ವನ್ಯ ಜೀವಿ ಮಂಡಳಿಗೆ ನನ್ನ ನೇಮಕಾತಿಗೂ, ತಂದೆಯ ರಾಜಕೀಯಕ್ಕೂ ಸಂಬಂಧ ಇಲ್ಲ: ಧ್ರುವ ಪಾಟೀಲ ಸ್ಪಷ್ಟನೆ

By Sathish Kumar KH  |  First Published Jul 28, 2024, 6:46 PM IST

ವನ್ಯಜೀವಿ ಮಂಡಳಿಯ ಸದಸ್ಯನಾಗಿ ನನ್ನನ್ನು ನೇಮಿಸಿರುವುದಕ್ಕೂ ನಮ್ಮ‌ ತಂದೆಯವರ (ಎಂ.ಬಿ.ಪಾಟೀಲ) ರಾಜಕಾರಣಕ್ಕೂ ಸಂಬಂಧವಿಲ್ಲ.


ವಿಜಯಪುರ (ಜು.28): ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯನಾಗಿ ನನ್ನನ್ನು ನೇಮಿಸಿರುವುದಕ್ಕೂ ನಮ್ಮ‌ ತಂದೆಯವರ (ಎಂ.ಬಿ.ಪಾಟೀಲ) ರಾಜಕಾರಣಕ್ಕೂ ಸಂಬಂಧವಿಲ್ಲ. ವನ್ಯಜೀವಿ ಛಾಯಾಗ್ರಹಣ ಮತ್ತು ಸಂರಕ್ಷಣೆ ಕ್ಷೇತ್ರಗಳಲ್ಲಿ ನಾನು ಹನ್ನೊಂದು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಇದನ್ನು ಗುರುತಿಸಿ ನನ್ನನ್ನು ಈಗ ಸದಸ್ಯನಾಗಿ ನೇಮಿಸಲಾಗಿದೆ' ಎಂದು ಧ್ರುವ ಪಾಟೀಲ ಹೇಳಿದ್ದಾರೆ.

ಮಮದಾಪುರ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಜತೆ ಸೇರಿ ತಮ್ಮ ನೇತೃತ್ವದ ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲಾಂಟ್ಸ್ ಆ್ಯಂಡ್ ಅನಿಮಲ್ಸ್ (ಎಸ್ ಪಿಪಿಎ) ಮೂಲಕ ಕೈಗೊಂಡಿರುವ ಕೋಟಿ ವೃಕ್ಷ ಆಂದೋಲನದ ಭಾಗವಾಗಿ ಎರಡು ವರ್ಷಗಳ ಹಿಂದೆ ನೆಟ್ಟಿದ್ದ 1.36 ಲಕ್ಷ ಸಸಿಗಳ ಬೆಳವಣಿಗೆ ವೀಕ್ಷಣೆ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ನಾವು ಅಂದು ನೆಟ್ಟಿದ್ದ ಸಸಿಗಳು ಈಗ ಮರಗಳಾಗಿ ನಳನಳಿಸುತ್ತಿದ್ದು ಇದನ್ನು ನೋಡಿ ನನಗೆ ಸಂತಸವಾಗುತ್ತಿದೆ. ನಾವು ಒಳ್ಳೆಯ ಕೆಲಸ ಮಾಡಿದರೆ, ಒಳ್ಳೆಯ ಫಲ ಸಿಗುತ್ತದೆ ಎಂಬುದಕ್ಕೆ ಈ ಮರಗಳೇ ಸಾಕ್ಷಿಯಾಗಿವೆ ಎಂದು ಹೇಳಿರು.

Latest Videos

undefined

ರಾಜ್ಯ ವನ್ಯಜೀವಿ ಮಂಡಳಿಗೆ ಎಂಬಿಪಾ ಪುತ್ರ, ವಿನಯ್ ಪುತ್ರಿ ಸದಸ್ಯರಾಗಿ ನೇಮಕ, ಅದಕ್ಕೆ ಕಾರಣ ಇಲ್ಲಿದೆ!

'ರಾಜ್ಯ ವನ್ಯಜೀವಿ ಮಂಡಲಿಗೆ ನಾನು ಸಚಿವರ ಪುತ್ರ ಎಂಬ ಕಾರಣಕ್ಕೆ ಸದಸ್ಯನಾಗಿ ನೇಮಿಸಲಾಗಿದೆ ಎನ್ನುವ ಆರೋಪ ಸರಿಯಲ್ಲ. ನಾನು ಅಮೆರಿಕದಲ್ಲಿ ಓದುತ್ತಿದ್ದರೂ ನಾಲ್ಕು ತಿಂಗಳ ರಜೆಯಲ್ಲಿ ಇಲ್ಲಿಗೆ ಬರುತ್ತೇನೆ. ಆ ದಿನಗಳಲ್ಲಿ 3 ತಿಂಗಳನ್ನು ನಾನು ಕಬಿನಿ‌, ಬಂಡೀಪುರ, ದಾಂಡೇಲಿ ಅರಣ್ಯ ಪ್ರದೇಶಗಳಲ್ಲೇ ಕಳೆಯುತ್ತೇನೆ. ಮನುಷ್ಯ ಮತ್ತು ವನ್ಯಜೀವಿ ಸಂಘರ್ಷ ಕುರಿತು ನಾನು ಸಾಕಷ್ಟು ಅಧ್ಯಯನ ಮಾಡಿದ್ದೇನೆ. ಜತೆಗೆ ಕಪ್ಪು ಚಿರತೆ ಹಾಗೂ ಹುಲಿ ಛಾಯಾಗ್ರಹಣ ಮಾಡಿದ್ದೇನೆ. ಅಲ್ಲದೆ, ವಿಜಯಪುರದ ವನ್ಯಜೀವಿ ಸಂಪತ್ತನ್ನು ಕುರಿತು ವೈಲ್ಡ್ ವಿಜಯಪುರ ಎನ್ನುವ ಸಾಕ್ಷ್ಯಚಿತ್ರ ಮಾಡಿದ್ದೇನೆ. ಅದನ್ನು ಪೂಜ್ಯ ಸಿದ್ಧೇಶ್ವರ ಸ್ವಾಮಿಗಳು ಕೂಡ ವೀಕ್ಷಿಸಿ, ಮೆಚ್ಚಿಕೊಂಡಿದ್ದರು ಎಂದು ವಿವರಿಸಿದ್ದಾರೆ.

ನಾನು ಎಂಟು ವರ್ಷದ ಹುಡುಗನಾಗಿದ್ದ ದಿನಗಳಿಂದಲೂ ನಾನು ವನ್ಯಜೀವಿಗಳ ಬಗ್ಗೆ ಆಸಕ್ತಿ ಹೊಂದಿದ್ದೇನೆ. ಈಗ ವನ್ಯಜೀವಿ ಮಂಡಳಿಯ ಸದಸ್ಯನಾಗಿರುವುದು ಒಂದು ಅಧಿಕೃತ ಸ್ಥಾನಮಾನವಷ್ಟೆ. ಈ ಮೂಲಕ ವನ್ಯಜೀವಿ ಸಂರಕ್ಷಣೆಗೆ ರೂಪಿಸುವ ನೀತಿ ನಿರೂಪಣೆಗಳ ಮೇಲೆ ಸಕಾರಾತ್ಮಕ ಕೊಡುಗೆ ನೀಡಬಹುದು ಎನ್ನುವುದು ನನ್ನ ಭಾವನೆಯಾಗಿದೆ. ಮಂಡಳಿಗೆ ಈಗ ಸಾಕಷ್ಟು ವಿಜ್ಞಾನಿಗಳು, ಪರಿಸರ ತಜ್ಞರನ್ನು ನೇಮಿಸಲಾಗಿದೆ. ನಾನು ಯುವಜನಾಂಗದ ಪ್ರತಿನಿಧಿಯಾಗಿ ಅಲ್ಲಿ ಕೆಲಸ ಮಾಡಲಿದ್ದೇನೆ. ನನ್ನ ನೇಮಕಾತಿ ತಂದೆಯ ರಾಜಕಾರಣದೊಂದಿಗೆ ತಳುಕು ಹಾಕುವುದು ಬೇಡ ಎಂದು ತಿಳಿಸಿದರು.

ಎಡವಿದ ಈ ಹಿಂದಿನ ಸರ್ಕಾರ, ಕೇಂದ್ರ ಸರ್ಕಾರದ ಖಜಾನೆ ಸೇರಿದ ರಾಜ್ಯದ ಕ್ಯಾಂಪಾ ಹಣ!

ಕರ್ನಾಟಕ ವನ್ಯಜೀವಿ ಮಂಡಳಿಗೆ ವನ್ಯಜೀವಿಗಳ ಬಗ್ಗೆ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಗಳಿಂದ ವೈಲ್ಡ್‌ಲೈಫ್‌ ಅಸೋಸಿಯೇಷನ್ ಆಫ್ ಸೌತ್ ಇಂಡಿಯಾದ ಸುಶೀಲ್ ಗ್ಯಾನ್ ಚಂದ್, ಟೈಗರ್ಸ್ ಅನ್‌ಲಿಮಿಟೆಡ್ ವೈಲ್ಡ್ ಲೈಫ್ ಸೊಸೈಟಿಯ ಸೀಮಾ ಬೇಗಂ ಖಲೀಲ್, ಬೆಂಗಳೂರು ಎನ್ವಿರಾನ್‌ಮೆಂಟ್ ಟ್ರಸ್ಟ್‌ನ ಡಾ. ಆ‌ರ್.ವಿ.ದಿನೇಶ್ ಅವರನ್ನು ನೇಮಿಸಲಾಗಿದೆ. ಜೊತೆಗೆ, ಸಂರಕ್ಷಣಾ ವಿಶೇಷ ತಜ್ಞರು, ಜೀವಿ ಶಾಸ್ತ್ರಜ್ಞರು ಹಾಗೂ ಪರಿಸರವಾದಿಗಳ ವಿಭಾಗದಲ್ಲಿ ಸಚಿವ ಎಂ.ಬಿ. ಪಾಟೀಲ್ ಪುತ್ರ ಧ್ರುವ್ ಪಾಟೀಲ್, ಶಾಸಕ ವಿನಯ್ ಕುಲಕರ್ಣಿ ಪುತ್ರಿ ವೈಶಾಲಿ ಕುಲಕರ್ಣಿ ಅವರೂ ಸೇರಿದಂತೆ ರವೀಂದ್ರ ರಘುನಾಥ್, ಚಿಕ್ಕಣ್ಣ, ಡಾ. ರಾಜ್‌ಕುಮಾರ್ ಎಸ್.ಅಲೆ, ಸಂಕೇತ್ ಪೂವಯ್ಯ, ಅಜಿತ್ ಕರಿಗುಡ್ಡಯ್ಯ, ವಿನಯ್‌ಕುಮಾರ್ ಮಾಳಿಗೆ, ಡಾ. ಸಂತೃಪ್ತ, ಮಲ್ಲಪ್ಪ ಎಸ್.ಅಂಗಡಿ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

click me!