ರಾಷ್ಟ್ರರಾಜಧಾನಿಯಲ್ಲಿ ಗತ ವೈಭವ ಸಾರುವ `ವಿಜಯನಗರ' ಸ್ತಬ್ದಚಿತ್ರದ ವಿಶೇಷತೆಗಳು

By Suvarna News  |  First Published Jan 23, 2021, 10:26 PM IST

ರಾಷ್ಟ್ರ ರಾಜಧಾನಿಯಲ್ಲಿ ಗತ ವೈಭವ ಸಾರುವ `ವಿಜಯನಗರ' ಸ್ತಬ್ದಚಿತ್ರದಲ್ಲಿ ವಿನ್ಯಾಸಗೊಳಿಸಲಾಗಿರುವ ವಿಶೇಷತೆಗಳ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಾಗಿ


ನವದೆಹಲಿ/ಬೆಂಗಳೂರು, (ಜ.23): ರಾಷ್ಟ್ರರಾಜಧಾನಿಯಲ್ಲಿ ವಿಜಯನಗರದ ಶ್ರೀಕೃಷ್ಣದೇವರಾಯರ ದರ್ಬಾರ್..! ರಾಜಭಟರ ನಡುವೆ ದರ್ಬಾರ್ ಸಭೆ, ಊಘೇ ಅಂಥ ಬಹುಪರಾಕ್ ಹೇಳಲು ಸಾಮಂತ ರಾಜರು, ಅರಸಿ, ಹಾರೈಸಲು ಆಚಾರ್ಯ ವ್ಯಾಸತೀರ್ಥರು, ಜೊತೆಗೆ ಒಬ್ಬ ಪೋರ್ಚುಗೀಸರ ಗೋವಾದ ರಾಯಭಾರಿ..

ಹೀಗೆ ಥೇಟ್ ಆ ಕೃಷ್ಣದೇವರಾಯನ ಆಸ್ಥಾನವೇ ಸೃಷ್ಠಿಯಾಗಿತ್ತು ಡೆಲ್ಲಿ ಕ್ಯಾಂಟ್ ಪ್ರದೇಶದ ರಾಷ್ಟ್ರೀಯ ರಂಗ ಶಾಲಾ ಮೈದಾನದಲ್ಲಿ. ಜನವರಿ 26, ಗಣರಾಜ್ಯೋತ್ಸವದ ಸಲುವಾಗಿ  ಇಡೀ ಭಾರತಕ್ಕೆ ಕರ್ನಾಟಕದ ರಾಜ ಪರಂಪರೆಯನ್ನು ಪರಿಚಯಿಸಲಿರುವ, ವಿಜಯ ನಗರದ ಗತವೈಭವ ಸಾರುವ `ವಿಜಯನಗರ' ಸ್ತಬ್ದಚಿತ್ರ ರಾಜಪಥದ ಬೀದಿಯಲ್ಲಿ ಮೆರವಣಿಗೆ ಹೊರಡಲು ಸಿದ್ದವಾಗಿದೆ.

Tap to resize

Latest Videos

ನವದೆಹಲಿಯ ರಾಜಪಥದಲ್ಲಿ ಕರ್ನಾಟಕದ ಉಗ್ರ ನರಸಿಂಹ, ಅಂಜನಾದ್ರಿ ಬೆಟ್ಟ...

ಇತಿಹಾಸ ಮತ್ತು ಪುರಾಣಗಳನ್ನು ಮೇಳೈಯಿಸಿ ಸ್ತಬ್ದಚಿತ್ರ
ಸಿಟಿ ಆಫ್ ವಿಕ್ಟರಿ. ಅಂದರೆ ವಿಜಯನಗರ ಅಂತ. ಇದು ಈ ಬಾರಿಯ ಥೀಮ್. ಇತಿಹಾಸ ಮತ್ತು ಪುರಾಣಗಳನ್ನು ಮೇಳೈಯಿಸಿ ಸ್ತಬ್ದಚಿತ್ರ ವಿನ್ಯಾಸಗೊಳಿಸಲಾಗಿದೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪೆಯ ಪ್ರತಿರೂಪ ಸೃಷ್ಠಿಸಲಾಗಿದೆ. ಭಗವಾನ್ ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟ, ಉಗ್ರನರಸಿಂಹ, ಶ್ರೀಕೃಷ್ಣದೇವರಾಯನ ಆಸ್ಥಾನ, ಸಂಗೀತದ ಕಂಬಗಳು, ವಿಜಯನಗರ ಲಾಂಛನ. ಆನೆ ಹೀಗೆ ಪ್ರತಿಯೊಂದನ್ನು ಕೂಡ ನೋಡುಗರಿಗೆ ಕಟ್ಟಿಕೊಡಲಾಗಿದೆ.

ವಿನ್ಯಾಸಕಾರ ಶಶಿಧರ್ ಮಾತು
ಈ ಕುರಿತು `ಕನ್ನಡಪ್ರಭ' ಜೊತೆ ಮಾತನಾಡಿದ ಪ್ರತಿರೂಪಿ, ವಿನ್ಯಾಸಕಾರ ಶಶಿಧರ್ ಅಡಪ, ಪ್ರತಿರೂಪ ವಿನ್ಯಾಸಗೊಳಿಸುವಾಗ ವಾಸ್ತವತೆ ತರಲಾಗಿದೆ. ಇತಿಹಾಸ ಮತ್ತು ಪುರಾಣ ಎರಡೂ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಅಜಾರ ರಾಮಸ್ವಾಮಿ ದೇವಾಲಯ, ಉಗ್ರನರಸಿಂಹ ದೇವಾಲಯಗಳಲ್ಲಿ ಇರುವ ವಾಸ್ತವತೆ ಇಲ್ಲಿ ಸೃಷ್ಠಿ ಮಾಡಲಾಗಿದೆ. ಆ ದೇವಾಲಯದಲ್ಲಿ ಕೆತ್ತಲಾಗಿರುವ ಚಿತ್ರಗಳನ್ನು ಥೇಟ್ ಭಟ್ಟಿ ಇಳಿಸಲಾಗಿದೆ ಅಂಥ ವಿವರಿಸಿದರು.

ಗೋವಾದಲ್ಲಿ ಆಗಲೇ ತಳವೂರಿದ್ದ ಪೋರ್ಚುಗೀಸರು ಕೂಡ ಶ್ರೀಕೃಷ್ಠದೇವಾರಾಯನ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಅವರ ಪರವಾಗಿ ಗೋವಾದ ಅಂದಿನ ರಾಯಭಾರಿ ಅಲ್ಬುಕರ್ಕ ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದು ಕಪ್ಪಕಾಣಿಕೆ ಆರ್ಪಿಸುವ ದೃಶ್ಯವನ್ನು ವಿನ್ಯಾಸ ಮಾಡಲಾಗಿದೆ. ಜೊತೆಗೆ ಸಾಮಂತ ರಾಜರು ಕೂಡ ಕಪ್ಪ ಅರ್ಪಿಸಿ, ಬಹುಪರಾಕ್ ಹೇಳುವ ಸೀನ್ ಸೃಷ್ಟಿ ಮಾಡಲಾಗಿದೆ ಎಂದರು.

ಶಿವಮೊಗ್ಗದ ರಂಗಾಯಣದ ಕಲಾವಿದರರು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಡಿ.ಪಿ.ಮುರಳೀಧರ್ ಮಾತನಾಡಿ, ಈ ಸ್ತಬ್ಧ ಚಿತ್ರಕ್ಕೆ ಮೆರುಗು ತುಂಬಲು ಶಿವಮೊಗ್ಗದ ರಂಗಾಯಣದ ಕಲಾವಿದರನ್ನು ಕರೆತರಲಾಗಿದೆ. 12 ಮಂದಿ ಕಲಾವಿದರು ಸ್ತಬ್ಧ ಚಿತ್ರದ ಜೊತೆ ಅಂದು ರಾಜಪಥದಲ್ಲಿ ಹೆಜ್ಜೆ ಹಾಕಲಿದ್ದಾರೆ. ಮಹಿಳೆಯರ ರಕ್ಷಣೆ ಸಾರುವ ಮಹಿಳಾ ಸೈನಿಕರು, ರಾಜಭಟರು ಇಲ್ಲಿ ಕಾಣಬಹುದಾಗಿದೆ. ಜೊತೆಗೆ ಪ್ರತಿ ಹಂತದಲ್ಲೂ ಕೂಡ ಸೂಕ್ಷ್ಮತೆಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ನೈಜತೆಯನ್ನು ಸ್ತಬ್ದಚಿತ್ರದಲ್ಲಿ ತರಲಾಗಿದೆ ಎಂದು ತಿಳಿಸಿದರು.

click me!