ನಾಡಗೀತೆ 2.5 ನಿಮಿಷಕ್ಕಿಳಿಸಲು ನಿರ್ಧಾರ

By Web Desk  |  First Published Nov 15, 2018, 7:37 AM IST

ಕುವೆಂಪು ವಿರಚಿತ ‘ಜೈ ಭಾರತ ಜನನಿಯ ತನುಜಾತೆ’ ನಾಡಗೀತೆಯನ್ನು ಯಾವುದೇ ಧಾಟಿಯಲ್ಲಿ ಹಾಡಿದರೂ ಎರಡೂವರೆ ನಿಮಿಷದಲ್ಲಿ ಮುಗಿಸಬೇಕು ಎಂಬ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಕನ್ನಡ ಸಾಹಿತ್ಯ ಪರಿಷತ್ತು ತೀರ್ಮಾನ  ಮಾಡಿದೆ.


ಬೆಂಗಳೂರು :  ರಾಷ್ಟ್ರಕವಿ ಕುವೆಂಪು ವಿರಚಿತ ‘ಜೈ ಭಾರತ ಜನನಿಯ ತನುಜಾತೆ’ ನಾಡಗೀತೆಯನ್ನು ಯಾವುದೇ ಧಾಟಿಯಲ್ಲಿ ಹಾಡಿದರೂ ಎರಡೂವರೆ ನಿಮಿಷದಲ್ಲಿ ಮುಗಿಸಬೇಕು ಎಂಬ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಕನ್ನಡ ಸಾಹಿತ್ಯ ಪರಿಷತ್ತು ತೀರ್ಮಾನಿಸಿದೆ.

ಈಗಾಗಲೇ ಸ್ವೀಕೃತವಾದ ನಾಡಗೀತೆಯನ್ನು ಅಪಭ್ರಂಶವಿಲ್ಲದೇ, ಯಾವುದೇ ಪದಗಳನ್ನು ತೆಗೆಯದೆ ಎರಡೂವರೆ ನಿಮಿಷದಲ್ಲಿ ಹಾಡಬಹುದು ಎಂಬುದನ್ನು ಬುಧವಾರ ನಡೆಸಿದ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಭೆಯಲ್ಲಿ ಕೈಗೊಂಡ ಶಿಫಾರಸುಗಳನ್ನು ಎರಡು ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Tap to resize

Latest Videos

ಈ ಕುರಿತು ಬುಧವಾರ ಬೆಳಗ್ಗೆ ನಡೆದ ಸಭೆಯಲ್ಲಿ ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ, ಪ್ರೊ.ಚಂದ್ರಶೇಖರ ಪಾಟೀಲ, ನಾಡೋಜ ಕಮಲಾ ಹಂಪನಾ, ಪದ್ಮಶ್ರೀ ಡಾ.ದೊಡ್ಡರಂಗೇಗೌಡ, ರಾ.ನಂ.ಚಂದ್ರಶೇಖರ್‌, ವೈ.ಕೆ.ಮುದ್ದುಕೃಷ್ಣ, ಕಿಕ್ಕೇರಿ ಶ್ರೀನಿವಾಸ್‌, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌ ಸೇರಿದಂತೆ ಹಿರಿಯ ಸಾಹಿತಿಗಳು, ಗಾಯಕರ ಮತ್ತು ಹೋರಾಟಗಾರರ ಸಮ್ಮುಖದಲ್ಲಿ ನಾಡಗೀತೆಯ ಅವಧಿ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಯಿತು ಎಂದು ಹೇಳಿದರು.

ಸಭೆಯಲ್ಲಿ ಗಾಯಕರಾದ ಆನಂದ ಮಾದಲಗೆರೆ, ಮೃತ್ಯುಂಜಯ ದೊಡ್ಡವಾಡ ನಾಡಗೀತೆಯನ್ನು ಯಾವುದೇ ಅಪಭ್ರಂಶವಿಲ್ಲದೆ, ಅವಸರವೂ ಇಲ್ಲದೆ ಕೇವಲ 2.18 ನಿಮಿಷದಲ್ಲಿ ಹಾಡಿ ಮುಗಿಸಿದರು. ಹೀಗಾಗಿ ಎರಡರಿಂದ ಎರಡೂವರೆ ನಿಮಿಷದಲ್ಲಿ ನಾಡಗೀತೆಯ ಅವಧಿ ನಿಗದಿಗೊಳಿಸಬಹುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ. ಆದರೆ, ಧಾಟಿ ಯಾವುದು ಇರಬೇಕು ಎಂಬುದರ ಕುರಿತು ಯಾವುದೇ ಚರ್ಚೆ ಸಭೆಯಲ್ಲಿ ನಡೆದಿಲ್ಲ ಎಂದು ತಿಳಿಸಿದ ಮನುಬಳಿಗಾರ್‌ ಅವರು, ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ಹಿರಿಯ ಕವಿ ನಿಸಾರ್‌ ಅಹಮದ್‌ ಅವರು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ರಾಷ್ಟ್ರಕವಿ ಕುವೆಂಪು ರಚಿತ ನಾಡಗೀತೆಯನ್ನು ಸಭೆ, ಸಮಾರಂಭಗಳಲ್ಲಿ 8-9 ನಿಮಿಷಗಳ ಕಾಲ ಹಾಡಲಾಗುತ್ತಿದೆ. ಇದರಿಂದ ಹಿರಿಯ ನಾಗರಿಕರಿಗೆ, ಅನಾರೋಗ್ಯ ಪೀಡಿತರು ಮತ್ತು ಅಸಹಾಯಕರಿಗೆ ಅಷ್ಟುಹೊತ್ತು ನಿಂತು ಹಾಡಲು ಅಥವಾ ಕೇಳಿಸಿಕೊಳ್ಳಲು ಅಸಾಧ್ಯ. ಹೀಗಾಗಿ ಹಾಡನ್ನು ಪುನರಾವರ್ತನೆಯಾಗದಂತೆ ಯಾವುದೇ ಧಾಟಿಯಲ್ಲಿ ಹಾಡಿದರೂ ಎರಡೂವರೆ ನಿಮಿಷದೊಳಗೆ ಹಾಡಬಹುದು ಎಂಬುದನ್ನು ದಾಖಲಿಸಿದ್ದೇವೆ. ಅದನ್ನು ಸರ್ಕಾರಕ್ಕೆ ಪ್ರಸ್ತಾವನೆಯಾಗಿ ಕಳುಹಿಸುತ್ತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಸಾಪ ಗೌರವ ಕೋಶಾಧ್ಯಕ್ಷ ಮಲ್ಲಿಕಾರ್ಜುನಪ್ಪ, ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಧಾಟಿ ಯಾವುದು?

2003ರ ಜನವರಿ 7ರಂದು ಕುವೆಂಪು ರಚಿತ ಕವನವನ್ನು ನಾಡಗೀತೆಯಾಗಿ ಅಂಗೀಕರಿಸಿ ಸರ್ಕಾರ ಆದೇಶ ಹೊರಡಿಸಿತ್ತು. ನಂತರ ಹಿರಿಯ ಸಾಹಿತಿ ದಿ.ಜಿ.ಎಸ್‌.ಶಿವರುದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಸಂಗೀತ ನಿರ್ದೇಶಕ ಎಚ್‌.ಕೆ.ನಾರಾಯಣ, ವಸಂತ ಕನಕಾಪುರ, ಡಾ.ಸಿದ್ದಲಿಂಗಯ್ಯ ಅವರ ಸಮಿತಿ ರಚಿಸಿ ಧಾಟಿ ಯಾವುದಿರಬೇಕು ಎಂಬುದರ ಕುರಿತು ವರದಿ ನೀಡುವಂತೆ ಸರ್ಕಾರ ಸೂಚಿಸಿತ್ತು. ಆದರೆ ಈ ಸಮಿತಿ ಶಿಫಾರಸನ್ನು ಅಂಗೀಕರಿಸಿರಲಿಲ್ಲ. ಬಳಿಕ 2013ರಲ್ಲಿ ವಸಂತ ಕನಕಾಪುರ ಅವರ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿ ರಚಿಸಿತ್ತು. ಆದರೆ ವರದಿ ಸಲ್ಲಿಸುವುದಕ್ಕೂ ಮುನ್ನವೇ ಕನಕಾಪುರ ನಿಧನ ಹೊಂದಿದ್ದರು. ಬಳಿಕ ಚೆನ್ನವೀರ ಕಣವಿ ಅಧ್ಯಕ್ಷತೆಯಲ್ಲಿ ಸರ್ಕಾರ ಸಮಿತಿ ರಚಿಸಿತ್ತು. 2014 ಮೇನಲ್ಲಿ ಸಮಿತಿ ವರದಿ ನೀಡಿತ್ತು. ಆದರೆ ಇದುವರೆಗೂ ಅದು ಅನುಷ್ಠಾನಕ್ಕೆ ಬಂದಿಲ್ಲ.

click me!