ಹುಷಾರ್‌... ಚೀನಿ ಸೈಬರ್ ವಂಚಕರ ಹೊಸ ಹವಾಲಾ ದಂಧೆ: ಜಾಲ ನಡೆಯೋದು ಹೇಗೆ?

Published : Feb 26, 2025, 09:02 AM ISTUpdated : Feb 26, 2025, 09:20 AM IST
ಹುಷಾರ್‌... ಚೀನಿ ಸೈಬರ್ ವಂಚಕರ ಹೊಸ ಹವಾಲಾ ದಂಧೆ: ಜಾಲ ನಡೆಯೋದು ಹೇಗೆ?

ಸಾರಾಂಶ

ನಿಮ್ಮ ಬಂಧುಗಳು ವಿದೇಶದಲ್ಲಿದ್ದಾರೆ. ಆದರೆ ಬೆಂಗಳೂರಿನಲ್ಲಿರುವ ನಿಮಗೆ ತುರ್ತಾಗಿ ಹಣಬೇಕಿದೆ. ಆಗ ಆಪತ್ಭಾಂಧವನಂತೆ ಬರುವ ಅನಾಮಿಕ, ವೈದ್ಯಕೀಯ ಚಿಕಿತ್ಸೆ, ಮಕ್ಕಳ ಶೈಕ್ಷಣಿಕ ಶುಲ್ಕ ಅಷ್ಟೇ ಮಾತ್ರವಲ್ಲ ದೈನಂದಿನ ಖರ್ಚು ವೆಚ್ಚ ಭರಿಸಿ ಮಾಯವಾಗುತ್ತಾನೆ. 

ಗಿರೀಶ್ ಮಾದೇನಹಳ್ಳಿ

ಬೆಂಗಳೂರು (ಫೆ.26): ನಿಮ್ಮ ಬಂಧುಗಳು ವಿದೇಶದಲ್ಲಿದ್ದಾರೆ. ಆದರೆ ಬೆಂಗಳೂರಿನಲ್ಲಿರುವ ನಿಮಗೆ ತುರ್ತಾಗಿ ಹಣಬೇಕಿದೆ. ಆಗ ಆಪತ್ಭಾಂಧವನಂತೆ ಬರುವ ಅನಾಮಿಕ, ವೈದ್ಯಕೀಯ ಚಿಕಿತ್ಸೆ, ಮಕ್ಕಳ ಶೈಕ್ಷಣಿಕ ಶುಲ್ಕ ಅಷ್ಟೇ ಮಾತ್ರವಲ್ಲ ದೈನಂದಿನ ಖರ್ಚು ವೆಚ್ಚ ಭರಿಸಿ ಮಾಯವಾಗುತ್ತಾನೆ. ನಿಮ್ಮ ತುರ್ತಿಗೆ ನೀಡಿದ ಹಣ ದುಬೈನಲ್ಲಿರುವ ನಿಮ್ಮ ಬಂಧುಗಳ ಮೂಲಕ ಆತನಿಗೆ ಮರು ಸಂದಾಯವಾಗುತ್ತದೆ! ಇದ್ಯಾವುದೋ ಎನ್‌ಜಿಒ ಅಥವಾ ಹಣಕಾಸು ನೆರವು ನೀಡುವ ಸಂಸ್ಥೆಗಳ ನೆರವಿನ ಹಸ್ತ ಎಂದುಕೊಳ್ಳಬೇಡಿ. ಇದು ಸದ್ಯ ಬೆಂಗಳೂರು ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಚೀನಿ ಸೈಬರ್‌ ವಂಚಕರ ಹೊಸ ಡಿಜಿಟಲ್‌ ಹವಾಲಾ ದಂಧೆ!

ಭಾರತದಲ್ಲಿ ಸೈಬರ್‌ ವಂಚನೆ, ದುಬಾರಿ ಬಡ್ಡಿದರದ ಸಾಲ ಸೇರಿ ನಾನಾ ರೀತಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಹಣವನ್ನು ನೀರು ಕುಡಿದಷ್ಟೇ ಸುಲಭವಾಗಿ ವಿದೇಶಗಳಿಗೆ ಸಾಗಿಸಲು ಚೀನಿ ಸೈಬರ್‌ ವಂಚಕರು ಕಂಡುಕೊಂಡ ಹೊಸ ಮಾರ್ಗ ಇದು. ಹವಾಲಾ ದಂಧೆ ಹೊಸದಲ್ಲವಾದರೂ ಚೀನಿ ವಂಚಕರು ಅನಾಮಧೇಯ ವ್ಯಕ್ತಿಗಳ ಹೆಸರಲ್ಲಿ ನಡೆಸುತ್ತಿರುವ ಈ ಇಡೀ ಜಾಲ ಸಂಪೂರ್ಣ ನಿಗೂಢವಾಗಿದ್ದು, ಅದರ ಮೂಲ ಹುಡುಕುವುದು ಪೊಲೀಸರಿಗೆ ಸವಾಲಾಗಿದೆ.

ಪತ್ನಿಗೆ ಸೈಟ್‌ಗಾಗಿ ಶಿಫಾರಸ್ಸು ಮಾಡಿಲ್ಲ: ಸಿಎಂ ಸಿದ್ದರಾಮಯ್ಯ

ಮೊದಲೆಲ್ಲ ಖದೀಮರು ವಂಚನೆಯಿಂದ ಗಳಿಸಿದ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಬಳಿಕ ಡ್ರಾ ಮಾಡಿಕೊಳ್ಳುತ್ತಿದ್ದರು. ಇಲ್ಲವೇ ಆ ಹಣವನ್ನು ಕ್ರಿಪ್ಟೋ ಕರೆನ್ಸಿಗೆ ಹೂಡಿಕೆ ಮಾಡಿ ವಿದೇಶದಲ್ಲಿರುವ ಹ್ಯಾಂಡ್ಲರ್‌ಗೆ ವರ್ಗಾಯಿಸುತ್ತಿದ್ದರು. ಆದರೆ ಇತ್ತೀಚೆಗೆ ಸೈಬರ್ ಕ್ರೈಂನಿಂದ ಗಳಿಸಿದ ಹಣ ಹೊಸ ಹವಾಲಾ ಮಾರ್ಗದ ಮೂಲಕ ವರ್ಗಾವಣೆಯಾಗುತ್ತಿದೆ. ಈವರೆಗೆ ವರ್ಗಾವಣೆ ದಂಧೆಯಲ್ಲಿ ಬ್ಯಾಂಕ್ ಖಾತೆದಾರರು ಮಾತ್ರ ಸಿಕ್ಕಿದ್ದಾರೆ. ಆದರೆ ವಿದೇಶದಲ್ಲಿರುವ ಪ್ರಮುಖ ಆರೋಪಿಗಳ ಬಂಧನವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಂಚನೆಯಲ್ಲಿ ಚೀನಾ ಪಾರುಪತ್ಯ: ತನ್ನ ಎದುರಾಳಿ ದೇಶದ ಅರ್ಥ ವ್ಯವಸ್ಥೆಗೆ ಕೊಡಲಿ ಪೆಟ್ಟು ನೀಡುವ ದುರಾಲೋಚನೆಯಿಂದ ಸ್ಥಳೀಯರನ್ನೇ ಬಳಸಿಕೊಂಡು ಭಾರತದಲ್ಲಿ ಹಣ ದೋಚುವ ಚಾಲಾಕಿತನವನ್ನು ಚೀನೀಯರು ತೋರಿಸುತ್ತಿದ್ದಾರೆ. ಈ ವಂಚನೆ ಹಾಗೂ ದಂಧೆಯಲ್ಲಿ ಹಣ ಕಳೆದುಕೊಂಡ ಸಂತ್ರಸ್ತನೂ ಭಾರತೀಯನೇ, ವಂಚನೆ ಕೃತ್ಯದಲ್ಲಿ ಸಿಕ್ಕಿಬಿದ್ದು ಜೈಲು ಪಾಲಾಗುವ ಆರೋಪಿಯೂ ಭಾರತೀಯನೇ ಆಗಿರುತ್ತಾನೆ. ಸೈಬರ್ ವಂಚನೆ ಜಾಲ ನಿಯಂತ್ರಿಸುವ ಚೀನಿ ವಂಚಕರು ಮಾತ್ರ ಸಿಕ್ಕಿಬೀಳುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹವಾಲಾ ದಂಧೆ ಹೇಗೆ?: ಸೈಬರ್ ವಂಚನೆ ಕೃತ್ಯಗಳಿಂದ ದೋಚುವ ಹಣ ಎರಡು ಮಾರ್ಗದಲ್ಲಿ ವಿದೇಶದ ಸೈಬರ್ ವಂಚಕರ ಜೇಬು ಸೇರುತ್ತಿದೆ. ಅದರಲ್ಲಿ ಮೊದಲನೆಯದು ಸ್ಥಳೀಯ ಬ್ಯಾಂಕ್‌ ಖಾತೆಗಳಿಂದ ನೇರವಾಗಿ ಕ್ರಿಪ್ಟೋ ಕರೆನ್ಸಿ ಮೇಲೆ ಹೂಡಿಕೆ ಮಾಡಿ ಬಳಿಕ ಅದನ್ನು ಚೀನಾ ಹಣಕ್ಕೆ ಬದಲಾವಣೆ ಮಾಡುವುದು, ಎರಡನೆಯದು ಸ್ಥಳೀಯರ ದೈನಂದಿನ ಖರ್ಚು ವೆಚ್ಚಗಳನ್ನು ಪಾವತಿಸಿ ಅವರ ಬಂಧುಗಳಿಂದ ದುಬೈನಲ್ಲಿರುವ ಮಧ್ಯವರ್ತಿಗಳ ಮೂಲಕ ಮರುಪಾವತಿ ಮಾಡಿಸಿಕೊಳ್ಳುವುದು. ಇತ್ತೀಚೆಗೆ ಚೀನೀಯರು ಈ ದಾರಿ ಮೂಲಕ ನಮ್ಮ ದೇಶದಲ್ಲಿ ವಂಚನೆ ಮೂಲಕ ಗಳಿಸಿದ ಹಣವನ್ನು ಸಲೀಸಾಗಿ ದೇಶದಿಂದ ಹೊರಗೆ ತೆಗೆದುಕೊಂಡು ಹೋಗುತ್ತಿದ್ದಾರೆ.

ಭಾರತೀಯರಿಗೆ ಕೆಲಸ ಅಥವಾ ಇತರೆ ಆಮಿಷವೊಡ್ಡಿ ಅವರು ಮಧ್ಯಪ್ರಾಚ್ಯ ದೇಶಗಳಿಗೆ ಕರೆದೊಯ್ಯುತ್ತಾರೆ. ಅಲ್ಲಿ ಬಂಧನ ಅಥವಾ ಬೇರೆ ಆಮಿಷ ತೋರಿಸಿ ಷೇರುಮಾರುಕಟ್ಟೆ ಸಲಹೆ, ಡಿಜಿಟಲ್‌ ಅರೆಸ್ಟ್‌ ಹೆಸರಲ್ಲಿ ಕರೆ ಮಾಡಿ ವಂಚನೆ ಮಾಡಿಸುತ್ತಾರೆ. ಈ ರೀತಿ ಗಳಿಸಿದ ಹಣವನ್ನು ಭಾರತದಿಂದ ಹೊರಗೆ ತೆಗೆದುಕೊಂಡು ಹೋಗಲು ಕಂಪನಿಯ ರೀತಿಯಲ್ಲಿ ನೆಟ್‌ವರ್ಕ್‌ವೊಂದನ್ನು ರಚಿಸಿಕೊಂಡಿರುತ್ತಾರೆ.

ವಿದೇಶಗಳಲ್ಲಿ ಹೆಚ್ಚಾಗಿ ಮಧ್ಯಪ್ರಾಚ್ಯ ದೇಶಗಳಲ್ಲಿ ಕೆಲಸ ಮಾಡುವ ಭಾರತೀಯರ ತಾಯ್ನಾಡಲ್ಲಿ ಬಂಧುಗಳಿಗೆ ತುರ್ತಾಗಿ ಹಣದ ಅಗತ್ಯವಿದ್ದಾಗ ಈ ದಂಧೆಕೋರರೇ ನೆರವಿಗೆ ಬರುತ್ತಾರೆ. ವಿದೇಶದಿಂದಲೇ ಕೂತು ಭಾರತದಲ್ಲಿರುವ ಹ್ಯಾಂಡ್ಲರ್‌ಗಳ ಮೂಲಕ ಭಾರತೀಯರನ್ನು ವಂಚಿಸಿ ಗಳಿಸಿದ ಹಣವನ್ನೇ ಅಗತ್ಯವಿದ್ದವರಿಗೆ ತಲುಪಿಸುತ್ತಾರೆ. ನಂತರ ವಿದೇಶದಲ್ಲಿರುವ ಆ ಕುಟುಂಬದ ವ್ಯಕ್ತಿಯಿಂದ ಮರುಪಾವತಿ ಮಾಡಿಸಿಕೊಳ್ಳುತ್ತಾರೆ. ಈ ಮೂಲಕ ಯಾವುದೇ ಸಮಸ್ಯೆಗಳಿಲ್ಲದೆ ಭಾರತದಲ್ಲಿ ವಂಚನೆಯಿಂದ ಸಂಪಾದಿಸಿದ ಹಣ ಎಲ್ಲರ ಕಣ್ತಪ್ಪಿಸಿ ಹೊರಗೆ ಕೊಂಡೊಯ್ಯುತ್ತಾರೆ.

ಜಾಲ ನಡೆಯೋದು ಹೇಗೆ?
ಹಣದ ಅಗತ್ಯವಿರುವ ವ್ಯಕ್ತಿ ವಿದೇಶದ ತನ್ನ ಬಂದುಗೆ ಕರೆ ಮಾಡಿ ನೆರವು ಕೇಳ್ತಾನೆ
ಆತನಿಗೆ ನೇರ ಹಣ ರವಾನೆ ಸಾಧ್ಯವಾಗದೇ ಹೋದಲ್ಲಿ ಚೀನಿ ಹವಾಲಾ ಜಾಲಕ್ಕೆ ಮೊರೆ
ಬಳಿಕ ಭಾರತದಲ್ಲಿನ ಚೀನೀ ಜಾಲದ ಮೂಲಕ ಅಗತ್ಯ ಇರುವ ವ್ಯಕ್ತಿಗೆ ಹಣ ಪೂರೈಕೆ
ಹಣ ಪೂರೈಕೆ ಆದ ಕೂಡಲೇ ಅತ್ತ ವಿದೇಶದ ವ್ಯಕ್ತಿಯಿಂದ ಹಣ ಪಡೆವ ಚೀನಿ ಜಾಲ
ಈ ಮೂಲಕ ಭಾರತದಲ್ಲಿ ಸಂಗ್ರಹಿಸಿದ ಅಕ್ರಮ ಹಣ ನೇರವಾಗಿ ಚೀನಿಯರ ಜೇಬಿಗೆ

ಗೃಹಜ್ಯೋತಿ ಹಣ ಜನರಿಂದ ವಸೂಲಿ ಮಾಡಲ್ಲ: ಸಚಿವ ಕೆ.ಜೆ.ಜಾರ್ಜ್‌

ವಿದೇಶಕ್ಕೆ ಸೈಬರ್ ವಂಚನೆ ಕೃತ್ಯದ ಹಣ ವರ್ಗಾವಣೆ ತಡೆಗೆ ತಾಂತ್ರಿಕತೆ ಬಳಸಿಕೊಂಡು ಯತ್ನಿಸಲಾಗುತ್ತದೆ. ಇತ್ತ ಹಣ ವರ್ಗಾವಣೆಗೆ ಸೈಬರ್ ವಂಚಕರು ಹೊಸ ಹೊಸ ದಾರಿ ಹುಡುಕಿಕೊಳ್ಳುತ್ತಿದ್ದಾರೆ. ಅಷ್ಟೇ ವೇಗದಲ್ಲಿ ಸೈಬರ್ ನಿಯಂತ್ರಣ ಕ್ರಮವೂ ನಡೆದಿದೆ. ಮೊದಲಿಗಿಂತ ಈಗ ಸೈಬರ್ ವಂಚನೆ ಕೃತ್ಯಗಳಿಗೆ ಹೆಚ್ಚಿನ ಕಡಿವಾಣ ಬೀಳುತ್ತಿದೆ.
-ಡಾ.ಎಂ.ಎ.ಸಲೀಂ, ಡಿಜಿಪಿ, ಸಿಐಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌