ಮೈಸೂರು ದಸರಾ: ಬಾನಂಗಳದಲ್ಲಿ ಡ್ರೋನ್‌ಗಳ ಚಿತ್ತಾರ, ಹುಲಿ ಕಲಾಕೃತಿಯಿಂದ ವಿಶ್ವದಾಖಲೆ

Published : Sep 28, 2025, 10:23 PM IST
Mysuru dasara drone show

ಸಾರಾಂಶ

ಮೈಸೂರು ದಸರಾ ಮಹೋತ್ಸವಕ್ಕೆ ಹೊಸ ಮೆರಗು ನೀಡಿದ ಅತ್ಯಾಕರ್ಷಕ ಡ್ರೋನ್ ಪ್ರದರ್ಶನ ಪ್ರೇಕ್ಷಕರ ಮನಸೂರೆ ಮಾಡಿತು. ಬಾನಂಗಳದಲ್ಲಿ ವಿವಿಧ ಕಲಾಕೃತಿಗಳ ಬಣ್ಣಬಣ್ಣದ ಚಿತ್ತಾರಗಳನ್ನು ಬಿಡಿಸಿದ 3,000 ಡ್ರೋನ್‌ಗಳು ಹೊಸ ಲೋಕವನ್ನು ಸೃಷ್ಟಿಸಿತು.

ಮೈಸೂರು (ಸೆ.28): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಹೊಸ ಮೆರಗು ನೀಡಿದ ಅತ್ಯಾಕರ್ಷಕ ಡ್ರೋನ್ ಪ್ರದರ್ಶನ ಪ್ರೇಕ್ಷಕರ ಮನಸೂರೆ ಮಾಡಿತು. ಬಾನಂಗಳದಲ್ಲಿ ವಿವಿಧ ಕಲಾಕೃತಿಗಳ ಬಣ್ಣಬಣ್ಣದ ಚಿತ್ತಾರಗಳನ್ನು ಬಿಡಿಸಿದ 3,000 ಡ್ರೋನ್‌ಗಳು ಹೊಸ ಲೋಕವನ್ನು ಸೃಷ್ಟಿಸಿತು. ಇದರೊಂದಿಗೆ 2,983 ಡ್ರೋನ್ ಗಳನ್ನು ಬಳಸಿ ರಾಷ್ಟ್ರೀಯ ಪ್ರಾಣಿ ಹುಲಿಯ ಕಲಾಕೃತಿ ರಚಿಸಿ ವಿಶ್ವದಾಖಲೆ‌ ನಿರ್ಮಿಸುವ ಮೂಲಕ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಹಿರಿಮೆಯನ್ನು ಹೆಚ್ಚಿಸಿದೆ.

ಇಂತಹ ರೋಮಾಂಚಕಾರಿ ಡ್ರೋನ್ ಪ್ರದರ್ಶನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನೆರೆದಿದ್ದ ಸಾವಿರಾರು ಜನರ ಕಣ್ಮನ ಸೆಳೆಯಿತು. ನೋಡುಗರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ ಡ್ರೋನ್ ಪ್ರದರ್ಶನ ದಸರಾ ಮಹೋತ್ಸವದ ಸಂಭ್ರಮಕ್ಕೆ ರಂಗು ನೀಡಿತು. ಏಕಕಾಲದಲ್ಲಿ ಬಾನೆತ್ತರಕ್ಕೆ ಹಾರಿದ ಡ್ರೋನ್ ಗಳು ಬಣ್ಣಬಣ್ಣದ ದೀಪಗಳಿಂದ ಮಿನುಗುತ್ತಾ ಆಕರ್ಷಕ ಕಲಾಕೃತಿಗಳನ್ನು ಸೃಷ್ಟಿಸಿದವು.

ಸೌರಮಂಡಲ, ವಿಶ್ವಭೂಪಟ, ದೇಶದ ಹೆಮ್ಮೆಯ ಸೈನಿಕ, ನವಿಲು, ರಾಷ್ಟ್ರೀಯ ಪ್ರಾಣಿ ಹುಲಿ, ಡಾಲ್ಫಿನ್, ಈಗಲ್, ಸರ್ಪದ ಮೇಲೆ ಶ್ರೀಕೃಷ್ಣ ನೃತ್ಯ ಮಾಡುವುದು, ಕಾವೇರಿ ಮಾತೆ, ಕರ್ನಾಟಕ ಭೂಪಟದೊಂದಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್, ಪಂಚ ಗ್ಯಾರಂಟಿ ಯೋಜನೆಗಳಿಂದ ಕೂಡಿದ್ದ ಕರ್ನಾಟಕ ಭೂಪಟ‌, ಅಂಬಾರಿ ಆನೆ, ನಾಡದೇವತೆ ಚಾಮುಂಡೇಶ್ವರಿ ಕಲಾಕೃತಿಗಳು ನೋಡುಗರಿಗೆ ಅದ್ಭುತ ಮನರಂಜನೆ ನೀಡಿದವು. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.

ಸಂಗೀತ ಕಾರ್ಯಕ್ರಮ

ದಸರಾ ಅಂಗವಾಗಿ ಪಂಜಿನ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಡ್ರೋನ್‌ ಷೋ ವೇಳೆ ಖ್ಯಾತ ಹಿನ್ನೆಲೆ ಗಾಯಕ ಕುನಾಲ್ ಗಾಂಜಾವಾಲ ಹಾಡಿನ ಮೋಡಿ ಮಾಡಿದರು. ಡ್ರೋನ್ ಪ್ರದರ್ಶನ ಆರಂಭಕ್ಕೂ ಮುನ್ನ ಗಾಯಕ ಕುನಾಲ್ ಗಾಂಜಾವಾಲ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ವೇದಿಕೆಗೆ ಬರುತ್ತಿದ್ದಂತೆ ಮೊದಲಿಗೆ ಪುನೀತ್ ರಾಜ್‍ಕುಮಾರ್ ಅಭಿನಯದ ನೀನೆ ನೀನೆ ಗೀತೆಯನ್ನು ಹಾಡಿ ರಂಜಿಸಿದ ಕುನಾಲ್ ಗಾಂಜಾವಾಲ, ಆ ನಂತರದಲ್ಲಿ ಕನ್ನಡದ ಖುಷಿಯಾಗಿದೆ ಏಕೋ ನಿನ್ನಿಂದಲೆ..., ಒಂದೇ ಒಂದು ಸಾರಿ ಕಣ್ಮುಂದೆ ಬಾರೆ..., ನಿನ್ನ ಕಂಡ ಕ್ಷಣದಿಂದ..., ಹುಡುಗಿ ಹುಡುಗಿ ನಿನ್ನ ಕಂಡಾಗ, ಕಿವಿ ಮಾತೊಂದು ಹೇಳಲೆ ನಾನಿಂದು ಸೇರಿದಂತೆ ಹಿಂದಿಯ ಹಲವು ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!