
ಮೈಸೂರು(ಆ.29): ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ರಾಜ್ಯ ಸರಕಾರದ ನಿರ್ಧಾರ ಸ್ವಾಗತಿಸಿದ್ದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇದೀಗ ಯು-ಟರ್ನ್ ತೆಗೆದುಕೊಂಡಿದ್ದಾರೆ.
ದಸರಾ ವಿವಾದ ಸಂಬಂಧ ಮೈಸೂರಿನ ಸುತ್ತೂರು ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದರು,ಸರ್ಕಾರ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದಾಗ ನಾನು ಸ್ವಾಗತಿಸಿದ್ದೆ. ಆದರೆ, ಅವರ ಹಿಂದಿನ ಭಾಷಣವನ್ನು ನೋಡಿದ ನಂತರ, ಕನ್ನಡ ತಾಯಿ ಭುವನೇಶ್ವರಿ, ಹರಿಶಿನ ಕುಂಕುಮ ಬಾವುಟ ಕುರಿತಂತೆ ಅವರು ನೀಡಿರುವ ಹೇಳಿಕೆಗಳಿಂದ ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ. ಈ ಬಗ್ಗೆ ಸ್ಪಷ್ಟನೆ ಕೊಡದಿದ್ದರೆ ಅಥವಾ ಹೇಳಿಕೆಯನ್ನು ವಾಪಸ್ ಪಡೆಯದಿದ್ದರೆ, ದಸರಾ ಉದ್ಘಾಟನೆಗೆ ಅವರ ಆಯ್ಕೆಗೆ ನನ್ನ ವಿರೋಧ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ಚಾಮುಂಡೇಶ್ವರಿ ತಾಯಿಯನ್ನು ಭಕ್ತಿಯಿಂದ ಪೂಜಿಸಲಿ:
ಬಾನು ಮುಷ್ತಾಕ್ ಅವರ ಧಾರ್ಮಿಕ ಆಚರಣೆಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ನಮ್ಮ ಧರ್ಮದಲ್ಲಿ ಮೂರ್ತಿ ಪೂಜೆ ಶ್ರೇಷ್ಠವಾಗಿದೆ. ಚಾಮುಂಡೇಶ್ವರಿ ತಾಯಿಯನ್ನು ಗೌರವಿಸಿ, ಭಕ್ತಿಯಿಂದ ದೇವರನ್ನು ಪೂಜಿಸಬೇಕು. ಇದಕ್ಕೂ ಮುನ್ನ ತಮ್ಮ ಹಿಂದಿನ ಹೇಳಿಕೆಗಳ ಬಗ್ಗೆ ಸ್ಪಷ್ಟನೆ ಕೊಡಬೇಕು. ಒಂದು ವೇಳೆ ಸ್ಪಷ್ಟನೆ ಕೊಡದಿದ್ದರೆ, ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆಗೆ ನನ್ನ ವಿರೋಧವಿದೆ ಎಂದರು. ನನ್ನ ವಿರೋಧವು ಪಕ್ಷದ ನಿರ್ಧಾರಕ್ಕೆ ವಿರುದ್ಧವಲ್ಲ. ಪಕ್ಷದ ನಿರ್ಧಾರವೇ ನಮ್ಮ ನಿರ್ಧಾರ ಎಂದರು.ಚಾಮುಂಡಿ ಬೆಟ್ಟ ಕುರಿತ ಡಿಕೆಶಿ ಹೇಳಿಕೆಗೆ ತಿರುಗೇಟು:
ಇದೇ ವೇಳೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಚಾಮುಂಡಿ ಬೆಟ್ಟ ಕುರಿತ ಹೇಳಿಕೆಯನ್ನು ಯದುವೀರ್ ತೀವ್ರವಾಗಿ ಟೀಕಿಸಿದರು. 'ಚಾಮುಂಡಿ ಬೆಟ್ಟ ಸದಾ ಕಾಲದಿಂದಲೂ ಹಿಂದೂ ದೇವಸ್ಥಾನವಾಗಿದೆ. ಇದು ಬೇರೆಯವರ ಶ್ರದ್ಧಾ ಕೇಂದ್ರವಾಗಲು ಹೇಗೆ ಸಾಧ್ಯ? ಇಂತಹ ಹೇಳಿಕೆಗಳು ಹಾಸ್ಯಾಸ್ಪದವಾಗಿವೆ. ಯಾರನ್ನು ಮೆಚ್ಚಿಸಲು ಇಂಥ ಅಸಂಬದ್ಧ ಹೇಳಿಕೆ ನೀಡುತ್ತಾರೆ ಎಂದು ಖಾರವಾಗಿ ಪ್ರಶ್ನಿಸಿದರು. ಈ ಹೇಳಿಕೆಯಿಂದ ಮೈಸೂರು ದಸರಾ ಉದ್ಘಾಟನೆಯ ಸುತ್ತಲಿನ ರಾಜಕೀಯ ಚರ್ಚೆ ಮತ್ತಷ್ಟು ತೀವ್ರಗೊಂಡಿದ್ದು, ಬಾನು ಮುಷ್ತಾಕ್ ಅವರಿಂದ ಸ್ಪಷ್ಟನೆ ಬರುವುದೇ ಎಂಬ ಕುತೂಹಲ ಎಲ್ಲೆಡೆ ಕಾಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ