
ಚಿತ್ರದುರ್ಗ (ಅ.4): ಈ ಬಾರಿ ದಸರಾ ಉದ್ಘಾಟನೆ ವೇಳೆ ಕೇವಲ ರಾಜಕೀಯ ಭಾಷಣ ಮಾಡಿ ಚಾಮುಂಡೇಶ್ವರಿಗೆ ಅಪಮಾನ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ.
ಇಂದು ಚಿತ್ರದುರ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆರ್ ಅಶೋಕ್ ಅವರು, ನಾಡ ಹಬ್ಬ ದಸರಾ ಎಂದರೆ ಅದಕ್ಕೊಂದು ಮಹತ್ವ, ಐತಿಹಾಸಿಕ ಹಿನ್ನೆಲೆ ಇದೆ. ಇಂತಹ ಕಾರ್ಯಕ್ರಮಕ್ಕೆ ಚಾಲನೆ ನೀಡುವ ವೇಳೆ ಸರ್ಕಾರ ಪತನ, ಮುಡಾ ಹಗರಣ, ರಾಜೀನಾಮೆ.. ಭಾಷಣಗಳಲ್ಲಿ ಇವೇ ಮಾತುಗಳು ತುಂಬಿವೆ. ಇದು ತಾಯಿ ಚಾಮುಂಡೇಶ್ವರಿಗೆ ಮಾಡಿ ಅಪಮಾನವೇ ಸರಿ ಎಂದು ಕಿಡಿಕಾರಿದರು.
ಈ ಬಾರಿ ದಸರಾ ಉದ್ಘಾಟಿಸಿದ ಆ ಮಹಾನುಭಾವ ಸಾಹಿತಿನೋ, ಸಾಹಿತಿಯಂತೆ ಇರುವ ರಾಜಕಾರಣಿಯೋ ಗೊತ್ತಿಲ್ಲ. ಆದರೆ ಆ ಮನುಷ್ಯನೂ ಸಹ ಭಾಷಣದುದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಟೀಕಿಸಿ ಭಾಷಣ ಮಾಡಿದರು. ರಾಜ್ಯ ಸರ್ಕಾರ ಕೆಡವಲು ಷಡ್ಯಂತ್ರ ನಡೆದಿದೆ ಎಂದರು. ಅವರೊಬ್ಬ ಸಾಹಿತಿಯಾಗಿ ದಸರಾ ಹಬ್ಬದ ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಆರಾಧನೆ, ಮೈಸೂರು ಸಂಸ್ಕೃತಿ ಮರೆತು ರಾಜಕೀಯ ಭಾಷಣ ಮಾಡಿದ್ದಾರೆ ಎನ್ನುವ ಮೂಲಕ ಸಾಹಿತಿ ಹಂಪನಾ ವಿರುದ್ಧ ಕಿಡಿಕಾರಿದರು.
'ಪಾಪದ ಕೊಡ ತುಂಬಿದಾಗ ಈ ಸರ್ಕಾರ ತಾನಾಗೇ ಬೀಳುತ್ತೆ..' ಸಚಿವ ಎನ್ಎಸ್ ಬೋಸರಾಜುಗೆ ಆರ್ ಅಶೋಕ್ ತಿರುಗೇಟು
ಡಿಕೆ ಶಿವಕುಮಾರಗೆ ತಿರುಗೇಟು:
ಕೇಂದ್ರ ಸಚಿವ ಸ್ಥಾನದ ಉಳಿವಿಗಾಗಿ ಹೆಚ್ಡಿಕೆ ಪಾದಯಾತ್ರೆ ಮಾಡಿದ್ದಾರೆ ಎಂಬ ಡಿಕೆ ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಯಿಸಿದ ಆರ್. ಅಶೋಕ್, ಡಿಕೆ ಶಿವಕುಮಾರ ಅವರಿಗೆ ಭಯ ಇದ್ದಿರಬಹು. ಬಿಜೆಪಿ- ಜೆಡಿಎಸ್ ಮೈತ್ರಿ ಶಕ್ತಿ ಏನೆಂಬುದು ಲೋಕಸಭೆ ಚುನಾವಣೆ ಫಲಿತಾಂಶ ನೋಡಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ವೇಳೆಯ ಫಲಿತಾಂಶವೂ ನಮ್ಮ ಮುಂದಿದೆ ಎಂದು ತಿರುಗೇಟು ನೀಡಿದರು.
ಇನ್ನು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯರನ್ನ ಹಾಡಿಹೊಗಳಿದ್ದಾರೆ. ಒಂದಷ್ಟು ಜನರು ಹೊಟ್ಟೆ ಉರಿಯಿಂದ ಮಾತಾಡಿರಬಹುದು ಎಂದರು. ಇದೇ ವೇಳೆ ಜಾತಿಗಣತಿ ನಡೆಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯ 2013ರಲ್ಲಿ ಅಧಿಕಾರದಲ್ಲಿದ್ದಾಗಲೇ ಮಾಡಬಹುದಾಗಿತ್ತು. ಆದರೆ ಮಾಡಲಿಲ್ಲ. ಕಾಂಗ್ರೆಸ್‌ನ ಒಕ್ಕಲಿಗ ಸಚಿವರೇ ವಿರೋಧಿಸಿದ್ದಾರೆ. ಲಿಂಗಾಯತ ಶಾಸಕರು ಜಾತಿ ಗಣತಿ ವಿರೋಧಿಸಿದ್ದಾರೆ. ಬಿಜೆಪಿ ಜಾತಿಗಣತಿಯನ್ನು ವಿರೋಧ ಮಾಡೋದಿಲ್ಲ. ಆದರೆ ವೈಜ್ಞಾನಿಕವಾಗಿ ಜಾತಿ ಗಣತಿ ಆಗಬೇಕು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ