
ಬೆಂಗಳೂರು: ನಗರದಲ್ಲಿ ಗುರುವಾರ ರಾತ್ರಿ 1 ಗಂಟೆ ಕಾಲ ಸುರಿದ ಗಾಳಿ ಮಳೆಗೆ ನಗರದ ವಿವಿಧ ಕಡೆಗಳಲ್ಲಿ ಸುಮಾರು 157 ಬೃಹತ್ ಮರಗಳು, 228ಕ್ಕೂ ಅಧಿಕ ಕೊಂಬೆಗಳು ಮುರಿದು ಬಿದ್ದಿದ್ದು, ಇಬ್ಬರು ಯುವಕರ ಮೇಲೆ ಮರಬಿದ್ದು ಗಂಭೀರ ಸ್ವರೂಪದ ಗಾಯಗಳಾಗಿವೆ. 40 ಕಾರುಗಳು, 30 ದ್ವಿಚಕ್ರವಾಹನಗಳು ಜಖಂಗೊಂಡಿವೆ. ಬಿದ್ದ ಮರ ತೆರವುಗೊಳಿಸಲು ಪಾಲಿಕೆ ಅರಣ್ಯವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಳಗಿನ ಜಾವದವರೆಗೂ ಕಾರ್ಯಾಚರಣೆ ನಡೆಸಿ 132 ಮರಗಳು ಹಾಗೂ 171 ಕೊಂಬೆಗಳನ್ನು ತೆರವುಗೊಳಿಸಿದ್ದಾರೆ.
ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದು, ಶುಕ್ರವಾರ ಸಂಜೆಯವರೆಗೂ ತೆರವು ಕಾರ್ಯ ನಡೆಯಿತು. ಮಳೆ ನೀರು, ಎಲೆ, ಕಸ ಸಹಿತ ಚರಂಡಿಗಳಲ್ಲಿ ತುಂಬಿ ರಸ್ತೆಯಲ್ಲೆಲ್ಲಾ ಹರಿದಾಡುತ್ತಿದ್ದು, ಪಾಲಿಕೆ ಸಿಬ್ಬಂದಿ ಸರಿಪಡಿಸುವ ಕಾರ್ಯದಲ್ಲಿ ತೊಡಗಿದ್ದರು. ನಗರದ ಹೃದಯಭಾಗ ಕೆ.ಆರ್.ವೃತ್ತದ ಅಂಡರ್ ಪಾಸ್ ನೀರು ಖಾಲಿಯಾಗಿದ್ದು, ಶುಕ್ರವಾರ ವಾಹನ ಸಂಚಾರ ಎಂದಿನಂತೆ ಮುಂದುವರಿದಿತ್ತು.
ಏಪ್ರಿಲ್ 29ರಂದು ಸುಮಾರು 500ಕ್ಕೂ ಅಧಿಕ ಮರಗಳು ಹಾಗೂ ಸಾವಿರಾರು ಕೊಂಬೆಗಳು ಬಿದ್ದಿದ್ದು, ಇವುಗಳ ತೆರವುಕಾರ್ಯ ಪೂರ್ಣಗೊಳ್ಳುವ ಮುನ್ನವೇ ಮತ್ತೊಮ್ಮೆ ಬಿರುಗಾಳಿ ಸಹಿತ ಮಳೆ ಬಿದ್ದು ನಗರ ನಿವಾಸಿಗಳು ಪರದಾಡುವಂತಾಗಿದೆ. ಇಂದಿರಾನಗರ 16ನೇ ಕ್ರಾಸ್ ನಲ್ಲಿ ಬಿದ್ದಿದ್ದ ಬೃಹತ್ ಗಾತ್ರದ ಮರವನ್ನು ರಸ್ತೆ ಪಕ್ಕಕ್ಕೆ ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇಲ್ಲಿನ 8ನೇ ಮುಖ್ಯರಸ್ತೆಯಲ್ಲಿ ಮಳೆ ನೀರು ಚರಂಡಿ ನೀರಿನ ಜೊತೆ ಸೇರಿ ರಸ್ತೆಯಲ್ಲೆಲ್ಲಾ ಹರಿದಾಡಿ ದುರ್ವಾಸನೆ ಬೀರಿತ್ತು.
ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಾಲಯದ ಸಮೀಪ ಮನೆ ಮೇಲೆ ಮರ ಬಿದ್ದು ಅಲ್ಲಿನ ನಿವಾಸಿಗಳು ಮನೆಯಿಂದ ಹೊರಬರಲಾಗದೆ ಮನೆಯಲ್ಲೇ ಸಿಲುಕಿದ್ದರು. ವಿಷಯ ತಿಳಿದ ಕೂಡಲೆ ಪೊಲೀಸರು, ಜಿಬಿಎ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಿಸಿದ್ದಾರೆ. ಮರ ಬಿದ್ದ ಕಾರಣ ಮನೆಗೋಡೆಗಳಿಗೆ ಹಾನಿಯಾಗಿದೆ.
ರಾಜಾಜಿ ನಗರದಲ್ಲಿ ಮರಬಿದ್ದು ಕಾರು ಜಖಂಗೊಂಡಿದೆ. ಮಹಾಲಕ್ಷ್ಮಿಲೇಔಟ್ ನ ಪೈಪ್‌ಲೈನ್ ರಸ್ತೆಯಲ್ಲಿ ಮರದ ಕೆಳಗೆ ನಿಲ್ಲಿಸಿದ್ದ ಮೂರು ಕಾರುಗಳು ಸಂಪೂರ್ಣ ಜಖಂಗೊಂಡಿವೆ. ಇದೇ ಸ್ಥಳದಲ್ಲಿ ನಿಲ್ಲಿಸಿದ್ದ ನಾಲ್ಕು ಬೈಕ್ ಗಳು ನಜ್ಜುಗುಜ್ಜಾಗಿವೆ.
ಗುರುವಾರ ರಾತ್ರಿಯಿಂದ ಶುಕ್ರವಾರ ಸಂಜೆಯವರೆಗೆ ಜಿಬಿಎ ವತಿಯಿಂದ ನಿಯೋಜಿಸಲಾಗಿರುವ ತಂಡ ಕೆ.ಆರ್.ರಸ್ತೆಯ ಸಿದ್ದಣ್ಣ ಲೇ ಔಟ್, ಬಸವೇಶ್ವರನಗರ 3ನೇ ಹಂತ, ಪೀಣ್ಯ 3ನೇ ಹಂತ,ಪೀಣ್ಯ 3ನೇ ಹಂತ, ವಿಜಯನಗರದ ಕೃಷ್ಣದೇವರಾಯ ರಸ್ತೆ, ನಾಗರಬಾವಿ 9ನೇ ಬ್ಲಾಕ್, ವಿಜಯನಗರ 1ನೇ ಹಂತ, ಮಲ್ಲೇಶ್ವರಂನ ಕೋದಂಡರಾಮಪುರ, ಬನಶಂಕರಿ ಎರಡನೆ ಹಂತ, ವಿಜಯನಗರದ ಹೊಸಹಳ್ಳಿ ಬಡಾವಣೆ, ನ್ಯೂ ತಿಪ್ಪಸಂದ್ರ 3 ಮುಖ್ಯರಸ್ತೆ ಸೇರಿದಂತೆ ವಿವಿದೆಡೆ 132 ಮರಗಳು 171 ಕೊಂಬೆಗಳನ್ನು ತೆರವುಗೊಳಿಸಿದೆ.
ರಾಜಾಜಿನಗರದ ಸಮೀಪ ಮಳೆಯಿಂದ ತಪ್ಪಿಸಿಕೊಳ್ಳಲು ಸುಮಾರು ಹತ್ತು ಮಂದಿ ಮರದ ಕೆಳಗೆ ನಿಂತಿದ್ದರು. ರಭಸದ ಗಾಳಿಗೆ ಕೊಂಬೆ ಮುರಿದು ಬೀಳುತ್ತಿದ್ದಂತೆ ನಿಂತಿದ್ದ ಜನರು ಮಳೆಯಲ್ಲಿಯೇ ಅಲ್ಲಿಂದ ತಪ್ಪಿಸಿಕೊಂಡು ಪಾರಾದರು. ಸ್ವಲ್ಪ ತಡವಾಗಿದ್ದರೂ ಅಲ್ಲಿದ್ದ ಅಷ್ಟೂ ಜನರು ಮರದಡಿ ಸಿಲುಕಿ ಪ್ರಾಣಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತಿತ್ತು. ಮೋದಿ ಆಸ್ಪತ್ರೆ ರಸ್ತೆ ಸಮೀಪ ರಸ್ತೆಗೆ ಅಡ್ಡಲಾಗಿ ಬಿದ್ದ ಮರದಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಪಾಲಿಕೆ ಸಿಬ್ಬಂದಿ ಮರ ತೆರವು ಮಾಡಿದರು.
ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ದ್ವಿಚಕ್ರವಾಹನ ಸವಾರ ಅಭಿಷೇಕ್ ಎ.ಮಗಜಿ(31) ಎಂಬಾತನ ಮೇಲೆ ಮರಬಿದ್ದು ಗಂಭೀರ ಗಾಯಗೊಂಡಿದ್ದಾನೆ. ಬೈಕ್ ಜಖಂಗೊಂಡಿದೆ. ಮರಗಳ ನಡುವೆ ಸಿಲುಕಿದ್ದ ಯುವಕನನ್ನು ಅಕ್ಕಪಕ್ಕದ ಜನರು ಹೊರತೆಗೆದು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಯುವಕನ ತೊಡೆಯ ಮೂಳೆ ಮುರಿದಿದ್ದು ಶಸ್ತ್ರ ಚಿಕಿತ್ಸೆ ನಡೆಸಿ ರಾಡ್ ಅಳವಡಿಸಲಾಗಿದೆ ಎಂದು ಅಭಿಷೇಕ್ ತಂದೆ ಅಶೋಕ್ ತಿಳಿಸಿದ್ದಾರೆ. ಅಪ್ಪ ಅಮ್ಮ ಮಾಡಿದ ಪುಣ್ಯ ಇಂದು ಬದುಕಿದ್ದೇನೆ. ನಾ ಮುಂದೆ ಹೋದೆ ಹಿಂದೆ ಮರಬಿತ್ತು. ನನ್ನ ಹಿಂದೆ ಬರುತ್ತಿದ್ದ ಬೈಕ್ ಸವಾರನ ಮೇಲೆ ಮರ ಬಿತ್ತು. ಆತ ಮರದಡಿ ಸಿಲುಕಿಕೊಂಡ, ಕೂಡಲೆ ಆತನನ್ನು ಅಕ್ಕಪಕ್ಕದ ಜನರು ಸೇರಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದರು ಎಂದು ಮತ್ತೊಬ್ಬ ಬೈಕ್ ಸವಾರ ಘಟನೆಯನ್ನು ವಿವರಿಸಿದರು.
ಮರ ಹಾಗೂ ಕೊಂಬೆಗಳನ್ನು ಅರಣ್ಯವಿಭಾಗ ನಿಯೋಜಿಸಿರುವ ತಂಡಗಳು ತೆರವುಗೊಳಿಸುತ್ತಿದ್ದು, ತೆರವು ಮಾಡಿದ ಸಂದರ್ಭ ಉಳಿಯುವ ಎಲೆಗಳು ಹಾಗೂ ಮರದ ಸಣ್ಣ ಸಣ್ಣ ಕಡ್ಡಿಗಳ ರಾಶಿಯನ್ನು ಆಯಾ ನಗರ ಪಾಲಿಕೆಗಳು ಶ್ರೆಡಿಂಗ್ ಯಂತ್ರಗಳ ಮೂಲಕ ತೆರವು ಮಾಡಿ ಕಾಂಪೋಸ್ಟ್ ಘಟಕಕ್ಕೆ ಸಾಗಿಸಬೇಕೆಂದು ನಗರಪಾಲಿಕೆ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು 5 ಪಾಲಿಕೆಗಳಿಗೆ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ