
ಬೆಳಗಾವಿ (ಮೇ.14): ಭಾರತೀಯ ಸೇನೆಯ ಸಿಂಹಿಣಿ ಕರ್ನಲ್ ಸೋಫಿಯಾ ಖುರೇಷಿ ಅವರ ಬೆಳಗಾವಿಯ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದ ಮಾವನ ಮನೆಯನ್ನು ಆರ್‌ಎಸ್‌ಎಸ್ ಕಾರ್ಯಕರ್ತರು ದ್ವಂಸಗೊಳಿಸಿದ್ದಾರೆ ಎಂಬ ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆಗಿತ್ತು. ಫೇಕ್ ಪೋಸ್ಟ್ ಮಾಡಿದವನ ಜಾಡು ಹಿಡಿದು ಬೆನ್ನು ಹತ್ತಿದ ಬೆಳಗಾವಿ ಪೊಲೀಸರಿಗೆ ಕಿಡಿಗೇಡಿ ಎಲ್ಲಿಯವನು ಎಂಬುದು ಗೊತ್ತಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ಗುಳೇದ್ , ಫೇಕ್ ಪೋಸ್ಟ್ ಮಾಡಿದ್ದ ಆರೋಪಿ ಕೆನಡಾದ ಕೊಲಂಬಿಯಾ ನಿವಾಸಿಯಾಗಿರುವ ಅನೀಸ್ ಉದ್ದೀನ್ ಎಂಬುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
'ಎಕ್ಸ್‌ನ ವೆರಿಫೈಡ್ ಖಾತೆಯಿಂದ ಹರಡಲಾದ ಈ ಸುಳ್ಳು ಸುದ್ದಿಯನ್ನು ಬೆಳಗಾವಿ ಪೊಲೀಸರ ಸಾಮಾಜಿಕ ಜಾಲತಾಣ ತಂಡವು ಗಮನಿಸಿ, ನನ್ನ ಗಮನಕ್ಕೆ ತಂದಿದ್ದರು. ನಾನು ಈ ಪೋಸ್ಟ್‌ಗೆ ಕಾಮೆಂಟ್ ಮಾಡಿ, ತಕ್ಷಣವೇ ಈ ಮಾಹಿತಿಯನ್ನು ಡಿಲೀಟ್ ಮಾಡುವಂತೆ ಸೂಚಿಸಿದ್ದೆ. ನನ್ನ ಕಾಮೆಂಟ್ ನೋಡಿದ ಆತ ಕೂಡಲೇ ಪೋಸ್ಟ್ ಡಿಲೀಟ್ ಮಾಡಿದ್ದಾನೆ' ಎಂದು ಎಸ್ಪಿ ಗುಳೇದ್ ಹೇಳಿದ್ದಾರೆ.
ಇದನ್ನೂ ಓದಿ: Colonel Sofiya Qureshi ಕುಟುಂಬಸ್ಥರ ಮೇಲೆ ದಾಳಿ ಎಂದು ಫೇಕ್ ಪೋಸ್ಟ್; ಕಿಡಿಗೇಡಿ ಅನೀಸ್ ಉದ್ದೀನ್ ಪತ್ತೆಗೆ ಮುಂದಾದ ಪೊಲೀಸರು
ನಂತರ, ಬೆಳಗಾವಿ ಪೊಲೀಸರು ಎಕ್ಸ್‌ನ ಮುಖ್ಯ ಕಚೇರಿಗೆ ಈ ಬಗ್ಗೆ ಮಾಹಿತಿ ಕೋರಿದಾಗ, ಈ ಸುಳ್ಳು ಸುದ್ದಿಯನ್ನು ಹರಡಿದವನು ಕೊಲಂಬಿಯಾ ಪ್ರಜೆ ಅನೀಸ್ ಉದ್ದೀನ್ ಎಂಬುದು ಸಾಬೀತಾಯಿತು. ಆತ ವಿದೇಶಿ ಪ್ರಜೆ ಎಂಬ ಕಾರಣಕ್ಕೆ ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿಲ್ಲ.ಆದರೆ ಎಕ್ಸ್ ಸಂಸ್ಥೆಗೆ ಈಗಾಗಲೇ ಲೀಗಲ್ ನೋಟಿಸ್ ರವಾನಿಸಲಾಗಿದೆ. ಒಂದು ವೇಳೆ ಆತ ಭಾರತೀಯ ಪ್ರಜೆ ಎಂದು ಗೊತ್ತಾದರೆ, ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಎಸ್ಪಿ ಗುಳೇದ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಕರ್ನಲ್ Sophia Qureshi 'ಉಗ್ರರ ಸಹೋದರಿ' ಎಂದ ಮಧ್ಯಪ್ರದೇಶ ಬಿಜೆಪಿ ಸಚಿವ! ವಿಡಿಯೋ ಇಲ್ಲಿದೆ
ಈ ಘಟನೆಯ ಬೆನ್ನಲ್ಲೇ, ಗೋಕಾಕ್ ಪೊಲೀಸರು ಕರ್ನಲ್ ಸೋಫಿಯಾ ಖುರೇಷಿ ಅವರ ಮಾವನ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಭದ್ರತೆ ಒದಗಿಸಿದ್ದಾರೆ. 'ಕರ್ನಲ್ ಸೋಫಿಯಾ ಖುರೇಷಿ ಇಂದು ಭಾರತದ ಪ್ರತಿ ಮನೆಗೆ ಚಿರಪರಿಚಿತರಾಗಿದ್ದಾರೆ. ಆದ್ದರಿಂದ, ಅವರ ಕುಟುಂಬಸ್ಥರಿಗೂ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ ಎಂದರು.
ಈ ಸುಳ್ಳು ಸುದ್ದಿಯನ್ನು ಖಂಡಿಸಿರುವ ಬೆಳಗಾವಿ ಪೊಲೀಸರು, ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಜನತೆಗೆ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ