ಕರ್ನಾಟಕಕ್ಕೆ ನಾಡಿದ್ದು ಮುಂಗಾರು ಪ್ರವೇಶ: ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ

By Kannadaprabha NewsFirst Published Jun 9, 2023, 12:00 AM IST
Highlights

ಪ್ರಸಕ್ತ ಮುಂಗಾರು ಕೇರಳದ ಮೂಲಕ ಭಾರತವನ್ನು ಗುರುವಾರ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಭಾನುವಾರದ ವೇಳೆಗೆ ರಾಜ್ಯಕ್ಕೆ ಮುಂಗಾರು ಪ್ರದೇಶವಾಗುವ ನಿರೀಕ್ಷೆ ಇದೆ.

ಬೆಂಗಳೂರು(ಜೂ.09):  ಕೇರಳಕ್ಕೆ ನಿನ್ನೆ(ಗುರುವಾರ) ಕಾಲಿಟ್ಟಿರುವ ಮುಂಗಾರು ಭಾನುವಾರದ ವೇಳೆಗೆ ಕರ್ನಾಟಕ ಪ್ರವೇಶಿಸುವ ಸಾಧ್ಯತೆ ಇದ್ದು, ಇದರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್‌ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಪ್ರಸಕ್ತ ಮುಂಗಾರು ಕೇರಳದ ಮೂಲಕ ಭಾರತವನ್ನು ಗುರುವಾರ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಭಾನುವಾರದ ವೇಳೆಗೆ ರಾಜ್ಯಕ್ಕೆ ಮುಂಗಾರು ಪ್ರದೇಶವಾಗುವ ನಿರೀಕ್ಷೆ ಇದೆ.
ಇದರಿಂದ ಕರಾವಳಿಯ ನಾಲ್ಕು ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಿಗೆ ಭಾನುವಾರದಿಂದ ಮೂರು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ, ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ನ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಬಿತ್ತನೆ ಮಾಡೋ ಅನ್ನದಾತರಿಗೆ ಗುಡ್‌ ನ್ಯೂಸ್‌: ವಾರ ತಡವಾದ್ರೂ ಇಂದು ಕೇರಳಕ್ಕೆ ಕಾಲಿಟ್ಟ ಮುಂಗಾರು!

83 ಸೆಂ.ಮೀ. ಮಳೆ:

ಮುಂಗಾರು ಅವಧಿಯಲ್ಲಿ ಕರ್ನಾಟಕದಲ್ಲಿ ಸರಾಸರಿ 83 ಸೆಂ.ಮೀ. ಮಳೆ ಆಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಶೇ.92ರಿಂದ 96ರಷ್ಟು ಮಳೆಯಾಗಲಿದೆ. ಜೂನ್‌ ಅವಧಿಯಲ್ಲಿ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ ಸ್ವಲ್ಪ ಹೆಚ್ಚಿನ ಪ್ರಮಾಣ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಜೂನ್‌ ತಿಂಗಳಿನಲ್ಲಿ ಸರಾಸರಿ 63 ಸೆಂ.ಮೀ. ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಗುರುವಾರ ಯಾದಗಿರಿಯ ಕವಾಡಿಮಟ್ಟಿಯಲ್ಲಿ ಅತಿ ಹೆಚ್ಚು 6 ಸೆಂ.ಮೀ ಮಳೆಯಾಗಿದೆ. ಕಲಬುರಗಿಯ ಸುಲೇಪೇಟೆಯಲ್ಲಿ 3, ಕಲಬುರಗಿಯ ಕೋಡ್ಲಾ, ಚಿಂಚೋಳಿ, ತುಮಕೂರಿನ ಕುಣಿಗಲ್‌, ಬೆಂಗಳೂರಿನ ಹೆಸರಘಟ್ಟ, ತುಮಕೂರಿನಲ್ಲಿ ತಲಾ 2 ಸೆಂ.ಮೀ ಮಳೆಯಾದ ವರದಿಯಾಗಿದೆ. ಇನ್ನು ಗುರುವಾರ ಕಲಬುರಗಿಯಲ್ಲಿ ಅತಿ ಹೆಚ್ಚು 41.5 ಡಿಗ್ರಿ ಸೆಲ್ಷಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

click me!