ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ಬೀಜ, ಗೊಬ್ಬರ ಲಭ್ಯ

By Kannadaprabha NewsFirst Published Jun 15, 2021, 9:36 AM IST
Highlights
  • ರಾಜ್ಯದಲ್ಲಿ ಮುಂಗಾರು ಹಂಗಾಮಿನ ಬಿತ್ತನೆಗೆ ಎಲ್ಲಾ ಸಿದ್ಧತೆ 
  •  77 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಿದ್ದೇವೆ - BC ಪಾಟೀಲ್
  • ಈಗಾಗಲೇ 11.73 ಲಕ್ಷ ಹೆಕ್ಟೇರ್‌ (ಶೇ.15.23) ಬಿತ್ತನೆ

 ಬೆಂಗಳೂರು (ಜೂ.15):  ರಾಜ್ಯದಲ್ಲಿ ಮುಂಗಾರು ಹಂಗಾಮಿನ ಬಿತ್ತನೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, 77 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಿದ್ದೇವೆ. ಈಗಾಗಲೇ 11.73 ಲಕ್ಷ ಹೆಕ್ಟೇರ್‌ (ಶೇ.15.23) ಬಿತ್ತನೆಯಾಗಿದ್ದು, ಹೆಚ್ಚು ಪ್ರಮಾಣದಲ್ಲಿ ಬಿತ್ತನೆಯಾಗಲು ಎಲ್ಲಾ ರೀತಿ ಕ್ರಮ ಕೈಗೊಂಡಿದ್ದೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿತ್ತನೆ ಬೀಜದ ಬೇಡಿಕೆ 6 ಲಕ್ಷ ಕ್ವಿಂಟಲ್‌ನಷ್ಟಿದ್ದು, ಲಭ್ಯತೆ 7.74 ಲಕ್ಷ ಕ್ವಿಂಟಲ್‌ ಇದೆ. 1.15 ಲಕ್ಷ ಕ್ವಿಂಟಲ್‌ ದಾಸ್ತಾನು ಇದೆ. ಜತೆಗೆ ಒಟ್ಟು 12,77,815 ಟನ್‌ ರಸಗೊಬ್ಬರಕ್ಕೆ ಬೇಡಿಕೆ ಇದ್ದು, 19,56,825 ಟನ್‌ ದಾಸ್ತಾನು ಮಾಡಲಾಗಿದೆ ಎಂದರು.

ಶೂನ್ಯ ಬಡ್ಡಿ ಸಾಲಕ್ಕೆ ಷರತ್ತು: ರೈತರಿಗೆ ಹೊಸ ಕಂಟಕ..! ...

ಜತೆಗೆ ತೊಗರಿ, ಹೆಸರು, ಶೇಂಗಾ, ಸೋಯಾ, ಅವರೆ ಬೆಳೆಗಳ ವಿಸ್ತೀರ್ಣ ಹಾಗೂ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಉತ್ತೇಜನ ನೀಡಲು ರೈತರಿಗೆ ಪ್ರಮುಖವಾಗಿ ಬೆಳೆಯುವ 19 ಜಿಲ್ಲೆಗಳಲ್ಲಿ ಬಿತ್ತನೆ ಬೀಜಗಳನ್ನು ಮಿನಿ ಕಿಟ್‌ ರೂಪದಲ್ಲಿ ‘ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ’ (ಎನ್‌ಎಫ್‌ಎಸ್‌ಎಂ) ಯೋಜನೆಯಡಿ ಉಚಿತವಾಗಿ ನೀಡಲಾಗುತ್ತಿದೆ. ಈವರೆಗೆ 12.60 ಕೋಟಿ ಮೌಲ್ಯದ ಮಿನಿ ಕಿಟ್‌ ವಿತರಿಸಿದ್ದೇವೆ. 16 ಜಿಲ್ಲೆಗಳಲ್ಲಿ 4 ಕೆ.ಜಿ. ತೊಗರಿ, 4 ಕೆ.ಜಿ. ಹೆಸರು, 4 ಜಿಲ್ಲೆಗಳಲ್ಲಿ 20 ಕೆ.ಜಿ.ಯಂತೆ ಶೇಂಗಾ, 8 ಜಿಲ್ಲೆಗಳಲ್ಲಿ 2 ಕೆ.ಜಿ. ಸೋಯಾ, 20 ಕೆ.ಜಿ. ಶೇಂಗಾ, 2 ಜಿಲ್ಲೆಗಳಲ್ಲಿ 8 ಕೆ.ಜಿ.ಯಂತೆ ಸೋಯಾ ಈ ರೀತಿ ಆಯಾ ಭಾಗಕ್ಕೆ ಹೊಂದಾಣಿಕೆಯಾಗುವ ಬಿತ್ತನೆ ಬೀಜಗಳ 2,35,865 ಕಿಟ್‌ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಹಾವೇರಿ: ಅಕ್ರಮವಾಗಿ ಸಂಗ್ರಹಿಸಿದ್ದ 2 ಕೋಟಿ ಮೌಲ್ಯದ ಬಿತ್ತನೆ ಬೀಜ ವಶ .

ಬೆಳೆ ಸಮೀಕ್ಷೆ:

ಈ ವರ್ಷ ಮುಂಗಾರು ಹಂಗಾಮಿನಲ್ಲಿ 2.10 ಕೋಟಿ ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ರೈತರಿಂದಲೇ ಅವರ ಜಮೀನಿನ ಬೆಳೆ ಮಾಹಿತಿಯನ್ನು ಆ್ಯಪ್‌ ಮೂಲಕ ಅಪ್‌ಲೋಡ್‌ ಮಾಡಿಸುವ ಉದ್ದೇಶವನ್ನು ಕೃಷಿ ಇಲಾಖೆ ಹೊಂದಿದೆ. ಪ್ರಧಾನಮಂತ್ರಿ ಕೃಷಿ ಸಮ್ಮಾನ್‌ ನಿಧಿ ಯೋಜನೆ ಅನ್ವಯ ಕೇಂದ್ರ ಸರ್ಕಾರದಿಂದ 55,07,256 ರೈತರಿಗೆ 7,017.15 ಕೋಟಿ ರು. ನೆರವು ನೀಡಲಾಗಿದೆ. ಅದೇ ರೀತಿ ರಾಜ್ಯ ಸರ್ಕಾರದಿಂದ 49,18,986 ರೈತರಿಗೆ 2849.16 ಕೋಟಿ ರು. ನೆರವು ನೀಡಲಾಗಿದೆ ಎಂದು ವಿವರಿಸಿದರು.

1,101 ಕ್ವಿಂಟಲ್‌ ನಕಲಿ ಬೀಜ ಜಪ್ತಿ:  ಏಪ್ರಿಲ್‌ 1 ರಿಂದ ಜೂ.11 ರವರೆಗೆ 1,101.48 ಕ್ವಿಂಟಲ್‌ ಪ್ರಮಾಣದ 394.88 ಲಕ್ಷ ಮೌಲ್ಯದ ಗುಣಮಟ್ಟವಲ್ಲದ ನಕಲಿ ಬಿತ್ತನೆ ಬೀಜಗಳನ್ನು ಜಪ್ತಿ ಮಾಡಲಾಗಿದೆ. 960.03 ಕ್ವಿಂಟಲ್‌ ಪ್ರಮಾಣದ ರಸಗೊಬ್ಬರವನ್ನು ಜಪ್ತಿ ಮಾಡಲಾಗಿದೆ. 479.37 ಕೆ.ಜಿ. ಪ್ರಮಾಣದ 7.74 ಲಕ್ಷ ಮೌಲ್ಯದ ಕ್ರಿಮಿನಾಶಕಗಳನ್ನು ಜಪ್ತಿ ಮಾಡಲಾಗಿದೆ.

ಒಟ್ಟಾರೆಯಾಗಿ 2021-22ನೇ ಸಾಲಿನಲ್ಲಿ 424.52 ಲಕ್ಷ ರು. ಮೌಲ್ಯದ ವಿವಿಧ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಪೀಡೆನಾಶಕಗನ್ನು ವಿವಿಧ ಜಿಲ್ಲೆಗಳಲ್ಲಿ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಿದ್ದು ಉಚಿತ ಬೀಜ, ಗೊಬ್ಬರ ನೀಡುತ್ತಿದ್ದರಾ?

ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ರೈತರಿಗೆ ಉಚಿತ ಬಿತ್ತನೆ ಬೀಜ, ಗೊಬ್ಬರ ನೀಡಲು ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದರೆ ಉಚಿತವಾಗಿ ನೀಡುತ್ತಿದ್ದರಾ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಪ್ರಶ್ನಿಸಿದರು. ರೈತರ ಅನುಕೂಲಕ್ಕಾಗಿ ಎಲ್ಲವನ್ನೂ ಮಾಡುತ್ತಿದ್ದೇವೆ. ಗೊಬ್ಬರದಲ್ಲಿ 1 ಸಾವಿರ ರು. ಸಬ್ಸಿಡಿ ಕೊಡುತ್ತಿದ್ದೇವೆ. ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜವನ್ನೂ ನೀಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

click me!