ರಾಜ್ಯದ ವಿಮಾಣ ನಿಲ್ದಾಣಗಳಲ್ಲಿ ಮಂಕಿಪಾಕ್ಸ್‌ ಪರೀಕ್ಷೆ ಕಡ್ಡಾಯ

Published : Jul 24, 2022, 05:23 PM IST
ರಾಜ್ಯದ ವಿಮಾಣ ನಿಲ್ದಾಣಗಳಲ್ಲಿ ಮಂಕಿಪಾಕ್ಸ್‌ ಪರೀಕ್ಷೆ ಕಡ್ಡಾಯ

ಸಾರಾಂಶ

ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್‌ ಕೇಸು ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಇದುವರೆಗೆ ಪತ್ತೆಯಾದ ಪ್ರಕರಣಗಳ ಸಂಖ್ಯೆ 4ಕ್ಕೆ ಏರಿದೆ.  ಈ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಂಕಿಪಾಕ್ಸ್‌ ತಪಾಸಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು (ಜು.24): ರಾಜ್ಯದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು, ಬಂದರುಗಳಲ್ಲಿ ಮಂಕಿಪಾಕ್ಸ್‌ ಸೋಂಕಿನ ಲಕ್ಷಣ ಹೊಂದಿರುವ ಪ್ರಯಾಣಿಕರನ್ನು ಕಡ್ಡಾಯವಾಗಿ ಪರೀಕ್ಷೆಗೊಳಪಡಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.  ಈ ಕುರಿತು ಶನಿವಾರ ಟ್ವೀಟ್‌ ಮಾಡಿರುವ ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌, ‘ವಿಶ್ವ ಆರೋಗ್ಯ ಸಂಸ್ಥೆಯು ಮಂಕಿಪಾಕ್ಸ್‌ ಹೆಚ್ಚಳ ಹಿನ್ನೆಲೆ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಎಂದು ಘೋಷಿಸಿದೆ. ಅಲ್ಲದೆ, ನೆರೆಯ ರಾಜ್ಯವಾದ ಕೇರಳದಲ್ಲಿ ಎರಡನೇ ಮಂಕಿಪಾಕ್ಸ್‌ ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸು ಆಧರಿಸಿ ಆರೋಗ್ಯ ಇಲಾಖೆಯು ರಾಜ್ಯದಲ್ಲಿ ಸೋಂಕು ಹರಡದಂತೆ ತಡೆಗಟ್ಟಲು ಮತ್ತು ನಿರ್ವಹಣೆಗೆ ಮಾರ್ಗಸೂಚಿ ಸಿದ್ಧಪಡಿಸಿ ಜಿಲ್ಲಾಡಳಿತಗಳಿಗೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ. ಜತೆಗೆ ಮಾರ್ಗಸೂಚಿಯನ್ನು ಹಂಚಿಕೊಂಡಿದ್ದಾರೆ. ಪ್ರಮುಖವಾಗಿ ಮಾರ್ಗಸೂಚಿಯಲ್ಲಿ, ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಂಕಿಪಾಕ್ಸ್‌ ತಪಾಸಣೆಗೆ ಅಗತ್ಯ ಕ್ರಮ ವಹಿಸಬೇಕು. ನಿಲ್ದಾಣಕ್ಕೆ ಬರುವ ಪ್ರಯಾಣಿಕರಲ್ಲಿ ಯಾರಿಗಾದರೂ ಜ್ವರ, ಚಳಿ ಮತ್ತು ಬೆವರುವಿಕೆ, ಗ್ರಂಥಿಗಳ ಊತ, ತಲೆನೋವು, ಮೈಕೈನೋವು, ಸುಸ್ತು, ಗಂಟಲು ಉರಿ, ಕೆಮ್ಮು, ಚರ್ಮಮೇಲಿನ ದದ್ದುಗಳು ಕಂಡುಬಂದರೆ ಅವರನ್ನು ಕೂಡಲೇ ಪ್ರಾಥಮಿಕ ಪರೀಕ್ಷೆಗೊಳಪಡಿಸಿ, ಪ್ರತ್ಯೇಕವಾಗಿರಿಸಿ, ಅವರ ಸೋಂಕು ಪರೀಕ್ಷೆಗೆ ಕ್ರಮಕೈಗೊಳ್ಳಬೇಕು.

ಶಂಕಿತರು/ಸೋಂಕಿತರನ್ನು ಬೆಂಗಳೂರಿನಲ್ಲಿ ಇಂದಿರಾ ನಗರದಲ್ಲಿರುವ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ, ಮಂಗಳೂರಿನಲ್ಲಿ ವೆನ್‌ಲಾಕ್‌ ಜಿಲ್ಲಾ ಆಸ್ಪತ್ರೆಗಳಲ್ಲಿ ದಾಖಲಿಸಬೇಕು. ಸೋಂಕು ದೃಢಪಟ್ಟರೆ ಮಾತ್ರ ಅಲ್ಲಿಯೇ 21 ದಿನ ಚಿಕಿತ್ಸೆ ನೀಡಬೇಕು ಎಂದು ಸೂಚಿಸಲಾಗಿದೆ.

ಮಾದರಿ ಸಂಗ್ರಹ ಹೀಗೆ: ಮಂಕಿಪಾಕ್ಸ್‌ ಸೋಂಕು ಲಕ್ಷಣ ಇದ್ದವರಲ್ಲಿ ದದ್ದುಗಳಿಲ್ಲದಿದ್ದರೆ ರಕ್ತ, ಸೀರಂ, ಗಂಟಲು/ಮೂಗಿನ ದ್ರವ, ಮೂತ್ರದ ಮಾದರಿ ಸಂಗ್ರಹಿಸಬೇಕು. ಒಂದು ವೇಳೆ ದದ್ದುಗಳಿದ್ದರೆ ಅಂತಹವರಿಂದ ಹೆಚ್ಚುವರಿಯಾಗಿ ದ್ರವ, ಗಾಯಗಳ ದ್ರವ ಮಾದರಿಯನ್ನು ಸಂಗ್ರಹಿಸಬೇಕು. ಪರೀಕ್ಷೆಗೆಂದು ಬೆಂಗಳೂರಿನ ರಾಷ್ಟ್ರೀಯಾ ವೈರಾಣು ಸಂಸ್ಥೆ ಅಥವಾ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಬೇಕು. ತಪಾಸಣೆ ನಡೆಸುವ ಸಂದರ್ಭದಲ್ಲಿ ಕೊರೋನಾ ಪರೀಕ್ಷೆಯಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಬ್ಬಂದಿಗೆ ತಿಳಿಸಲಾಗಿದೆ.

ಸ್ವಯಂಪ್ರೇರಿತವಾಗಿ ಗಮನಕ್ಕೆ ತನ್ನಿ: ಪ್ರಯಾಣ ಸಂದರ್ಭದಲ್ಲಿ ಅಥವಾ ಪ್ರಯಾಣಿಕರ ಪೈಕಿ ಯಾರಿಗಾದರು ಸೋಂಕಿನ ಲಕ್ಷಣಗಳು ಕಂಡುಬಂದರೆ ಸ್ವಯಂ ಪ್ರೇರಿತವಾಗಿ ನಿಲ್ದಾಣದ ಅಧಿಕಾರಿಗಳ ಗಮನಕ್ಕೆ ತರಬೇಕು. ಲಕ್ಷಣ ರಹಿತ ಪ್ರಯಾಣಿಕರು ಮುಂದಿನ 21 ದಿನ ನಿಗಾದಲ್ಲಿದ್ದು, ಒಂದು ವೇಳೆ ಲಕ್ಷಣಗಳು ಕಂಡುಬಂದರೆ ಸಮೀಪದ ಜಿಲ್ಲಾಸ್ಪತ್ರೆಗೆ ತೆರಳಬೇಕು ಎಂದು ಸಲಹೆ ನೀಡಲಾಗಿದೆ.

ಗಡಿ, ಆಸ್ಪತ್ರೆಗಳಲ್ಲಿ ತಪಾಸಣೆ: ಗಡಿಯಲ್ಲಿರುವ ರಾಜ್ಯ ಪ್ರವೇಶ ಸ್ಥಳಗಳಲ್ಲಿ ಶಂಕಿತರ ಪತ್ತೆಗೆ ಆರೋಗ್ಯ ತಪಾಸಣಾ ತಂಡಗಳನ್ನು ನೇಮಿಸಬೇಕು. ಜತೆಗೆ ಎಲ್ಲಾ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆರೋಗ್ಯ ಕಾರ್ಯಕರ್ತರು ಶಂಕಿತ ಪ್ರಕರಣಗಳನ್ನು ಗುರುತಿಸಲು ಸೂಚಿಸಬೇಕು. ಶಂಕಿತರ ಪ್ರಕರಣಗಳ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಬೇಕು. ಈ ನಿಟ್ಟಿನಲ್ಲಿ ಅವೆಲ್ಲರಿಗೂ ಅಗತ್ಯ ತರಬೇತಿಯನ್ನು ನೀಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ವ್ಯವಸ್ಥೆ, 21 ದಿನ ನಿಗಾ; ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಶಂಕಿತ/ಖಚಿತ ಮಂಕಿಪಾಕ್ಸ್‌ ಪ್ರಕರಣಗಳ ಚಿಕಿತ್ಸೆ/ಆರೈಕೆಗೆ ಕನಿಷ್ಠ ಎರಡು ಹಾಸಿಗೆಗಳನ್ನು ಮೀಸಲಿಡಬೇಕು. ಅಗತ್ಯ ಸಿಬ್ಬಂದಿ, ಔಷಧಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಇನ್ನು ಮಂಕಿಪಾಕ್ಸ್‌ ಖಚಿತಪಟ್ಟವರನ್ನು ಕನಿಷ್ಠ 21 ದಿನಗಳವರೆಗೂ, ಮೈಮೇಲಿನ ದದ್ದು, ಚರ್ಮದ ಹುರುಪೆಗಳು ಸಂಪೂರ್ಣ ಗುಣವಾಗುವವರೆಗೂ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಬೇಕು ಎಂದು ಆರೋಗ್ಯ ಇಲಾಖೆಯ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ