Azan Row: ಬೆಳಗ್ಗೆ 5ಕ್ಕೆ ಮೈಕ್‌ನಲ್ಲಿ ಆಜಾನ್‌ ಕೂಗದಿರಲು ಷರಿಯತ್‌ ನಿರ್ಧಾರ

By Girish GoudarFirst Published May 15, 2022, 4:45 AM IST
Highlights

*   ಬೆಳಗ್ಗೆ 6 ಗಂಟೆ ನಂತರ ಮೈಕ್‌ನಲ್ಲಿ ಆಜಾನ್‌
*   ಮುಸ್ಲಿಂ ಸಮುದಾಯದ ನಿರ್ಣಾಯಕ ಸಂಸ್ಥೆ
*   ಇಡೀ ರಾಜ್ಯಕ್ಕೆ ಈ ನಿರ್ಣಯ ಅನ್ವಯ
 

ಬೆಂಗಳೂರು(ಮೇ.15):  ಧರ್ಮ ಸಂಘರ್ಷಕ್ಕೆ ಕಾರಣವಾಗಿದ್ದ ಧಾರ್ಮಿಕ ಕೇಂದ್ರಗಳಲ್ಲಿ ಲೌಡ್‌ಸ್ಪೀಕರ್‌(Loudspeaker) ಬಳಕೆ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಲು ಮುಂದಾಗಿರುವ ಮುಸ್ಲಿಂ(Muslim) ಧರ್ಮಗುರುಗಳು ಬೆಳಗ್ಗೆ 5 ಗಂಟೆಯ ಆಜಾನ್‌ಗೆ(Azan) ಮೈಕ್‌ ಬಳಸದಿರುವ ನಿರ್ಧಾರ ಕೈಗೊಂಡಿದ್ದಾರೆ. ಇದರ ಬದಲು ನಿಯಮಾನುಸಾರ ಬೆಳಗ್ಗೆ 6ರ ನಂತರ ಆಜಾನ್‌ ಕೂಗಲು ನಿರ್ಣಯಿಸಿದ್ದಾರೆ.

ಷರಿಯತ್‌ ಎ ಹಿಂದ್‌ ಸಂಘಟನೆ ನೇತೃತ್ವದಲ್ಲಿ ಅಡಿಯಲ್ಲಿ ‘ಅಮೀರ್‌ ಎ ಷರಿಯತ್‌’ ಆಗಿರುವ ಮೌಲಾನ ಸಗೀರ್‌ ಅಹಮದ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ‘ಈ ನಿರ್ಧಾರ ರಾಜ್ಯದ ಎಲ್ಲಾ ಭಾಗಗಳಿಗೂ ಅನ್ವಯವಾಗಲಿದ್ದು, ಎಲ್ಲರೂ ಸಮ್ಮತಿ ನೀಡಿದ್ದಾರೆ. ಎಲ್ಲಾ ಮುಸ್ಲಿಮರು ಸಹ ಈ ತೀರ್ಮಾನಕ್ಕೆ ಬದ್ಧರಾಗಿದ್ದು, ಯಾರ ವಿರೋಧವೂ ಇಲ್ಲ’ ಎಂದು ಮುಸ್ಲಿಂ ಮುಖಂಡ ಉಮರ್‌ ಶರೀಫ್‌ ತಿಳಿಸಿದರು.

Azan Row: ಹುಬ್ಳೀಲಿ ಆಜಾನ್‌ಗೂ ಮೊದಲು ಮೊಳಗಿದ ಭಜನೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇನ್ನು ಮುಂದೆ ಬೆಳಗಿನ ಜಾವ ಆಜಾನ್‌ ಕೂಗದಂತೆ ನಾವು ನಿರ್ಧಾರ ಕೈಗೊಂಡಿದ್ದೇವೆ. ಸರ್ಕಾರ, ಕೋರ್ಟ್‌ ಆದೇಶವನ್ನ ಪಾಲನೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಿದ್ದೇವೆ. ಇಂತಹ ಐತಿಹಾಸಿಕ ನಿರ್ಧಾರವನ್ನು ಮುಸ್ಲಿಂ ಸಮುದಾಯ ತೆಗೆದುಕೊಂಡಿದೆ. ನಿನ್ನೆ ಮುಸ್ಲಿಂ ಮುಖಂಡರೆಲ್ಲರೂ ಸಭೆ ಸೇರಿ ಈ ತೀರ್ಮಾನ ಕೈಗೊಂಡಿದ್ದಾರೆ. ರಾಜ್ಯ ಸರ್ಕಾರದ(Government of Karnataka) ಮಾರ್ಗಸೂಚಿಗಳನ್ನು ಮುಸ್ಲಿಂ ಸಮುದಾಯದ ಎಲ್ಲರೂ ಅನುಸರಿಸಲಿದ್ದಾರೆ’ ಎಂದು ಹೇಳಿದರು.

‘ಮುಸ್ಲಿಮರು ಕಾನೂನಿಗೆ ಬೆಲೆ ಕೊಡುತ್ತಿಲ್ಲ ಎಂದು ಎಲ್ಲಾ ಕಡೆ ಹಬ್ಬಿತ್ತು. ಆದರೆ ಇದೀಗ ಇವೆಲ್ಲ ಸುಳ್ಳಾಗಿವೆ. ನಾವು ಕೂಡ ಕಾನೂನನ್ನು ಪಾಲನೆ ಮಾಡುತ್ತಿದ್ದೇವೆ ಎಂದು ತೋರಿಸಿಕೊಟ್ಟಿದ್ದೇವೆ. ಸರ್ಕಾರದ ನಿರ್ಧಾರಕ್ಕೆ ನಾವು ಬೆಂಬಲ ಕೊಡುತ್ತೇವೆ ಎಂಬುದು ಸಾಬೀತಾಗಿದೆ. ನಮ್ಮ ಈ ನಿರ್ಧಾರ ರಾಜ್ಯದ ಎಲ್ಲಾ ಭಾಗಗಳಿಗೂ ಅನ್ವಯವಾಗಲಿದ್ದು ಎಲ್ಲರೂ ಸಮ್ಮತಿ ನೀಡಿದ್ದಾರೆ’ ಎಂದು ತಿಳಿಸಿದರು.

ಮುಸ್ಲಿಂ ಸಂಘಟನೆ ಮುಖಂಡ ಮೊಹಮ್ಮದ್‌ ಷಫಿ ಸಾ ಆದಿ ಮಾತನಾಡಿ, ‘ಬೆಳಗ್ಗೆ 5 ಗಂಟೆಗೆ ಕೂಗುವ ಆಜಾನ್‌ ಪ್ರಾರ್ಥನೆ ಅಲ್ಲ. ಅದು ಪ್ರಾರ್ಥನೆಗೆ ಕರೆಯುವ ಸಂದೇಶ. ಸುಪ್ರೀಂಕೋರ್ಟ್‌(Supreme Court) ಆದೇಶದಲ್ಲಿ ಆಜಾನ್‌ಗೆ ವಿರೋಧ ಇಲ್ಲ. ಆಜಾನ್‌ಗೆ ನಾವು ಧ್ವನಿವರ್ಧಕದ ಮೂಲಕವೇ ಕರೆಯಬೇಕು. ಆದರೆ, ಸರ್ಕಾರದ ಆದೇಶ ಏನಿದೆ ಪಾಲನೆ ಮಾಡುತ್ತೇವೆ’ ಎಂದರು.

ಇಮಾಮ್‌ ಮೌಲಾನಾ ಮಕ್ಸೂದ್‌ ಇಮ್ರಾನ್‌ ರಶಾದಿ ಮಾತನಾಡಿ, ‘ಬೆಳಗ್ಗೆ 5 ಗಂಟೆ, 5.15 ಮತ್ತು 5.30ಕ್ಕೆ ಮೈಕ್‌ಗಳಲ್ಲಿ ಆಜಾನ್‌ ಕೂಗಬಾರದು. ಸರ್ಕಾರದ ನಿಯಮಗಳನ್ನು ಎಲ್ಲೆಡೆ ಪಾಲಿಸಬೇಕು. ಪೊಲೀಸರಿಂದ ಅನುಮತಿ ಪಡೆದು ಬೆಳಗ್ಗೆ 6 ಗಂಟೆಯ ಬಳಿಕ ಆಜಾನ್‌ ಕೂಗಲು ಎಲ್ಲ ಮಸೀದಿಗಳಿಗೂ ಸೂಚನೆ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದು ಹೇಳಿದರು. ಶುಕ್ರವಾರ ನಡೆದ ಸಭೆಯಲ್ಲಿ ಶಾಸಕರಾದ ಜಮೀರ್‌ ಅಹ್ಮದ್‌, ಮಹ್ಮದ್‌ ಹ್ಯಾರಿಸ್‌, ವಕ್ಫ್ ಬೋರ್ಡ್‌ ಅಧ್ಯಕ್ಷ ಶಫಿ ಸಅದಿ, ಮೌಲ್ವಿಗಳು ಸೇರಿದಂತೆ ಮತ್ತಿತರ ಧರ್ಮಗುರುಗಳು ಉಪಸ್ಥಿತರಿದ್ದರು.

ಆಜಾನ್‌ ನಿಯಮಕ್ಕೆ ಕಾಂಗ್ರೆಸ್‌ ಮುಸ್ಲಿಮರ ಆಗ್ರಹ: ಅಲ್ಪಸಂಖ್ಯಾತರ ನಿಯೋಗದಿಂದ ಸಿಎಂ ಭೇಟಿ

ಏನಿದು ವಿವಾದ?:

ಮಸೀದಿಗಳಲ್ಲಿ(Masjid) ಮೈಕ್‌ ಮೂಲಕ ಆಜಾನ್‌ ಕೂಗುವುದಕ್ಕೆ ಹಿಂದೂಪರ ಸಂಘಟನೆಗಳು(Hindu Organizations) ವಿರೋಧ ವ್ಯಕ್ತಪಡಿಸಿದ್ದವು. ಇದು ದೇಶಾದ್ಯಂತ ಭಾರೀ ಚರ್ಚೆ ಹಾಗೂ ವಿವಾದಕ್ಕೂ ಕಾರಣವಾಗಿತು. ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ ಆದೇಶದಂತೆ ಅನಧಿಕೃತ ಲೌಡ್‌ಸ್ಪೀಕರ್‌ಗಳನ್ನು ತೆರವುಗೊಳಿಸುವಂತೆ ಮತ್ತು 15 ದಿನಗಳೊಳಗೆ ಅಧಿಕಾರಿಗಳಿಂದ ಲಿಖಿತ ಅನುಮತಿ ಪಡೆಯುವಂತೆ ಸೂಚನೆ ನೀಡಿತ್ತು. ಜೊತೆಗೆ ಅನೇಕ ಹಿಂದೂ ದೇವಾಲಯಗಳು, ಮಸೀದಿಗಳು ಮತ್ತು ಚಚ್‌ರ್‍ಗಳಿಗೆ ನೋಟಿಸ್‌ ನೀಡಲಾಗಿತ್ತು.

ಇಡೀ ರಾಜ್ಯಕ್ಕೆ ಈ ನಿರ್ಣಯ ಅನ್ವಯ

ಮುಸ್ಲಿಮರು ಕಾನೂನಿಗೆ ಬೆಲೆ ಕೊಡುತ್ತಿಲ್ಲ ಎಂದು ಎಲ್ಲಾ ಕಡೆ ವದಂತಿ ಹಬ್ಬಿತ್ತು. ಇದೀಗ ಅವೆಲ್ಲ ಸುಳ್ಳಾಗಿವೆ. ನಾವು ಕೂಡ ಕಾನೂನನ್ನು ಪಾಲನೆ ಮಾಡುತ್ತಿದ್ದೇವೆ. ಸರ್ಕಾರದ ನಿರ್ಧಾರಕ್ಕೆ ನಾವು ಬೆಂಬಲ ಕೊಡುತ್ತೇವೆ. ನಮ್ಮ ಈ ನಿರ್ಧಾರ ರಾಜ್ಯದ ಎಲ್ಲಾ ಭಾಗಗಳಿಗೂ ಅನ್ವಯವಾಗಲಿದೆ. ಎಲ್ಲರೂ ಇದಕ್ಕೆ ಸಮ್ಮತಿ ನೀಡಿದ್ದಾರೆ ಅಂತ ಷರಿಯತ್‌ ಎ ಹಿಂದ್‌ ತಿಳಿಸಿದೆ. 
 

click me!