ಕಾಂಗ್ರೆಸ್‌ ಗೆದ್ದರೆ ಮತ್ತೆ ಮುಸ್ಲಿಂ ಮೀಸಲು: ಡಿ.ಕೆ.ಶಿವಕುಮಾರ್‌

By Kannadaprabha NewsFirst Published Mar 27, 2023, 4:37 AM IST
Highlights

ಲಿಂಗಾಯತರು, ಒಕ್ಕಲಿಗರು, ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತರಿಗೆ ನ್ಯಾಯ ನೀಡುತ್ತೇವೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ 

ಬೆಂಗಳೂರು(ಮಾ.27): ‘ಚುನಾವಣೆ ಸಮಯದಲ್ಲಿ ಜನರ ದಾರಿತಪ್ಪಿಸಲು ರಾಜ್ಯ ಬಿಜೆಪಿ ಸರ್ಕಾರ ಮೀಸಲಾತಿ ವಿಚಾರದಲ್ಲಿ ಜನದ್ರೋಹಿ ತೀರ್ಮಾನಗಳನ್ನು ಕೈಗೊಂಡಿದೆ. ಈ ತೀರ್ಮಾನಗಳು ಕಾರ್ಯಸಾಧುವಲ್ಲ. ಹೀಗಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಜನದ್ರೋಹಿ ತೀರ್ಮಾನಗಳನ್ನು ರದ್ದು ಮಾಡಿ ಲಿಂಗಾಯತರು, ಒಕ್ಕಲಿಗರು, ಎಸ್ಸಿ-ಎಸ್ಟಿ ಮತ್ತು ಅಲ್ಪಸಂಖ್ಯಾತರಿಗೆ ಸಿಗಬೇಕಾದ ನ್ಯಾಯವನ್ನು ನೀಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ಮೀಸಲಾತಿ ಪರಿಷ್ಕರಣೆ ನಿರ್ಧಾರಗಳನ್ನು ಕಟುವಾಗಿ ಟೀಕಿಸಿದರು.

Latest Videos

ರಾಹುಲ್‌ ಅನರ್ಹತೆ ಖಂಡಿಸಿ ದೇಶಾದ್ಯಂತ ಕಾಂಗ್ರೆಸ್‌ ಸತ್ಯಾಗ್ರಹ

ರಾಜ್ಯದಲ್ಲಿರುವ ‘ಬಿಟ್ರೇಯಲ್‌ ಜನತಾ ಪಕ್ಷ’ (ದ್ರೋಹಿ ಜನತಾ ಪಕ್ಷ) ಸೋಲಿನ ಆತಂಕಕ್ಕೆ ಒಳಗಾಗಿದೆ. ಹೀಗಾಗಿ ಎಲ್ಲ ಸಮಾಜಗಳನ್ನು ರಕ್ಷಣೆ ಮಾಡಬೇಕಾದವರು, ಅಧಿಕಾರ ದುರುಪಯೋಗ ಮಾಡಿಕೊಂಡು ಎಲ್ಲ ವರ್ಗದ ಜನರಿಗೆ ಮೋಸ ಮಾಡಲು ಮುಂದಾಗಿದ್ದಾರೆ. 75 ವರ್ಷಗಳ ಸ್ವತಂತ್ರ ಭಾರತದ ಇತಿಹಾಸದಲ್ಲಿ ಎಂದೂ ಒಂದು ರಾಜ್ಯ ಸರ್ಕಾರ 90 ದಿನಗಳ ಅವಧಿಯಲ್ಲಿ ಮೂರು ಬಾರಿ ಮೀಸಲಾತಿ ವರ್ಗೀಕರಣ ಬದಲಿಸಿಲ್ಲ. ಯಾವುದೇ ಆಯೋಗಗಳು ಅಂತಿಮ ವರದಿ ನೀಡುವ ಮುನ್ನವೇ ಒಂದು ಚೀಟಿಯಲ್ಲಿ ಇವರಿಗೆ ಇಂತಿಷ್ಟುಮೀಸಲಾತಿ ಎಂದು ಬರೆದು ಹಂಚಲು ಮುಂದಾಗಿದ್ದಾರೆ. ಈ ರೀತಿ ಹಂಚಲು ಮೀಸಲಾತಿ ಏನು ಅವರ ಮನೆ ಆಸ್ತಿಯೇ ಎಂದು ಕಿಡಿಕಾರಿದರು.

ಲಿಂಗಾಯತ, ಒಕ್ಕಲಿಗರಲ್ಲಿ ಯಾರಾದರೂ ಅಲ್ಪಸಂಖ್ಯಾತ ಮೀಸಲಾತಿಯನ್ನು ಕಿತ್ತು ನಮಗೆ ಕೊಡಿ ಎಂದು ಕೇಳಿದ್ದರೇ? ಈಗಿರುವ ಶೇ.56ರಷ್ಟುಮೀಸಲಾತಿಯ ಜತೆಗೆ ಮೀಸಲಾತಿ ಮಿತಿಯನ್ನು ವಿಸ್ತರಣೆ ಮಾಡಿ ಈ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ನೀಡಬೇಕಿತ್ತು. ಲಿಂಗಾಯತರು ಶೇ.15ರಷ್ಟು, ಒಕ್ಕಲಿಗರು ಶೇ.12ರಷ್ಟುಮೀಸಲಾತಿ ಕೇಳಿದ್ದು, ಕೇವಲ 2% ಮೀಸಲಾತಿಯನ್ನು ಭಿಕ್ಷೆ ನೀಡುತ್ತಿದ್ದೀರಾ? ಅದರಲ್ಲೂ ಅಲ್ಪಸಂಖ್ಯಾತರ ಮೀಸಲಾತಿಯನ್ನು ಕಸಿದು ನಮಗೆ ನೀಡುತ್ತಿರುವುದೇಕೆ? ಆ ಮೂಲಕ ಸಮುದಾಯಗಳ ಮಧ್ಯೆ ದ್ವೇಷ ಬಿತ್ತಿ ಪರಸ್ಪರ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು.

ಸರ್ಕಾರ ವಜಾಗೊಳಿಸಿ-ಸಿದ್ದು:

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಮೀಸಲಾತಿಯ ಅಸಾಂವಿಧಾನಿಕ ಪರಿಷ್ಕರಣೆ ಈ ನಾಡಿಗೆ ಎಸಗಿರುವ ದ್ರೋಹ. ಹೀಗಾಗಿ ಕೂಡಲೇ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಸರ್ಕಾರ ಮೀಸಲಾತಿ ವಿಚಾರವಾಗಿ ಗೊಂದಲ ಸೃಷ್ಟಿಮಾಡಿ, ಸೇಡಿನ ರಾಜಕಾರಣ ಮಾಡಿ ಜನರನ್ನು ಧರ್ಮ, ಜಾತಿ ಆಧಾರದ ಮೇಲೆ ವಿಭಜನೆ ಮಾಡಲು ಮುಂದಾಗಿದೆ. ಜನರಿಗೆ ತಪ್ಪು ಮಾಹಿತಿ ನೀಡಿ ಮೋಸ ಮಾಡುವ ಪ್ರಯತ್ನವನ್ನು ಮಾಡಿದೆ. ಮೀಸಲಾತಿಯ ಹೊಸ ವರ್ಗೀಕರಣ ಮಾಡುವ ಮೂಲಕ ಬಿಜೆಪಿ ಸರ್ಕಾರ ನಾಡಿಗೆ ದ್ರೋಹ ಎಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣಾ ಗಿಮಿಕ್‌ಗಾಗಿ ಎಸ್ಸಿ, ಎಸ್ಟಿಮೀಸಲಾತಿ ಹೆಚ್ಚಳದ ನಾಟಕ ಮಾಡುತ್ತಿದ್ದಾರೆ. ಒಕ್ಕಲಿಗ, ಲಿಂಗಾಯತ ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನಬಾಹಿರವಾಗಿ ಮುಸ್ಲಿಮರ ಮೀಸಲಾತಿ ರದ್ದುಪಡಿಸಿದ್ದಾರೆ. ಇದು ಜಾತಿ ಹಾಗೂ ಧರ್ಮಗಳ ನಡುವೆ ದ್ವೇಷ ಹುಟ್ಟಿಸುವ ಮೂಲಕ ಚುನಾವಣೆಯಲ್ಲಿ ಲಾಭ ಪಡೆಯುವ ಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೇ 1995ರಿಂದ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲಾಗಿದೆ. ಇದನ್ನು ರದ್ದು ಮಾಡಿ ಎಂದು ಈವರೆಗೆ ಯಾವುದೇ ನ್ಯಾಯಾಲಯದ ತೀರ್ಪು ಬಂದಿಲ್ಲ, ಯಾವ ಸಮಿತಿಯ ವರದಿಗಳು ಬಂದಿಲ್ಲ. ಹೀಗಿರುವಾಗ ರಾಜ್ಯ ಸರ್ಕಾರ ಯಾಕೆ ಮುಸ್ಲಿಮರ ಮೀಸಲಾತಿ ರದ್ದು ಮಾಡಿದೆ. ಇದು ದ್ವೇಷದ ರಾಜಕಾರಣ ಎಂದರು.

9ನೇ ಶೆಡ್ಯೂಲ್‌ಗೆ ಸೇರಿಸದೆ ಗಿಮಿಕ್‌:

ಇನ್ನು ಒಕ್ಕಲಿಗರು ತಮ್ಮ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ 12% ಮೀಸಲಾತಿ ಕೇಳಿದ್ದರು, ಲಿಂಗಾಯತರು 15% ಮೀಸಲಾತಿ ಜತೆಗೆ ತಮ್ಮನ್ನು 2ಎ ಗೆ ಸೇರಿಸುವಂತೆ ಕೇಳಿದ್ದರು. 1992ರಲ್ಲಿ ಇಂದಿರಾ ಸಹಾನಿ ಪ್ರಕರಣದಲ್ಲಿ 9 ಮಂದಿ ನ್ಯಾಯಮೂರ್ತಿಗಳ ಪೀಠವು ಒಟ್ಟು ಮೀಸಲಾತಿ 50% ಮೀರಬಾರದು ಎಂದು ಹೇಳಿತ್ತು. ರಾಜ್ಯದಲ್ಲಿ ಈಗ ಮೀಸಲಾತಿ 50% ಇದೆ, ನ್ಯಾಯಾಲಯದ ಈ ತೀರ್ಪನ್ನು ಬದಲಾವಣೆ ಮಾಡಬೇಕಾದರೆ ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಬೇಕು. ಇದ್ಯಾವುದನ್ನೂ ಮಾಡದೆ ಚುನಾವಣೆಗಾಗಿ ಗಿಮಿಕ್‌ ಮಾಡುತ್ತಿದ್ದಾರೆ ಎಂದು ದೂರಿದರು.

ರಾಹುಲ್‌ ಗಾಂಧಿ ​ಸಂಸತ್‌ ಸದಸ್ಯತ್ವದಿಂದ ಅನರ್ಹ: ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ'

ಬೊಮ್ಮಾಯಿ ಸಮರ್ಥನೆ ಖಂಡನೀಯ:

ರಣದೀಪ್‌ಸಿಂಗ್‌ ಸುರ್ಜೇವಾಲಾ ಮಾತನಾಡಿ, ಮುಸ್ಲಿಮರಿಗೆ ಶೇ.10 ಇಡಬ್ಲ್ಯುಎಸ್‌ ಕೋಟಾ ಅಡಿ ಮೀಸಲು ನೀಡಿರುವುದಾಗಿ ಹೇಳುತ್ತಾರೆ. ಪ್ರವರ್ಗದಿಂದ ಸಿಗುವ ಮೀಸಲಾತಿ ಬೇರೆ, ಆರ್ಥಿಕ ಹಿಂದುಳಿಕೆಯ ಕೋಟಾ ಬೇರೆ. ಬೊಮ್ಮಾಯಿ ಉದ್ದೇಶಪೂರ್ವಕವಾಗಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲಿಂಗಾಯತರು ಶೇ.15ರಷ್ಟು ಒಕ್ಕಲಿಗರು ಶೇ.12ರಷ್ಟುಮೀಸಲಾತಿ ಕೇಳಿದ್ದರು. ಆದರೆ ಅವರಿಗೆ ಕೇವಲ 2% ಮೀಸಲಾತಿಯ ಭಿಕ್ಷೆ ನೀಡುತ್ತಿದ್ದೀರಾ? ಅದರಲ್ಲೂ ಅಲ್ಪಸಂಖ್ಯಾತರ ಮೀಸಲಾತಿಯನ್ನು ಕಸಿದು ನಮಗೆ ನೀಡುತ್ತಿರುವುದೇಕೆ? ಆ ಮೂಲಕ ಸಮುದಾಯಗಳ ಮಧ್ಯೆ ದ್ವೇಷ ಬಿತ್ತಿ ಪರಸ್ಪರ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿರುವುದೇಕೆ? ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. 

click me!