
ರಾಜ್ಯದಲ್ಲಿ ಒಂದೇ ದಿನ ಹಲವು ನ್ಯಾಯಾಲಯಗಳಿಗೆ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಮೂಲಕ ಬಂದಿರುವ ಬೆದರಿಕೆಗಳು ಭಾರೀ ಆತಂಕಕ್ಕೆ ಕಾರಣವಾಗಿವೆ. ಧಾರವಾಡ, ದಾವಣಗೆರೆ ಹಾಗೂ ಕೊಡಗು ಜಿಲ್ಲೆಗಳ ನ್ಯಾಯಾಲಯಗಳಿಗೆ ಅನಾಮಧೇಯ ವ್ಯಕ್ತಿಗಳಿಂದ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದು, ತಕ್ಷಣವೇ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳಗಳು ಎಚ್ಚರಿಕೆ ಕ್ರಮ ಕೈಗೊಂಡಿವೆ. ಈ ಹಿಂದೆ ಕೂಡ ರಾಜ್ಯದ ವಿವಿಧ ನ್ಯಾಯಾಲಯಗಳಿಗೆ ಹುಸಿ ಬೆದಿಕೆ ಕರೆ ಬಂದಿತ್ತು.
ಧಾರವಾಡದಲ್ಲಿರುವ ಹೈಕೋರ್ಟ್‌ಗೆ ಬಾಂಬ್ ಇಡಲಾಗಿದೆ ಎಂಬ ಇ-ಮೇಲ್ ಸಂದೇಶ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾದರು. ಮುನ್ನೆಚ್ಚರಿಕೆ ಕ್ರಮವಾಗಿ ವಕೀಲರು, ನ್ಯಾಯಾಲಯದ ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಸಂಪೂರ್ಣವಾಗಿ ಕೋರ್ಟ್ ಆವರಣದಿಂದ ಹೊರಗೆ ಕಳುಹಿಸಲಾಯಿತು. ಇ-ಮೇಲ್‌ನಲ್ಲಿ ಮಧ್ಯಾಹ್ನ 1:15ಕ್ಕೆ ಸ್ಫೋಟ ಸಂಭವಿಸುವುದಾಗಿ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗರಗ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಭದ್ರತೆ ಒದಗಿಸಿದರು. ಕಳೆದ ತಿಂಗಳಷ್ಟೇ ಇದೇ ರೀತಿಯ ಬಾಂಬ್ ಬೆದರಿಕೆ ಸಂದೇಶ ಬಂದಿದ್ದುದರಿಂದ ಆತಂಕ ಮತ್ತಷ್ಟು ಹೆಚ್ಚಾಯಿತು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕ್ವಾಡ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕೋರ್ಟ್ ಕಟ್ಟಡದ ಒಳಗೆ ತೀವ್ರ ಶೋಧ ಕಾರ್ಯ ನಡೆಸಿದರು. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಸ್‌ಪಿ, “ನಾವು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಎಲ್ಲರನ್ನು ಸುರಕ್ಷಿತವಾಗಿ ಹೊರಗೆ ಕಳಿಸಲಾಗಿದೆ. ಇ-ಮೇಲ್‌ನಲ್ಲಿ ಬೇರೆ ರಾಜ್ಯಗಳ ಉಲ್ಲೇಖಗಳೂ ಇದ್ದು, ಎಲ್ಲಾ ಆಯಾಮಗಳಿಂದ ತನಿಖೆ ನಡೆಯುತ್ತಿದೆ” ಎಂದು ತಿಳಿಸಿದರು.
ದಾವಣಗೆರೆ ಜಿಲ್ಲಾ ನ್ಯಾಯಾಲಯಕ್ಕೂ ಅನಾಮಧೇಯ ವ್ಯಕ್ತಿಯಿಂದ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಜಿಲ್ಲಾ ನ್ಯಾಯಾಧೀಶರ ಅಧಿಕೃತ ಇ-ಮೇಲ್‌ಗೆ ಈ ಸಂದೇಶ ಬಂದಿದ್ದು, ಮಧ್ಯಾಹ್ನ 12.30ಕ್ಕೆ ಆರ್‌ಡಿಎಕ್ಸ್ ಬಾಂಬ್ ಸ್ಫೋಟವಾಗಲಿದೆ ಎಂದು ಉಲ್ಲೇಖಿಸಲಾಗಿತ್ತು.
ಇದರಿಂದಾಗಿ ತಕ್ಷಣವೇ ಕೋರ್ಟ್ ಕಲಾಪವನ್ನು ಸ್ಥಗಿತಗೊಳಿಸಿ, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದಿಂದ ಸಂಪೂರ್ಣ ಕಟ್ಟಡವನ್ನು ಪರಿಶೀಲಿಸಲಾಯಿತು. ವಕೀಲರು, ನ್ಯಾಯಾಲಯದ ಸಿಬ್ಬಂದಿ ಮತ್ತು ಕಕ್ಷಿದಾರರನ್ನು ಕೋರ್ಟ್ ಆವರಣದಿಂದ ಹೊರಗೆ ಕಳುಹಿಸಿ ಭದ್ರತೆ ಒದಗಿಸಲಾಯಿತು.
ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಇರುವ ಜಿಲ್ಲಾ ನ್ಯಾಯಾಲಯಕ್ಕೂ ಬೆಳಿಗ್ಗೆಯೇ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಬಂದಿದೆ. ನ್ಯಾಯಾಲಯದ ಅಧಿಕಾರಿಗಳು ಕಚೇರಿಗೆ ಬಂದಾಗ ಈ ಸಂದೇಶ ಗಮನಕ್ಕೆ ಬಂದಿದ್ದು, ತಕ್ಷಣವೇ ನ್ಯಾಯಾಧೀಶರು, ವಕೀಲರು ಹಾಗೂ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ನ್ಯಾಯಾಲಯದ ಸಂಕೀರ್ಣದಲ್ಲಿದ್ದ ಎಲ್ಲರೂ ಗೇಟಿನ ಹೊರಭಾಗಕ್ಕೆ ತೆರಳಿದ್ದು, ಸುಮಾರು 500ಕ್ಕೂ ಹೆಚ್ಚು ಸಿಬ್ಬಂದಿ, ವಕೀಲರು ಹಾಗೂ ಕಕ್ಷಿದಾರರು ಆತಂಕದಿಂದ ಹೊರಗಡೆ ಕಾಯುವಂತಾಯಿತು.
ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳ ಹಾಗೂ ಡಾಗ್ ಸ್ಕ್ವಾಡ್ ಕೋರ್ಟ್‌ನ ವಿವಿಧ ವಿಭಾಗಗಳು, ಕ್ಯಾಂಟೀನ್, ಬಾರ್ ಅಸೋಸಿಯೇಷನ್ ಕಟ್ಟಡ ಸೇರಿದಂತೆ ಸಂಪೂರ್ಣ ಸಂಕೀರ್ಣವನ್ನು ಶೋಧಿಸಿದರು. ಸದ್ಯಕ್ಕೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲದಿದ್ದರೂ, ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ಜಿಲ್ಲೆಗಳಲ್ಲಿಯೂ ಬಂದಿರುವ ಬಾಂಬ್ ಬೆದರಿಕೆ ಸಂದೇಶಗಳ ಹಿನ್ನಲೆಯಲ್ಲಿ ಒಂದೇ ಮೂಲದಿಂದ ಇ-ಮೇಲ್‌ಗಳು ಕಳುಹಿಸಿರುವ ಸಾಧ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸೈಬರ್ ಕ್ರೈಂ ವಿಭಾಗದ ಸಹಾಯದಿಂದ ಇ-ಮೇಲ್ ಮೂಲ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ