Samanata Day: ಮುರುಘಾ ಶ್ರೀ ಜನ್ಮದಿನ ಇನ್ನು ಸಮಾನತಾ ದಿನ: ಸಿಎಂ ಬೊಮ್ಮಾಯಿ

Published : Apr 12, 2022, 04:42 AM IST
Samanata Day: ಮುರುಘಾ ಶ್ರೀ ಜನ್ಮದಿನ ಇನ್ನು ಸಮಾನತಾ ದಿನ: ಸಿಎಂ ಬೊಮ್ಮಾಯಿ

ಸಾರಾಂಶ

*  ಸರ್ಕಾರದಿಂದ ಆಚರಣೆ: ಬೊಮ್ಮಾಯಿ ಘೋಷಣೆ *  ಸಮಾಜ ಪರಿವರ್ತನೆಗೆ ಶ್ರೀಗಳ ದಿಟ್ಟಹೆಜ್ಜೆ: ಸಿಎಂ *  ಕೋಮು ಸಂಘರ್ಷ ಹೆಚ್ಚುತ್ತಿದೆ, ಸ್ವಾಮೀಜಿಗಳು ಕಣ್ಣು ಮುಚ್ಚಿ ಕೂರಬಾರದು: ಡಿಕೆಶಿ  

ಬೆಂಗಳೂರು(ಏ.12):  ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರು(Basavanna) ಸಮಾನತೆಗಾಗಿ ಶ್ರಮಿಸಿದ್ದರು. ಮುರುಘಾ ಶ್ರೀಗಳೂ(Murugha Shri) ಅವರ ಹಾದಿಯಲ್ಲಿ ಸಾಗುವ ಮೂಲಕ ಹೊಸ ಮನ್ವಂತರ ಸೃಷ್ಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುರುಘಾ ಶರಣರ ಜನ್ಮ ದಿನವನ್ನು ಇನ್ನು ಮುಂದೆ ಸರ್ಕಾರದಿಂದ ಸಮಾನತಾ ದಿನ ಎಂದು ಆಚರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಘೋಷಿಸಿದ್ದಾರೆ.

ಅರಮನೆ ಮೈದಾನದಲ್ಲಿ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರ ಜನ್ಮ ದಿನಾಚರಣೆ ಬದಲಿಗೆ ಅವರ ಸಮಾಜಮುಖಿ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸಮಾನತಾ ದಿನ(Samanata Day) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಉದ್ದಿಮೆಗೆ ಗಾಳ ಕೀಳು ಅಭಿರುಚಿ: ನೆರೆ ರಾಜ್ಯಗಳ ಮೇಲೆ ಬೊಮ್ಮಾಯಿ ಗರಂ

ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ. 12ನೇ ಶತಮಾನದಲ್ಲಿ ಬಸವಣ್ಣನವರು ಅಸಮಾನತೆ, ಲಿಂಗಭೇದ, ಮೂಢನಂಬಿಕೆಗಳನ್ನು ತೊಡೆದುಹಾಕಲು ಶ್ರಮಿಸಿದ್ದರು. 21ನೇ ಶತಮಾನದಲ್ಲಿ ಮುರುಘಾ ಶರಣರೂ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಸಮಾಜ ಪರಿವರ್ತನೆಗೆ ದಿಟ್ಟಹೆಜ್ಜೆ ಇಟ್ಟಿದ್ದಾರೆ. ಟೀಕೆಗಳು ವ್ಯಕ್ತವಾದರೂ ಬಸವತತ್ವದಿಂದ ವಿಮುಖವಾಗಿಲ್ಲ. ಆದ್ದರಿಂದ ಶರಣರ ಜನ್ಮ ದಿನವನ್ನು ಸರ್ಕಾರದಿಂದ ಸಮಾನತಾ ದಿನವಾಗಿ ಆಚರಣೆ ಮಾಡಲಾಗುವುದು ಎಂದು ಘೋಷಿಸಿದರು.

ಪ್ರತಿರೋಧದ ನಡುವೆಯೂ ಪರಿವರ್ತನೆ:

ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡುತ್ತಾ ಧ್ವನಿ ಇಲ್ಲದವರಿಗೆ ಧ್ವನಿ ಕೊಡುವ, ಗುರುತು ಇಲ್ಲದೇ ಇರುವವರಿಗೆ ಗುರುತು ಕೊಡುವ ಕೆಲಸವನ್ನು ಮುರುಘಾ ಶ್ರೀಗಳು ಮಾಡುತ್ತಿದ್ದಾರೆ. ಎಲ್ಲಾ ಸಮಾಜದವರಿಗೂ(Society) ಗುರು ಪೀಠ ಸ್ಥಾಪನೆ ಮಾಡುತ್ತಾ ಹೊಸ ಹಾದಿಯಲ್ಲಿ ಸಾಗುತ್ತಿದ್ದಾರೆ. ಸಾಕಷ್ಟು ಪ್ರತಿರೋಧದ ನಡುವೆಯೂ ಪರಿವರ್ತನೆ ಆಗುತ್ತಿದೆ. ನಾವೂ ಪರಿವರ್ತನೆಗೆ ಚಿಂತನೆ ಮಾಡುವ ಕಾಲ ಬಂದಿದೆ. ಸರ್ಕಾರ, ಸಮಾಜ ಹೊಂದಾಣಿಕೆಯಿಂದ ಹೋಗಬೇಕು ಎಂದು ಅಭಿಪ್ರಾಯಪಟ್ಟರು.

ಸ್ವಾಮೀಜಿಗಳು ಧ್ವನಿ ಎತ್ತಬೇಕು:

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivkumar) ಮಾತನಾಡಿ, ನಾವು ಇಂದು ಸಮಾನತೆಯ ದಿನ ಆಚರಿಸುತ್ತಿದ್ದೇವೆ. ಆದರೆ ರಾಜ್ಯದಲ್ಲಿ(Karnataka) ಅಶಾಂತಿಯ ವಾತಾವರಣ ಉಂಟಾಗಿದೆ. ಕೋಮು ಗಲಭೆ, ಸಂಘರ್ಷ ಹೆಚ್ಚುತ್ತಿದ್ದು ಸ್ವಾಮೀಜಿಗಳು ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳಬಾರದು. ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.

ಮೇಕೆದಾಟು ಯೋಜನೆಗೆ(Mekedatu Projectb) ಆಗ್ರಹಿಸಿ ಇತ್ತೀಚೆಗೆ ಪಾದಯಾತ್ರೆ ಮಾಡಿದಾಗ ಬೆಂಬಲ ವ್ಯಕ್ತಪಡಿಸಲು ಎಷ್ಟೋ ಸ್ವಾಮೀಜಿಗಳು ಹೆದರಿದರು. ಸರ್ಕಾರದ ವಿರುದ್ಧ ನಿಲ್ಲದೆ ಗಡಗಡ ಎಂದು ನಡುಗಿದರು. ಆದರೆ ಮುರುಘಾ ಮಠದ ಸ್ವಾಮೀಜಿಗಳು ಡಜನ್‌ಗೂ ಹೆಚ್ಚು ಸ್ವಾಮೀಜಿಗಳನ್ನು ಕರೆದುಕೊಂಡು ಬಂದು ಆಶೀರ್ವಾದ ಮಾಡಿದರು. ಇದನ್ನು ನಾನು ಜೀವನದುದ್ದಕ್ಕೂ ಮರೆಯುವುದಿಲ್ಲ ಎಂದು ಭರವಸೆ ನೀಡಿದರು.
ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಸಚಿವರಾದ ಗೋವಿಂದ ಕಾರಜೋಳ, ವಿ.ಸುನೀಲ್‌ ಕುಮಾರ್‌, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ರಾಜಶೇಖರ ಪಾಟೀಲ ತೇಲ್ಕೂರ ಮತ್ತಿತರರು ಹಾಜರಿದ್ದರು.

ಮಠಗಳು ಸಮಾನತೆಯ ಅಡಿಪಾಯಗಳಾಗಿವೆ. ಯಾವ ಜಾತಿ, ಧರ್ಮಕ್ಕೆ ಸೇರಿದ ವ್ಯಕ್ತಿಗೂ ಮಾನವೀಯತೆಯಿಂದ, ನೆಮ್ಮದಿಯಿಂದ ಬದುಕಲು ಮಠಾಧೀಶರು, ಸ್ವಾಮೀಜಿಗಳು ಆಶೀರ್ವಾದ ಮಾಡಬೇಕು. ಮಹಾಭಾರತದ ಹಸ್ತಿನಾಪುರದಲ್ಲಿ ದ್ರೌಪದಿಯ ವಸ್ತ್ರಾಪಹರಣ ಆಗುವಾಗ ಭೀಷ್ಮ, ದ್ರೋಣರಂತಹ ಅತಿರಥರು ಅಧರ್ಮ ನಡೆಯುತ್ತಿದ್ದರೂ ಕಣ್ಣುಮುಚ್ಚಿ ಮೌನವಾಗಿ ಕುಳಿತಿದ್ದರು. ಅದೇ ರೀತಿ ಇಂದು ರಾಜ್ಯದಲ್ಲಿ ಅಶಾಂತಿ ಉಂಟಾಗಿದ್ದು ಸ್ವಾಮೀಜಿಗಳು ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳಬಾರದು. ಇದರ ವಿರುದ್ಧ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.

ಡಿಕೆಶಿ ಸಿಂಹ ಘರ್ಜನೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪರ ಚಪ್ಪಾಳೆ ತಟ್ಟಿಪ್ರೋತ್ಸಾಹಿಸಲು ಸಭೆಯಲ್ಲಿ ಕೋರಿದ ಮುರಘಾ ಶರಣರು ನಿರೀಕ್ಷಿತ ಸ್ಪಂದನೆ ದೊರೆಯದಿದ್ದಾಗ ‘ನೀವೆಲ್ಲ ನಿರುತ್ಸಾಹಗೊಂಡಿದ್ದೀರಿ. ನೀವು ರೀಚಾಜ್‌ರ್‍ ಆಗಬೇಕು’ ಎಂದು ಹೇಳಿದ ಘಟನೆ ನಡೆಯಿತು.

ಸರ್ಕಾರ ಮಾಡುವ ಕೆಲಸ ಮಾಡುತ್ತಿರುವ ಶಕ್ತಿಧಾಮ: ಸಿಎಂ ಬೊಮ್ಮಾಯಿ

ಸಭೆಯಲ್ಲಿ ಶಿವಕುಮಾರ್‌ ಅವರು ಸಮಾಜದಲ್ಲಿ ನಡೆದಿರುವ ಅಪಚಾರಗಳ ಬಗ್ಗೆ ಸ್ವಾಮೀಜಿಗಳು ಧ್ವನಿಯೆತ್ತಬೇಕು ಎಂದು ಕರೆ ನೀಡಿದ್ದನ್ನು ಪ್ರಸ್ತಾಪಿಸಿ, ಶಿವಕುಮಾರ್‌ ಅವರು ನಮ್ಮ ನಡುವಿನ ಆಶಾಕಿರಣವಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿಂಹ ಘರ್ಜನೆ ಮಾಡಿದ್ದಾರೆ. ಅವರಿಗೆ ಉತ್ಸಾಹವಿದೆ. ಸಾಧಿಸುವ ಜೀವನೋತ್ಸಾಹವಿದೆ. ಅವರಿಗಾಗಿ ‘ಚಪ್ಪಾಳೆ ತಟ್ಟಿ’ ಎಂದು ಸಭಿಕರಿಗೆ ಹೇಳಿದಾಗ ಸರಿಯಾಗಿ ಪ್ರತಿಕ್ರಿಯೆ ಬಾರಲಿಲ್ಲ. ಆಗ, ‘ನೀವೆಲ್ಲ ನಿರುತ್ಸಾಹಗೊಂಡಿದ್ದೀರಿ. ರೀಚಾಜ್‌ರ್‍ ಆಗಬೇಕು’ ಎಂದು ಹಾಸ್ಯವಾಗಿ ಹೇಳಿದರು.

ಅಸ್ಪೃಶ್ಯತೆ ನೋಡಿ ಕಣ್ಣೀರು ಬರುತ್ತೆ

ನಾವು ಮಠಕ್ಕೆ ಬಂದ ಮೇಲೆ ಲಿಂಗ ತಾರತಮ್ಯ ನಿವಾರಣೆ ಮಾಡಿದ್ದೇವೆ. ಅಸ್ಪೃಶ್ಯತೆ ಇಲ್ಲ. ಸವರ್ಣೀಯ, ದಲಿತ ಎಂಬ ಭೇದವಿಲ್ಲ. ಮಠದಲ್ಲಿ ಸಹಪಂಕ್ತಿ ಭೋಜನವಿದೆ. ಆದರೆ ದೇಶದಲ್ಲಿ ಇನ್ನೂ ಅಸ್ಪೃಶ್ಯತೆಯಿದೆ. ಇದನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ ಅಂತ ಚಿತ್ರದುರ್ಗದ ಮುರುಘಾ ಮಠ ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ. 

ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ‘ಸಮಾನತಾ ದಿನ’ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೌರವಿಸಿದರು. ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಸಚಿವರಾದ ಗೋವಿಂದ ಕಾರಜೋಳ, ವಿ.ಸುನೀಲ್‌ ಕುಮಾರ್‌, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತಿತರರು ಹಾಜರಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ