ಈ ಬಾರಿ ಕಡಿಮೆ ವೆಚ್ಚದಲ್ಲಿ ಸಾಂಪ್ರದಾಯಿಕವಾಗಿ ದಸರಾ ಆಚರಣೆ: ಸಚಿವ ಎಚ್‌ಸಿ ಮಹದೇವಪ್ಪ

By Kannadaprabha News  |  First Published Oct 4, 2023, 8:35 AM IST

ಈ ಬಾರಿ ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿರುವುದರಿಂದ ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗುತ್ತಿದ್ದು, ಕಳೆದ ಬಾರಿಗಿಂತ ಕಡಿಮೆ ವೆಚ್ಚ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.


ಮೈಸೂರು (ಅ.4) :  ಈ ಬಾರಿ ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿರುವುದರಿಂದ ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗುತ್ತಿದ್ದು, ಕಳೆದ ಬಾರಿಗಿಂತ ಕಡಿಮೆ ವೆಚ್ಚ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.

ಮೈಸೂರು ಅರಮನೆ ಮಂಡಳಿ ಕಚೇರಿಯಲ್ಲಿ ಮಂಗಳವಾರ ದಸರಾ ಮಹೋತ್ಸವದ ವೈಬ್ ಸೈಟ್, ಸಾಂಸ್ಕೃತಿಕ ಉಪ ಸಮಿತಿ, ಯುವ ಸಂಭ್ರಮದ ಪೋಸ್ಟರ್ ಬಿಡುಗಡೆಗೊಳಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಉನ್ನತ ಮಟ್ಟದ ಸಭೆಯಲ್ಲಿ ಈ ಬಾರಿ ವೈಭವದಿಂದ ದಸರಾ ಆಚರಣೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಪ್ರಕೃತಿ ನಮ್ಮ ಪರವಾಗಿರದೆ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ಸರಳವೂ ಅಲ್ಲದ ಅದ್ಧೂರಿಯೂ ಅಲ್ಲದ ಸಾಂಪ್ರದಾಯಿಕ ದಸರಾ ಆಚರಣೆ ಮಾಡಲಾಗುತ್ತಿದೆ ಎಂದರು.

Latest Videos

undefined

ಮೈಸೂರು ದಸರಾ: ಮಾವುತರು, ಕಾವಾಡಿಗಳಿಗೆ ಊಟ ಬಡಿಸಿದ ಸಚಿವ ಮಹದೇವಪ್ಪ

18 ದಸರಾ ಉಪ ಸಮಿತಿ ರಚನೆ

ಈ ಬಾರಿಯ ದಸರಾ ಮಹೋತ್ಸವಕ್ಕೆ 18 ಉಪ ಸಮಿತಿ ರಚಿಸಲಾಗಿದೆ. ದಸರಾ ವೈಬ್ ಸೈಟ್, ಯುವ ಸಂಭ್ರಮ, ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಯುವಜನತೆ, ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ನಿಟ್ಟಿನಲ್ಲಿ ಸ್ತಬ್ಧಚಿತ್ರ, ಕಾರ್ಯಕ್ರಮಗಳು ರೂಪುಗೊಳ್ಳಲಿವೆ. ಸದಬಿರುಚಿಯಡಿ ಯುವ ಜನರನ್ನು ಸಂಭ್ರಮಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಈ ಸಂಬಂಧ 31 ಜಿಲ್ಲೆಗಳ ಕಲಾವಿದರು, ಅಧಿಕಾರಿಗಳ ಸಭೆ ನಡೆಸಿದ್ದು, ದಸರಾ ಕಾರ್ಯಕ್ರಮಗಳನ್ನು ಶಿಸ್ತುಬದ್ಧವಾಗಿ ಆಯೋಜಿಸುವಂತೆ ಸೂಚಿಸಿದ್ದೇನೆ. ಪ್ರತಿ ವರ್ಷದಂತೆ ಈ ಬಾರಿಯೂ ರೈತ ದಸರಾ, ಯುವ ದಸರಾ, ದೀಪಾಲಂಕಾರ, ಕುಸ್ತಿ ಇರಲಿದೆ. ಹೊರಗಿನ ಕಲಾವಿದರೂ ಯುವ ದಸರಾದಲ್ಲಿ ಭಾಗವಹಿಸಲಿದ್ದು, ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಆಹಾರ ಮೇಳವನ್ನು ಒಂದು ಕಡೆ ಮಾತ್ರ ಆಯೋಜಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ವಿಧಾನಪರಿಷತ್ತು ಸದಸ್ಯ ಡಾ.ಡಿ. ತಿಮ್ಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ.ಎನ್. ಮಂಜುಳಾ, ನಿರ್ದೇಶಕಿ ಡಾ.ಕೆ. ಧರಣಿದೇವಿ ಮಾಲಗತ್ತಿ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ನಗರ ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಷರೀಫ್, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಎಸ್ಪಿ ಸೀಮಾ ಲಾಟ್ಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು, ಹೆಚ್ಚುವರಿ ಎಸ್ಪಿ ಡಾ.ಬಿ.ಎನ್. ನಂದಿನಿ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಮೊದಲಾದವರು ಇದ್ದರು.

ಬರಗಾಲದ ಹಿನ್ನೆಲೆಯಲ್ಲಿ ಹಂಪಿ ಉತ್ಸವ ಕೈಬಿಡುವುದು ಸರಿಯಾದ ಕ್ರಮವಲ್ಲ: ಉಗ್ರಪ್ಪ

ಈ ಬಾರಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ, ಕಡಿಮೆ ವೆಚ್ಚದಲ್ಲಿ ದಸರಾ ಆಚರಿಸಲು ನಿರ್ಧರಿಸಲಾಗಿದೆ. ಜೊತೆಗೆ ಕೆಲ ಕಾರ್ಯಕ್ರಮಗಳನ್ನು ಪ್ರಾಯೋಜಕತ್ವದಲ್ಲಿ ಆಯೋಜನೆ ಮಾಡಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 15 ಕೋಟಿ ಅನುದಾನ ಬಿಡುಗಡೆಯಾಗಿದೆ.

- ಡಾ.ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ

click me!