ಬಲಾತ್ಕಾರ ಕೇಸ್‌ನಲ್ಲಿ ತಾಯಿಯ ದೂರಷ್ಟೇ ಸಾಲಲ್ಲ: ಹೈಕೋರ್ಟ್‌ ಆದೇಶ

Published : May 12, 2025, 09:50 AM IST
ಬಲಾತ್ಕಾರ ಕೇಸ್‌ನಲ್ಲಿ ತಾಯಿಯ ದೂರಷ್ಟೇ ಸಾಲಲ್ಲ: ಹೈಕೋರ್ಟ್‌ ಆದೇಶ

ಸಾರಾಂಶ

ಯಾವುದೇ ತಾಯಿ ದೂರು ದಾಖಲಿಸುವ ಮೂಲಕ ತನ್ನ ಮಗಳ ಜೀವನ ಹಾಳುಮಾಡುವುದಿಲ್ಲ ಎಂಬ ಏಕೈಕ ಅಂಶ ಆಧರಿಸಿ ಆರೋಪಿಯನ್ನು ದೋಷಿಯೆಂದು ನಿರ್ಧರಿಸಲಾಗದು ಎಂದು ಹೈಕೋರ್ಟ್‌ ಆದೇಶಿಸಿದೆ. 

ವೆಂಕಟೇಶ್‌ ಕಲಿಪಿ

ಬೆಂಗಳೂರು (ಮೇ.12): ಅಪ್ರಾಪ್ತೆ ಮೇಲಿನ ಬಲಾತ್ಕಾರ ದೃಢಪಡಿಸಲು ವೈದ್ಯಕೀಯ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ಸಾಕ್ಷ್ಯಗಳು ಲಭ್ಯವಿಲ್ಲದ ಸಂದರ್ಭದಲ್ಲಿ ಯಾವುದೇ ತಾಯಿ ದೂರು ದಾಖಲಿಸುವ ಮೂಲಕ ತನ್ನ ಮಗಳ ಜೀವನ ಹಾಳುಮಾಡುವುದಿಲ್ಲ ಎಂಬ ಏಕೈಕ ಅಂಶ ಆಧರಿಸಿ ಆರೋಪಿಯನ್ನು ದೋಷಿಯೆಂದು ನಿರ್ಧರಿಸಲಾಗದು ಎಂದು ಹೈಕೋರ್ಟ್‌ ಆದೇಶಿಸಿದೆ. ಅಪ್ರಾಪ್ತೆ ಮೇಲಿನ ಬಲಾತ್ಕಾರ ಆರೋಪದ ಮೇಲೆ ತನಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ಕೋರಿ ಮಂಗಳೂರಿನ ನಿವಾಸಿ ಮನ್ಸೂರ್‌ (45) ಎಂಬಾತ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರ ಪೀಠ ಈ ಆದೇಶ ಮಾಡಿದೆ.

ಆರೋಪಿ ಬಲಾತ್ಕಾರ ಎಸಗಿ, ಜೀವ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕೆ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ದೋಷಿಯಾಗಿ ಪರಿಗಣಿಸಿದೆ. ಕೃತ್ಯ ನಡೆಯದಿದ್ದರೂ ಯಾವುದೇ ತಾಯಿ ದೂರು ದಾಖಲಿಸುವ ಮೂಲಕ ಮಗಳ ಜೀವನ ಹಾಳು ಮಾಡುವುದಿಲ್ಲವೆಂದು ಸರ್ಕಾರಿ ಅಭಿಯೋಜಕಿ ವಾದಿಸಿದ್ದಾರೆ. ಆದರೆ, ಸಂತ್ರಸ್ತೆಯ ಹೇಳಿಕೆ ನಂಬಲರ್ಹ ಮತ್ತು ವಿಶ್ವಾಸಾರ್ಹವಾಗಿಲ್ಲ ಎಂದಾಗ ಆರೋಪಿಯನ್ನು ದೋಷಿಯಾಗಿ ಪರಿಗಣಿಸಲಾಗದು. ಯಾವುದೇ ತಾಯಿ ದೂರು ದಾಖಲಿಸಿ ಮಗಳ ಜೀವನ ಹಾಳು ಮಾಡುವುದಿಲ್ಲ ಎಂಬ ಏಕೈಕ ಆಧಾರದಲ್ಲಿ ಆರೋಪಿ ಬಲಾತ್ಕಾರ ಎಸಗಿದ್ದಾನೆ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಹೇಳಿದೆ.

ರಾಜ್ಯದಲ್ಲಿ 100 ಕಾಂಗ್ರೆಸ್ ಭವನ ಸ್ಥಾಪಿಸುವ ಉದ್ದೇಶ: ಡಿ.ಕೆ.ಶಿವಕುಮಾರ್

ಪ್ರಕರಣದಲ್ಲಿ ಸಂತ್ರಸ್ತೆ ಬಲವಂತದ ಲೈಂಗಿಕ ಕ್ರಿಯೆಗೆ ಒಳಗಾದ ಬಗ್ಗೆ ಕುರುಹಗಳಿಲ್ಲ. ಜನನಾಂಗದ ಭಾಗದಲ್ಲಿ ಯಾವುದೇ ಗಾಯ ಪತ್ತೆಯಾಗಿಲ್ಲ. ಕನ್ಯಾಪೊರೆ ಹಾನಿಗೆ ಒಳಗಾಗಿಲ್ಲ ಎಂದು ವೈದ್ಯಕೀಯ ವರದಿ ದೃಢಪಡಿಸುತ್ತದೆ. ಜಪ್ತಿ ಮಾಡಿದ ವಸ್ತುಗಳಲ್ಲಿ ವೀರ್ಯದ ಕಲೆಗಳು ಕಂಡುಬಂದಿಲ್ಲ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ತಿಳಿಸುತ್ತದೆ. ದಾಖಲೆ ಪರಿಶೀಲಿಸಿದರೆ ಚರ್ಚ್‌ ಆಸ್ತಿಯ ವಿಚಾರವಾಗಿ ಆರೋಪಿಯೊಂದಿಗೆ ವೈಮನಸ್ಸು ಹೊಂದಿರುವ ಕ್ರೈಸ್ತ ಧರ್ಮಕ್ಕೆ ಸೇರಿದ ಸ್ಥಳೀಯ ಮುಖಂಡನ ಸಲಹೆ, ಸೂಚನೆ ಮೇರೆಗೆ ಸಂತ್ರಸ್ತೆಯ ತಾಯಿ ದೂರು ದಾಖಲಿಸಿರುವುದು ಕಂಡುಬರುತ್ತಿದೆ. ಈ ವಿಚಾರ ಪರಿಗಣಿಸುವಲ್ಲಿ ಅಧೀನ ನ್ಯಾಯಾಲಯ ವಿಫಲವಾಗಿದೆ. ಆದ್ದರಿಂದ ಅದರ ಆದೇಶದಲ್ಲಿ ಮಧ್ಯಪ್ರವೇಶ ಮಾಡಬೇಕಿದೆ ಎಂದು ತೀರ್ಮಾನಿಸಿದ ಹೈಕೋರ್ಟ್‌, ಆರೋಪಿಗೆ ವಿಧಿಸಲಾಗಿದ್ದ 10 ವರ್ಷ ಜೈಲು ಶಿಕ್ಷೆಯನ್ನು ರದ್ದುಪಡಿಸಿದೆ.

ಪ್ರಕರಣದ ವಿವರ: ಸಂತ್ರಸ್ತೆಯ ತಾಯಿ 2011ರ ಜು.22ರಂದು ಪೊಲೀಸರಿಗೆ ದೂರು ನೀಡಿ, 2011ರ ಜು.9ರಂದು ಮನೆಯಲ್ಲಿ ಒಬ್ಬಂಟಿಯಾಗಿದ್ದ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ತನ್ನ ಪುತ್ರಿ (16 ವರ್ಷ) ಮೇಲೆ ಮೇಲ್ಮನವಿದಾರ ಬಲಾತ್ಕಾರ ಎಸಗಿ, ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದರು. ಜು.24ರಂದು ಆರೋಪಿಯನ್ನು ಬಂಧಿಸಿದ್ದ ಪೊಲೀಸರು, ತನಿಖೆ ಪೂರ್ಣಗೊಳಿಸಿ ಬಲಾತ್ಕಾರ ಮತ್ತು ಜೀವ ಬೆದರಿಕೆ ಅಪರಾಧದಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆರೋಪಿಗೆ ಬಲಾತ್ಕಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ, 15 ಸಾವಿರ ರು. ದಂಡ ಮತ್ತು ಜೀವ ಬೆದರಿಕೆ ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ಆದೇಶ ರದ್ದು ಕೋರಿ ಆರೋಪಿ ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದ. ಆರೋಪಿ ಪರ ವಕೀಲರು, ಲೈಂಗಿಕ ಕ್ರಿಯೆ ನಡೆದಿದೆ ಎಂದು ಹೇಳಿದರೂ ಸಂತ್ರಸ್ತೆಯ ಖಾಸಗಿ ಭಾಗದಲ್ಲಿ ಗಾಯಗಳು ಪತ್ತೆಯಾಗಿಲ್ಲ. ಆರೋಪಿಗೂ ಯಾವುದೇ ಗಾಯಗಳು ಆಗಿಲ್ಲ. 

ಅನೈತಿಕ ಸಂಬಂಧಕ್ಕೆ ಹುಟ್ಟಿದ ಮಗುವನ್ನು ಆಟೋದಲ್ಲಿಟ್ಟು ಪರಾರಿ: ಓರ್ವನ ಬಂಧನ

ಕೇವಲ ಸಂತ್ರಸ್ತೆ, ಆಕೆಯ ತಾಯಿ ಮತ್ತು ಸಹೋದರನ ಹೇಳಿಕೆ ಆಧರಿಸಿ ಅಧೀನ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿದೆ ಎಂದು ಆಕ್ಷೇಪಿಸಿದ್ದರು. ಪೊಲೀಸರ ಪರ ಸರ್ಕಾರಿ ಅಭಿಯೋಜಕರು, ಯಾವ ರೀತಿ ಆರೋಪಿ ಕೃತ್ಯ ಎಸಗಿದ ಎಂಬ ಬಗ್ಗೆ ಸಂತ್ರಸ್ತೆ ಸ್ಪಷ್ಟವಾಗಿ ಹೇಳಿಕೆ ನೀಡಿದ್ದಾರೆ. ದೂರು ದಾಖಲಿಸಿ ಯಾವ ತಾಯಿಯೂ ಮಗಳ ಜೀವನ ಹಾಳು ಮಾಡಲು ಬಯಸುವುದಿಲ್ಲ. ಆದ್ದರಿಂದ ಅಧೀನ ನ್ಯಾಯಾಲಯ ಆರೋಪಿಗೆ ವಿಧಿಸಿರುವ ಶಿಕ್ಷೆ ಎತ್ತಿ ಹಿಡಿಯಬೇಕು ಎಂದು ಕೋರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌