
ಟೆಹ್ರಾನ್: ಇಸ್ರೇಲ್-ಇರಾನ್ ನಡುವಿನ ಸಂಘರ್ಷ ತಾರಕಕ್ಕೇರುತ್ತಿರುವ ಹೊತ್ತಿನಲ್ಲಿ, ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿರುವ ಭಾರತೀಯರಿಗೆ ನಗರವನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಸೂಚಿಸಲಾಗಿದೆ.
ಅಂತೆಯೇ, ಭಾರತೀಯ ದೂತಾವಾಸದೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆಯೂ ಹೇಳಲಾಗಿದೆ. ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ 24*7 ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದ್ದು, ತಾವಿರುವ ಸ್ಥಳ ಮತ್ತು ಸಂಪರ್ಕ ಸಂಖ್ಯೆಯನ್ನು ದೂತಾವಾಸಕ್ಕೆ ಒದಗಿಸುವಂತೆ ಭಾರತೀಯರಿಗೆ ಎಕ್ಸ್‌ನಲ್ಲಿ ತಿಳಿಸಿದೆ.
ದೆಹಲಿಯಲ್ಲಿರುವ ವಿದೇಶಾಂಗ ಸಚಿವಾಲಯವೂ 24*7 ಕಾರ್ಯಾಚರಿಸುವ ಕಂಟ್ರೋಲ್ ರೂಂ ಸ್ಥಾಪಿಸಿದೆ. ಅತ್ತ ಇರಾನ್‌ನಲ್ಲಿ ಸಿಲುಕಿರುವ ಸಾವಿರಾರು ಭಾರತೀಯರನ್ನು ಭೂಗಡಿಯ ಮೂಲಕ ತಾಯ್ನಾಡಿಗೆ ಕರೆತರಲು ಸಿದ್ಧತೆ ಹಾಗೂ ಕೆಲಸ ಶುರುವಾಗಿದೆ. ಕೆಲವರು ಈಗಾಗಲೇ ಅರ್ಮೇನಿಯಾ ಮೂಲಕ ಇರಾನ್ ತೊರೆದಿದ್ದಾರೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.
ಅರ್ಮೇನಿಯಾ ಗಡಿ ದಾಟಿ ಇರಾನ್ ತೊರೆದ 110 ಭಾರತೀಯ ವಿದ್ಯಾರ್ಥಿಗಳು
ನವದೆಹಲಿ: ಇರಾನ್-ಇಸ್ರೇಲ್ ನಡುವಿನ ಉದ್ವಿಗ್ನ ಪರಿಸ್ಥಿತಿ ಇನ್ನೂ ಬಿಗಡಾಯಿಸುವ ಸಾಧ್ಯತೆ ಇರುವುದರಿಂದ, ಈಗಾಗಲೇ ಭಾರತೀಯ ವಿದ್ಯಾರ್ಥಿಗಳು ಇರಾನ್ ರಾಜಧಾನಿ ಟೆಹ್ರಾನ್‌ನಿಂದ ಹೊರಬಂದಿದ್ದಾರೆ. ಅದರಲ್ಲಿ 110 ಜನ ಅರ್ಮೇನಿಯಾ ಗಡಿ ಮೂಲಕ ಬಂದಿದ್ದಾರೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ಕುರಿತ ಹೇಳಿಕೆಯಲ್ಲಿ, ‘ಸುರಕ್ಷತಾ ದೃಷ್ಟಿಯಿಂದ ಭಾರತೀಯ ವಿದ್ಯಾರ್ಥಿಗಳು ದೂತಾವಾಸ ಮಾಡಿದ ವ್ಯವಸ್ಥೆಗಳ ಮೂಲಕ ತೆಹ್ರಾನ್ ತೊರೆದಿದ್ದಾರೆ’ ಎಂದು ಸಚಿವಾಲಯ ಹೇಳಿದೆ.ಜಮ್ಮು ಕಾಶ್ಮೀರ ವಿದ್ಯಾರ್ಥಿ ಸಂಘದ ಪ್ರಕಾರ, 90 ಕಾಶ್ಮೀರಿಗಳು ಸೇರಿದಂತೆ ಉರ್ಮಿಯಾ ವೈದ್ಯಕೀಯ ವಿಶ್ವವಿದ್ಯಾಲಯದ 110 ವಿದ್ಯಾರ್ಥಿಗಳು ಸುರಕ್ಷಿತವಾಗಿ ಅರ್ಮೇನಿಯಾ ಗಡಿ ದಾಟಿದ್ದಾರೆ.
ಇರಾನ್‌ನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಕಡಿಮೆ ಶುಲ್ಕ ಮತ್ತು ಅಧಿಕ ಸೀಟುಗಳು ಲಭ್ಯವಿರುವ ಕಾರಣ, ಭಾರತೀಯ ವಿದ್ಯಾರ್ಥಿಗಳು, ವಿಶೇಷವಾಗಿ ಕಾಶ್ಮೀರಿಗಳು ಅಲ್ಲಿಗೆ ಹೋಗುತ್ತಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಪರ್ಯಾಯ ಮಾರ್ಗ ಶೋಧಿಸಿ: ವಿಮಾನ ಸಂಸ್ಥೆಗಳಿಗೆಸೂಚನೆ
ನವದೆಹಲಿ: ಇರಾನ್-ಇಸ್ರೇಲ್ ಸಂಘರ್ಷದ ಕಾರಣ ಎರಡೂ ದೇಶಗಳ ವಾಯುವಲಯ ಬಂದ್ ಆಗಿದೆ. ಪಾಕ್ ಕೂಡ ಇತ್ತೀಚಿನ ಭಾರತದ ಜತೆಗಿನ ಯುದ್ಧದ ಕಾರಣ ತನ್ನ ವಾಯುವಲಯ ಬಂದ್ ಮಾಡಿದೆ.
ಹೀಗಾಗಿ ಪಾಶ್ಚಾತ್ಯ ದೇಶಗಳಿಗೆ ಭಾರತದ ವಿಮಾನ ಸುತ್ತಿ ಬಳಸಿ ಸಾಗಬೇಕಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಪರ್ಯಾಯ ವಾಯುಯಾನ ಮಾರ್ಗ ಶೋಧಿಸಿ ಎಂದು ವಿಮಾನಯಾನ ಕಂಪನಿಗಳಿಗೆ ಕೇಂದ್ರ ವಿಮಾನಯಾನ ನಿರ್ದೇಶನಾಲಯ ಮಂಗಳವಾರ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ