
ಹಾವೇರಿ (ಡಿ.14): ಓಲೈಕೆ ರಾಜಕಾರಣ ಹಾಗೂ ಪೊಲೀಸ್ ನಿಷ್ಕ್ರಿಯತೆಯೇ ಸವಣೂರು ಘಟನೆಗೆ ಕಾರಣ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದ ಬಸವರಾಜ್ ಬೊಮ್ಮಾಯಿ ತೀವ್ರ ವಾಗ್ದಾಳಿ ನಡೆಸಿದರು.
ಮತಗಳ್ಳತನ, ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ವಿಚಾರವಾಗಿ ಇಂದು ಹಾವೇರಿಯಲ್ಲಿ ಪ್ರತಿಕ್ರಿಯಿಸಿದ ಸಂಸದರು, 'ಓಟ್ ಚೋರ್, ಗದ್ದಿ ಚೋಡ್' ಅಭಿಯಾನದಿಂದ ಕಾಂಗ್ರೆಸ್‌ಗೆ ಯಾವುದೇ ಲಾಭವಾಗದು ಎಂದು ವ್ಯಂಗ್ಯವಾಡಿರು.
ಕಾಂಗ್ರೆಸ್ ಪಕ್ಷವು ರಾಜ್ಯಾದ್ಯಂತ ನಡೆಸುತ್ತಿರುವ 'ಓಟ್ ಚೋರ್, ಗದ್ದಿ ಚೋಡ್' ಅಭಿಯಾನದ ಕುರಿತು ಮಾತನಾಡಿದ ಬೊಮ್ಮಾಯಿ, ಸುಳ್ಳು ಸಾವಿರ ಬಾರಿ ಹೇಳಿ ಅದನ್ನೇ ಸತ್ಯ ಮಾಡಲು ಹೊರಟವರ ಮೇಲೆ ಕಾಂಗ್ರೆಸ್‌ನವರಿಗೆ ನಂಬಿಕೆ ಇದೆ. ಅದರಿಂದ ಏನೂ ಪ್ರಯೋಜನ ಆಗುವುದಿಲ್ಲ. ಬಿಹಾರದಲ್ಲಿ ಇದನ್ನೇ ಮುಂದಿಟ್ಟುಕೊಂಡು ಚುನಾವಣೆ ಮಾಡಿದ್ದರು. ಅಲ್ಲಿ ಕಾಂಗ್ರೆಸ್ ಅತ್ಯಂತ ಕಡಿಮೆ ಸ್ಥಾನ ಪಡೆಯಿತು, ಮುಂದೆಯೂ ರಾಜ್ಯದಲ್ಲಿ ನೆಲಕಚ್ಚಲಿದೆ ಎಂದು ಟೀಕಿಸಿದರು.
ಶಾಸಕ ಸುಭಾಷ್ ಗುತ್ತೇದಾರ್ ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದರು, ಚಾರ್ಜ್ ಶೀಟ್ ಸಲ್ಲಿಸಿದ ತಕ್ಷಣ ಏನೂ ಆಗುವುದಿಲ್ಲ. ಎಸ್‌ಐಟಿ ಯಾವ ರೀತಿ ತನಿಖೆ ಮಾಡಿದೆ ಎಂಬುದು ಮುಖ್ಯ. ಹೀಗಾಗಿ ನ್ಯಾಯಾಲಯದಲ್ಲಿ ಸತ್ಯ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸವಣೂರು ಘಟನೆ: ಅನಾಗರಿಕತೆ, ಓಲೈಕೆ ರಾಜಕಾರಣದ ಪ್ರತಿಬಿಂಬ
ಸವಣೂರಿನಲ್ಲಿ ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಅಮಾನವೀಯ ಘಟನೆಯ ಬಗ್ಗೆ ಬೊಮ್ಮಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾನೂನನ್ನು ಕೈಗೆ ತೆಗೆದುಕೊಂಡಿದ್ದಾರೆ. ಆತ ತಪ್ಪು ಮಾಡಿದ್ದರೆ ಶಿಕ್ಷೆ ಆಗಬೇಕು. ಆದರೆ, ಅದಕ್ಕಿಂತ ಮುಂಚೆ ಆತನನ್ನು ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿರೋದು ಸಂಪೂರ್ಣ ಅನಾಗರಿಕತೆ. ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಅವಕಾಶ ಇಲ್ಲ. ಅದಕ್ಕೆ ಜನ ಆಕ್ರೋಶಗೊಂಡಿದ್ದಾರೆ ಎಂದು ಹೇಳಿದರು.
ಈ ಘಟನೆಗಳಿಗೆ ಪೊಲೀಸರ ನಿಷ್ಕ್ರಿಯತೆಯೇ ಕಾರಣ ಎಂದು ನೇರವಾಗಿ ಆರೋಪಿಸಿದ ಸಂಸದರು,ಪೊಲೀಸರು ನಿಷ್ಕ್ರಿಯ ಆಗಿದ್ದಾರೆ. ಅವರ ನಿರ್ಲಕ್ಷ್ಯದಿಂದಲೇ ಇದೆಲ್ಲಾ ಆಗಿದೆ. ಹಲವು ಬಲತ್ಕಾರ ಪ್ರಕರಣಗಳು ನಡೆದರೂ ಪುಂಡ ಪೋಕರಿಗಳನ್ನು ಪೊಲೀಸರು ಹಿಡಿದಿಲ್ಲ. ಹೀಗಾಗಿ ಇಂತಹ ಘಟನೆಗಳು ಆಗುತ್ತಲೇ ಇವೆ. ಇಲ್ಲದಿದ್ದರೆ ಇದನ್ನು ತಪ್ಪಿಸಬಹುದಿತ್ತು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ