬಳೇಪೇಟೆ ವೃತ್ತ, ಎಂ.ಸಿ.ಲೇಔಟ್‌, ವಿಜಯನಗರ ಉಪ ನೋಂದಣಾಧಿಕಾರಿ ಕಚೇರಿ ಸಮೀಪ, ಶೇಷಾದ್ರಿಪುರದ ದತ್ತಾತ್ರೇಯ ರಸ್ತೆ, ಮಾಗಡಿ ರಸ್ತೆಯ ಕೆಂಪಾಪುರ ಅಗ್ರಹಾರ, ಟಿಸಿಎಂ ರಾಯನ್‌ ವೃತ್ತ, ಟಿ.ಆರ್‌.ಮಿಲ್‌ ವೃತ್ತ, ಅಕ್ಕಿಪೇಟೆ ವೃತ್ತ ಸಮೀಪ, ಮಂಜುನಾಥ್‌ ನಗರ ವೃತ್ತ, ಬಾಷ್ಯಂ ವೃತ್ತ, ಮಂಜುನಾಥ ನಗರ ಮುಖ್ಯರಸ್ತೆ, ಗಾಂಧಿನಗರ ಪಾರ್ಕ್ ರಸ್ತೆ, ಮಾಗಡಿ ರಸ್ತೆ ದಾಸರಹಳ್ಳಿ, ಶೇಷಾದ್ರಿಪುರಂ ವೃತ್ತ, ಪೈಪ್‌ಲೈನ್‌ ವಿಜಯನಗರ, ವಿಜಯನಗರ ಸಮೀಪದ ಟೋಲ…ಗೇಟ್‌ ವೃತ್ತ ಪ್ರತಿಷ್ಠಾಪಿಸಿರುವ ಪ್ರತಿಮೆಗಳನ್ನಷ್ಟೇ ಉಲ್ಲೇಖಿಸಲಾಗಿದೆ.

click me!