
ಬೆಂಗಳೂರು(ಅ.04): ರಾಜ್ಯದಲ್ಲಿ ಲಾಕ್‌ಡೌನ್ ಬಳಿಕ ಯುವಕರು ಕೊರೋನಾ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಶೇ.51.91 ರಷ್ಟು ಸೋಂಕು ಯುವಕರಲ್ಲಿಯೇ ಉಂಟಾಗಿದ್ದು, ಇವರಿಂದ ಮನೆಯಲ್ಲಿರುವ ಹಿರಿಯರೂ ಸಹ ಅಪಾಯಕ್ಕೆ ಸಿಲುಕುತ್ತಿದ್ದಾರೆ ಎಂದು ತಜ್ಞರು ಎಚ್ಚರಿಸಿದ್ದಾರೆ.
"
ಒಟ್ಟು ಸೋಂಕಿನಲ್ಲಿ 20 ರಿಂದ 40 ವರ್ಷದೊಳಗಿನವರಲ್ಲೇ ಶೇ.44.64 ಸೋಂಕು ವರದಿಯಾಗಿದೆ. ಸೆ.28ರ ವೇಳೆಗೆ 5,82,458 ಮಂದಿಗೆ ಸೋಂಕು ಉಂಟಾಗಿದ್ದು, ಈ ಪೈಕಿ 10 ವರ್ಷದಿಂದ 40 ವರ್ಷದೊಳಗಿನ 3,02,356 (ಶೇ.51.91) ಮಂದಿಗೆ ಸೋಂಕು ಉಂಟಾಗಿದೆ.
ಯುವಕರ ನಿರ್ಲಕ್ಷ್ಯದಿಂದ ಮನೆಯಲ್ಲಿರುವ ಹಿರಿಯ ವಯಸ್ಕರು ಹಾಗೂ 10 ವರ್ಷದೊಳಗಿನ ಕಂದಮ್ಮಗಳ ಜೀವಕ್ಕೆ ಅಪಾಯ ಉಂಟಾಗುತ್ತಿದೆ. ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟು 71,494 ಮಂದಿಗೆ ಸೋಂಕು ಉಂಟಾಗಿದ್ದರೆ ಪ್ರತಿ 100 ಮಂದಿಯಲ್ಲಿ 6.3 ಮಂದಿಯಂತೆ ಬರೋಬ್ಬರಿ 4,470 ಮಂದಿ ಸಾವನ್ನಪ್ಪಿದ್ದಾರೆ. 10 ವರ್ಷದೊಳಗಿನ ಸುಮಾರು 20 ಸಾವಿರ ಕಂದಮ್ಮಗಳಿಗೆ ಸೋಂಕು ಉಂಟಾಗಿದ್ದು, 20 ಮಂದಿ ಬಲಿಯಾಗಿದ್ದಾರೆ. ಹೀಗಾಗಿ ಯುವಕರು ಅನಗತ್ಯವಾಗಿ ಹೊರಗಡೆ ಓಡಾಡುವುದನ್ನು ತಪ್ಪಿಸಬೇಕು. ಆದಷ್ಟುಎಚ್ಚರಿಕೆಯಿಂದ ಇರಬೇಕು ಎಂದು ಕೊರೋನಾ ತಜ್ಞರ ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೋನಾ ಗುಣಮುಖರ ಸಂಖ್ಯೆ 5 ಲಕ್ಷ..!
ಈ ಬಗ್ಗೆ ಪ್ರತಿಕ್ರಿಯಿಸಿದ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ಹೊರಗಡೆ ಓಡಾಡುವವರು ತುಂಬಾ ಜಾಗರೂಕತೆಯಿಂದ ಇರುವುದು ಮುಖ್ಯ. ಇವರು ನಿರ್ಲಕ್ಷ್ಯ ವಹಿಸಿದರೆ ಮನೆಯಲ್ಲಿರುವ ಪುಟ್ಟಹಾಗೂ ಹಿರಿಯ ಜೀವಗಳು ಅಪಾಯಕ್ಕೆ ಸಿಲುಕುತ್ತವೆ. ಹೀಗಾಗಿ ಯುವಕರಲ್ಲಿ ಕೊರೋನಾದಿಂದ ದುಷ್ಪರಿಣಾಮ ಕಡಿಮೆ ಎಂಬ ನಿರ್ಲಕ್ಷ್ಯ ಬೇಡ ಎಂದು ಎಚ್ಚರಿಸಿದರು.
ಹದಿಹರೆಯದವರಲ್ಲಿ ಸೋಂಕು ಹೆಚ್ಚು
ಸೆ.28ರ ವೇಳೆಗೆ 10 ವರ್ಷದೊಳಗಿನ 19,652 ಮಂದಿ ಕಂದಮ್ಮಗಳಿಗೆ ಸೋಂಕು ಉಂಟಾಗಿದೆ. 11 ರಿಂದ 20 ವರ್ಷದವರಲ್ಲಿ 42,316, 21 ರಿಂದ 30 ವರ್ಷದವರಲ್ಲಿ 1,29,976, 31 ರಿಂದ 40 ವರ್ಷದವರಲ್ಲಿ 1,30,064, 41 ರಿಂದ 50 ವರ್ಷದವರಲ್ಲಿ 95,989, 51 ರಿಂದ 60 ವರ್ಷದವರಲ್ಲಿ 77,316 ಮಂದಿ, 60 ವರ್ಷ ಮೇಲ್ಪಟ್ಟು 71,494 ಮಂದಿಗೆ ಸೋಂಕು ಉಂಟಾಗಿದೆ. ಈ ಪೈಕಿ 10 ವರ್ಷದೊಳಗಿನ 20 ಮಂದಿ ಕಂದಮ್ಮಗಳು, 11 ರಿಂದ 20 ವರ್ಷದ 38 ಮಂದಿ ಮಕ್ಕಳು, 21 ರಿಂದ 30 ವರ್ಷದ 176 ಯುವಕರು, 31 ರಿಂದ 40 ವರ್ಷದ 525 ಮಂದಿ, 41 ರಿಂದ 50 ವರ್ಷದ 1,166 ಮಂದಿ, 51 ರಿಂದ 60 ವರ್ಷದ 2,146 60 ವರ್ಷ ಮೇಲ್ಪಟ್ಟು 4,470 ಮಂದಿ ಸಾವನ್ನಪ್ಪಿದ್ದಾರೆ.
60 ವರ್ಷ ದಾಟಿದ್ದರೆ ಅಪಾಯ ತಪ್ಪಿದ್ದಲ್ಲ!
ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟವರಲ್ಲಿ ಶೇ.6.3 ರಷ್ಟುಸಾವು ಸಂಭವಿಸುತ್ತಿದೆ. ಪ್ರತಿ 100 ಸೋಂಕಿತರಲ್ಲಿ 6.3 ಮಂದಿ ಸಾವನ್ನಪ್ಪುತ್ತಿದ್ದಾರೆ. ಉಳಿದಂತೆ 51 ರಿಂದ 60 ವರ್ಷದವರಲ್ಲಿ ಶೇ.2.8 ರಷ್ಟುಸಾವಿನ ದರ, 41 ರಿಂದ 50 ವರ್ಷದವರಲ್ಲಿ ಶೇ. 1.2, 31 ರಿಂದ 40 ವರ್ಷದವರಲ್ಲಿ ಶೇ.0.4, 21 ರಿಂದ 30 ವರ್ಷದವರಲ್ಲಿ ಶೇ.0.1, 20 ವರ್ಷದೊಳಗಿನವರಲ್ಲಿ ಶೇ.0.1 ರಷ್ಟು ಸಾವಿನ ದರ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ