
ಬೆಂಗಳೂರು : ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಡಿ ಮನೆಗಳನ್ನು ಗುರುತಿಸಿ ಪಟ್ಟಿ (ಯುಎಚ್ಐಡಿ) ಮಾಡುವ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಬೆಸ್ಕಾಂ ಮೀಟರ್ ರೀಡರ್‌ಗಳು ಹಾಗೂ ಬೆಸ್ಕಾಂ ಎಡವಟ್ಟಿನಿಂದ ವಿದ್ಯುತ್ ಬಿಲ್ ಶಾಕ್‌ಗೆ ತುತ್ತಾಗಿದ್ದ ‘ಗೃಹಜ್ಯೋತಿ’ ಫಲಾನುಭವಿಗಳು ಇದೀಗ ನಿರಾಳರಾಗಿದ್ದಾರೆ. ಕಳೆದ ತಿಂಗಳ ವಿದ್ಯುತ್ ಬಿಲ್ ಅನ್ನು ಪರಿಷ್ಕರಿಸಿ ನೀಡುವುದಾಗಿ ಬೆಸ್ಕಾಂ ಸ್ಪಷ್ಟಪಡಿಸಿದೆ.
ಸಮೀಕ್ಷೆಗೆ ಮನೆಗಳನ್ನು ಗುರುತಿಸಿ ಸ್ಟಿಕ್ಕರ್ ಅಂಟಿಸಲು ಮೀಟರ್ ರೀಡರ್‌ಗಳನ್ನು ಆಗಸ್ಟ್‌ನಲ್ಲಿ ಹಿಂದುಳಿದ ವರ್ಗಗಳ ಆಯೋಗ ಬಳಸಿಕೊಂಡಿತ್ತು. ಹೀಗಾಗಿ ಮೀಟರ್ ರೀಡರ್‌ಗಳು ಎಂಟು-ಹತ್ತು ದಿನ ವಿಳಂಬವಾಗಿ ಗ್ರಾಹಕರ ಮನೆಗಳ ಮೀಟರ್ ರೀಡಿಂಗ್ ಮಾಡಿದ್ದರು. 30 ದಿನಗಳ ಬದಲಿಗೆ 38-40 ದಿನಗಳ ವಿದ್ಯುತ್ ಬಳಕೆ ಪರಿಗಣಿಸಿ ಬಿಲ್ ನೀಡಿದ್ದರಿಂದ ಗೃಹಜ್ಯೋತಿ ಯೋಜನೆಗೆ ನಿಗದಿ ಮಾಡಿದ್ದ 200 ಯುನಿಟ್‌ಗಿಂತ ಹೆಚ್ಚಿನ ಬಳಕೆ ತೋರಿಸಲಾಗಿತ್ತು. ಇದರಿಂದ ಶೂನ್ಯ ಬಿಲ್ ಸೌಲಭ್ಯದಿಂದ ಸಾವಿರಾರು ಮಂದಿ ವಂಚಿತರಾಗಿದ್ದರು. ಈ ಬಗ್ಗೆ ಗುರುವಾರ ವಿದ್ಯುತ್ ಬಿಲ್‌ಗಳ ಸಹಿತ ‘ಕನ್ನಡಪ್ರಭ’ ವರದಿ ಪ್ರಕಟಿಸಿತ್ತು.
ಎಡವಟ್ಟು ಒಪ್ಪಿಕೊಂಡ ಬೆಸ್ಕಾಂ:
ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಬೆಸ್ಕಾಂ, ಸೆಪ್ಟೆಂಬರ್ ತಿಂಗಳಲ್ಲಿ ಮೀಟರ್ ರೀಡರ್‌ಗಳು ಸಮೀಕ್ಷೆ ಭಾಗವಾಗಿ ಮನೆಗಳನ್ನು ಪಟ್ಟಿ ಮಾಡುವ ಕಾರ್ಯ ಹಾಗೂ ಮೀಟರ್ ರೀಡಿಂಗ್ ಎರಡನ್ನೂ ಮೊದಲ ಬಾರಿಗೆ ನಡೆಸಿದ್ದಾರೆ. ಹೀಗಾಗಿ ವಿದ್ಯುತ್ ಬಿಲ್ ವಿತರಣೆಯ ದಿನಾಂಕವನ್ನು ಸೆ.15ನೇ ತಾರೀಖಿನಿಂದ 25ನೇ ತಾರೀಖಿನವರೆಗೆ ವಿಸ್ತರಿಸಲಾಗಿತ್ತು. ಈ ಪ್ರಕ್ರಿಯೆಯಿಂದ ಕೆಲ ಪ್ರಕರಣಗಳಲ್ಲಿ ಗೃಹಜ್ಯೋತಿ ಗ್ರಾಹಕರಿಗೆ ಭಾಗಶಃ ಶುಲ್ಕದ ಬಿಲ್ ಬಂದಿರುವುದು ಬೆಸ್ಕಾಂ ಗಮನಕ್ಕೆ ಬಂದಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಅಂಥ ಬಿಲ್‌ಗಳನ್ನು ಕಳೆದ ತಿಂಗಳುಗಳ ಸರಾಸರಿಯಂತೆ ಲೆಕ್ಕ ಹಾಕಿ, ಪರಿಷ್ಕೃತ ಬಿಲ್ ನೀಡಲಾಗುತ್ತದೆ. ಈ ಮೂಲಕ ಗೃಹಜ್ಯೋತಿ ಫಲಾನುಭವಿಗಳು ಯೋಜನೆಯ ಲಾಭ ಪಡೆಯುವಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮವಹಿಸಲಾಗುವುದು ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ನಮ್ಮಲ್ಲಿ ಮಾತ್ರ!
ಜಾತಿ ಗಣತಿ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ಕೆ ವಿದ್ಯುತ್ ಮೀಟರ್ ರೀಡರ್‌ಗಳ ನಿಯೋಜನೆಯಿಂದ ಬಿಲ್ ರೀಡಿಂಗ್ ತಡವಾಗುತ್ತಿದೆ. ಇದರಿಂದಾಗಿ ಜನರಿಗೆ ಗೃಹಜ್ಯೋತಿ ಲಾಭ ತಪ್ಪುತ್ತಿದೆ ಎಂದು ‘ಕನ್ನಡಪ್ರಭ’ ಮಾತ್ರ ನಿನ್ನೆ ವರದಿ ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ