ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತು ಹೆಚ್ಚುಕಮ್ಮಿ ಹದಿನೈದು ವರ್ಷಗಳಾದವು. ಆದರೆ ಅದರಿಂದ ಆದ ಪ್ರಯೋಜನವಾದರೂ ಏನು? ರಾಜ್ಯದಲ್ಲಿನ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಶಾಸ್ತ್ರೀಯ ಭಾಷೆಯ ಅಭಿವೃದ್ಧಿಯ ವಿಚಾರದಲ್ಲಿ ಈವರೆಗೆ ಏನೂ ಕೆಲಸಗಳಾಗಲಿಲ್ಲ ಎಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ದೊಡ್ಡರಂಗೇಗೌಡ ಕಿಡಿಕಾರಿದ್ದಾರೆ.
ಮಹಾಬಲ ಸೀತಾಳಭಾವಿ
ಹಾವೇರಿ (ಜ.07): ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತು ಹೆಚ್ಚುಕಮ್ಮಿ ಹದಿನೈದು ವರ್ಷಗಳಾದವು. ಆದರೆ ಅದರಿಂದ ಆದ ಪ್ರಯೋಜನವಾದರೂ ಏನು? ರಾಜ್ಯದಲ್ಲಿನ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಶಾಸ್ತ್ರೀಯ ಭಾಷೆಯ ಅಭಿವೃದ್ಧಿಯ ವಿಚಾರದಲ್ಲಿ ಈವರೆಗೆ ಏನೂ ಕೆಲಸಗಳಾಗಲಿಲ್ಲ ಎಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ದೊಡ್ಡರಂಗೇಗೌಡ ಕಿಡಿಕಾರಿದ್ದಾರೆ. ಪಕ್ಕದ ತಮಿಳುನಾಡು ಸರ್ಕಾರ ಶಾಸ್ತ್ರೀಯ ತಮಿಳು ಭಾಷೆಯ ಹೆಸರು ಹೇಳಿ ಪ್ರತಿ ವರ್ಷ 6-7 ಕೋಟಿ ರು. ಅನುದಾನವನ್ನು ಕೇಂದ್ರ ಸರ್ಕಾರದಿಂದ ಪಡೆಯುತ್ತಿದೆ.
undefined
ಆದರೆ ಕರ್ನಾಟಕ ಸರ್ಕಾರ ಈವರೆಗೆ ಪಡೆದಿರುವ ಒಟ್ಟು ಹಣವೇ 3 ಕೋಟಿ. ಈಗ ಡಬಲ್ ಎಂಜಿನ್ ಸರ್ಕಾರ ಇದ್ದರೂ ಕನ್ನಡಕ್ಕೆ ಕೇಂದ್ರ ಸರ್ಕಾರ ಮಾಡಿರುವ ಅನುಕೂಲ ಏನು ಎಂದೂ ಅವರು ಪ್ರಶ್ನಿಸಿದ್ದಾರೆ. ಏಲಕ್ಕಿ ನಾಡು ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲೇ ದೊಡ್ಡರಂಗೇಗೌಡ ಅವರು ಕನ್ನಡವನ್ನು ಅನ್ನದ ಭಾಷೆಯನ್ನಾಗಿಸಿ ಕನ್ನಡಿಗರಿಗೆ ಬದುಕು ಕಟ್ಟಿಕೊಳ್ಳಲು ಅವಕಾಶ ಸೃಷ್ಟಿಸುವ ವಿಷಯದಲ್ಲಿ ತಮ್ಮ ಆಲೋಚನೆಗಳನ್ನು ನಿರ್ಭಿಡೆಯಿಂದ ತೆರೆದಿಟ್ಟರು.
Kannada Sahitya Sammelana: ಪರ್ಯಾಯ ಸಮ್ಮೇಳನ ಅವರ ಹಕ್ಕು: ಎಚ್.ಎಸ್.ವೆಂಕಟೇಶಮೂರ್ತಿ
ಶಾಸ್ತ್ರೀಯ ಭಾಷೆ ಕಣ್ಣೊರೆಸುವ ತಂತ್ರ: ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿರುವುದು ಕೇವಲ ಕಣ್ಣೊರೆಸುವ ತಂತ್ರವಾಗಿದೆ. ಕಳೆದ 13 ವರ್ಷಗಳಲ್ಲಿ ಸಂಸ್ಕೃತದ ಅಭಿವೃದ್ಧಿಗೆ 643 ಕೋಟಿ ರು., ತಮಿಳು ಭಾಷೆಗೆ 42 ಕೋಟಿ ರು. ನೀಡಿರುವ ಕೇಂದ್ರ ಸರ್ಕಾರ, ಕರ್ನಾಟಕಕ್ಕೆ ಮಾತ್ರ 3 ಕೋಟಿ ರು. ನೀಡಿದ್ದೇಕೆ? ಇದನ್ನು ಹೇಗೆ ಸಾಧಿಸುತ್ತೀರೋ ಗೊತ್ತಿಲ್ಲ, ಕನ್ನಡಕ್ಕೆ ದೊರೆಯಬೇಕಾದ ಹಕ್ಕಿನ ಹಣವನ್ನು ತರುವ ಜವಾಬ್ದಾರಿ ಮುಖ್ಯಮಂತ್ರಿಗಳದು ಎಂದು ದೊಡ್ಡರಂಗೇಗೌಡ ನೇರವಾಗಿ ಹೇಳಿದರು.
ಉನ್ನತ ಮಟ್ಟದ ಸಮಿತಿ ರಚಿಸಿ: ಕನ್ನಡ ಶಾಸ್ತ್ರೀಯ ಭಾಷೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಬೇಕು. ತಮಿಳುನಾಡು ಸರ್ಕಾರ ಈವರೆಗೆ ಏನೇನು ಮಾಡಿದೆ ಎಂಬುದನ್ನು ಅಧ್ಯಯನ ಮಾಡಿ ಕನ್ನಡದ ಶಾಸ್ತ್ರೀಯ ಸ್ಥಾನಮಾನದ ಸದ್ಬಳಕೆಗೆ ಕ್ರಮ ಕೈಗೊಳ್ಳಬೇಕು. ಕೇಂದ್ರದ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರವನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡಬೇಕು. ರಾಜ್ಯದಲ್ಲಿ ಶಾಸ್ತ್ರೀಯ ಭಾಷೆ ಅಧ್ಯಯನಕ್ಕೆ ಉಪ ಕೇಂದ್ರಗಳನ್ನು ಸ್ಥಾಪಿಸಬೇಕು. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಶಾಸ್ತ್ರೀಯ ಭಾಷೆ ಅಧ್ಯಯನಕ್ಕೆ ಪ್ರತೇಕ ಭಾಗ ತೆರೆಯಬೇಕು ಎಂದು ದೊಡ್ಡರಂಗೇಗೌಡ ಸಲಹೆ ನೀಡಿದರು.
ವೃತ್ತಿಪರ ಶಿಕ್ಷಣ ಕನ್ನಡದಲ್ಲಿ ನೀಡಿ: ಕರ್ನಾಟಕಕ್ಕಿಂತ ಕಡಿಮೆ ಜನಸಂಖ್ಯೆಯ ಎಷ್ಟೋ ದೇಶಗಳು ತಮ್ಮ ಭಾಷೆಯಲ್ಲೇ ಜ್ಞಾನ, ತಂತ್ರಜ್ಞಾನ ಹಾಗೂ ಮೆಡಿಕಲ್ ಶಿಕ್ಷಣವನ್ನು ನೀಡುತ್ತಿವೆ. ಹಾಗಿರುವಾಗ ಏಳು ಕೋಟಿ ಕನ್ನಡಿಗರಿರುವ ರಾಜ್ಯದಲ್ಲಿ ಕನ್ನಡದಲ್ಲಿ ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ನೀಡುವುದು ಏಕೆ ಸಾಧ್ಯವಿಲ್ಲ? ಸರ್ಕಾರ ಹಾಗೂ ವಿವಿಗಳು ಈ ಕೆಲಸ ಮಾಡದಿದ್ದರೆ ಅದು ಜನತೆಗೆ ಅಖಂಡ ದ್ರೋಹ ಬಗೆದಂತೆ. ಹೀಗಾಗಿ ಕನ್ನಡದಲ್ಲಿ ವೃತ್ತಿಪರ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ನೀಡಲು ನಾವು ಪಣ ತೊಡಬೇಕು ಎಂದು ದೊಡ್ಡರಂಗೇಗೌಡ ಹೇಳಿದರು.
ಕನ್ನಡದಲ್ಲಿ ಸೇವೆ ನೀಡದವರನ್ನು ಧಿಕ್ಕರಿಸಿ: ಕನ್ನಡವು ಅನ್ನದ ಭಾಷೆಯಾಗಿ ಬೆಳೆಯಬೇಕಾದರೆ ಕನ್ನಡಿಗರು ತಮಗೆ ದೊರೆಯಬೇಕಾದ ಸೇವೆಗಳನ್ನು ಕನ್ನಡದಲ್ಲೇ ಕೇಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇಂದು ನಮ್ಮ ಜನರಿಗೆ ಗ್ರಾಮೀಣ ಪ್ರದೇಶದ ಬ್ಯಾಂಕುಗಳಲ್ಲೂ ಕನ್ನಡದಲ್ಲಿ ಸೇವೆ ಪಡೆಯಲು ಪರದಾಡಬೇಕಾದ ಪರಿಸ್ಥಿತಿ ಇದೆ. ಕನ್ನಡದಲ್ಲಿ ಸೇವೆ ನಿರಾಕರಿಸುವ ಸಿಬ್ಬಂದಿ ಹೆಚ್ಚುತ್ತಿದ್ದಾರೆ. ಕನ್ನಡದಲ್ಲಿ ಸೇವೆ ನೀಡದ ಬ್ಯಾಂಕು, ಸರ್ಕಾರಿ ಉದ್ದಿಮೆಗಳು ಹಾಗೂ ಖಾಸಗಿ ಸಂಸ್ಥೆಗಳನ್ನು ಕನ್ನಡಿಗರು ಮುಲಾಜಿಲ್ಲದೆ ಧಿಕ್ಕರಿಸಬೇಕು. ಆಗ ಸಹಜವಾಗಿಯೇ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಹೆಚ್ಚು ಸಿಗತೊಡಗುತ್ತವೆ ಎಂದ ದೊಡ್ಡರಂಗೇಗೌಡ ತಿಳಿಸಿದರು.
ಪುಸ್ತಕ ಪ್ರಕಾಶಕರಿಗೆ ಹಣ ಬಿಡುಗಡೆ ಮಾಡಿ: ಬೆಂಗಳೂರು ಪಾಲಿಕೆಯು ಸುಮಾರು 500 ಕೋಟಿ ರು. ಗ್ರಂಥಾಲಯ ಕರ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಕನ್ನಡದ ಪುಸ್ತಕ ಪ್ರಕಾಶಕರಿಗೆ ಬಾಕಿ ಹಣ ನೀಡದೆ ಸರ್ಕಾರ ಹಾಗೇ ಉಳಿಸಿಕೊಂಡಿದೆ. ಹೀಗಾದರೆ ಪುಸ್ತಕ ಪ್ರಕಾಶಕರು ಬದುಕುವುದು ಹೇಗೆ? ಕನ್ನಡದ ಪುಸ್ತಕೋದ್ಯಮ ಬೆಳೆಯುವುದು ಹೇಗೆ? ಕೂಡಲೇ ಸರ್ಕಾರವು ಪ್ರಕಾಶಕರಿಗೆ ಪುಸ್ತಕಗಳ ಬಾಕಿ ಬಿಡುಗಡೆ ಮಾಡಬೇಕು. ಜೊತೆಗೆ, ಪ್ರತಿ ಪ್ರಕಾಶಕರಿಂದ ಖರೀದಿಸುತ್ತಿರುವ ಪುಸ್ತಕಗಳ ಪ್ರತಿಯ ಸಂಖ್ಯೆಯನ್ನು ಈಗಿನ 300ರ ಬದಲಾಗಿ ಕೇರಳ, ತಮಿಳುನಾಡಿನಂತೆ ಕನಿಷ್ಠ 500ಕ್ಕೆ ಹೆಚ್ಚಿಸಬೇಕು ಎಂದು ದೊಡ್ಡರಂಗೇಗೌಡ ಆಗ್ರಹಿಸಿದರು.
ಮುಚ್ಚಿದ ಕನ್ನಡ ಶಾಲೆಗಳನ್ನೆಲ್ಲ ತೆರೆಯಿರಿ: ಹಿಂದಿನ ಸರ್ಕಾರ ಅವಸರದ ನಿರ್ಧಾರ ತೆಗೆದುಕೊಂಡು ರಾಜ್ಯದಲ್ಲಿ ಕೆಲ ಕನ್ನಡ ಶಾಲೆಗಳನ್ನು ಮುಚ್ಚಿದೆ. ಅಂತಹ ಶಾಲೆಗಳನ್ನು ಈಗಿನ ಸರ್ಕಾರ ಮತ್ತೆ ತೆರೆದು ಪುನರುಜ್ಜೀವನಗೊಳಿಸಬೇಕು. ರಾಜ್ಯದ ಎಲ್ಲ ಸಂಸದರೂ ಕನ್ನಡ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಬೇಕು. ನೆರೆ ರಾಜ್ಯದವರು ಕನ್ನಡ ಭಾಷಿಕ ಪ್ರದೇಶಗಳಲ್ಲಿ ಕನ್ನಡದ ಶಾಲೆಗಳನ್ನು ಮುಚ್ಚಿದ್ದರೆ ಅವುಗಳನ್ನು ಪುನಃ ತೆರೆಯುವುದಕ್ಕೂ ರಾಜ್ಯ ಸರ್ಕಾರ ನೆರವು ನೀಡಬೇಕು ಎಂದು ದೊಡ್ಡರಂಗೇಗೌಡ ಸರ್ಕಾರಕ್ಕೆ ಆಗ್ರಹಿಸಿದರು.
Kannada Sahitya Sammelana: ಪರ್ಯಾಯ ಸಮ್ಮೇಳನ ನಡೆಸೋರು ಹಾವೇರಿ ವಿರೋಧಿಗಳು: ಮಹೇಶ್ ಜೋಷಿ
ಭಾಷಣದಲ್ಲಿ ‘ಕಾಂತಾರ’ ಪ್ರಸ್ತಾಪ: ಇತ್ತೀಚಿನ ಕನ್ನಡದ ಸೂಪರ್‌ಹಿಟ್ ಚಲನಚಿತ್ರ ‘ಕಾಂತಾರ’ದ ವಿಷಯ ಹಿರಿಯ ಚಿತ್ರ ಸಾಹಿತಿ ದೊಡ್ಡರಂಗೇಗೌಡರ ಭಾಷಣದಲ್ಲೂ ಪ್ರಸ್ತಾಪವಾಯಿತು.‘ಕನ್ನಡಕ್ಕೆ ಆಪತ್ತು ಬಂದಿದೆ ಎಂದು ನಾವು ಅಲವತ್ತುಕೊಳ್ಳುತ್ತೇವೆ. ಆದರೆ ಹಾಗೇನೂ ಆಗುವುದಿಲ್ಲ. ಇತ್ತೀಚೆಗೆ ಕನ್ನಡದಲ್ಲಿ ಬಂದ ‘ಕಾಂತಾರ’ಎಂಬ ಸಿನಿಮಾ ಜಗತ್ತಿನಾದ್ಯಂತ ಸದ್ದು ಮಾಡಿತು. ಕನ್ನಡ ಉಳಿಸಲು ಕನ್ನಡಿಗರೇ ಸಾಕು’ ಎಂದು ಹೇಳಿದರು.
ಪರ್ಯಾಯ ಸಮ್ಮೇಳನ ನಡೆಸುವವರು ಇಲ್ಲಿಗೇ ಬನ್ನಿ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿರೋಧ ತೋರಲು ಪರ್ಯಾಯ ಸಾಹಿತ್ಯ ಸಮ್ಮೇಳನ ನಡೆಸುತ್ತಿದ್ದಾರೆ. ಅವರ ಪ್ರಕಾರ ಈ ಸಾಹಿತ್ಯ ಸಮ್ಮೇಳನದಿಂದ ಕನ್ನಡಕ್ಕೆ ಪ್ರಯೋಜನವಿಲ್ಲವಂತೆ. ಇದು ಕೇವಲ ಜಾತ್ರೆಯಂತೆ. ನಾನು ಹೇಳುತ್ತೇನೆ, ಇದು ಕನ್ನಡದ ಜಾತ್ರೆಯೇ. ಊರಿನಲ್ಲಿ ಸಂತೆಗಳು ಹೇಗೆ ಜನರ ಬದುಕಿಗೆ ಅನ್ನ ನೀಡುತ್ತವೆಯೋ ಹಾಗೆ ಕನ್ನಡದ ಈ ಜಾತ್ರೆಯು ಕನ್ನಡಕ್ಕೆ ಜೀವ ತುಂಬುತ್ತದೆ. ಇಲ್ಲಿ ಹಿರಿಯರಿಂದ ಕಿರಿಯರಿಗೆ ಕನ್ನಡದ ಪ್ರೀತಿಯನ್ನು ದಾಟಿಸುವ ಕೆಲಸವಾಗುತ್ತದೆ. ಪರ್ಯಾಯ ಸಮ್ಮೇಳನ ನಡೆಸುವವರು ಇಲ್ಲಿಗೇ ಬಂದು ಮುಂದಿನ ಪೀಳಿಗೆಗೆ ಕನ್ನಡವನ್ನು ದಾಟಿಸುವ ಕೆಲಸವನ್ನು ತಮ್ಮದೇ ರೀತಿಯಲ್ಲಿ ಮಾಡಬಹುದು ಎಂದು ದೊಡ್ಡರಂಗೇಗೌಡ ಆಹ್ವಾನ ನೀಡಿದರು.