ರಾಜ್ಯದಲ್ಲಿ ಅರ್ಧಕ್ಕರ್ಧ ಕಲ್ಲು ಕ್ವಾರಿಗಳು ಅಕ್ರಮ!| ಕರ್ನಾಟಕದಲ್ಲಿವೆ ಸುಮಾರು 5000ಕ್ಕೂ ಹೆಚ್ಚು ಕಲ್ಲು ಕ್ವಾರಿಗಳು| ಇವುಗಳಲ್ಲಿ ಶೇ.50ರಷ್ಟುಕ್ವಾರಿಗಳಿಗೆ ಪರವಾನಗಿ ಇಲ್ಲ| ಇಂತಹ ಅಕ್ರಮ ಕ್ವಾರಿಗಳಲ್ಲೇ ಹೆಚ್ಚಿನ ದುರಂತ, ಸಾವು ನೋವು| ಮಂಡ್ಯವೊಂದರಲ್ಲೇ 1000ಕ್ಕೂ ಹೆಚ್ಚು ಅಕ್ರಮ ಗಣಿ| ರಾಜ್ಯದ ಅಕ್ರಮ ಕಲ್ಲು ಕ್ವಾರಿಗಳ ಅಸಲಿ ಚಿತ್ರಣ
ಬೆಂಗಳೂರು(ಜ.24): ರಾಜ್ಯದ 27 ಜಿಲ್ಲೆಗಳಲ್ಲಿ 5350ಕ್ಕೂ ಹೆಚ್ಚು ಕಲ್ಲು ಕ್ವಾರಿಗಳಿದ್ದು, ಜಲ್ಲಿ ಹಾಗೂ ಎಂ-ಸ್ಯಾಂಡ್‌ಗಳನ್ನು ಉತ್ಪಾದಿಸುತ್ತಿವೆ. ಈ ಪೈಕಿ 2850ರಷ್ಟುಕ್ವಾರಿಗಳು ಅಧಿಕೃತ ಪರವಾನಗಿ ಪಡೆದು ಕಾರ್ಯನಿರ್ವಹಿಸುತ್ತಿದ್ದರೆ, ಸುಮಾರು 2500ರಷ್ಟುಕ್ವಾರಿಗಳಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಭೂಮಿ ಅಗೆಯಲಾಗುತ್ತಿದೆ. ವಿಶೇಷ ಎಂದರೆ, ಅತಿ ಹೆಚ್ಚು ಅವಘಡಗಳು ಹಾಗೂ ಸಾವುನೋವುಗಳು ಸಂಭವಿಸಿರುವುದು ಇಂತಹ ಅಕ್ರಮ ಕ್ವಾರಿಗಳಲ್ಲೇ!
ಇನ್ನೂ ವಿಪರ್ಯಾಸದ ಸಂಗತಿ ಎಂದರೆ, ಇಂತಹ ಕಲ್ಲು ಗಣಿಗಳು ರಾಜಕಾರಣಿಗಳು ಹಾಗೂ ಅವರ ಬೆಂಬಲಿಗರ ಕೃಪಾಕಟಾಕ್ಷದಿಂದ ನಡೆಯುತ್ತಿವೆ. ಆಡಳಿತ ವರ್ಗಕ್ಕೆ ಇವೆಲ್ಲ ಕಣ್ಣಿಗೆ ರಾಚುವಂತೆ ಕಂಡರೂ ಜಾಣ ಕುರುಡುತನ ಪ್ರದರ್ಶಿಸುತ್ತಿದೆ.
ಶಿವಮೊಗ್ಗದ ಹುಣಸೋಡು ಕಲ್ಲು ಕ್ರಷರ್‌ನಲ್ಲಿ 5 ಜನರ ಬಲಿ ಪಡೆದ ದುರ್ಘಟನೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ‘ಕನ್ನಡಪ್ರಭ’ ನಡೆಸಿದ ವಾಸ್ತವಾಂಶ ಪರೀಕ್ಷೆಯಲ್ಲಿ ಕಂಡು ಬಂದ ಚಿತ್ರಣವಿದು.
ಮಂಡ್ಯದಲ್ಲೇ 1000ಕ್ಕೂ ಹೆಚ್ಚು:
ರಿಯಾಲಿಟಿ ಚೆಕ್‌ನಲ್ಲಿ ಕಂಡು ಬಂದ ಮತ್ತೊಂದು ಅಚ್ಚರಿಯ ಸಂಗತಿ ಎಂದರೆ, ಮಂಡ್ಯ ಜಿಲ್ಲೆ ಒಂದರಲ್ಲೇ, 1000ಕ್ಕೂ ಅಧಿಕ ಅಕ್ರಮ ಗಣಿಗಳು ಇವೆ. ಕೆಆರ್‌ಎಸ್‌ಗೆ ಸಮೀಪ ಇರುವ ಪಾಂಡವಪುರದ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಗೆ ಜಿಲ್ಲಾಡಳಿತದಿಂದ ನಿಷೇಧ ಇದೆ. ಆದರೂ, ಅಲ್ಲಿ ನಿರಂತರವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಲೇ ಇದೆ. ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 600, ಉಡುಪಿಯಲ್ಲಿ 200, ಬಳ್ಳಾರಿಯಲ್ಲಿ 33, ಕಲಬುರಗಿಯಲ್ಲಿ 50ಕ್ಕೂ ಹೆಚ್ಚು ಅಕ್ರಮ ಗಣಿಗಳು ಅವ್ಯಾಹತವಾಗಿ ನಡೆಯುತ್ತಿವೆ.
ಅಕ್ರಮ ಗಣಿಗಳಲ್ಲಿ ದುರಂತ, ಸಾವುನೋವು: ಇನ್ನೂ ಆಘಾತಕಾರಿ ಸಂಗತಿ ಎಂದರೆ, ಇಂತಹ ಅಕ್ರಮ ಗಣಿಗಳಲ್ಲಿ ದುರಂತ ಹಾಗೂ ಸಾವುನೋವು ಅತಿಯಾಗಿ ಸಂಭವಿಸುತ್ತಿವೆ. ಉದಾಹರಣೆಗೆ, 2018ರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಮೇಲಿನ ದಾಳಿಗೆ ಹೋದ ಅಧಿಕಾರಿಯೊಬ್ಬರು ಸ್ಫೋಟಕ್ಕೆ ಬಲಿಯಾಗಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ 2004ರಲ್ಲಿ ಕಂಪ್ರೆಸರ್ ಸ್ಫೋಟಗೊಂಡು 4 ಮಂದಿ, 2018ರಲ್ಲಿ ಜಿಲೆಟಿನ್ ಸ್ಫೋಟಗೊಂಡು 2 ಕಾರ್ಮಿಕರು ಮೃತಪಟ್ಟಿದ್ದರು. ಹಾಸನದಲ್ಲಿ 2013ರಲ್ಲಿ ಸ್ಫೋಟಕ್ಕೆ ಅಪ್ಪ, ಮಗ, 2017ರಲ್ಲಿ ರಾಮನಗರದಲ್ಲಿ ಇಬ್ಬರು ಬಿಹಾರಿ ಕಾರ್ಮಿಕರು, 2007ರಲ್ಲಿ ಚಾಮರಾಜನಗರದಲ್ಲಿ ಐವರು ಸ್ಫೋಟಕ್ಕೆ ಬಲಿಯಾಗಿದ್ದಾರೆ.
ಶಿವಮೊಗ್ಗದಲ್ಲಿ 5 ಬಲಿ:
ಶಿವಮೊಗ್ಗದ ಹುಣಸೋಡು ಕಲ್ಲು ಕ್ರಷರ್ ಗಣಿಯಲ್ಲಿ ಗುರುವಾರ ರಾತ್ರಿ ಲಾರಿಯಲ್ಲಿ ಸಂಗ್ರಹಿಸಿದ್ದ ಜೆಲ್ ಮಾದರಿಯ ಸ್ಫೋಟಕ ಸ್ಫೋಟಿಸಿ 5 ಮಂದಿ ಕಾರ್ಮಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಕಾರ್ಮಿಕರ ದೇಹಗಳು ಛಿದ್ರ ಛಿದ್ರವಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸ್ಫೋಟದ ಸದ್ದಿಗೆ ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲಿನ ನಾಲ್ಕು ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದರು. 100ಕ್ಕೂ ಹೆಚ್ಚು ಮನೆಗಳು ಬಿರುಕು ಬಿಟ್ಟಿದ್ದವು.
ಬಲಿ ಹೊಂಡಗಳು:
ಇದಲ್ಲದೆ, ಅನೇಕ ಕಡೆ ಕ್ವಾರಿಗಳನ್ನು ಹಾಗೆಯೇ ಬಿಡಲಾಗಿದೆ. ಮಳೆ ಬಂದಾಗ ಅವುಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಈ ಹೊಂಡಗಳಲ್ಲಿ ಈಜಲು ಹೋಗಿ ಪ್ರತಿ ವರ್ಷ ಅಪಾರ ಸಂಖ್ಯೆಯಲ್ಲಿ ಮಕ್ಕಳು, ಯುವಕರು ಸಾವನ್ನಪ್ಪುತ್ತಾರೆ. ಒಂದು ಅಂದಾಜಿನ ಪ್ರಕಾರ, ಇಂತಹ ಕ್ವಾರಿ ಹೊಂಡಗಳು ರಾಜ್ಯದಲ್ಲಿ ಪ್ರತಿ ವರ್ಷ 20ಕ್ಕೂ ಹೆಚ್ಚು ಬಲಿ ಪಡೆಯುತ್ತವೆ.