ಬೊಮ್ಮಾಯಿ ಸರ್ಕಾರಕ್ಕೆ 1 ವರ್ಷ ತುಂಬಿದ ದಿನವೇ ನಮ್ಮ ಕ್ಲಿನಿಕ್ ಸಾಂಕೇತಿಕವಾಗಿ ಬೆಂಗಳೂರಿನ 2 ಕಡೆ ಶುರುವಾಗಿದೆ. ಇನ್ನು 3 ತಿಂಗಳಲ್ಲಿ ರಾಜ್ಯಾದ್ಯಂತ ಸ್ಥಾಪನೆ ಆಗಲಿವೆ 438 ನಮ್ಮ ಕ್ಲಿನಿಕ್ .
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಜು.31): ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿದ ದೆಹಲಿಯ ಮೊಹಲ್ಲಾ ಕ್ಲಿನಿಕ್ ಮಾದರಿಯ ‘ನಮ್ಮ ಕ್ಲಿನಿಕ್’ ಯೋಜನೆ ಸದ್ದಿಲ್ಲದೆ ಆರಂಭಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಕ್ಕೆ ಬಂದು ಒಂದು ವರ್ಷ ತುಂಬಿದ ಜುಲೈ 28ರಿಂದ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಕಾರ್ಯಾರಂಭಗೊಂಡಿದೆ. ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷ ತುಂಬಿದ ನೆನಪಿಗಾಗಿ ಗುರುವಾರ ಬಿಬಿಎಂಪಿ ವ್ಯಾಪ್ತಿಯ ಎರಡು ವಾರ್ಡ್‌ಗಳಾದ ಮಲ್ಲೇಶ್ವರ ಮತ್ತು ಪದ್ಮನಾಭನಗರದಲ್ಲಿ ಸಾಂಕೇತಿಕವಾಗಿ ನಮ್ಮ ಕ್ಲಿನಿಕ್ ಆರಂಭಿಸಲಾಗಿವೆ. ಬೆಂಗಳೂರಿನ ಎಲ್ಲ 243 ವಾರ್ಡ್ ಸೇರಿದಂತೆ ರಾಜ್ಯದ ಒಟ್ಟು 438 ಕಡೆ ನಮ್ಮ ಕ್ಲಿನಿಕ್ ಆರಂಭಿಸುವುದಾಗಿ ಮುಖ್ಯಮಂತ್ರಿಗಳು 2022-23ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದರು. ಅದರಂತೆ ಪ್ರಾಯೋಗಿಕವಾಗಿ ನಗರದ ಈ ಎರಡು ತಾಣಗಳಲ್ಲಿ ಕ್ಲಿನಿಕ್ ಆರಂಭವಾಗಿದೆ. ಎರಡೇ ದಿನದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದಿನಕ್ಕೆ 35ರಿಂದ 40 ರೋಗಿಗಳು ಆಗಮಿಸಿ ತಪಾಸಣೆಗೆ ಒಳಗಾಗುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಮ್ಮ ಕ್ಲಿನಿಕ್‌ನಲ್ಲಿ ಸಿಗುವ ಸೌಲಭ್ಯಗಳು: ನಮ್ಮ ಕ್ಲಿನಿಕ್‌ಗಳು ಬೆಳಗ್ಗೆ 9 ಗಂಟೆಯಿಂದ ಸಂಜೆ 4.30ರವರೆಗೆ ಕಾರ್ಯಾನಿರ್ವಹಿಸುತ್ತಿವೆ. ಒಬ್ಬ ಡಾಕ್ಟರ್, ಒಬ್ಬ ನರ್ಸ್, ಒಬ್ಬ ಲ್ಯಾಬ್ ಟೆಕ್ನೀಷಿಯನ್ ಹಾಗೂ ಒಬ್ಬ ಡಿ ಗ್ರೂಪ್ ಸಿಬ್ಬಂದಿ ಮಾತ್ರ ಇಲ್ಲಿ ಕಾರ್ಯನಿರ್ವಹಿಸುತ್ತಾರೆ. ಉಚಿತ ತಪಾಸಣೆ ಮತ್ತು ಉಚಿತ ಔಷಧ ವಿತರಣೆ ಮಾಡಲಾಗುತ್ತದೆ. ಒಟ್ಟು 12 ತರಹದ ಆರೋಗ್ಯ ಸೇವೆಗಳು ಹಾಗೂ 14 ವಿಧದ ಪ್ರಯೋಗ ನಡೆಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಇ-ಸಂಜೀವಿನಿ ಹಾಗೂ ಟೆಲಿ ಕೌನ್ಸೆಲಿಂಗ್ ಮೂಲಕ ಕೊಡಿಸುವ ವ್ಯವಸ್ಥೆ ಇಲ್ಲಿದೆ.
ಪ್ರತಿ ಕ್ಲಿನಿಕ್‌ಗೆ 36 ಲಕ್ಷ ರು.: ರಾಜ್ಯ ಸರ್ಕಾರದ ಅನುದಾನದಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲಾಗುತ್ತಿದ್ದು, ಪ್ರತಿ ಕ್ಲಿನಿಕ್‌ಗೆ ವಾರ್ಷಿಕ 36 ಲಕ್ಷ ರು. ನೀಡಲಾಗುತ್ತದೆ. ಈ ಮೊತ್ತದಲ್ಲಿ ಸಿಬ್ಬಂದಿ ವೇತನ, ಕ್ಲಿನಿಕ್ ನಿರ್ವಹಣೆ, ಖಾಸಗಿ ಕಟ್ಟಡವಾಗಿದ್ದರೆ ಬಾಡಿಗೆ ಸೇರಿದಂತೆ ಎಲ್ಲವನ್ನೂ ನಿರ್ವಹಣೆ ಮಾಡಬೇಕು. ರಾಜ್ಯ ಸರ್ಕಾರವು ಈಗಾಗಲೇ ನಮ್ಮ ಕ್ಲಿನಿಕ್‌ಗೆ ಬೇಕಾದ ಅನುದಾನವನ್ನು ಬಿಡುಗಡೆ ಮಾಡಿದೆ.
ಮೂರು ತಿಂಗಳಲ್ಲಿ ಎಲ್ಲ ಕಡೆ ಶುರು: ರಾಜ್ಯದ ವಿವಿಧ ಭಾಗದಲ್ಲಿ ಮೂರು ತಿಂಗಳಲ್ಲಿ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಎರಡು ತಿಂಗಳಲ್ಲಿ ನಮ್ಮ ಕ್ಲಿನಿಕ್ ಆರಂಭಿಸುವುದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯ 170 ವಾರ್ಡ್‌ಗಳಲ್ಲಿ ಪಾಲಿಕೆಯ ಕಟ್ಟಡದಲ್ಲಿ ಆರಂಭಿಸಲಾಗುತ್ತಿದ್ದು, ಉಳಿದ 73 ವಾರ್ಡ್‌ಗಳಲ್ಲಿ ಮಾತ್ರ ಖಾಸಗಿ ಕಟ್ಟಡದಲ್ಲಿ ಆರಂಭಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
Karnataka Budget 2022-23: ಮೊಹಲ್ಲಾ ಕ್ಲಿನಿಕ್ ರೀತಿ ನಮ್ಮ ಕ್ಲಿನಿಕ್: ಸಿಎಂ ಬೊಮ್ಮಾಯಿ
2 ತಿಂಗಳಲ್ಲಿ ಬೆಂಗಳೂರಿನ ಎಲ್ಲೆಡೆ ನಮ್ಮ ಕ್ಲಿನಿಕ್ ಶುರು: ಬಿಬಿಎಂಪಿ ವ್ಯಾಪ್ತಿಯ ಎರಡು ವಾರ್ಡ್‌ಗಳಲ್ಲಿ ಜು.28ರಿಂದ ನಮ್ಮ ಕ್ಲಿನಿಕ್ ಆರಂಭಿಸಲಾಗಿದೆ. ಉಳಿದ ಎಲ್ಲ ವಾರ್ಡ್‌ಗಳಲ್ಲಿ ಎರಡು ತಿಂಗಳೊಳಗಾಗಿ ಆರಂಭಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
- ಡಾ.ತ್ರಿಲೋಕಚಂದ್ರ, ವಿಶೇಷ ಆಯುಕ್ತ, ಪಾಲಿಕೆ ಆರೋಗ್ಯ ವಿಭಾಗ
ಬಡ ವರ್ಗದವರಿಗೆ ಅನುಕೂಲವಾಗಲೆಂದು ದೆಹಲಿ ಸರ್ಕಾರ ಸ್ಥಾಪಿಸಿರುವ ‘ಮೊಹಲ್ಲಾ ಕ್ಲಿನಿಕ್’ ಮಾದರಿಯಲ್ಲಿಯೇ ರಾಜ್ಯದಲ್ಲಿಯೇ ‘ನಮ್ಮ ಕ್ಲಿನಿಕ್’ ಸ್ಥಾಪಿಸಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿ ಸೇರಿದಂತೆ ರಾಜ್ಯದಲ್ಲಿ 438 ‘ನಮ್ಮ ಕ್ಲಿನಿಕ್’ ಸ್ಥಾಪಿಸಲಾಗುತ್ತಿದೆ. ಎಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇಲ್ಲವೋ ಅಲ್ಲಿ ಇವು ಕಾರ್ಯನಿರ್ವಹಿಸಲಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವುಗಳ ಮೇಲುಸ್ತುವಾರಿ ವಹಿಸಲಿವೆ. 15ನೇ ಹಣಕಾಸು ಆಯೋಗದ ಅನುದಾನದಡಿಯಲ್ಲಿ 155.77 ಕೋಟಿ ರು. ವೆಚ್ಚದಲ್ಲಿ ನಮ್ಮ ಕ್ಲಿನಿಕ್ ಸ್ಥಾಪಿಸಲು ಸರಕಾರ ಮುಂದಾಗಿದೆ. ಕ್ಲಿನಿಕ್‌ಗಳಿಗೆ ಒಬ್ಬ ವೈದ್ಯಾಧಿಕಾರಿ, ಶುಶ್ರೂಷಕರು ಮತ್ತು ದ್ವಿತೀಯ ದರ್ಜೆ ಸಹಾಯಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಏನಿದು ನಮ್ಮ ಕ್ಲಿನಿಕ್?
ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹೊರತಾಗಿ ನಗರ, ಪಟ್ಟಣಗಳ ವಾರ್ಡ್ ಮಟ್ಟದಲ್ಲಿ ಆರೋಗ್ಯ ಸೇವೆ ನೀಡುವ ಕೇಂದ್ರ
ಯಾಕೆ ಈ ಕ್ಲಿನಿಕ್?
ಸರ್ಕಾರಿ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡಲು. ಹಾಗೂ, ಜನರಿಗೆ ಸ್ಥಳೀಯವಾಗಿಯೇ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ
ಎಲ್ಲೆಲ್ಲಿ ಆರಂಭ?
ಬೆಂಗಳೂರು ಮಹಾನಗರದ ಎಲ್ಲ ವಾರ್ಡ್‌ಗಳು ಸೇರಿದಂತೆ ರಾಜ್ಯದ ವಿವಿಧೆಡೆ 155.77 ಕೋಟಿ ರು. ವೆಚ್ಚದಲ್ಲಿ 438 ನಮ್ಮ ಕ್ಲಿನಿಕ್ ಆರಂಭ
ಯಾರ್ಯಾರು ಇರ್ತಾರೆ?
ಪ್ರತಿ ಕ್ಲಿನಿಕ್‌ನಲ್ಲಿ ಒಬ್ಬ ವೈದ್ಯಾಧಿಕಾರಿ, ಶುಶ್ರೂಷಕ ಮತ್ತು ದ್ವಿತೀಯ ದರ್ಜೆ ಸಹಾಯಕರು ಲಭ್ಯ. ಇವರೆಲ್ಲ ಗುತ್ತಿಗೆ ಆಧಾರದ ಮೇಲೆ ನೇಮಕ.