ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್ ಅವರು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ವೇಲೆ 4.99 ಕೋಟಿ ರೂ. ಮೌಲ್ಯದ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಈ ವೇಳೆ ತಮ್ಮ ಬಳಿ ಸ್ವಂತಕ್ಕೆ ಮನೆ, ಕಾರು ಇಲ್ಲವೆಂದು ತಿಳಿಸಿದ್ದಾರೆ.
ಮೈಸೂರು (ಏ.01): ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಬೆಳಗ್ಗೆ ಮಹಾರಾಣಿ ಪ್ರಮೋದಾದೇವಿ ಅವರೊಂದಿಗೆ ತೆರಳಿ ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದರು. ಇವರು ಒಟ್ಟಾರೆ 4.99 ಕೊಟಿ ಮೌಲ್ಯದ ಚರಾಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದು, ತಮ್ಮ ಬಳಿ ಸ್ವಂತ ಕಾರಿಲ್ಲ ಎಂದು ಘೋಷಣೆ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕಾವು ಜೋರಾಗಿದ್ದು, ಅಬ್ಬರದ ಪ್ರಚಾರದ ಜೊತೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯೂ ಆರಂಭವಾಗಿದೆ. ಮಹಾರಾಜ ಯದುವೀರ ಅವರ ಜನ್ಮರಾಶಿಗೆ ಹೊಂದಾಣಿಕೆ ಆಗುವಂತೆ ಸೋಮವಾರ ಶುಭದಿನವಾಗಿದ್ದು, ಇಂದೇ ನಾಮಪತ್ರ ಸಲ್ಲಿಕೆ ಮಾಡುವಂತೆ ಅರಮನೆಯ ಜ್ಯೋತಿಷ್ಯರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಹಾರಾಣಿ ಪ್ರಮೋದಾದೇವಿ ಹಾಗೂ ಶಾಸಕ ಶ್ರೀವತ್ಸ ಅವರೊಂದಿಗೆ ತೆರಳಿ ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರವನ್ನು ಸಲ್ಲಿಕೆ ಮಾಡಿದರು.
ಅಮಿತ್ ಶಾ ಚಾಣಕ್ಯನೇ ಅಲ್ಲ, ಅವರಿಗಿರುವ ಅಧಿಕಾರ ನಂಗೆ ಕೊಡ್ರಿ ನಾನೂ ಚಾಣಕ್ಯ ಆಗ್ತೀನಿ: ಸಚಿವ ಪ್ರಿಯಾಂಕ ಖರ್ಗೆ
ಈ ವೇಳೆ ತಮ್ಮ ಆಸ್ತಿ ವಿವರನ್ನು ಘೋಷಣೆ ಮಾಡಿಕೊಂಡಿರುವ ಯದುವೀರ್ ಅವರು ತಮ್ಮ ಬಳಿ ಒಟ್ಟು 4,99,59,303 ಮೌಲ್ಯದ ಚರಾಸ್ತಿ ಇದ್ದರೂ ತಾವು ಸ್ವಂತಕ್ಕೆ ಒಂದು ಕಾರನ್ನೂ ಹೊಂದಿಲ್ಲ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಈ ವೇಳೆ ತಮ್ಮ ಕೈಯಲ್ಲಿ 1 ಲಕ್ಷ ರೂ. ನಗದು, ಎರಡು ಬ್ಯಾಂಕ್ ಖಾತೆಗಳಲ್ಲಿ 23.55 ಲಕ್ಷ ರೂ. ಹಣವಿದೆ. 1 ಕೋಟಿ ಮೌಲ್ಯದ ವಿವಿಧ ಕಂಪನಿಗಳಲ್ಲಿ ಬಾಂಡ್ ಮತ್ತು ಶೇರ್ಸ್‌ಗಳಿವೆ. ಜೊತೆಗೆ, ತಮ್ಮ ಬಳಿ 4 ಕೆ.ಜಿ. ಚಿನ್ನ ಹಾಗೂ 20 ಕೆ.ಜಿ. ಬೆಳ್ಳಿ ಇದೆ. ತಾವು ಯಾವುದೇ ಕೃಷಿ ಭೂಮಿ ಹಾಗೂ ಸ್ವಂತ ಮನೆ ಹೊಂದಿಲ್ಲ. ಯಾವ ವಾಣಿಜ್ಯ ಕಟ್ಟಡಗಳಿಲ್ಲ. ಬ್ಯಾಂಕ್‌ಗಳಲ್ಲಿ ಸಾಲ ಪಡೆದಿಲ್ಲ ಎಂದು ಘೋಷಿಸಿಕೊಂಡಿದ್ದಾರೆ.
ಬೆಳಗಾವಿಯ 'ಸತ್ತಗುರು' ಬಟ್ಟೆ ಅಂಗಡಿ ನಾಮಫಲಕ ಫುಲ್ ವೈರಲ್; ಕೊನೆಗೂ 'ಸತ್‌ಗುರು' ಎಂದು ಬದಲಿಸಿದ ಮಾಲೀಕ!
ಜೊತೆಗೆ, ತಾವು ಸರ್ಕಾರಕ್ಕೆ ಯಾವುದೇ ರೀತಿಯ ಆದಾಯ ತೆರಿಗೆ ಹಣ ಬಾಕಿ ಉಳಿಸಿಕೊಂಡಿಲ್ಲ. ಈವರೆಗೆ ತಮ್ಮ ಮೇಲೆ ಯಾವ ಪ್ರಕರಣಗಳು ದಾಖಲಾಗಿಲ್ಲ. ಒಟ್ಟಾರೆ ತಮ್ಮ ಬಳಿ 4.99 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದರೂ, ಯಾವುದೇ ಸ್ಥಿರಾಸ್ತಿಯನ್ನು ಹೊಂದಿಲ್ಲ ಎಂದು ಘೋಷಣೆ ಮಾಡಿಕೊಂಡಿದ್ದಾರೆ.