ನಗರ್ತಪೇಟೆಯಲ್ಲಿ ಹನುಮಾನ್ ಚಾಲೀಸಾ ರ್ಯಾಲಿಗೆ ಸಂಸದ ತೇಜಸ್ವಿ ಸೂರ್ಯ ಪ್ರಚೋದನೆ ಕೊಟ್ಟಿದ್ದಾರೆಂದು ಕಾಂಗ್ರೆಸ್ ದೂರು ಕೊಟ್ಟ ಬೆನ್ನಲ್ಲಿಯೇ ಸಂಸದರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು (ಮಾ.19): ಬೆಂಗಳೂರಿನ ನಗರ್ತಪೇಟೆಯಲ್ಲಿ ಹನುಮಾನ್ ಚಾಲೀಸಾ ಹಾಕಿಕೊಂಡು ರ್ಯಾಲಿ ಮಾಡುತ್ತಿರುವುದಕ್ಕೆ ಸಂಸದ ತೇಜಸ್ವಿ ಸೂರ್ಯ ಪ್ರಚೋದನೆಯೇ ಕಾರಣವೆಂದು ಕಾಂಗ್ರೆಸ್‌ನಿಂದ ಚುನಾವಣಾ ಆಯೋಗಕ್ಕೆ ದೂರು ಕೊಟ್ಟ ಬೆನ್ನಲ್ಲಿಯೇ ಬೆಂಗಳೂರು ಪೊಲೀಸರು ತೇಜಸ್ವಿ ಸೂರ್ಯನನ್ನು ವಶಕ್ಕೆ ಪಡೆದಿದ್ದಾರೆ.
ನಗರ್ತಪೇಟೆಯಲ್ಲಿ ಧಾರ್ಮಿಕ ಭಾವನೆ ಕೆರಳಿಸಿ, ಸ್ಥಳೀಯರ ಪ್ರತಿಭಟನೆಗೆ ಸಂಸದ ತೇಜಸ್ವಿ ಸೂರ್ಯ ಪ್ರಚೋದನೆ ನೀಡಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾನೂನು ಘಟಕದಿಂದ ದೂರು ನೀಡಲಾಗಿದೆ. ಇನ್ನು ದೂರು ದಾಖಲಾಗುತ್ತಿದ್ದಂತೆ ನಗರ್ತಪೇಟೆಯಲ್ಲಿ ಸ್ಥಳೀಯ ವ್ಯಾಪಾರಿಗಳು ನಡೆಸುತ್ತಿದ್ದ ಹನುಮಾನ್ ಚಾಲೀಸಾ ರ್ಯಾಲಿ ಕೈಬಿಡುವಂತೆ ಮನವೊಲಿಕೆಗೆ ಬಂದಿದ್ದರು. ಆದರೆ, ಪ್ರತಿಭಟನಾ ಸ್ಥಳಕ್ಕೆ ಬಂದ ಸಂಸದ ತೇಜಸ್ವಿ ಸೂರ್ಯನನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
undefined
ಹನುಮಾನ್ ಚಾಲೀಸಾ ರ್‍ಯಾಲಿ: ಪೊಲೀಸ್ vs ಬಿಜೆಪಿ, ಶೋಭಾ ಕರಂದ್ಲಾಜೆ ಅರೆಸ್ಟ್, ನಗರ್ತಪೇಟೆ ಉದ್ವಿಗ್ನ!
ಕೆಪಿಸಿಸಿ ಕಾನೂನು ಘಟನ ದೂರಿನಲ್ಲಿ ಉಲ್ಲೇಖ ಮಾಡಿರುವುದೇನು?
ಬೆಂಗಳೂರಿನ ನಗರ್ತ ಪೇಟೆಯಲ್ಲಿ ಅಂಗಡಿ ಮಾಲೀಕರೊಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಕೋಮು ದ್ವೇಷ ಮೂಡಿಸುವ ಸಲುವಾಗಿ ಬಿಜೆಪಿಯ ನಾಯಕರು ತಿರುಚಿರುತ್ತಾರೆ. ಮಾ.18ರಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ಬಸವನಗುಡಿ ಶಾಸಕ ರವಿಸುಬ್ರಮಣ್ಯ ಭೇಟಿ ನೀಡಿದ್ದರು. ಅಂಗಡಿಯ ಮುಂದೆ ಗುಂಪು ಸೇರಿಸಿ ಮಾ. 19ರ ಮಧ್ಯಾಹ್ನ 12 ಗಂಟೆಗೆ ಹನುಮಾನ್ ಚಾಲೀಸ ಪಠಣೆ ಮಾಡಲು ಕರೆ ನೀಡಿದ್ದಾರೆ. ಅಲ್ಲದೇ ಧಾರ್ಮಿಕ ಘೋಷಣೆಗಳನ್ನು ಕೂಗಿರುತ್ತಾರೆ. ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶ ಮತ್ತು ಚುನಾವಣಾ ಆಯೋಗದ ಪ್ರಕಾರ ಚುನಾವಣೆಯ ಸಂದರ್ಭದಲ್ಲಿ ಕೋಮು, ಮತ, ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ಕೃತ್ಯವೆಸಗುವುದು ಅಪರಾಧ. ನೀತಿ ಸಂಹಿತೆ ಉಲ್ಲಂಘಿಸಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಹೀಗಾಗಿ ತೇಜಸ್ವಿ ಸೂರ್ಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ದೂರು ನೀಡಲಾಗಿತ್ತು.
ಇನ್ನು ಸಂಸದರಾದ ಪಿ.ಸಿ. ಮೋಹನ್, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ಶಾಸಕ ಸಿ.ಕೆ. ರಾಮಮೂರ್ತಿ ಹಾಗೂ ಬಿಜೆಪಿ ಮುಖಂಡ ಸಪ್ತಗಿರಿಗೌಡ ಸೇರಿದಂತೆ ಒಟ್ಟು 40ಕ್ಕೂ ಅಧಿಕ ಹಿಂದೂ ಕಾರ್ಯಕರ್ತರನ್ನು ಬೆಂಗಳೂರು ಸಿಎಎಆರ್ ಗ್ರೌಂಡ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜೆಡಿಎಸ್ 2 ಸ್ಥಾನಕ್ಕೆ ಮೈತ್ರಿ ಮಾಡಿಕೊಳ್ಳಬೇಕಾ? ಬಿಜೆಪಿ ಮೈತ್ರಿ ಬಿಟ್ಟುಬಿಡಿ; ಸಿಎಂ ಇಬ್ರಾಹಿಂ ಪುತ್ರ ಫೈಜ್ ಮನವಿ!
ನಗರ್ತಪೇಟೆ ಪ್ರತಿಭಟನೆಗೆ ನಿರೀಕ್ಷೆಗೂ ಮೀರಿದ ಜನರು ಸೇರಿದ್ದರಿಂದ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ. ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಳ ಹಿನ್ನಲೆಯಲ್ಲಿ ಒಟ್ಟು 4 ಕೆಎಸ್ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದ್ದು, ಪೊಲೀಸ್ ಸರ್ಪಗಾವಲು ಹಾಕಲಾಗಿದೆ ಹೆಚ್ಚಿನ ಪೊಲೀಸರು ಆಗಮಿಸಿ ಎಲ್ಲ ಪ್ರತಿಭಟನಾಕಾರರನ್ನು ಬೀದಿಯಿಂದ ತೆರವುಗೊಳಿಸಲಾಗಿದೆ. ಇದರಿಂದಾಗಿ ಪ್ರತಿಭಟನೆ ತಹಬದಿಗೆ ಬಂದಿದೆ. ನಂತರ ಪೊಲೀಸರು ರೂಟ್ ಮಾರ್ಚ್ ಮಾಡುತ್ತಿದ್ದಾರೆ.
ಘಟನೆ ಹಿನ್ನೆಲೆ: ನಗರ್ತಪೇಟೆಯಲ್ಲಿ ನಮಾಜ್ ಮಾಡುವ ಸಮಯಕ್ಕೆ ಅದೇ ರಸ್ತೆಯಲ್ಲಿದ್ದ ಮೊಬೈಲ್ ಅಂಗಡಿ ಮಾಲೀಕ ಹನುಮಾನ್ ಚಾಲೀಸಾ ಹಾಕಿದ್ದಾನೆ ಎಂಬ ಕಾರಣಕ್ಕೆ ಅನ್ಯಕೋಮಿನ ಕೆಲ ಯುವಕರು ಮೇಲೆ ಹಲ್ಲೆ ಮಾಡಿದ್ದರು. ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಡನೆ ನಡೆದಿದ್ದು, ನಗರ್ತಪೇಟೆಯ ಸಿದ್ದಣ್ಣ ಗಲ್ಲಿಯಲ್ಲಿ ಭಾನುವಾರ ಸಂಜೆ ನಡೆದಿದೆ. ಮೊಬೈಲ್ ಬಿಡಿ ಭಾಗಗಳ ಅಂಗಡಿ ಮಾಲೀಕ ಮುಖೇಶ್ ಹಲ್ಲೆಗೊಳಗಾದವರು. ಹಲ್ಲೆ ಸಂಬಂಧ ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಅನ್ಯಕೋಮಿನ ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದರು.