
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಣಿಸಲೇಬೇಕು ಎಂಬ ಏಕೈಕ ಉದ್ದೇಶದೊಂದಿಗೆ ಬಿಜೆಪಿಯೇತರ ಪಕ್ಷಗಳು ಒಗ್ಗೂಡಲು ಪ್ರಯತ್ನ ಪಡುತ್ತಿರುವಾಗಲೇ, ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪನಿಗಳಲ್ಲಿ ಒಂದಾಗಿರುವ ಬೆಂಗಳೂರು ಮೂಲದ ಇನ್ಫೋಸಿಸ್‌ನ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಅಲ್ಲದೆ, ಮೋದಿ ಅವರು ಎರಡನೇ ಅವಧಿಗೆ ಮುಂದುವರಿಯಬೇಕು ಎಂಬುದರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿಐ)ಯಂತಹ ಪ್ರಮುಖ ಸುಧಾರಣೆಗಳನ್ನು ಪರಿಚಯಿಸಿ, ಜಾರಿಗೊಳಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಆರ್ಥಿಕ ಪ್ರಗತಿ ಹಿಂದಿನ ಶಕ್ತಿಯಾಗಿದ್ದಾರೆ. ಮೋದಿ ಹಾಗೂ ಅವರ ಸಂಪುಟ ಕೇಂದ್ರ ಸರ್ಕಾರದ ಮಟ್ಟದಲ್ಲಿ ಭ್ರಷ್ಟಾಚಾರ ತಗ್ಗಿಸಲು ಗಂಭೀರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಟಿ ನೌ ವಾಣಿಜ್ಯ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಅವರು ಆರ್ಥಿಕ ಪ್ರಗತಿ ಹಾಗೂ ಶಿಸ್ತಿನ ಮೇಲೆ ಗಮನ ಕೇಂದ್ರೀಕರಿಸಿರುವುದು ಉತ್ತಮ ವಿಚಾರ. ಅವುಗಳ ಮುಂದುವರಿಯುವಿಕೆ ಆರ್ಥಿಕತೆ ದೃಷ್ಟಿಯಿಂದ ಉತ್ತಮವಾದುದು ಎನ್ನುವ ಮೂಲಕ ಮೋದಿ ಮುಂದುವರಿಕೆ ಪರ ಬ್ಯಾಟ್ ಬೀಸಿದ್ದಾರೆ.
ಪ್ರಧಾನಿ ಮೋದಿ ಅವರು ಬಲಿಷ್ಠ ಆರ್ಥಿಕ ಪ್ರಗತಿಯ ಮನಸ್ಥಿತಿ ಹೊಂದಿರುವ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ ಎಂದು ನನಗನ್ನಿಸುತ್ತದೆ. ಸುಧಾರಣೆಗಳ ಅನುಷ್ಠಾನಕ್ಕೆ ಪ್ರಧಾನಿ ಅವರನ್ನು ನಾವು ಹೊಣೆಗಾರರನ್ನಾಗಿಸಲು ಆಗದು. ಏಕೆಂದರೆ, ಅದನ್ನು ಅಧಿಕಾರಶಾಹಿ ಮಾಡಬೇಕು ಎಂದು ಜಿಎಸ್‌ಟಿ ಹಾಗೂ ದಿವಾಳಿ ಸಂಹಿತೆ ಅನುಷ್ಠಾನ ಕುರಿತ ಪ್ರಶ್ನೆಗೆ ಮೂರ್ತಿ ಅವರು ಉತ್ತರಿಸಿದ್ದಾರೆ.
ಕೇಂದ್ರ ಸರ್ಕಾರ ಅಭಿವೃದ್ಧಿಗೆ ಬದಲಾಗಿ ಪ್ರತಿಮೆ ಹಾಗೂ ದೇಗುಲಗಳ ಮೇಲೆ ಗಮನಹರಿಸುತ್ತಿದೆ ಎಂಬ ದೂರುಗಳ ಕುರಿತು ಮಾತನಾಡಿದ ಅವರು, ಮೋದಿ ಅವರಿಗೆ ಇವೆಲ್ಲಾ ಕಳವಳಪಡಬೇಕಾದ ವಿಷಯಗಳಲ್ಲ ಎಂದಿದ್ದಾರೆ.
ಜಿಎಸ್‌ಟಿಐಯಂತಹ ಪ್ರಮುಖ ಸುಧಾರಣೆಗಳನ್ನು ಜಾರಿಗೊಳಿಸಿದ ಪ್ರಧಾನಿ ಮೋದಿ, ದೇಶದ ಆರ್ಥಿಕ ಪ್ರಗತಿ ಹಿಂದಿನ ಶಕ್ತಿಯಾಗಿದ್ದಾರೆ. ಅವರು ಆರ್ಥಿಕ ಪ್ರಗತಿ ಹಾಗೂ ಶಿಸ್ತಿನ ಮೇಲೆ ಗಮನ ಕೇಂದ್ರೀಕರಿಸಿರುವುದು ಉತ್ತಮ ವಿಚಾರ. ಅವುಗಳ ಮುಂದುವರಿಯುವಿಕೆ ಆರ್ಥಿಕತೆ ದೃಷ್ಟಿಯಿಂದ ಉತ್ತಮವಾದುದು.- ಎನ್.ಆರ್.ನಾರಾಯಣಮೂರ್ತಿ, ಇಸ್ಫೋಸಿಸ್ ಸಂಸ್ಥಾಪಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ