Karnataka Assembly Elections 2023: ಮತ ಹಾಕಿಸಲು 5000+ ಬಸ್‌, ಮಿನಿಬಸ್‌ ಬುಕಿಂಗ್‌..!

Published : May 04, 2023, 01:00 AM IST
Karnataka Assembly Elections 2023: ಮತ ಹಾಕಿಸಲು 5000+ ಬಸ್‌, ಮಿನಿಬಸ್‌ ಬುಕಿಂಗ್‌..!

ಸಾರಾಂಶ

ಬೆಂಗಳೂರಿನಲ್ಲಿ ನೆಲೆಸಿರುವ ಮತದಾರರನ್ನು ಊರಿಗೆ ಕರೆಸಿ ಮತ ಹಾಕಿಸಲು ರಾಜಕೀಯ ಪಕ್ಷ, ಅಭ್ಯರ್ಥಿಗಳಿಂದ ಕಸರತ್ತು, ಮೇ 9ರಂದು ರಾಜ್ಯದಲ್ಲಿ ದುಪ್ಪಟ್ಟು ಬಸ್‌ ಸಂಚಾರ, ಟೆಂಪೋ ಟ್ರಾವೆಲರ್‌, ಕಾರುಗಳಿಗೂ ಭರ್ಜರಿ ಬೇಡಿಕೆ, ಮಲೆನಾಡು, ಕರಾವಳಿ ಕ್ಷೇತ್ರಗಳಿಂದ ಬೇಡಿಕೆ.  

ಗಿರೀಶ್‌ ಗರಗ

ಬೆಂಗಳೂರು(ಮೇ.04): ಚುನಾವಣೆ ಹಿನ್ನೆಲೆಯಲ್ಲಿ ಸಾರಿಗೆ ಉದ್ಯಮ ಚಿಗಿತುಕೊಂಡಿದ್ದು, ಮತದಾನದ ದಿನದಂದು ಮತದಾರರನ್ನು ಕರೆತರಲು ರಾಜಕೀಯ ಪಕ್ಷ, ಮುಖಂಡರಿಂದ ಖಾಸಗಿ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಮೇ 10ರಂದು ನಡೆಯಲಿದೆ. ಮತದಾರರ ಮನವೊಲಿಕೆಗೆ ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ. ಅದರ ಜತೆಗೆ ಬೇರೆ ಜಿಲ್ಲೆಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಮತದಾರರನ್ನು ಮತ ಚಲಾವಣೆಗೆ ಕರೆತರಲು ಈಗಲೇ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ಪ್ರಮುಖವಾಗಿ ಮಲೆನಾಡು, ಕರಾವಳಿ ಭಾಗದ ಜಿಲ್ಲೆಗಳಲ್ಲಿನ ಅಭ್ಯರ್ಥಿಗಳು ಬೆಂಗಳೂರಿನಲ್ಲಿರುವ ಮತದಾರರನ್ನು ಈಗಾಗಲೇ ಸಂಪರ್ಕಸಿ ಮತದಾನ ಮಾಡಲು ತಾವೇ ಕರೆದುಕೊಂಡು ಹೋಗುತ್ತೇವೆ ಎಂದು ಭರವಸೆ ನೀಡಿದ್ದಾರೆ. ಹೀಗಾಗಿಯೇ ಬಸ್‌ ಹಾಗೂ ಮಿನಿ ಬಸ್‌ ಸೇರಿ ಇನ್ನಿತರ ವಾಹನಗಳಿಗೆ ಬೇಡಿಕೆ ಹೆಚ್ಚಿದ್ದು, 6 ಸಾವಿರಕ್ಕೂ ಹೆಚ್ಚಿನ ವಾಹನಗಳನ್ನು ಮುಂಗಡ ಬುಕಿಂಗ್‌ ಮಾಡಲಾಗಿದೆ.

ಹಿಂದಿನ ದಿನ ಪ್ರಯಾಣ:

ಮತದಾನದ ದಿನವಾದ ಮೇ 10ರಂದು ಮತದಾರರು ಮತಗಟ್ಟೆಯಲ್ಲಿರುವಂತೆ ಮಾಡಲು ರಾಜಕೀಯ ಪಕ್ಷಗಳು ಈಗಾಗಲೇ ಸಿದ್ಧತೆ ಮಾಡಿಕೊಂಡಿವೆ. ಮೇ 9ರಂದು ಮತದಾರರನ್ನು ಬಸ್‌ ಹಾಗೂ ಮಿನಿ ಬಸ್‌ಗಳ ಮೂಲಕ ಕರೆದುಕೊಂಡು ಹೋಗಲಾಗುತ್ತದೆ. ಒಂದು ಕ್ಷೇತ್ರದ ಮತದಾರರನ್ನು ಒಂದೆಡೆ ಸೇರಿಸಿ ಅಲ್ಲಿಂದ ಬಸ್‌ಗಳ ಮೂಲಕ ಕರೆದುಕೊಂಡು ಹೋಗಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡುಹೊಡೆದ ಕೋಲಾರ ಪಕ್ಷೇತರ ಅಭ್ಯರ್ಥಿ!

ಶೇ.100 ಹೆಚ್ಚುವರಿ ಬಸ್‌ ಪ್ರಯಾಣ:

ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರತಿದಿನ 2 ಸಾವಿರದಿಂದ 2,500 ಖಾಸಗಿ ಬಸ್‌ಗಳು ಸಂಚರಿಸುತ್ತವೆ. ಅದರಲ್ಲೂ ಮಲೆನಾಡು, ಕರಾವಳಿ, ಮಧ್ಯ ಕರ್ನಾಟಕ ಭಾಗಗಳಿಗೆ ಹೆಚ್ಚಿನ ಬಸ್‌ಗಳು ತೆರಳುತ್ತವೆ. ಆದರೆ, ಮೇ 9ರಂದು 5 ಸಾವಿರಕ್ಕೂ ಹೆಚ್ಚಿನ ಬಸ್‌ಗಳು ಬೆಂಗಳೂರಿನಿಂದ ತೆರಳಲಿವೆ. ಅದಕ್ಕಾಗಿ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಬಸ್‌ಗಳನ್ನು ತರಿಸಿಕೊಳ್ಳಲಾಗುತ್ತಿದೆ. ಒಪ್ಪಂದದ ಮೇರೆಗೆ ಸೇವೆಗೆ ನೀಡುವುದರಿಂದ ಸಾರಿಗೆ ಇಲಾಖೆಯಿಂದಲೂ ಯಾವುದೇ ಆಕ್ಷೇಪ ವ್ಯಕ್ತವಾಗುವುದಿಲ್ಲ. ಹೀಗಾಗಿ ಪ್ರತಿನಿತ್ಯ ಪ್ರಯಾಣಿಕ ಸೇವೆ ನೀಡುವ ಬಸ್‌ಗಳು ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಒಪ್ಪಂದದ ಮೇರೆಗೆ ಸೇವೆ ನೀಡಲು ನಿರ್ಧರಿಸಿವೆ.

ಸಣ್ಣ ವಾಹನಗಳಿಗೂ ಬೇಡಿಕೆ ಹೆಚ್ಚು:

ಬಸ್‌ಗಳ ಜತೆಗೆ, ಮಿನಿ ಬಸ್‌, ಟೆಂಪೋ ಟ್ರಾವೆಲರ್‌, ಕಾರುಗಳಿಗೂ ಬೇಡಿಕೆ ಹೆಚ್ಚಾಗಿದೆ. ನಗರದಲ್ಲಿ ಅಂದಾಜು 10 ಸಾವಿರಕ್ಕೂ ಹೆಚ್ಚು ಟ್ಯಾಕ್ಸಿ ಸೇವೆ ನೀಡುವ ವಾಹನಗಳಿವೆ. ಶಾಲೆಗಳಿಗೆ ರಜೆ ಇರುವ ಕಾರಣ ಆ ವಾಹನಗಳು ಪ್ರವಾಸಿ ಸೇವೆ ನೀಡುತ್ತವೆ. ಆದರೆ, ಈ ಬಾರಿ ಚುನಾವಣೆ ಇರುವ ಕಾರಣ ಶೇ. 40ಕ್ಕೂ ಹೆಚ್ಚಿನ ವಾಹನಗಳನ್ನು ಚುನಾವಣಾ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಉಳಿದ ವಾಹನಗಳನ್ನು ಮೇ 9 ಮತ್ತು 10ನೇ ತಾರೀಖಿನಂದು ಮತದಾರರನ್ನು ಕರೆದುಕೊಂಡು ಹೋಗುವ ಕೆಲಸಕ್ಕೆ ರಾಜಕೀಯ ಮುಖಂಡರು ಬಳಸಿಕೊಳ್ಳುತ್ತಿದ್ದಾರೆ.

ದೇಶದಲ್ಲಿ ಕಾಂಗ್ರೆಸ್‌ ಇಲ್ಲದಂತೆ ಮಾಡುವ ಶಕ್ತಿ ಮೋದಿಗಿದೆ: ಸಚಿವ ರಾಮದಾಸ್‌ ಅಠವಳೆ

ಚುನಾವಣಾ ಕೆಲಸಕ್ಕೆ ಸರ್ಕಾರಿ ಬಸ್‌ಗಳು:

ಖಾಸಗಿ ವಾಹನಗಳನ್ನು ಹೊರತುಪಡಿಸಿ ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್‌ಗಳನ್ನು ಚುನಾವಣಾ ಕಾರ್ಯಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 8 ಸಾವಿರಕ್ಕೂ ಹೆಚ್ಚಿನ ಮತಗಟ್ಟೆಗಳಿದ್ದು, ಅವುಗಳಿಗೆ ಮೇ 9ರಂದೇ ಮತಗಟ್ಟೆಸಿಬ್ಬಂದಿಗಳು ತೆರಳಲಿದ್ದಾರೆ. ಅವರು ವಿವಿಪ್ಯಾಟ್‌, ಎಲೆಕ್ಟ್ರಾನಿಕ್‌ ವೋಟಿಂಗ್‌ ಯಂತ್ರಗಳನ್ನು ತೆಗೆದುಕೊಂಡು ಹೋಗಿ ಮತಗಟ್ಟೆಗಳಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಹೀಗಾಗಿ ಅವರನ್ನು ಮತಗಟ್ಟೆಗಳಿಗೆ ಕರೆದುಕೊಂಡು ಹೋಗಲು ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್‌ಗಳನ್ನು ಬೆಂಗಳೂರು ಚುನಾವಣಾ ವಿಭಾಗ ತೆಗೆದುಕೊಳ್ಳಲಿದೆ. ಸುಮಾರು 3 ಸಾವಿರಕ್ಕೂ ಹೆಚ್ಚು ಬಸ್‌ಗಳನ್ನು ಮೇ 9 ಮತ್ತು 10ರಂದು ಬಳಸಿಕೊಳ್ಳಲಾಗುತ್ತಿದೆ.

ಬೇರೆ ಜಿಲ್ಲೆಗೆಗಳಿಗೆ ತೆರಳಲು ಬುಕಿಂಗ್‌

ಚುನಾವಣೆ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಮತದಾನದ ಹಿಂದಿನ ದಿನ ಮತದಾರರು ಬೇರೆ ಜಿಲ್ಲೆಗಳಿಗೆ ತೆರಳಲು ವಾಹನಗಳಿಗಾಗಿ ಬುಕ್ಕಿಂಗ್‌ ಮಾಡಲಾಗುತ್ತಿದೆ ಅಂತ ರಾಜ್ಯ ಟ್ರಾವೆಲ್ಸ್‌ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹಿಂದೂ, ಧರ್ಮವೇ ಅಲ್ಲ, ಅದೊಂದು ಬೈಗುಳ ಶಬ್ದ : ಬಿ.ಜಿ ಕೋಳ್ಸೆ
ಸಿದ್ದರಾಮಯ್ಯ ಬಳಿಕ ಸತೀಶ್‌ ಜಾರಕಿಹೊಳಿ ಸಿಎಂ ಆದರೆ ಖುಷಿ: ಬಿ.ಕೆ.ಹರಿಪ್ರಸಾದ್‌