
ಬೆಂಗಳೂರು(ಫೆ.15): ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠ, ಬಸವಕೇಂದ್ರಗಳು, ಬಸವ ಸಂಘಟನೆಗಳು ಹಾಗೂ ಸರ್ವ ಜನಾಂಗದ ಮಠಾಧೀಶರ ಸಹಯೋಗದೊಂದಿಗೆ ಫೆ.16ರಂದು ಬೆಂಗಳೂರಿನ ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ‘ಶಿವಯೋಗಿ ಸಂಭ್ರಮ, 2ನೇ ಅಸಂಖ್ಯ ಪ್ರಮಥರ ಗಣಮೇಳ ಹಾಗೂ ಸರ್ವಶರಣರ ಸಮ್ಮೇಳನ’ ಹಮ್ಮಿಕೊಳ್ಳಲಾಗಿದೆ.
ಕೈಗಾರಿಕೆ ಆರಂಭಕ್ಕೆ 30 ದಿನದಲ್ಲಿ ಅನುಮತಿ: ಸಿಎಂ
ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಸಂಖ್ಯ ಪ್ರಮಥರ ಗಣಮೇಳದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಬಿ.ವೈ. ವಿಜಯೇಂದ್ರ, ಜಾಗತಿಕ ಶಾಂತಿ ಮತ್ತು ಪ್ರಗತಿಗಾಗಿ ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಫೆ.16ರಂದು ಬೆಳಗ್ಗೆ 7.45ಕ್ಕೆ ಮುರುಘಾಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಮರುಘಾಶರಣರು ಶಿವಯೋಗ ಸಂಭ್ರಮ ಧ್ಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಶಾಸಕ ಮಹಿಮಾ ಜೆ.ಪಟೇಲ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಡಾ.ಶಿವಮೂರ್ತಿ ಮರುಘಾ ಶರಣರ ‘ಮಹಾ ಬೆರಗು’ ಇಂಗ್ಲಿಷ್ ಅನುವಾದಿತ ಕೃತಿ ‘ವಂಡರ್ ! ವಂಡರ್ !’ ಅನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಸುತ್ತೂರು ಶಿವರಾತ್ರೀಶ್ವರ ಮಠದ ಪೀಠಾಧ್ಯಕ್ಷ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ತೋಂಟದಾರ್ಯ ಮಠದ ಪೀಠಾಧ್ಯಕ್ಷ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮೀಜಿ, ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ ಗುರೂಜಿ, ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿ, ಕನಕಗುರು ಪೀಠದ ನಿರಂಜನಂದಪುರಿ ಸ್ವಾಮೀಜಿ ಸೇರಿದಂತೆ ರಾಜ್ಯದ ವಿವಿಧ ಮಠಗಳ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ಪೊಲೀಸ್ ಇಲಾಖೆ ದುರ್ಬಳಕೆ: ಸಿಎಂ ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆ
ಮುರುಘಾಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಮರುಘಾಶರಣರು ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನ ನೇತೃತ್ವದಲ್ಲಿ 1.96 ಲಕ್ಷ ಶಿವಶರಣರ ಸಮಾವೇಶ ನಡೆದಿದ್ದರ ಬಗ್ಗೆ ಇತಿಹಾಸವಿದೆ. ಇದಾದ ನಂತರ 21ನೇ ಶತಮಾನದಲ್ಲಿ ಅಂದರೆ, ಫೆ.16ರಂದು ಅದೇ ಮಾದರಿಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನವು ಜಾತ್ಯತೀತ, ಪಕ್ಷಾತೀತವಾಗಿದ್ದು, ಸರ್ವರಿಗೂ ಮುಕ್ತ ಆಹ್ವಾನವಿದೆ. ರಾಜ್ಯದ ವಿವಿಧ ಮಠಗಳ ಮಠಾಧೀಶರು ಸೇರಿದಂತೆ ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ, ಹುಬ್ಬಳ್ಳಿ, ಬೆಳಗಾವಿ ಹಾಸನ, ಮಂಡ್ಯ, ಬೆಂಗಳೂರು ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯದ ವಿವಿಧೆಡೆಗಳಿಂದ ಸುಮಾರು 2 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಈ.ಕೃಷ್ಣಪ್ಪ, ಉದ್ಯಮಿಗಳಾದ ಷಣುಗಪ್ಪ, ದಯಾನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ