
ಬೆಂಗಳೂರು (ಮೇ 14): ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಸಾರ್ವಜನಿಕ ಸಾರಿಗೆ ಸೇವೆಯಾಗಿರುವ ನಮ್ಮ ಮೆಟ್ರೋದ ಪಿಂಕ್ ಲೈನ್ ಮೆಟ್ರೋ ಮಾರ್ಗ ಕಾಮಗಾರಿಗೆ ಮತ್ತೆ ಗ್ರಹಣ ಬಡಿದಿದೆ. ಅಂದಾಜಿನಂತೆ 2020ರಲ್ಲಿಯೇ ಸಂಚಾರಕ್ಕೆ ಮುಕ್ತಗೊಳ್ಳಬೇಕಿದ್ದ ಯೋಜನೆ 2025ರ ಡಿಸೆಂಬರ್‌ಗೆ ಮುಂದೂಡಿಕೆ ಆಗಿತ್ತು. ಇದೀಗ ಈ ಅವಧಿಯಲ್ಲಿಯೂ ಕಾಮಗಾರು ಪೂರ್ಣಗೊಳ್ಳುವುದು ಅನುಮಾನವಾಗಿದ್ದು, 2026ಕ್ಕೆ ವಾಣಿಜ್ಯ ಸೇವೆಗೆ ಮುಕ್ತವಾದಲ್ಲಿ ಸಾರ್ವಜನಿಕರ ಅದೃಷ್ಟವೇ ಸರಿ ಎಂಬ ಮಾತುಗಳು ಕೇಳಿಬಂದಿವೆ.
ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್ ಲೈನ್ ಮೆಟ್ರೋ ಕಾಮಗಾರಿಯನ್ನು 2020ರಲ್ಲಿಯೇ ಸಂಚಾರ ಸೇವೆಗೆ ನಿರ್ಧರಿಸಲಾಗಿತ್ತು. ಆದರೆ, ಹಣಕಾಸಿನ ಹೊಂದಾಣಿಕೆ, ಭೂಮಿಯ ಅಂತರ್ಗತ ಕಾಮಗಾರಿಗಳು, ಭೂಮಿ ವಶಪಡಿಸಿಕೊಳ್ಳುವಿಕೆ, ಕೋವಿಡ್ ಸಾಂಕ್ರಾಮಿಕ ರೋಗ ಸೇರಿ ಮುಂತಾದ ಕಾರಣಗಳಿಂದಡಿಸೆಂಬರ್ 2025ಕ್ಕೆ ಮುಂದೂಡಲ್ಪಟ್ಟಿತು. ಇದೀಗ ಕಾಮಗಾರಿ ನಿಗದಿತ ಅವಧಿಯಲ್ಲಿ ಮುಕ್ತಾಯಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಆದ್ದರಿಂದ ಮತ್ತೊಮ್ಮೆ ಗಡುವು ವಿಸ್ತರಣೆ ಮಾಡಿಸಿಕೊಳ್ಳಲು ಬೆಂಗಳೂರು ಮೆಟ್ರೋರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಮುಂದಾಗಿದೆ.
ಪಿಂಕ್ ಲೈನ್ ಮಾರ್ಗವನ್ನು ನಿರ್ಮಾಣ ಮಾಡಿ, ಎರಡು ಹಂತಗಳಲ್ಲಿ ಸಾರ್ವಜನಿಕ ಸೇವೆಗೆ ಬಿಡುಗಡೆ ಮಾಡಲು ಯೋಜಿಸಿದೆ. ಕಾಳೇನ ಅಗ್ರಹಾರ ಮತ್ತು ತಾವರೆಕೆರೆ ನಡುವಿನ ಎತ್ತರಿಸಿದ ಮಾರ್ಗ (7.5 ಕಿಮೀ) ಮಾರ್ಚ್ 2026ರ ವೇಳೆಗೆ ವಾಣಿಜ್ಯ ಸೇವೆಗೆ ಬರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಜೊತೆಗೆ, ಡೈರಿ ಸರ್ಕಲ್‌ನಿಂದ ನಾಗವಾರವರೆಗಿನ ಅಂಡರ್‌ಗ್ರೌಂಡ್ ವಿಭಾಗದ (13.8 ಕಿಮೀ) ಸೆಪ್ಟೆಂಬರ್ 2026ರ ವೇಳೆಗೆ ಲೋಕಾರ್ಪಣೆ ಮಾಡುವುದಕ್ಕೆ ಗಡುವು ವಿಸ್ತರಣೆಯನ್ನು ಮಾಡಿಕೊಂಡಿದೆ.
ಪಿಂಕ್ ಲೈನ್ ವಿಳಂಬಕ್ಕೆ ಕಾರಣವೇನು?
ಪಿಂಕ್ ಲೈನ್‌ನಲ್ಲಿ ಎಲಿವೇಟೆಡ್ ಮಾರ್ಗದಲ್ಲಿ (ಎತ್ತರದ ವಿಭಾಗದಲ್ಲಿ) ಸಿವಿಲ್ ಕೆಲಸಗಳು ಮತ್ತು ಹಳಿಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿವೆ. ಆದರೆ, ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಭೂಗತ ಭಾಗದ (ಅಂಡರ್ ಗ್ರೌಂಡ್ ವಿಭಾಗ) ಕಾಮಗಾರಿ ಮಾಡುವುದು ಸವಾಲಾಗಿ ಪರಿಣಮಿಸಿದೆ . ಬೆಂಗಳೂರಿನ ಕಲ್ಲಿನ ಭೂ ಪ್ರದೇಶ, ವಿಶೇಷವಾಗಿ ದೊಡ್ಡ ಗ್ರಾನೈಟ್ ಮತ್ತು ಡೊಲೆರೈಟ್ ಬಂಡೆಗಳು ಸುರಂಗ ಮಾರ್ಗವನ್ನು ಕೊರೆಯಲು ಭಾರೀ ಕಷ್ಟವನ್ನು ತಂದೊಡ್ಡಿವೆ. ಶಿವಾಜಿನಗರ ಮತ್ತು ವೆಲ್ಲರ ನಡುವಿನ 2.2 ಕಿ.ಮೀ. ಮಾರ್ಗದ ಸುಂರಗ ಮಾರ್ಗ ಕೊರೆಯವಿಕೆ ಭಾರೀ ವಿಳಂಬಕ್ಕೆ ಕಾರಣವಾಗಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ. ಇದರಿಂದಾಗಿ ಕಾಮಗಾರಿ ವಿಳಂಬ ಆಗುತ್ತಿದೆ ಎಂದು ತಿಳಿದುಬಂದಿದೆ.
ನಮ್ಮ ಮೆಟ್ರೋ ಪಿಂಕ್ ಲೈನ್ ನಿಲ್ದಾಣಗಳ ಪಟ್ಟಿ
ಕಾಳೇನ ಅಗ್ರಹಾರ
ಹುಳಿಮಾವು
ಐ.ಐ.ಎಂ.ಬಿ.
ಜೆ.ಪಿ. ನಗರ 4ನೇ ಹಂತ
ಜಯದೇವ ಆಸ್ಪತ್ರೆ
ತಾವರೆಕೆರೆ
ಡೈರಿ ಸರ್ಕಲ್
ಲಕ್ಕಸಂದ್ರ
ಲ್ಯಾಂಗ್‌ಫೋರ್ಡ್ ಟೌನ್
ರಾಷ್ಟ್ರೀಯ ಮಿಲಿಟರಿ ಶಾಲೆ
ಮಹಾತ್ಮ ಗಾಂಧಿ ರಸ್ತೆ
ಶಿವಾಜಿ ನಗರ
ಕಂಟೋನ್ಮೆಂಟ್
ಪಾಟರಿ ಟೌನ್
ಟ್ಯಾನರಿ ರಸ್ತೆ
ವೆಂಕಟೇಶಪುರ
ಕಾಡುಗುಂಡನಹಳ್ಳಿ
ನಾಗವಾರ
ಎರಡು ಲಿಂಕ್ ನಿಲ್ದಾಣಗಳು:
ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ಪಿಂಕ್ ಲೈನ್ 21.3 ಕಿ.ಮೀ. ಉದ್ದದ ಮಾರ್ಗದಲ್ಲಿ ಸಾರಿಗೆ ಸೇವೆಯನ್ನು ನೀಡಲಿದೆ. ಬೆಂಗಳೂರಿನ ದಕ್ಷಿಣ ತುದಿಯಾಗಿರುವ ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾಳೇನ ಅಗ್ರಹಾರ ಹಾಗೂ ನಗರದ ಉತ್ತರ ಭಾಗದಲ್ಲಿರುವ ಹೊರ ವರ್ತುಲ ರಸ್ತೆಯಲ್ಲಿರುವ ನಾಗವಾರದೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ. ಈ ಪಿಂಕ್ ಲೈನ್ ಮಾರ್ಗವು ಪ್ರಸ್ತುತ ನೇರಳೆ ಮಾರ್ಗದ ಪ್ರಮುಖ ನಿಲ್ದಾಣವಾಗಿರುವ ಮಹಾತ್ಮ ಗಾಂಧಿ ರಸ್ತೆ ನಿಲ್ದಾಣದಲ್ಲಿ, ಹಳದಿ ಮಾರ್ಗದ ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಮತ್ತು ಹಸಿರು ಮಾರ್ಗದ ನಾಗವಾರಕ್ಕೆ ಸಾಗುತ್ತದೆ. ಇದು ನಗರದಲ್ಲಿ ಸಾರಿಗೆ ವ್ಯವಸ್ಥೆಯ ಸುಧಾರಣೆಗೆ ಸಹಕಾರಿಯಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ