ಗ್ರಾಮ ಪಂಚಾಯ್ತಿಗಳಲ್ಲಿ ಪಾರದರ್ಶಕತೆ ತರಲು ಇದೇ ಮೊದಲ ಸಲ ಗ್ರಾಮೀಣಾಭಿವೃದ್ಧಿ ಇಲಾಖೆ ವೆಬ್ ಮೂಲಕ ಆನ್‌ಲೈನ್‌ನಲ್ಲೇ ಆ್ಯಕ್ಷನ್ ಪ್ಲಾನ್‌ಗೆ ಹೆಸರು ಸೇರಿಸಿಕೊಳ್ಳಲು ಅ.2 ರಿಂದ ನ.5ರವರೆಗೂ ಆವಕಾಶ ನೀಡಿತ್ತು. ರಾಜ್ಯದಲ್ಲಿ 2024-25ನೇ ಸಾಲಿಗೆ ಒಟ್ಟಾರೆ 85,141 ಅರ್ಜಿ ಸಲ್ಲಿಕೆಯಾಗಿದ್ದು, ಜನರಿಂದ ಉತ್ತಮ ಸಂದನೆ ದೊರೆತಿದೆ.
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು(ನ.12): ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಜಾರಿಗೆ ತಂದ 'ಆನ್ ಲೈನ್' ಮೂಲಕ ವೈಯಕ್ತಿಕ ಕಾಮಗಾರಿಯ ಕ್ರಿಯಾ ಯೋಜನೆಗೆ ಹೆಸರು ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಗ್ರಾಮ ಪಂಚಾಯ್ತಿಗಳಲ್ಲಿ ಪಾರದರ್ಶಕತೆ ತರಲು ಇದೇ ಮೊದಲ ಸಲ ಗ್ರಾಮೀಣಾಭಿವೃದ್ಧಿ ಇಲಾಖೆ ವೆಬ್ ಮೂಲಕ ಆನ್‌ಲೈನ್‌ನಲ್ಲೇ ಆ್ಯಕ್ಷನ್ ಪ್ಲಾನ್‌ಗೆ ಹೆಸರು ಸೇರಿಸಿಕೊಳ್ಳಲು ಅ.2 ರಿಂದ ನ.5ರವರೆಗೂ ಆವಕಾಶ ನೀಡಿತ್ತು. ರಾಜ್ಯದಲ್ಲಿ 2024-25ನೇ ಸಾಲಿಗೆ ಒಟ್ಟಾರೆ 85,141 ಅರ್ಜಿ ಸಲ್ಲಿಕೆಯಾಗಿದ್ದು, ಜನರಿಂದ ಉತ್ತಮ ಸಂದನೆ ದೊರೆತಿದೆ.
ನರೇಗಾ ದಂಡದ ಲೆಕ್ಕ ಸರ್ಕಾರದ ಬಳಿಯೇ ಇಲ್ಲ: ಅನುಷ್ಠಾನ ವೇಳೆ ಲೋಪವೆಸಗಿದವರಿಗೆ 1000 ರು. ದಂಡ ಹೇರಿಕೆ
ಜನರು ತಾವು ವೈಯಕ್ತಿಕ ಕಾಮಗಾರಿಕೈಗೊಳ್ಳಬೇಕು ಎಂದರೆ, ವಾರ್ಡ್ ಮತ್ತು ಗ್ರಾಮಸಭೆಗಳಲ್ಲಿ ಕಾಮಗಾರಿಗೆ ಬೇಡಿಕೆ ಮಂಡಿಸಬೇಕಿತ್ತು ಅಥವಾ ಸಂಬಂಧಿಸಿದ ಪಂಚಾಯ್ತಿ ಕಚೇರಿಗೆ ತೆರಳಿ ಅಲ್ಲಿ ಕ್ರಿಯಾ ಯೋಜನೆಗೆ ಹೆಸರು ಸೇರ್ಪಡೆ ಮಾಡಬೇಕಿತ್ತು. ಇದನ್ನು ತಪ್ಪಿಸಿ, ತಾವಿದ್ದಲ್ಲಿಂದಲೇ ಆನ್‌ಲೈನ್ ಮೂಲಕ ಕಾಮಗಾರಿಗೆ ಬೇಡಿಕೆ ಸಲ್ಲಿಸಲು ಅವಕಾಶ ಕಲ್ಪಿಸಿದ್ದು ವಿಶೇಷ.
ಬೆಳಗಾವಿ ಪ್ರಥಮ, ಹಾಸನ ದ್ವಿತೀಯ:
ಬೆಳಗಾವಿ ಜಿಲ್ಲೆಯಲ್ಲಿ ಅತ್ಯಧಿಕ ಎಂದರೆ, 22,148 ಅರ್ಜಿ ಸಲ್ಲಿಕೆಯಾಗಿವೆ. ಹಾಸನ ಜಿಲ್ಲೆ 2ನೇ (8,137) ಸ್ಥಾನ, ಬಾಗಲಕೋಟೆ ಜಿಲ್ಲೆ 3ನೇ (7313) ಸ್ಥಾನದಲ್ಲಿದೆ. ಆದಾಗ್ಯೂ ಬೆಂಗಳೂರು ನಗರ ಜಿಲ್ಲೆ(33), ಬೆಂಗಳೂರು ಗ್ರಾಮಾಂತರ(40), ರಾಮನಗರ(43), ಉಡುಪಿ(62), ದಕ್ಷಿಣ ಕನ್ನಡ(68), ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇವಲ 84 ಅರ್ಜಿ ಸಲ್ಲಿಕೆಯಾಗಿದ್ದು ಯೋಜನೆಗೆ ನೀರಸ ಪ್ರತಿಕ್ರಿಯೆ ಕಂಡುಬಂದಿದೆ. ನರೇಗಾ ಯೋಜನೆಯಡಿ ಕೃಷಿ ಹೊಂಡ, ಬದು, ಇಂಗು ಗುಂಡಿ, ಶೆಡ್ ನಿರ್ಮಾಣ, ತೆಂಗು - ಅಡಿಕೆ ಬೆಳೆ ಪ್ರದೇಶ ವಿಸ್ತರಣೆ ಸೇರಿದಂತೆ ಹತ್ತಾರು ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಬೇಡಿಕೆ ಸಲ್ಲಿಸುವುದು ಹೊಸ ವ್ಯವಸ್ಥೆಯಿಂದಾಗಿ ಇನ್ನು ಮುಂದೆ ಸುಲಭವಾಗಲಿದೆ.
ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಆನ್‌ಲೈನ್‌ನಲ್ಲಿ ಎಲ್ಲಿಂದಲಾದರೂ ತಮ್ಮ ಪಂಚಾಯ್ತಿಗಳಿಗೆ ಬೇಡಿಕೆ ಸಲ್ಲಿಸಬಹುದು. ಇದರಿಂದ ಭವಿಷ್ಯದಲ್ಲಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಳವಾಗಲಿದೆ.
ಆನ್‌ಲೈನ್ ಡಿಮ್ಯಾಂಡ್ ಏಕೆ?
ಜನರು ತಾವು ಕೈಗೊಳ್ಳಲಿರುವ ಕಾಮಗಾರಿಯನ್ನು ಕ್ರಿಯಾ ಯೋಜನೆಗೆ ಸೇರ್ಪಡೆ ಮಾಡಬೇಕು ಎಂದರೆ ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳಲ್ಲಿ ಬೇಡಿಕೆ ಮಂಡಿಸಬೇಕು. ಇಲ್ಲ, ಗ್ರಾಮ ಪಂಚಾಯ್ತಿಗಳಿಗೆ ಆಗ ಮಿಸಿ ಹೆಸರು ಸೇರಿಸಬೇಕು. ಸಾಮಾನ್ಯವಾಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಹಲವು ಹಳ್ಳಿಗಳು ಬರಲಿದ್ದು ಕ್ರಿಯಾ ಯೋಜನೆಗೆ ಹೆಸರು ಸೇರ್ಪಡೆ ಮಾಡಬೇಕೆಂದರೆ ದೂರದಿಂದ ಆಗಮಿಸಬೇಕಿತ್ತು.
ಚಾಮರಾಜನಗರ: ಪರಿಸರ ಪ್ರೇಮಿ ವೆಂಕಟೇಶ್ ನೆಟ್ಟ ಗಿಡಗಳಿಗೆ 1.87 ಲಕ್ಷ ನರೇಗಾ ಬಿಲ್?
ಕೆಲ ಗ್ರಾಪಂ ಗಳ ಸಿಬ್ಬಂದಿ ಕ್ರಿಯಾ ಯೋಜನೆಗೆ ಹೆಸರು ಸೇರ್ಪಡೆ ಮಾಡಿ ಎಂದರೆ, 'ಈಗ ಸೇರಿಸಲು ಅವಕಾಶವಿಲ್ಲ' ಎಂದೋ ಅಥವಾ ಸೇರಿಸುವುದಾಗಿ ಹೇಳಿ ಬಳಿಕ ವಿಮಾರಿಸುತ್ತಿದ್ದುದೂ ಉಂಟು. ಇದೆಲ್ಲಕ್ಕಿಂತ ಮುಖ್ಯ ವಾಗಿ, ಗ್ರಾ.ಪಂ. ಸದಸ್ಯರು, ಅಲ್ಲಿನ ಸಿಬ್ಬಂದಿಯ 'ಸಹಕಾರ'ದೊಂದಿಗೆ ತಮಗೆ ಬೇಕಾದ ಕೆಲಸಗಳನ್ನು ಮಾತ್ರ ಕ್ರಿಯಾ ಯೋಜನೆಗೆ ಸೇರಿಸುತ್ತಾ, ಗ್ರಾಮಸ್ಥರ ಕೆಲಸಗಳಿಗೆ 'ಕತ್ತರಿ' ಹಾಕುತ್ತಿದ್ದುದೂ ನಡೆಯುತ್ತಿತ್ತು. ಇದೆಲ್ಲ ಪರಿಗಣಿಸಿ ಆನ್‌ಲೈನ್ ವರ್ಕ್ ಡಿಮ್ಯಾಂಡ್ ಜಾರಿಗೆ ತರಲಾಗಿದೆ ಎಂದು ತಿಳಿದುಬಂದಿದೆ.
ಪಾರದರ್ಶಕತೆಗೆ ಒತ್ತು ಗ್ರಾಮ ಪಂಚಾಯ್ತಿಗಳಲ್ಲಿ ಪಾರದರ್ಶಕತೆ ತರಲು ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಕಾಮಗಾರಿ ಕೈಗೊಳ್ಳಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಗೆ ಭವಿಷ್ಯದಲ್ಲಿ ಇನ್ನೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.