
ಶಿವಮೊಗ್ಗ (ಸೆ.5): ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡುವ ಕಾಂಗ್ರೆಸ್ ಸರ್ಕಾರದ ಕಣ್ಣಿಗೆ ದೀಪಾ ಭಾಸ್ತಿ ಅವರು ಕಾಣಿಸಲಿಲ್ವಾ? ಅವರನ್ನು ಯಾಕೆ ಆಹ್ವಾನಿಸಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಾನು ಮುಷ್ತಾಕ್ ಅವರು ಅರಿಶಿನ ಕುಂಕುಮ ಹಚ್ಚಿಕೊಂಡು ಬರಬೇಕಿಲ್ಲ ಎಂಬ ಸಿಎಂ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ದೀಪಾ ಭಾಸ್ತಿಯವರಿಗೂ ಬೂಕರ್ ಪ್ರಶಸ್ತಿ ಬಂದಿದ್ದು, ಮುಷ್ತಾಕ್‌ರನ್ನು ಉದ್ಘಾಟನೆಗೆ ಕರೆಯಲು ಯೋಚಿಸಿದವರಿಗೆ ದೀಪಾ ಏಕೆ ಕಾಣಲಿಲ್ಲ ಎಂದು ಕಿಡಿಕಾರಿದರು.
ಉಪ ಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಅವರು ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದಲ್ಲ ಎಂದು ಹೇಳಿಕೆ ನೀಡುವುದು ಸರಿಯಲ್ಲ ಎಂದು ಕುಟುಕಿದರು.
ಸಿಎಂಗೆ ತಿರುಗೇಟು: ಧರ್ಮಸ್ಥಳ ಚಲೋದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದು, ಹೋರಾಟ ಯಶಸ್ವಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯವರು ವೀರೇಂದ್ರ ಹೆಗ್ಗಡೆಯವರ ಪರವಾಗಿದ್ದಾರಾ? ಅಥವಾ ಸೌಜನ್ಯ ಪರವಾಗಿದ್ದಾರಾ? ಎಂದು ಕೇಳಿದ್ದಾರೆ. ಸಿದ್ದರಾಮಯ್ಯರವರೇ ನಾನು ಕೋಟ್ಯಾಂತರ ಮಂಜುನಾಥನ ಭಕ್ತರ ಪರವಾಗಿದ್ದೇನೆ. ನೀವು ಧರ್ಮಸ್ಥಳ ಭಕ್ತರ ಭಾವನೆಗಳಿಗೆ ಧಕ್ಕೆ ತರಬೇಡಿ ಎಂದರು.
ನಿಮ್ಮಲ್ಲಿ ಪ್ರಾಮಾಣಿಕತೆ ಇದ್ದರೆ ಯೂಟ್ಯೂಬರ್ ಎಂ.ಡಿ.ಸಮೀರ್‌ನನ್ನು ಮೊದಲು ಬಂಧಿಸಿ. ಸೋನಿಯಾ ಗಾಂಧಿ ಬಗ್ಗೆ ಒಂದು ಪೋಸ್ಟ್ ಹಾಕಿದರೆ ಬಂಧಿಸುತ್ತೀರಿ. ಆದರೆ, ಸಮೀರ್‌ನನ್ನು ಯಾಕೆ ಬಂಧಿಸುತ್ತಿಲ್ಲ? ಎಂದು ಬಿವೈವಿ ಪ್ರಶ್ನಿಸಿದರು.
ಎಚ್‌ಡಿಡಿ ನಡೆ ಶ್ಲಾಘನೆ:
ದೇಶದ ಹಿತಾಸಕ್ತಿ ಬಂದಾಗ ಯಾವ ರೀತಿ ನಿಲುವು ತೆಗೆದುಕೊಳ್ಳಬೇಕು ಎಂಬುದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಉತ್ತಮ ಆದರ್ಶ ಹಾಕಿಕೊಟ್ಟಿದ್ದಾರೆ. ಇತ್ತೀಚೆಗೆ ನಡೆದ ಶೃಂಗಸಭೆಯ ಬಗ್ಗೆ ಇಡೀ ವಿಶ್ವದಲ್ಲಿ ಚರ್ಚೆಯಾಗುತ್ತಿದ್ದು, ದೇಶದ ವಿಚಾರದಲ್ಲಿ ದೇವೇಗೌಡರು ಪ್ರದರ್ಶಿಸಿದ ನಡೆ ಎಲ್ಲರಿಗೂ ಉತ್ತಮ ಮೇಲ್ಪಂಕ್ತಿಯಾಗಿದೆ. ಮುಂದಿನ ವಾರ ಪಕ್ಷದ ಮುಖಂಡರೊಂದಿಗೆ ದೇವೇಗೌಡರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸುವುದಾಗಿ ವಿಜಯೇಂದ್ರ ತಿಳಿಸಿದರು.
ಕರ್ನಾಟಕ ಕಾಂಗ್ರೆಸ್ ಎಟಿಎಂ:
ಕೇವಲ ಭೋವಿ ನಿಗಮವೊಂದೇ ಅಲ್ಲ. ರಾಜ್ಯದ ಎಲ್ಲ ನಿಗಮಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಕಾಂಗ್ರೆಸ್ ಹೈಕಮಾಂಡ್‌ಗೆ ಕರ್ನಾಟಕ ಎಟಿಎಂ ಇದ್ದ ಹಾಗೆ. ಆದ್ದರಿಂದಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂದು ಆ ಪಕ್ಷದ ಹೈಕಮಾಂಡ್ ಹಪಹಪಿಸಿದೆ ಎಂದು ಟೀಕಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ